ಪಾರದರ್ಶಕ ಆಡಳಿತ: ಸಿದ್ದರಾಮಯ್ಯ

7

ಪಾರದರ್ಶಕ ಆಡಳಿತ: ಸಿದ್ದರಾಮಯ್ಯ

Published:
Updated:
ಪಾರದರ್ಶಕ ಆಡಳಿತ: ಸಿದ್ದರಾಮಯ್ಯ

ಬೆಂಗಳೂರು: ಭ್ರಷ್ಟಾಚಾರದ ನಿರ್ಮೂಲನೆಗಾಗಿ ಪಣ ತೊಟ್ಟಿರುವ ರಾಜ್ಯ ಸರ್ಕಾರ ಜನತೆಗೆ ಪಾರದರ್ಶಕ ಆಡಳಿತವನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಬೇಕು. ಇದರಿಂದ ರಾಜ್ಯದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ)ವನ್ನು ಶೇ 25ಕ್ಕೆ ಏರಿಸಬಹುದು. ಜೊತೆಗೆ 10 ಕೋಟಿ ಉದ್ಯೋಗಾವಕಾಶ ಲಭ್ಯವಾಗುವ ಸಾಧ್ಯತೆ ಇದೆ. ಪರಿಣಾಮವಾಗಿ ವಾರ್ಷಿಕ ಬೆಳವಣಿಗೆ ಪ್ರಮಾಣದಲ್ಲೂ ಶೇ 12ರಿಂದ 14ರಷ್ಟು ಏರಿಕೆಯಾಗುತ್ತದೆ ಎಂದು ಹೇಳಿದರು.ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕ ಭಾರತದ ರಾಜ್ಯಧಾನಿಯಾಗಿದೆ. ರಾಜ್ಯದಲ್ಲಿ ಸಾಕಷ್ಟು ಬಹು ರಾಷ್ಟ್ರೀಯ ಸಂಸ್ಥೆಗಳು ಕಾರ್ಯಾ ನಿರ್ವಹಿಸುತ್ತಿವೆ. ಇದರ ಜೊತೆಗೆ ದೇವನಹಳ್ಳಿಯಲ್ಲಿ 10 ಸಾವಿರ ಎಕರೆ ಪ್ರದೇಶದಲ್ಲಿ ಪ್ರಾದೇಶಿಕ ಮಾಹಿತಿ ತಂತ್ರಜ್ಞಾನ ಹೂಡಿಕೆ ಪಾರ್ಕ್ (ಐಟಿಐಆರ್) ಸ್ಥಾಪಿಸಲಿದ್ದೇವೆ. ಪ್ರಸ್ತುತ ಇರುವ ಕೈಗಾರಿಕಾ ನೀತಿಗೆ ಕೆಲವು ತಿದ್ದುಪಡಿ ತಂದು 2014ರ ವೇಳೆಗೆ ನೂತನ ಕೈಗಾರಿಕಾ ನೀತಿ ಸಿದ್ಧಪಡಿಸಲು, ಕೈಗಾರಿಕೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಬಯೋಕಾನ್ ಸಂಸ್ಥೆ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಹೊಸದಾಗಿ ಉದ್ಯಮವನ್ನು ಪ್ರಾರಂಭಿಸುವವರಿಗೆ ನೆರವಾಗುವಂತೆ ಸರಳವಾಗಿ ಕಾನೂನು ಹಾಗೂ ನಿಯಮಗಳನ್ನು ರೂಪಿಸಬೇಕಿದೆ ಎಂದರು.ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಹೊಸ ಉದ್ಯಮ ಪ್ರಾರಂಭಿಸಲು ಕನಿಷ್ಠ 6 ತಿಂಗಳ ಕಾಲಾವಾಕಾಶ ಬೇಕಾಗುತ್ತದೆ. ಇದರಿಂದ ಉದ್ಯಮಿಗಳಿಗೆ ತೊಂದರೆಯಾಗುತ್ತದೆ. ಜತೆಗೆ  ದಾಖಲಾತಿ ಅನುಮೋದನೆಗಾಗಿ ಸರ್ಕಾರಿ ಇಲಾಖೆಗಳ ಸುತ್ತ ಅಲೆದಾಡಬೇಕಿದೆ. ಮೊದಲು ಈ ವ್ಯವಸ್ಥೆ ಬದಲಾಗಬೇಕು ಎಂದರು.ಉತ್ತಮ ಕೌಶಲ್ಯವಿರುವ ಎಂಜಿನಿಯರ್‌ಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಉತ್ತಮ ಕೌಶಲ್ಯ ಭರಿತ ಎಂಜಿನಿಯರ್‌ಗಳನ್ನು ರೂಪಿಸುವ ವಿದ್ಯಾಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕಿದೆ. ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅನುಕೂಲವಾಗುವ ಹೋಗುವ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬೆಂಗಳೂರು ನಿರ್ದೇಶಕ ಪ್ರೊ.ಎಸ್.ಶಡಗೋಪನ್ ತಿಳಿಸಿದರು.  `ಎಸ್‌ಟಿಪಿ' ನಿವೃತ್ತ ನಿರ್ದೇಶಕ ಬಿ.ವಿ ನಾಯ್ಡು, `ಫಿಕ್ಕಿ' ಅಧ್ಯಕ್ಷೆ ನೈನಾ ಲಾಲ್ ಕಿದ್ವಾಯಿ, ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಸಿಸ್ಕೊ ಇಂಡಿಯಾದ ಅಧ್ಯಕ್ಷ ಜೆಫ್ರಿ ಎಂ. ವೈಟ್, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯ ಸದಸ್ಯರು ಇದ್ದರು.ಕಸ ವಿಲೇವಾರಿ

ಆರು ತಿಂಗಳಲ್ಲಿ ನಗರದ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ಸಿಗಲಿದೆ. ಇದರಿಂದಾಗಿ ಬೆಂಗಳೂರು ತ್ಯಾಜ್ಯ ಮುಕ್ತವಾಗಿ, ಸ್ವಚ್ಛ ನಗರವಾಗಲಿದೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ

 

ಒತ್ತಡ ತರಬೇಕು...

ರಾಜ್ಯ ಸರ್ಕಾರದಿಂದ ಒಳ್ಳೆಯ ಆಡಳಿತದ ಅಗತ್ಯವಿದೆ. ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದಲ್ಲಿ ಉತ್ತಮ ರಸ್ತೆಗಳ ಅಗತ್ಯವಿದ್ದು, ಈ ಸೌಲಭ್ಯವನ್ನು ಒದಗಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕಿದೆ.

-ವಿನೋದ್ ರೈ, ನಿವೃತ್ತ    ನಿಯಂತ್ರಕ ಮತ್ತು ಭಾರತೀಯ ಪ್ರಧಾನ ಮಹಾಲೇಖಪಾಲಕ (ಆಡಿಟರ್ ಜನರಲ್ ಆಫ್ ಇಂಡಿಯಾ)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry