ಪಾರ್ಕಿಂಗ್‌ಗೆ ಬೇಕು 8,000 ಎಕರೆ ವಿಶಾಲ ಪ್ರದೇಶ!

7
ಪಾರ್ಕಿಂಗ್ ಬರೆ-5

ಪಾರ್ಕಿಂಗ್‌ಗೆ ಬೇಕು 8,000 ಎಕರೆ ವಿಶಾಲ ಪ್ರದೇಶ!

Published:
Updated:
ಪಾರ್ಕಿಂಗ್‌ಗೆ ಬೇಕು 8,000 ಎಕರೆ ವಿಶಾಲ ಪ್ರದೇಶ!

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಗಂಟೆಗೆ ಹೆಚ್ಚೆಂದರೆ 15 ಕಿ.ಮೀ. ದೂರ ಮಾತ್ರ ಸಂಚರಿಸಲು ಸಾಧ್ಯ. ವಾಹನ ದಟ್ಟಣೆ ಅಷ್ಟೊಂದು ಪ್ರಮಾಣದಲ್ಲಿ ಹೆಚ್ಚಿದೆ. ಹತ್ತು ವರ್ಷಗಳಲ್ಲಿ ಉಂಟಾಗಿರುವ ಬದಲಾವಣೆ ಸಾರಿಗೆ ತಜ್ಞರಲ್ಲೂ ಬೆರಗು ಮೂಡಿಸುತ್ತಿದೆ.ಹೆಚ್ಚಾಗಿರುವ ವಾಹನಗಳು ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳನ್ನೂ ತಂದೊಡ್ಡಿವೆ. ಆಂಬುಲೆನ್ಸ್‌ಗಳಿಗೆ ಸಹ ಬೇಗ ಆಸ್ಪತ್ರೆ ತಲುಪುವುದು ಸಾಧ್ಯವಾಗುತ್ತಿಲ್ಲ. ಮನೆಯಿಂದ ಹೊರ ಬಿದ್ದವರು ವಿಷದ ಕಾಕ್‌ಟೇಲ್‌ ಕುಡಿದುಕೊಂಡೇ ವಾಪಸು ಬಿಡಾರ ತಲುಪಬೇಕಿದೆ. ತಾಯಂದಿರು ತಾವು ಮನೆಯಲ್ಲಿ ಬಿಟ್ಟುಹೋದ ಕಂದಮ್ಮಗಳ ಬಳಿಗೆ ಬೇಗ ಮರಳಿ ಬರಲು ಸಂಚಾರ ದಟ್ಟಣೆ ಅಡಚಣೆಯಾಗಿದೆ.ನಗರದಲ್ಲಿ ಇರುವ ಎಲ್ಲ ಬಗೆಯ ವಾಹನಗಳನ್ನು ಒತ್ತೊತ್ತಾಗಿ ನಿಲ್ಲಿಸುವುದಾದರೆ ಅದಕ್ಕೆ 8,000 ಎಕರೆಯಷ್ಟು ವಿಶಾಲವಾದ ಪ್ರದೇಶ ಬೇಕು ಎನ್ನುವುದು ನಗರ ಭೂಸಾರಿಗೆ ನಿರ್ದೇಶನಾಲಯದ (ಡಲ್ಟ್‌) ಅಂದಾಜು. ರಸ್ತೆ, ಪಾದಚಾರಿ ಮಾರ್ಗ, ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌, ಖಾಲಿ ನಿವೇಶನ, ಕಚೇರಿಗಳ ಆವರಣ, ಬಸ್‌–ರೈಲ್ವೆ ನಿಲ್ದಾಣ ಮತ್ತು ಕೆಲವೇ ಕೆಲವು ಪಾರ್ಕಿಂಗ್‌ ಜಾಗಗಳಲ್ಲಿ ವಾಹನಗಳ ಮಾಲೀಕರು ಆ ಸ್ಥಳವನ್ನು ಹುಡುಕಿಕೊಂಡಿದ್ದಾರೆ.ವರ್ಷದ 8,760 ಗಂಟೆಗಳಲ್ಲಿ ಸಾಮಾನ್ಯವಾಗಿ ಒಂದು ಕಾರು 400 ಗಂಟೆಗಳಷ್ಟು ಪ್ರಯಾಣದಲ್ಲಿ ಕಳೆಯುತ್ತದೆ. ಮಿಕ್ಕ ಸಮಯವನ್ನು ಅದು ನಿಲುಗಡೆಯಲ್ಲೇ ದೂಡಬೇಕು. ತನಗೆ ತೀರಾ ಹತ್ತಿರದಲ್ಲೇ ವಾಹನ ನಿಲ್ಲಬೇಕು ಎನ್ನುವುದು ಪ್ರತಿಯೊಂದು ವಾಹನದ ಮಾಲೀಕನ ಅಪೇಕ್ಷೆ. ಇದರಿಂದ ನಗರದ ಹೃದಯ ಭಾಗದಲ್ಲಿ ಪಾರ್ಕಿಂಗ್ ಸ್ಥಳಕ್ಕೆ ಬೇಡಿಕೆ ಹೆಚ್ಚು ಎಂದು ಡಲ್ಟ್‌ ವರದಿ ಹೇಳುತ್ತದೆ.ಸಂಚಾರ ದಟ್ಟಣೆಯನ್ನು ಸಾಧ್ಯವಾದಷ್ಟು ನಿಯಂತ್ರಣಕ್ಕೆ ತರಲು ನಗರ ಸಂಚಾರ ಪೊಲೀಸರು ಹಲವು ಕ್ರಮಕೈಗೊಂಡಿದ್ದಾರೆ. ಪಾರ್ಕಿಂಗ್‌ಗೆ ಸ್ಥಳಗಳನ್ನು ನಿಗದಿಗೊಳಿಸಿದ್ದು ಅವುಗಳಲ್ಲಿ ಒಂದು. ರಸ್ತೆಯ ಎರಡೂ ಬದಿಗಳ ನಿವಾಸಿಗಳು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ತೊಂದರೆ ಆಗದಂತೆ ಸಮ ಸಂಖ್ಯೆ ದಿನಾಂಕದಂದು ಒಂದು ಕಡೆ, ಬೆಸ ಸಂಖ್ಯೆ ದಿನಾಂಕದಂದು ಇನ್ನೊಂದು ಕಡೆ ವಾಹನ ನಿಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಇದರಿಂದ ಹೆಚ್ಚಿನ ಬದಲಾವಣೆ ಏನೂ ಆಗಿಲ್ಲ.ಕೆಟ್ಟ ಸ್ಥಿತಿಯಲ್ಲಿರುವ ಹಾಗೂ ತಿಂಗಳುಗಟ್ಟಲೆ ಉಪಯೋಗವನ್ನೇ ಮಾಡದ ಸಾವಿರಾರು ವಾಹನಗಳು ನಗರದ ರಸ್ತೆಗಳಲ್ಲಿಯೇ ಬಿಡಾರ ಹೂಡಿವೆ. ಅಂಥವುಗಳನ್ನು ಮೊದಲು ಎತ್ತಂಗಡಿ ಮಾಡಬೇಕಿದೆ. 15 ವರ್ಷಕ್ಕಿಂತ ಅಧಿಕ ವರ್ಷದ ಮತ್ತು ಹೆಚ್ಚಿನ ಮಾಲಿನ್ಯ ಉಂಟು ಮಾಡುವ ವಾಹನಗಳನ್ನು ನಗರದಿಂದ ಹೊರ ಹಾಕಬೇಕು. ಇದರಿಂದ ಪಾರ್ಕಿಂಗ್‌ ಸಮಸ್ಯೆ ಶೇ 15ರಷ್ಟು ಕಡಿಮೆ ಆಗಲಿದೆ ಎಂದು ಸಂಚಾರ ಪೊಲೀಸ್‌ ಮೂಲಗಳು ಹೇಳುತ್ತವೆ.

ನಗರದ 71 ಕಡೆಗಳಲ್ಲಿ ಮೊದಲಿದ್ದ ಪಾರ್ಕಿಂಗ್‌ ಶುಲ್ಕ ವಿಧಿಸುವ ಕ್ರಮವನ್ನು ಬಿಬಿಎಂಪಿ 2005ರಲ್ಲಿ ಹಿಂದಕ್ಕೆ ಪಡೆದಿತ್ತು. ನಾಗರಿಕರಿಗೆ ಹೊರೆ ಹಾಕಬಾರದು ಎನ್ನುವುದು ಈ ಕ್ರಮದ ಹಿಂದಿನ ಉದ್ದೇಶವಾಗಿತ್ತು. ಎಂಟು ವರ್ಷಗಳಲ್ಲಿ ಅದರ ಧೋರಣೆಯೇ ಬದಲಾಗಿದೆ.ನಗರದ ರಸ್ತೆಗಳಲ್ಲಿ ಸದ್ಯ ಶುಲ್ಕ ನೀಡಿ ವಾಹನ ನಿಲ್ಲಿಸುವ ಅಧಿಕೃತವಾದ ವ್ಯವಸ್ಥೆ ಇಲ್ಲ. ಆದರೆ, ಅನಧಿಕೃತವಾಗಿ ಎಲ್ಲಾ ರಸ್ತೆಗಳಲ್ಲಿ ಪಾರ್ಕಿಂಗ್‌ ಸುಲಿಗೆ ನಡೆದೇ ಇದೆ. ಒಂದು ಮೂಲದ ಪ್ರಕಾರ 2800ಕ್ಕೂ ಅಧಿಕ ಕಡೆಗಳಲ್ಲಿ ಅನಧಿಕೃತವಾಗಿ ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡಲಾಗುತ್ತಿದೆ.ಅನಧಿಕೃತ ಪಾರ್ಕಿಂಗ್‌ ವ್ಯವಸ್ಥೆಗೂ ಎರಡು ಮುಖಗಳಿವೆ. ಒಂದೆಡೆ ನೂರಾರು ಜನ ನಿರುದ್ಯೋಗಿಗಳು, ಅಸಹಾಯಕರಿಗೆ ಈ ಪಾರ್ಕಿಂಗ್‌ ವ್ಯವಸ್ಥೆ ಬದುಕಿನ ಹಾದಿಯಾಗಿದೆ. ಇನ್ನೊಂದೆಡೆ ಕೆಲ ಮಾಫಿಯಾಗಳು ಪಾರ್ಕಿಂಗ್‌ ಸ್ಥಳಗಳನ್ನು ಹಿಡಿತಕ್ಕೆ ಪಡೆದು ದುಡ್ಡು ಮಾಡುವ ದಂಧೆಯಲ್ಲಿ ತೊಡಗಿವೆ.ಸೋರಿಕೆಯಾಗುವ ಈ ಆದಾಯವನ್ನು ಪಾಲಿಕೆ ಬಾಚಿಕೊಳ್ಳಬೇಕು ಎನ್ನುವುದು ಡಲ್ಟ್‌ ಸಲಹೆ.ನಗರದಿಂದ ರಾತ್ರಿ ಹೊರಡುವ ಖಾಸಗಿ ಬಸ್‌ಗಳು ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ ಪ್ರದೇಶಗಳ ಇಕ್ಕಟ್ಟಾದ ಗಲ್ಲಿಗಳಲ್ಲಿ ಹಗಲು ನಿಲುಗಡೆ ಆಗಿರುತ್ತವೆ. ಶಂಕರಪುರದ ಚಂದ್ರಶೇಖರಭಾರತೀ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯನ್ನು ಖಾಸಗಿ ಬಸ್‌ಗಳು, ಲಾರಿಗಳು ಅಕ್ಷರಶಃ ಪಾರ್ಕಿಂಗ್‌ ಪ್ರದೇಶವನ್ನಾಗಿ ಪರಿವರ್ತನೆ ಮಾಡಿಬಿಟ್ಟಿವೆ. ಈ ರಸ್ತೆಯಲ್ಲಿ ವಾಹನ ಓಡಾಟ ದುಸ್ಸಾಧ್ಯವಾಗಿ ಪರಿಣಮಿಸಿದೆ.ಮೆಜಿಸ್ಟಿಕ್‌ ಸುತ್ತಲಿನ ಪ್ರದೇಶಗಳ ರಸ್ತೆಗಳಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು ಬೀಡುಬಿಟ್ಟಿರುತ್ತವೆ. ಆನಂದರಾವ್‌ ವೃತ್ತದ ಬಳಿ ಸಂಜೆಯಾದರೆ ಖಾಸಗಿ ಬಸ್‌ಗಳ ಮೆರವಣಿಗೆ ನಡೆಯುತ್ತದೆ. ಲೆಕ್ಕವಿಲ್ಲದಷ್ಟು ಬಸ್‌ಗಳು ರಸ್ತೆ ಮೇಲೇ ನಿಲ್ಲುತ್ತವೆ. ಈ ಬಸ್‌ಗಳ ಅನಧಿಕೃತ ಪಾರ್ಕಿಂಗ್‌ ಸೌಲಭ್ಯಕ್ಕಾಗಿ ಪೊಲೀಸ್‌ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಕೋಟ್ಯಂತರ ರೂಪಾಯಿ ಬಟವಡೆ ಆಗುತ್ತದೆ ಎಂಬ ದೂರುಗಳಿವೆ. ತುಮಕೂರು ಮತ್ತು ಹೊಸೂರು ರಸ್ತೆಗಳಲ್ಲಿ ಹೆಜ್ಜೆ–ಹೆಜ್ಜೆಗೂ ಬಸ್‌ ನಿಲ್ಲಿಸಲು ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ ಏರ್ಪಡುತ್ತದೆ. ಸಂಚಾರ ಸಮಸ್ಯೆ ಹೆಚ್ಚಾಗಿ ಕಾಡಲು ಈ ಪೈಪೋಟಿಯೂ ಕಾರಣವಾಗಿದೆ.‘ಪಾರ್ಕಿಂಗ್‌ ಸಮಸ್ಯೆಯನ್ನು ನಿಜವಾಗಿಯೂ ಬಗೆಹರಿಸುವ ಮನಸ್ಸಿದ್ದರೆ ಬಿಬಿಎಂಪಿ ಮೊದಲು ರಸ್ತೆಗಳ ಮೇಲೆ ನಿಲ್ಲುವ ದೊಡ್ಡ ವಾಹನಗಳ ಕಡೆಗೆ ಗಮನಹರಿಸಬೇಕು’ ಎಂದು ಬಡಾವಣೆ ನಿವಾಸಿಗಳ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸುತ್ತಾರೆ.‘ಬೆಂಗಳೂರು ನಗರದ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ತೋರುತ್ತಿರುವ ಮುಖ್ಯಮಂತ್ರಿಗಳು ಈ ಕಡೆಗೆ ಗಮನ ಹರಿಸಬೇಕು. ದೊಡ್ಡವರನ್ನು ಬಿಟ್ಟು, ಚಿಕ್ಕವರ ಮೇಲೆ ಗದಾಪ್ರಹಾರ ನಡೆಸಲು ಅವಕಾಶ ನೀಡಬಾರದು’ ಎಂಬ ಒತ್ತಾಯವೂ ಅವರಿಂದ ಕೇಳಿಬಂದಿದೆ.

 

ಚರ್ಚೆ ಬಳಿಕ ಶುಲ್ಕ ನಿಗದಿ

ಬೆಂಗಳೂರು: ಪಾರ್ಕಿಂಗ್ ಶುಲ್ಕವನ್ನು ಯಾವ ಪ್ರಮಾಣದಲ್ಲಿ ನಿಗದಿ ಮಾಡಬೇಕು ಎಂಬುದನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಿ ನಿರ್ಧರಿಸಲಾಗುತ್ತದೆ ಎಂದು ಮೇಯರ್ ಬಿ.ಎಸ್. ಸತ್ಯನಾರಾಯಣ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸರ್ಕಾರದ ಪಾರ್ಕಿಂಗ್ ನೀತಿಯನ್ವಯ ಶುಲ್ಕ ವ್ಯವಸ್ಥೆಯನ್ನು ಜಾರಿಗೆ ತರಲೇಬೇಕಾಗಿದೆ. ಈ ಹಿನ್ನಲೆಯಲ್ಲಿ ಕಳೆದ ಪಾಲಿಕೆ ಸಭೆಯಲ್ಲಿ ಇದನ್ನು ದಾಖಲು ಮಾಡಲಾಗಿದೆ. ವಿಸ್ತೃತ ಚರ್ಚೆಯಾದ ಬಳಿಕ ಅದನ್ನು ಅನುಷ್ಠಾನಕ್ಕೆ ತರಲಾಗುವುದು. ಶುಲ್ಕ ದುಬಾರಿ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಚರ್ಚೆ ನಡೆಸಲಾಗುವುದು ಎಂದು ಹೇಳಿದರು.ಪಾಲಿಕೆಯು ನಗರದ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲು ಹೊರಟರೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತದೆ. ಖಾಸಗಿ ಕಟ್ಟಡಗಳಲ್ಲಿ ತೀರಾ ದುಬಾರಿಯಾಗಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದರೂ ಪ್ರಶ್ನಿಸುತ್ತಿಲ್ಲ. ನಗರಕ್ಕೆ ಕೇಂದ್ರದಿಂದ ನರ್ಮ್ ಯೋಜನೆಗಳು ಮಂಜೂರಾಗಲು ಪಾರ್ಕಿಂಗ್ ಶುಲ್ಕ ಸಂಗ್ರಹದಂತಹ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ವಿವರಿಸಿದರು.

ಬಾಕಿ ಬಿಡುಗಡೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರರಿಗೆ ಬುಧವಾರ ಎರಡು ತಿಂಗಳ ಬಾಕಿ ಪಾವತಿಸಲಾಗುವುದು ಎಂದು ಮೇಯರ್‌ ಭರವಸೆ ನೀಡಿದ್ದಾರೆ.ತಮ್ಮನ್ನು ಭೇಟಿ ಮಾಡಿದ ಗುತ್ತಿಗೆದಾರರಿಗೆ ಅವರು ಈ ಭರವಸೆ ನೀಡಿದರು. ಬಾಕಿ ನೀಡದೆ ಇರುವುದರಿಂದ ಕೆಲಸಗಾರರಿಗೆ ಸಂಬಳ ನೀಡುವುದು ಸೇರಿದಂತೆ ಎಲ್ಲ ಬಾಕಿ ನೀಡಲು ಸಮಸ್ಯೆ ಎದುರಾಗಿದೆ. ಇದರ ಜತೆಗೆ ದಸರಾ ಹಬ್ಬ ಬಂದಿರುವುದರಿಂದ ಕೆಲಸಗಾರರಿಗೆ ಬೋನಸ್ ನೀಡಬೇಕಾಗಿದೆ. ಆದಷ್ಟು ಶೀಘ್ರ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಗುತ್ತಿಗೆದಾರರು ಮನವಿ ಮಾಡಿದರು. ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮೇಯರ್‌ ಸದ್ಯಕ್ಕೆ ಎರಡು ತಿಂಗಳ ಬಾಕಿ ಪಾವತಿಸಲು ಸೂಚಿಸಿದರು.ಇನ್ನೊಂದು ವಾರದೊಳಗೆ ಮತ್ತೊಂದು ತಿಂಗಳ ಬಾಕಿ ಪಾವತಿ ಮಾಡಲಾಗುವುದು ಎಂದು ತಿಳಿಸಿದರು.ಮೇಯರ್‌ ಆಗ ವಿರೋಧ, ಈಗ ಪರ

ಪಾರ್ಕಿಂಗ್‌ ಶುಲ್ಕ ಹೆಚ್ಚಳದ ವಿಷಯದಲ್ಲಿ ರಾಜಕೀಯ ಪಕ್ಷಗಳಲ್ಲೂ ವಿರೋಧಾಭಾಸದ ಧೋರಣೆಗಳು ಕಂಡು ಬಂದಿವೆ.

ವಾಹನ ನಿಲುಗಡೆಗೆ ಶುಲ್ಕ ವಿಧಿಸಲು ಈ ಹಿಂದೆ ಬಿಜೆಪಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತ್ತು. ಈಗಿನ ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಅವರೂ ಅಂದು ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಆಗ ಕಾಂಗ್ರೆಸ್‌ ಆಡಳಿತ ಶುಲ್ಕ ವಿಧಿಸುವ ಪರ ನಿಂತಿತ್ತು.ಈಗ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದೆ. ಹಿಂದೆ ಪಾರ್ಕಿಂಗ್‌ ಶುಲ್ಕ ವಿಧಿಸಲು ವಿರೋಧಿಸಿದ್ದ ಆ ಪಕ್ಷವೇ ಈಗ ಅದನ್ನು ಜಾರಿಗೆ ತರಲು ಹೊರಟಿದೆ. ಆಗ ಶುಲ್ಕ ಬೇಕು ಎನ್ನುತ್ತಿದ್ದ ಕಾಂಗ್ರೆಸ್‌ ಪಕ್ಷ ಸದ್ಯ ಅದರ ವಿರುದ್ಧ ನಿಂತಿದೆ. ಆಡಳಿತ ಬದಲಾದ ತಕ್ಷಣ ಪಕ್ಷಗಳ ಧೋರಣೆ ಸಹ ಬದಲಾಗುತ್ತದೆ. ಇದು ಪಾರ್ಕಿಂಗ್‌ ವಿಷಯದ ರಾಜಕೀಯ ಮುಖ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry