ಪಾರ್ಕಿಂಗ್‌ ಶುಲ್ಕ ಬರೆ

7
ವಾಹನ ಮಾಲೀಕರ ಮೇಲೆ ಪಾಲಿಕೆ ಹೊರೆ

ಪಾರ್ಕಿಂಗ್‌ ಶುಲ್ಕ ಬರೆ

Published:
Updated:

ಬೆಂಗಳೂರು: ನಗರದ ಹೃದಯ ಭಾಗ­ದಲ್ಲಿ ವಾಹನ ನಿಲುಗಡೆ ಮಾಡುವ ಅವಧಿಗೆ ಅನುಗುಣ­ವಾಗಿ ಶುಲ್ಕ ವಿಧಿ­ಸುವ ಪ್ರಸ್ತಾವಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬುಧವಾರ ಯಾವುದೇ ಚರ್ಚೆಯಿಲ್ಲದೆ ಒಪ್ಪಿಗೆ ಸೂಚಿಸಿದೆ. ಇದರಿಂದ ಸಾರ್ವಜನಿಕರು ಪ್ರಮುಖ ಪ್ರದೇಶಗಳ ಪಾರ್ಕಿಂಗ್‌ ಸ್ಥಳದಲ್ಲಿ 5–6 ಗಂಟೆ ವಾಹನ ನಿಲ್ಲಿಸಿದರೆ ನೂರಾರು ರೂಪಾಯಿ ಶುಲ್ಕ ಕಟ್ಟಬೇಕಾದ ಅನಿವಾರ್ಯತೆ ಬಂದೊದಗಿದೆ.ಬಿಬಿಎಂಪಿ ಪಾರ್ಕಿಂಗ್‌ ನೀತಿಯನ್ನು ಅಳವಡಿಸಿಕೊಳ್ಳಲು ಈ ಹಿಂದೆಯೇ ನಿರ್ಧಾರ ಕೈಗೊಂಡಿತ್ತು. ನಗರ ಭೂ­ಸಾರಿಗೆ ನಿರ್ದೇಶನಾಲಯ (ಡಲ್ಟ್‌) ಅದಕ್ಕೆ ಅಗತ್ಯವಾದ ಕಾರ್ಯ ಯೋಜನೆ ಸಿದ್ಧಪಡಿಸಿತ್ತು. ಅದರ ಶಿಫಾರಸುಗಳಿಗೆ ಬುಧವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಕೇವಲ ಹತ್ತು ಸೆಕೆಂಡ್‌ಗಳಷ್ಟು ಕಾಲಾ­ವಕಾಶದಲ್ಲಿ ಒಪ್ಪಿಗೆ ಮುದ್ರೆ ಬಿದ್ದಿದೆ.ನಿಲುಗಡೆ ಅವಧಿಗೆ ತಕ್ಕಂತೆ ಶುಲ್ಕ ವಿಧಿಸುವ ಈ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ನಗರದ ಹೃದಯ ಭಾಗದ 85 ರಸ್ತೆಗಳಲ್ಲಿ ಅನುಷ್ಠಾನಕ್ಕೆ ತರಲಾ­ಗುತ್ತದೆ. ಈ ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ) ಮತ್ತು ಸಿ (ಸಾಮಾನ್ಯ) ಎಂಬ ಮೂರು ಪಾರ್ಕಿಂಗ್‌ ಪ್ಯಾಕೇಜ್‌­ಗಳಲ್ಲಿ ವಿಂಗಡಿಸ­ಲಾಗಿದೆ. ‘ಎ’ ಪ್ಯಾಕೇಜ್‌ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಲು ಪ್ರತಿ ಗಂಟೆಗೆ ರೂ. 15 ನೀಡಬೇಕು. ಅದೇ ಕಾರು ನಿಲ್ಲಿಸಲು ಪ್ರತಿ ಗಂಟೆಗೆ ರೂ. 30 ಕೊಡಬೇಕು.ಪಾರ್ಕಿಂಗ್ ಶುಲ್ಕವನ್ನು ನಿಲುಗಡೆ ಅಂಕಣದಲ್ಲಿ ನಿಲುಗಡೆಯಾದ ಅವಧಿಗೆ ಮಾತ್ರ ವಿಧಿಸಲಾಗುತ್ತದೆ.  ೧೫ ನಿಮಿಷ ಇಲ್ಲವೆ ಅದಕ್ಕಿಂತ ಕಡಿಮೆ ಅವಧಿಗೆ ಕನಿಷ್ಠ ನಿಲುಗಡೆ ಶುಲ್ಕ ರೂ. ೧೫. ಬಳಿಕ ಅದು ನಿಲುಗಡೆಯಾದ ನಿಮಿಷಕ್ಕೆ ತಕ್ಕಂತೆ ಶುಲ್ಕ ಪಡೆಯಲಾಗುತ್ತದೆ.

ಉದಾಹರಣೆಗೆ ಕಾರೊಂದು ೨೫ ನಿಮಿಷಗಳ ಅವಧಿಗೆ ನಿಲುಗಡೆ­ಯಾಗಿದ್ದಲ್ಲಿ ನೀಡಬೇಕಾದ ಶುಲ್ಕ ರೂ. ೨೫ ಮಾತ್ರ. ಅರ್ಧಗಂಟೆ ಹಾಗೂ ಅದಕ್ಕಿಂತ ಹೆಚ್ಚು ಹೊತ್ತು ನಿಲುಗಡೆ ಮಾಡಿದರೆ ಪೂರ್ಣ ಪ್ರಮಾಣದ ಶುಲ್ಕ (ರೂ. 30) ನೀಡಬೇಕಾಗುತ್ತದೆ. ಪ್ರತಿ ಗಂಟೆ ಅವಧಿಯಲ್ಲೂ ಇದು ಹೀಗೇ ಪುನರಾ­ವರ್ತನೆ ಆಗುತ್ತದೆ. ಸೈಕಲ್‌ಗಳಿಗೆ ಮಾತ್ರ ಪಾರ್ಕಿಂಗ್‌ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಹಲಸೂರಿನಿಂದ ಶಿರ್ಸಿ ವೃತ್ತ ಮತ್ತು ಲಾಲ್‌ಬಾಗ್‌ನಿಂದ ಅರಮನೆ ಮೈದಾನ­ದ­ವರೆಗಿನ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಾಗಿದೆ. ಆಯ್ದ ಪ್ರದೇಶಗಳಲ್ಲಿ 4,800 ಕಾರು ಮತ್ತು 10,000 ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಬೇಡಿಕೆ ಇದೆ. ಸದ್ಯ 2,500 ಕಾರು ಮತ್ತು 5,000 ದ್ವಿಚಕ್ರ ವಾಹನ ನಿಲುಗಡೆಗಷ್ಟೇ ಅವಕಾಶ ಇದೆ ಎಂದು ಡಲ್ಟ್‌ ವರದಿಯಲ್ಲಿ ವಿವರಿಸಲಾಗಿದೆ.ರಸ್ತೆ ಮೇಲಿನ ವಾಹನ ನಿಲುಗಡೆ ಒತ್ತಡವನ್ನು ಕಡಿಮೆ ಮಾಡಿ, ರಸ್ತೆಗೆ ಹೊಂದಿಕೊಂಡಿರುವ ಸ್ಥಳಗಳಲ್ಲಿ ಪಾರ್ಕಿಂಗ್‌ ಸೌಲಭ್ಯ ಹೆಚ್ಚಿಸಬೇಕಿದೆ ಎಂದೂ ಡಲ್ಟ್‌ ಶಿಫಾರಸು ಮಾಡಿದೆ. ಶುಲ್ಕ ವಿಧಿಸುವ ಮೀಟರ್‌ (ಸ್ವೈಪ್‌ ಕಾರ್ಡ್‌, ಮೊಬೈಲ್‌ ಅಪ್ಲಿಕೇಶನ್‌) ಹಾಗೂ ರಸ್ತೆ ಮಾರ್ಗಸೂಚಿ ಅಳವಡಿಕೆ, ನಿಲುಗಡೆ ವ್ಯವಸ್ಥೆ ಹೊಂದಿದ ರಸ್ತೆಗಳ ಸ್ಥಳಾವಕಾಶದ ಕ್ಷಣ, ಕ್ಷಣದ ಮಾಹಿತಿ ಒದಗಿಸುವಿಕೆ ಮತ್ತು ಪಾರ್ಕಿಂಗ್‌ ಅಂಕಣಗಳಲ್ಲಿ ಕ್ಯಾಮೆರಾಗಳ ಅಳವಡಿಕೆ ಸೇರಿದಂತೆ ಈ ಯೋಜನೆಯು ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಸಮಗ್ರ ಪ್ಯಾಕೇಜ್‌ ಒಳಗೊಂಡಿದೆ.ಐದು ವರ್ಷಗಳ ಅವಧಿಗೆ ಟೆಂಡರ್‌ ಕರೆದು ಆದಾಯ ಹಂಚಿಕೊಳ್ಳುವ ಷರತ್ತಿನ ಮೇಲೆ ಖಾಸಗಿ ಸಂಸ್ಥೆಗೆ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸುವ ಹೊಣೆಯನ್ನು ವಹಿಸಿಕೊಡಲು ಉದ್ದೇಶಿಸಲಾಗಿದೆ. ಈ ಯೋಜನೆ ಮೂಲಕ ಬಿಬಿಎಂಪಿಗೆ ವಾರ್ಷಿಕ ರೂ. 80 ಕೋಟಿಯಷ್ಟು ಆದಾಯ ಬರುವ ನಿರೀಕ್ಷೆ ಇದ್ದು, ಯಾವುದೇ ಬಂಡವಾಳ ಹೂಡುವ ಅಗತ್ಯವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅನಿಯಂತ್ರಿತವಾಗಿ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದರಿಂದ ಜಟಿಲಗೊಂಡ ಪಾರ್ಕಿಂಗ್‌ ಸಮಸ್ಯೆ ಸಹ ಬಗೆಹರಿಯಲಿದೆ ಎಂದು ಎಂದು ಡಲ್ಟ್‌ ತಿಳಿಸಿದೆ.ಸಂಚಾರ ದಟ್ಟಣೆ ಸಮಯ, ಸಾಮಾನ್ಯ ಅವಧಿ ಮತ್ತು ರಜಾ ದಿನಗಳಲ್ಲೂ ಶುಲ್ಕ ಆಕರಣೆ ವಿಧಾನ ಒಂದೇ ಆಗಿರುತ್ತದೆ. ಪಾರ್ಕಿಂಗ್‌ ಶುಲ್ಕವನ್ನು ವಾರ್ಷಿಕವಾಗಿ ಸಗಟು ಬೆಲೆ ಸೂಚ್ಯಂಕ ಬೆಳವಣಿಗೆ ದರದ ಆಧಾರದ ಮೇಲೆ ಈ ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಲಾಗಿದೆ. ಈ ಸೌಲಭ್ಯಕ್ಕೆ ಬೆಂಗಳೂರು ಇನಿಸಿಯೇಟಿವ್‌ ಫಾರ್‌ ಪಾರ್ಕಿಂಗ್‌ (ಬಿಪ್‌) ಎಂದು ಹೆಸರಿಸಲಾಗಿದೆ.

ಜನರ ವಿರೋಧ

ಪಾರ್ಕಿಂಗ್‌ ಪ್ಯಾಕೇಜ್‌ ಯೋಜನೆಗೆ ಬಿಬಿಎಂಪಿ ಹಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಕಾರ್ಯ ಯೋಜನೆ ಗೊಂದಲಮಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ರೀತಿಯ ಚರ್ಚೆಗೆ ಆಸ್ಪದ ಇಲ್ಲದೆ ಈ ಕಾರ್ಯ ಯೋಜನೆಗೆ ಒಪ್ಪಿಗೆ ನೀಡಿದ್ದೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಪ್ರತಿ ಗಂಟೆ ಲೆಕ್ಕದಲ್ಲಿ ಪಾರ್ಕಿಂಗ್‌ ಶುಲ್ಕವನ್ನು ಆಕರಿಸುವ ಕಾರಣ, ಜನಸಾಮಾನ್ಯರು ಪ್ರತಿದಿನ ನೂರಾರು ರೂಪಾಯಿ ಶುಲ್ಕ ತೆರಬೇಕಾಗುತ್ತದೆ. ಈ ಪ್ರಸ್ತಾವ ಕಾರ್ಯಸಾಧುವೇ ಎಂಬುದನ್ನು ಪರಾಮರ್ಶಿಸಬೇಕಾದ ಅಗತ್ಯವಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಎ’ ಪ್ಯಾಕೇಜ್‌ ರಸ್ತೆಗಳು

ಅವೆನ್ಯೂ ರಸ್ತೆ, ಎಸ್‌.ಸಿ. ರಸ್ತೆ, ರೇಸ್‌ ಕೋರ್ಸ್‌ ಲೂಪ್‌ ರಸ್ತೆ, ರೇಸ್‌ ಕೋರ್ಸ್‌ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ಕಮರ್ಸಿಯಲ್‌ ಸ್ಟ್ರೀಟ್‌, ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ರಾಜಾರಾಮ್‌ ಮೋಹನರಾಯ್‌ ರಸ್ತೆ, ಮಲ್ಯ ರಸ್ತೆ, ಕಸ್ತೂರಬಾ ರಸ್ತೆ, ರೆಸಿಡೆನ್ಸಿ ರಸ್ತೆ, ಲಾಲ್‌ಬಾಗ್‌ ರಸ್ತೆ ಮತ್ತು ಎನ್‌.ಆರ್‌. ರಸ್ತೆ.

‘ಬಿ’ ಪ್ಯಾಕೇಜ್‌ ರಸ್ತೆಗಳು

ಎಸ್‌.ಪಿ. ರಸ್ತೆಯ ಆರನೇ ಕ್ರಾಸ್‌, ಐದನೇ ಮುಖ್ಯ ರಸ್ತೆ, ಧನ್ವಂತ್ರಿ ರಸ್ತೆ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಅರಮನೆ ರಸ್ತೆ, ಎಸ್‌.ಸಿ ರಸ್ತೆ, ಶೇಷಾದ್ರಿ ರಸ್ತೆ, ಡಿಸ್ಟ್ರಿಕ್‌ ಆಫೀಸ್‌ ರಸ್ತೆ, ಕಾಳಿದಾಸ ಮಾರ್ಗ, ಲಿಂಕ್‌ ರಸ್ತೆ, ರಾಮಚಂದ್ರ ರಸ್ತೆ, ರೈಲ್ವೆ ಸಮಾಂತರ ರಸ್ತೆ, ಅರಮನೆ ಅಡ್ಡರಸ್ತೆ, ಮೇನ್‌ ಗಾರ್ಡ್‌ ಅಡ್ಡರಸ್ತೆ, ಲೇಡಿ ಕರ್ಜನ್‌ ರಸ್ತೆ, ಕ್ರೆಸೆಂಟ್‌ ರಸ್ತೆ, ಮಿಲ್ಲರ್‌್ಸ ರಸ್ತೆ, ಮಿಲ್ಲರ್‌್ಸ ಟ್ಯಾಂಕ್‌ ಬಂಡ್‌ ರಸ್ತೆ, ಅಲಿ ಅಸ್ಗರ್‌ ರಸ್ತೆ, ಸೇಂಟ್‌ ಜಾನ್ಸ್‌ ಚರ್ಚ್‌ ರಸ್ತೆ, ಕೆನ್ಸಿಂಗ್ಟನ್‌ ರಸ್ತೆ, ವೀರಪಿಳ್ಳೈ ರಸ್ತೆ, ಡಿಸ್ಪೆನ್ಸರಿ ರಸ್ತೆ.

‘ಸಿ’ ಪ್ಯಾಕೇಜ್‌ ರಸ್ತೆಗಳು

ಇಬ್ರಾಹಿಂ ಸಾಹೇಬ್‌ ಸ್ಟ್ರೀಟ್‌, ಮೀನಾಕ್ಷಿ ಕೋಯಿಲ್‌ ರಸ್ತೆ, ನಾರಾಯಣ ಪಿಳ್ಳೈ ಸ್ಟ್ರೀಟ್‌, ಸೆಪ್ಪಿಂಗ್ಸ್‌ ರಸ್ತೆ, ಧರ್ಮರಾಜ ಕೋಯಿಲ್‌ ಸ್ಟ್ರೀಟ್‌, ಹೇನ್ಸ್ ರಸ್ತೆ, ಹಾಸ್ಪಿಟಲ್‌ ರಸ್ತೆ, ಕಾಮರಾಜ ರಸ್ತೆ, ಗಂಗಾಧರ ಶೆಟ್ಟಿ ರಸ್ತೆ, ವುಡ್‌ ಸ್ಟ್ರೀಟ್‌, ಕ್ಯಾಸಲ್‌ ಸ್ಟ್ರೀಟ್‌, ಬ್ರಂಟನ್‌ ರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್‌ ಮಾರ್ಕ್ಸ್ ರಸ್ತೆ, ಚರ್ಚ್‌ ಸ್ಟ್ರೀಟ್‌, ಗ್ರ್ಯಾಂಟ್‌ ರಸ್ತೆ, ಹೇಯ್ಸ್‌ ರಸ್ತೆ, ಕಾನ್ವೆಂಟ್‌ ರಸ್ತೆ, ಪಂಪ ಮಹಾಕವಿ ರಸ್ತೆ, ಮಿಷನ್‌ ರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಚಿಕ್ಕಪೇಟೆ ಮುಖ್ಯ ರಸ್ತೆ, ಎ.ಎಸ್‌. ಚಾರ್‌ ಸ್ಟ್ರೀಟ್‌, ಬಳೆಪೇಟೆ ರಸ್ತೆ, ಬನ್ನಪ್ಪ ಪಾರ್ಕ್‌, ಕಬ್ಬನ್‌ಪೇಟೆ ಮುಖ್ಯ ರಸ್ತೆ, ಕೆ.ವಿ. ಟೆಂಪಲ್‌ ಸ್ಟ್ರೀಟ್‌, ಕಿಲಾರಿ ಸ್ಟ್ರೀಟ್‌, ನಾಗರಪೇಟೆ ಮುಖ್ಯ ರಸ್ತೆ, ಪೊಲೀಸ್‌ ಸ್ಟೇಶನ್‌ ರಸ್ತೆ, ಆರ್‌.ಟಿ. ಸ್ಟ್ರೀಟ್‌, ಸುಲ್ತಾನ್‌ ಪೇಟೆ ರಸ್ತೆ, ಸ್ಯಾಂಕಿ ರಸ್ತೆ, ಜಸ್ಮಾ ಭವನ್‌ ರಸ್ತೆ, ಎಡ್ವರ್ಡ್‌ ರಸ್ತೆ, ಯುನಿಯನ್‌ ಸ್ಟ್ರೀಟ್‌, ಅಣ್ಣಸ್ವಾಮಿ ರಸ್ತೆ, ತಿಮ್ಮಯ್ಯ ರಸ್ತೆ, ಬ್ರಾಡ್‌ವೇ, ಸೇಂಟ್‌ ಜಾನ್ಸ್‌ ರಸ್ತೆ, ಆಸ್ಬೋರ್ನ್‌ ರಸ್ತೆ, ಶಿವಾಜಿ ರಸ್ತೆ ಮತ್ತು ಚಿಕ್ಕ ಬಜಾರ ರಸ್ತೆ.ಅನಿವಾರ್ಯದ ಹಾದಿ

ಒಂದೆಡೆ ದಿನದಿಂದ ದಿನಕ್ಕೆ ವಾಹನ ಸಂಖ್ಯೆ ಹೆಚ್ಚುತ್ತಿದೆ. ಇನ್ನೊಂದೆಡೆ ವಾಹನ ನಿಲುಗಡೆಗೆ ಸ್ಥಳಾವಕಾಶ ಕಡಿಮೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಗ್ರವಾದ ಪಾರ್ಕಿಂಗ್‌ ವ್ಯವಸ್ಥೆಯನ್ನು ಜಾರಿಗೆ ತರುವುದು ಅನಿವಾರ್ಯವಾಗಿದೆ.

–ಬಿ.ಎಸ್‌. ಸತ್ಯನಾರಾಯಣ, ಮೇಯರ್‌ಇದೊಂದೇ ದಾರಿಯೇ?

ಬಿಬಿಎಂಪಿಗೆ ಆದಾಯ ತರಲು ಪಾರ್ಕಿಂಗ್‌ ಶುಲ್ಕವೊಂದೇ ದಾರಿಯೇ? ಆಸ್ತಿ ತೆರಿಗೆ ವಂಚನೆ ಮಾಡುತ್ತಿರುವ ಲಕ್ಷಾಂತರ ಜನ ಇದ್ದಾರೆ. ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವರಮಾನ ಸೋರಿಕೆ ತಡೆಗಟ್ಟಬೇಕು. ಜಾಹೀರಾತು ಫಲಕಗಳಿಂದ ಹೆಚ್ಚಿನ ಕರ ವಸೂಲಿ ಮಾಡಬೇಕು. ಜನಸಾಮಾನ್ಯರಿಗೆ ಮಾತ್ರವಲ್ಲ ಶ್ರೀಮಂತರಿಗೂ ಇಷ್ಟೊಂದು ಪ್ರಮಾಣದ ಪಾರ್ಕಿಂಗ್‌ ಶುಲ್ಕವನ್ನು ಕೊಡಲು ಸಾಧ್ಯವಿಲ್ಲ. ಒಂದು ಗಂಟೆ ಕಾರು ನಿಲುಗಡೆಗೆ ರೂ. 30 ಕೊಡಬೇಕೆಂದರೆ ಯಾರಿಗಾದರೂ ದುಬಾರಿಯೇ.ದಿಕ್ಕುತಪ್ಪಿದ ಪಾರ್ಕಿಂಗ್‌ ವ್ಯವಸ್ಥೆಯನ್ನು ಸರಿದಾರಿಗೆ ತರಲು ಯಾರ ಆಕ್ಷೇಪವೂ ಇಲ್ಲ. ದಲ್ಲಾಳಿಗಳ ಪಾಲಾಗಿರುವ ಪಾರ್ಕಿಂಗ್‌ ಸ್ಥಳಗಳನ್ನು ಬಿಬಿಎಂಪಿ ವಶಕ್ಕೆ ಪಡೆದು ಟೆಂಡರ್‌ ಮೂಲಕ ಗುತ್ತಿಗೆದಾರರಿಗೆ ಕೊಡಬೇಕು. ನಿಗದಿತ ಪಾರ್ಕಿಂಗ್‌ ಸ್ಥಗಳಲ್ಲಿ ತುಂಬಾ ಕನಿಷ್ಠ ಶುಲ್ಕವನ್ನು ಮಾತ್ರ ಪಡೆಯಬೇಕು. ರಸ್ತೆ–ರಸ್ತೆಗೆ ಪಾರ್ಕಿಂಗ್‌ ಶುಲ್ಕ ಪಡೆಯುವುದು ತರವಲ್ಲ.

–ಜೆ.ಹುಚ್ಚಪ್ಪ, ಮಾಜಿ ಮೇಯರ್‌ಹೊಣೆ ಮರೆತ ಬಿಬಿಎಂಪಿ

ಪ್ರತಿ ಕಿಲೋಮೀಟರ್‌ ರಸ್ತೆ ನಿರ್ಮಾಣಕ್ಕೆ ರೂ. 4ರಿಂದ 5 ಕೋಟಿ ಖರ್ಚಾಗಿರುತ್ತದೆ. ರಸ್ತೆ ನಿರ್ಮಾಣದ ಮೂಲ ಉದ್ದೇಶವೇ ವಾಹನ ಓಡಾಟಕ್ಕೆ. ಬಿಬಿಎಂಪಿ ರಸ್ತೆ ಮೇಲೆ ಶುಲ್ಕ ನೀಡಿ ಪಾರ್ಕಿಂಗ್‌ ಮಾಡಲು ಅದು ಹೇಗೆ ಯೋಜನೆ ಸಿದ್ಧಪಡಿಸುತ್ತದೆ? ರಸ್ತೆ ಮೇಲೆ ವಾಹನ ನಿಲ್ಲಿಸುವುದು ಯಾವ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಅಂತಹ ನಿಲುಗಡೆಗೆ ಶುಲ್ಕ ವಿಧಿಸುವ ಮೂಲಕ ಬಿಬಿಎಂಪಿ ಅದನ್ನು ಅಧಿಕೃತಗೊಳಿಸಲು ಹೊರಟಿದೆ.ಕಟ್ಟಡ ನಿರ್ಮಾಣ ಮಾಡುವಾಗ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕಾದುದು ಕಾನೂನಿನ ಪ್ರಕಾರ ಕಡ್ಡಾಯ. ಆಗ ನಿಯಮ ಉಲ್ಲಂಘಿಸಲು ಅನುವು ಮಾಡಿಕೊಟ್ಟ ಪಾಲಿಕೆಯೇ ಈಗ ಇಂತಹ ನಿರ್ಣಯ ಕೈಗೊಳ್ಳುತ್ತಿದೆ. ಹೃದಯ ಭಾಗದಲ್ಲಿ ಈಗಲೇ ವಾಹನಗಳ ಓಡಾಟದ ವೇಗ ಗಂಟೆಗೆ 15 ಕಿ.ಮೀ.ಗೆ ಇಳಿದಿದೆ. ರಸ್ತೆ ಮೇಲೆ ಪಾರ್ಕಿಂಗ್‌ ಹೆಚ್ಚಿದರೆ ಇನ್ನೂ ತೊಂದರೆ ಆಗಲಿದೆ. ಬಿಬಿಎಂಪಿಯಿಂದಲೇ ಪ್ರಮುಖ ಪ್ರದೇಶಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಏಕೆ ಮಾಡಬಾರದು?

–ಎಂ.ಎನ್‌. ಶ್ರೀಹರಿ, ರಾಜ್ಯ ಸರ್ಕಾರದ ಸಲಹೆಗಾರರು (ಸಂಚಾರ, ಸಾರಿಗೆ ಮತ್ತು ಮೂಲಸೌಕರ್ಯ)ಸಾರ್ವಜನಿಕರ ಶೋಷಣೆ

ನಗರದ ನಾಗರಿಕರನ್ನು ಎಷ್ಟು ಅಂತ ಶೋಷಣೆ ಮಾಡಲಾಗುತ್ತದೆ? ಮೂಲ ತಪ್ಪಿರುವುದು ಬಿಬಿಎಂಪಿಯಲ್ಲೇ. ಪ್ರತಿ ಕಟ್ಟಡದಲ್ಲಿ ವಾಹನ ನಿಲುಗಡೆ ಇರುವಂತೆ ನೋಡಿಕೊಂಡಿದ್ದರೆ ಈಗ ಪಾರ್ಕಿಂಗ್‌ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಪ್ರತಿಯೊಂದು ವಾಣಿಜ್ಯ ಸಂಸ್ಥೆಯ ಟ್ರೇಡ್‌ ಲೈಸನ್ಸ್‌ ನವೀಕರಣ ಮಾಡುವಾಗ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇಲ್ಲದಿದ್ದರೆ ಲೈಸನ್ಸ್‌ ನವೀಕರಣ ಮಾಡಬಾರದು. ತನ್ನ ತಪ್ಪು ಇಟ್ಟುಕೊಂಡು ಜನರ ಮೇಲೆ ಹೊರೆ ಹಾಕಿದರೆ ಹೇಗೆ?ಪಾರ್ಕಿಂಗ್‌ಗೆ ಎಲ್ಲ ಕಡೆ ಸೂಕ್ತ ವ್ಯವಸ್ಥೆ ಕಲ್ಪಿಸದ ಮೇಲೂ ರಸ್ತೆ ಮೇಲೆ ವಾಹನ ನಿಲುಗಡೆ ಮಾಡಿದರೆ ಅಧಿಕ ಶುಲ್ಕ ಆಕರಿಸಲು ಯಾರ ಅಭ್ಯಂತರವೂ ಇರುವುದಿಲ್ಲ.

–ಎನ್‌.ಮುಕುಂದ್‌, ಅಧ್ಯಕ್ಷರು, ಜಯನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಶುಲ್ಕ ಕಡಿಮೆ ಮಾಡಿ

ಪಾರ್ಕಿಂಗ್‌ ಶುಲ್ಕದ ಪ್ರಮಾಣ ಹೆಚ್ಚಾಯಿತು. ಬಿಬಿಎಂಪಿ ತುಸು ಕಡಿಮೆ ಮಾಡಿ ಅದನ್ನು ಅನುಷ್ಠಾನಕ್ಕೆ ತರಬೇಕು. ಪಾರ್ಕಿಂಗ್‌ ಸ್ಥಳಗಳನ್ನೇ ಬಿಡದಂತೆ ಕಟ್ಟಡ ಕಟ್ಟಿದವರಿಗೆ ಬುದ್ಧಿ ಕಲಿಸುವುದಾದರೂ ಹೇಗೆ? ಬಿಬಿಎಂಪಿಯ ಈ ಕ್ರಮದಿಂದ ಜನ ಸಾರ್ವಜನಿಕ ಸಾರಿಗೆ ಸೌಲಭ್ಯ ಬಳಸುವಂತಾದರೆ ಒಳ್ಳೆಯದು. ಜನ ಸಾರ್ವಜನಿಕ ಸೇವೆ ಬಳಸುವುದು ಹೆಚ್ಚಿದಂತೆ ಅದಕ್ಕೆ ಅಗತ್ಯವಾದ ಸೌಲಭ್ಯ ಕೇಳಲು ಹಕ್ಕು ಬರುತ್ತದೆ.

–ಕಾತ್ಯಾಯಿನಿ ಚಾಮರಾಜ್‌, ಸಿವಿಕ್‌ ಸಂಸ್ಥೆ ಅಧ್ಯಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry