ಪಾರ್ಕಿಂಗ್‌ ಸಂಕೀರ್ಣ ಹೆಚ್ಚಲಿ, ಶುಲ್ಕಕ್ಕೆ ಮಿತಿ ಇರಲಿ

7
ಪಾರ್ಕಿಂಗ್ ಬರೆ ಭಾಗ - 5

ಪಾರ್ಕಿಂಗ್‌ ಸಂಕೀರ್ಣ ಹೆಚ್ಚಲಿ, ಶುಲ್ಕಕ್ಕೆ ಮಿತಿ ಇರಲಿ

Published:
Updated:
ಪಾರ್ಕಿಂಗ್‌ ಸಂಕೀರ್ಣ ಹೆಚ್ಚಲಿ, ಶುಲ್ಕಕ್ಕೆ ಮಿತಿ ಇರಲಿ

ಬೆಂಗಳೂರು: ‘ವಾಹನಗಳ ನಿಲುಗಡೆ ಸಮಸ್ಯೆ ನೀಗಿಸಲು ಹತ್ತು ಹಲವು ದಾರಿಗಳಿವೆ. ಆದರೆ, ಕಟ್ಟುನಿಟ್ಟಿನ ಜಾರಿ ಅಗತ್ಯವಾಗಿದೆ’ ಎನ್ನುತ್ತಾರೆ ನಗರ ಸಾರಿಗೆ ತಜ್ಞರು. ‘ಬಹು ಆಯಾಮದ ಈ ಸಮಸ್ಯೆಯನ್ನು ನೀಗಿಸಲು ಬಿಬಿಎಂಪಿ ಮತ್ತು ಸಂಚಾರ ಪೊಲೀಸ್‌ ಇಲಾಖೆ ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದೂ ಹೇಳುತ್ತಾರೆ.‘ನಗರದ ಒಟ್ಟು ವಾಹನಗಳಲ್ಲಿ ರಸ್ತೆ ಮೇಲೆ ನಿಲುಗಡೆ ಆಗುತ್ತಿರುವ ಪ್ರಮಾಣ ಶೇ 43ರಷ್ಟು. ಹೆಚ್ಚು–ಕಡಿಮೆ 20 ಲಕ್ಷದಷ್ಟು ವಾಹನಗಳು ಸದಾ ರಸ್ತೆ ಮೇಲೆ ನಿಂತಿರುತ್ತವೆ. ಅವುಗಳಿಗೆ ಪರ್ಯಾಯ ವ್ಯವಸ್ಥೆ ರೂಪಿಸುವುದು ನಮ್ಮ ಮೊದಲ ಆದ್ಯತೆ ಆಗಬೇಕು’ ಎನ್ನುತ್ತಾರೆ, ನಗರ ಸಂಚಾರ ಪೊಲೀಸ್‌ ವಿಭಾಗದ ಹಿಂದಿನ ಮುಖ್ಯಸ್ಥರಾಗಿದ್ದ ಮೈಸೂರು ನಗರ ಪೊಲೀಸ್‌ ಆಯುಕ್ತ ಡಾ.ಎಂ.ಎ.ಸಲೀಂ.‘ನಾನು ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗದ ಮುಖ್ಯಸ್ಥನಾಗಿದ್ದಾಗ 23 ಕಡೆ ಬಹುಮಹಡಿ ಪಾರ್ಕಿಂಗ್‌ ಸಂಕೀರ್ಣ ನಿರ್ಮಾಣಕ್ಕೆ ಸ್ಥಳಗಳನ್ನು ಗುರುತಿಸಿ, ಬಿಬಿಎಂಪಿಗೆ ವರದಿ ನೀಡಿದ್ದೆವು. ಅವುಗಳನ್ನು ಕ್ಷಿಪ್ರಗತಿಯಲ್ಲಿ ನಿರ್ಮಾಣ ಮಾಡಿದರೆ ರಸ್ತೆಗಳ ಮೇಲಿನ ದೊಡ್ಡ ಹೊರೆ ಕಡಿಮೆಯಾಗಲಿದೆ’ ಎಂದು ವಿವರಿಸುತ್ತಾರೆ.‘ಖಾಸಗಿ ಬಸ್‌ಗಳದ್ದು ಬಹುದೊಡ್ಡ ಸಮಸ್ಯೆ. ಅವುಗಳ ನಿಲುಗಡೆಗೆ ದೊಡ್ಡದಾದ ಒಂದು ಬಸ್‌ ನಿಲ್ದಾಣ ಸಹ ಇಲ್ಲ. ಹೀಗಾಗಿ ರಸ್ತೆಗಳ ಮೇಲೆ ಸಿಕ್ಕ–ಸಿಕ್ಕಲ್ಲಿ ಅವು ನಿಲ್ಲುತ್ತವೆ. ಸಂಚಾರಕ್ಕೂ ಅಡಚಣೆ ಉಂಟು ಮಾಡುತ್ತಿವೆ. ಈ ಹಿರಿದಾದ ಸಮಸ್ಯೆ ಬಗೆಹರಿಸಲು ಬೈಯ್ಯಪ್ಪನಹಳ್ಳಿ ಮತ್ತು ಪೀಣ್ಯದಲ್ಲಿ ಎರಡು ಖಾಸಗಿ ಬಸ್‌ ನಿಲ್ದಾಣಗಳನ್ನು ಸ್ಥಾಪಿಸಲು ಶಿಫಾರಸು ಮಾಡಿದ್ದೆವು’ ಎಂದು ಸಲೀಂ ನೆನಪಿಸಿಕೊಳ್ಳುತ್ತಾರೆ.‘ಮಡಿವಾಳ, ಕೋರಮಂಗಲ, ಕಲಾಸಿಪಾಳ್ಯ, ಚಾಮರಾಜಪೇಟೆ ಮೆಜಿಸ್ಟಿಕ್‌ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಖಾಸಗಿ ಬಸ್‌ಗಳ ಹಾವಳಿ ಹೆಚ್ಚಾಗಿದೆ. ನಗರದ ಎರಡೂ ದಿಕ್ಕಿನಲ್ಲಿ ಒಂದೊಂದು ನಿಲ್ದಾಣ ಸ್ಥಾಪನೆಯಾದರೆ ಖಾಸಗಿ ಬಸ್‌ಗಳಿಗೆ ನಗರದ ಹೃದಯ ಭಾಗದಲ್ಲಿ ಓಡಾಡದಂತೆ ನಿರ್ಬಂಧಿಸಲು ಸಾಧ್ಯವಿದೆ. ಆಗ ಸಂಚಾರ ದಟ್ಟಣೆ ಕಡಿಮೆಯಾಗುವ ಜತೆಗೆ ಪಾರ್ಕಿಂಗ್‌ ಸಮಸ್ಯೆ ಕೂಡ ನೀಗಲಿದೆ’ ಎಂದು ಅವರು ಹೇಳುತ್ತಾರೆ.ರಾಜ್ಯ ಸರ್ಕಾರದ ಸಲಹೆಗಾರ (ಸಂಚಾರ, ಸಾರಿಗೆ ಮತ್ತು ಮೂಲಸೌಕರ್ಯ) ಎಂ.ಎನ್‌. ಶ್ರೀಹರಿ ಸಹ ಇದೇ ಸಲಹೆ ನೀಡುತ್ತಾರೆ. ‘ರಸ್ತೆ ಇರುವುದು ವಾಹನಗಳ ಓಡಾಟಕ್ಕೇ ಹೊರತು, ಅವುಗಳನ್ನು ನಿಲ್ಲಿಸಲಲ್ಲ. ಪಾರ್ಕಿಂಗ್‌ಗೆ ರಸ್ತೆಯಿಂದ ಹೊರಭಾಗದಲ್ಲಿ ವ್ಯವಸ್ಥೆ ಮಾಡಬೇಕು. ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣಗಳ ನಿರ್ಮಾಣ ಮಾಡಿದರೆ ಸಮಸ್ಯೆಗೆ ತಕ್ಕ ಪರಿಹಾರ ಸಿಗಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ.‘ಜಗತ್ತಿನ ಬೇರೆ ಯಾವ ನಗರದಲ್ಲೂ ಸಂಚಾರ ಇಷ್ಟೊಂದು ದುಸ್ತರವಾಗಿಲ್ಲ. ದೊಡ್ಡ ವಾಹನಗಳು ರಸ್ತೆ ಮೇಲೆ ನಿಲ್ಲದಂತೆ ಮೊದಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಸ್ಪಷ್ಟವಾಗಿ ತಿಳಿಸುತ್ತಾರೆ. ‘ವಸತಿ ಪ್ರದೇಶದಲ್ಲಿ ಕಟ್ಟಡ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ರಸ್ತೆಮೇಲೆ ನಿಂತಿರುವ ವಾಹನಗಳು ‘ಮನೆ’ ಸೇರುತ್ತವೆ. ವಾಹನಗಳ ನಿಲುಗಡೆ ಸ್ಥಳಗಳಲ್ಲಿ ಕಟ್ಟಿದ ಮಳಿಗೆಗಳನ್ನು ಒಡೆದರೆ ಇನ್ನಷ್ಟು ಸಮಸ್ಯೆ ನೀಗಲಿದೆ’ ಎಂದು ಮುಂದಿರುವ ಹಾದಿ ಮೇಲೆ ಬೆಳಕು ಚೆಲ್ಲುತ್ತಾರೆ.‘ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸಬಲಗೊಳಿಸಿ, ಜನಕ್ಕೆ ಅಗತ್ಯವಾದ ಸ್ಥಳ ಮತ್ತು ಸಮಯದಲ್ಲಿ ಬಸ್‌ಗಳ ವ್ಯವಸ್ಥೆ ಮಾಡಿದರೆ ಖಾಸಗಿ ವಾಹನ ಬಳಕೆ ತಗ್ಗಬಹುದು’ ಎನ್ನುತ್ತಾರೆ ನಗರ ವಿಷಯಗಳ ತಜ್ಞ ಅಶ್ವಿನ್‌ ಮಹೇಶ್‌. ‘ಇಕ್ಕಟ್ಟಾದ ರಸ್ತೆಗಳಲ್ಲಿ ಅಂಗಡಿಗಳ ಮಾಲೀಕರು, ನೌಕರರು ಮತ್ತು ಗ್ರಾಹಕರು ವಾಹನ ನಿಲುಗಡೆ ಮಾಡದಂತೆ ಸಂಚಾರ ಪೊಲೀಸರು ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು’ ಎಂದು ಸಲಹೆ ನೀಡುತ್ತಾರೆ.‘ರಸ್ತೆಗಳ ಮೇಲೆ ಪಾರ್ಕಿಂಗ್‌ ಮಾಡುವುದು ಬೇಡವೇ ಬೇಡ ಎನ್ನುವುದು ಸೂಕ್ತ ತೀರ್ಮಾನ ಆಗುವುದಿಲ್ಲ. ಕೆಲಸದ ನಿಮಿತ್ತ ಹೋದವರು 2–3 ಕಿ.ಮೀ. ದೂರದಲ್ಲಿ ವಾಹನ ನಿಲ್ಲಿಸಿ, ಓಡಾಡಲು ಸಾಧ್ಯವೇ’ ಎಂದು ‘ಬೆಂಗಳೂರು ಉಳಿಸಿ’ ಸಂಘಟನೆ ಪದಾಧಿಕಾರಿಗಳು ಕೇಳುತ್ತಾರೆ. ‘ವಿಶಾಲವಾದ ಪ್ರತಿ ರಸ್ತೆಯಲ್ಲೂ ಸಣ್ಣ ವಾಹನಗಳ ಪಾರ್ಕಿಂಗ್‌ಗೆ ವೈಜ್ಞಾನಿಕವಾದ ವ್ಯವಸ್ಥೆ ರೂಪಿಸಬೇಕು. ವಾಹನಗಳ ಸುರಕ್ಷತೆ, ನಿಲುಗಡೆ ಸ್ಥಳದ ಸಮರ್ಪಕ ಬಳಕೆ ಈ ವ್ಯವಸ್ಥೆಗೆ ಆದ್ಯತೆ ಆಗಬೇಕು. ಅದರ ನಿರ್ವಹಣೆಗೆ ಅಗತ್ಯವಾದ ಅಲ್ಪ ಮೊತ್ತದ ಶುಲ್ಕವನ್ನು ಮಾತ್ರ ಸಂಗ್ರಹಿಸಬೇಕು’ ಎನ್ನುತ್ತಾರೆ ಅವರು.‘ಪಾರ್ಕಿಂಗ್‌ ವ್ಯವಸ್ಥೆ ಮೂಲಕ ಬಿಬಿಎಂಪಿ ದುಡ್ಡು ಮಾಡುವ ಅಗತ್ಯ ಇಲ್ಲ. ಸಮರ್ಪಕವಾದ ಆಸ್ತಿ ತೆರಿಗೆ ಸಂಗ್ರಹ, ಜಾಹೀರಾತು ಶುಲ್ಕ ಆಕರಣೆ, ಆಪ್ಟಿಕಲ್‌ ಫೈಬರ್‌ ಕೇಬಲ್‌ಗಳ ಭೂಬಾಡಿಗೆ ಸಂಗ್ರಹ... ಹೀಗೆ ಆದಾಯಕ್ಕೆ ಬೇಕಾದಷ್ಟು ದಾರಿಗಳಿವೆ. ಬೆಲೆ ಏರಿಕೆ ಹೊಡೆತಕ್ಕೆ ತತ್ತರಿಸುವ ನಾಗರಿಕರ ಮೇಲೆ ಪಾರ್ಕಿಂಗ್‌ ಶುಲ್ಕದ ಹೊರೆ ಹೊರಿಸುವುದು ಉತ್ತಮ ಮಾರ್ಗವಲ್ಲ’ ಎಂದು ಹೇಳುತ್ತಾರೆ.ಬಿಬಿಎಂಪಿ ಸದಸ್ಯರೊಬ್ಬರು ಮತ್ತೊಂದು ಸಲಹೆ ನೀಡುತ್ತಾರೆ. ‘ನಗರದ ಕೆಲವೆಡೆ ಬಿಬಿಎಂಪಿಗೆ ಸೇರಿದ ಖಾಲಿ ನಿವೇಶನಗಳು, ಮೈದಾನಗಳು ಇವೆ. ವರ್ಷದ ಬಹುತೇಕ ಅವಧಿಗೆ ಅವು ಬಳಕೆಯೇ ಆಗುವುದಿಲ್ಲ. ಉದಾಹರಣೆಗೆ ಕಬ್ಬನ್‌ ರಸ್ತೆಯ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಮೈದಾನ. ಜನವರಿ 26 ಮತ್ತು ಆಗಸ್ಟ್‌ 15 ಹೊರತುಪಡಿಸಿದರೆ ಅದರ ಬಾಗಿಲು ಸದಾ ಬಂದ್‌ ಆಗಿರುತ್ತದೆ. ಇಂತಹ ಸ್ಥಳಗಳನ್ನು ವ್ಯವಸ್ಥಿತ ಪಾರ್ಕಿಂಗ್‌ಗೆ ಏಕೆ ಬಳಸಿಕೊಳ್ಳಬಾರದು’ ಎಂದು ಪ್ರಶ್ನಿಸುತ್ತಾರೆ.

‘ಮೇಯರ್‌ ಜತೆ ಈ ವಿಷಯವನ್ನು ಚರ್ಚಿಸಲಿದ್ದೇನೆ’ ಎಂದು ಅವರು ಹೇಳುತ್ತಾರೆ.‘ಖಾಸಗಿ ನಿವೇಶನದಲ್ಲಿ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ಬಿಬಿಎಂಪಿ ಕಟ್ಟಡ ಮಾರ್ಗಸೂಚಿಯಲ್ಲಿ ಬದಲಾವಣೆ ತರಬೇಕು. ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಮಾಡಿಕೊಡುವ ಖಾಸಗಿ ವ್ಯಕ್ತಿಗಳ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು’ ಎನ್ನುವ ಶಿಫಾರಸನ್ನು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಮಾಡಿದೆ.‘ಬಸ್‌ಗಳು, ಲಾರಿಗಳು, ವ್ಯಾನ್‌ಗಳು, ನೀರಿನ ಟ್ಯಾಂಕರ್‌ಗಳು ಸೇರಿದಂತೆ ದೊಡ್ಡ ವಾಹನಗಳ ರಾತ್ರಿ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ರಸ್ತೆಗಳ ಮೇಲೆ ನಿಲ್ಲಲು ಅವುಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು’ ಎಂದು ಡಲ್ಟ್‌ ಸಲಹೆ ನೀಡಿದೆ. ‘ಎಲ್ಲ ವಾಹನಗಳು ವಾಹನ ನಿಲುಗಡೆ ಪ್ರಮಾಣಪತ್ರ (ವಿಪಿಸಿ)ವನ್ನು ಕಡ್ಡಾಯವಾಗಿ ಪಡೆಯುವಂತೆ ನಿಯಮ ರೂಪಿಸಬೇಕು ಮತ್ತು ಸೂಚಿತ ಪ್ರದೇಶಗಳಲ್ಲಷ್ಟೇ ಅವುಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು’ ಎಂದೂ ಅದು ಹೇಳಿದೆ.ರೈಲ್ವೆ–ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳ ಪಾರ್ಕಿಂಗ್‌ ವ್ಯವಸ್ಥೆಯನ್ನು ಇನ್ನಷ್ಟು ಸಶಕ್ತಗೊಳಿಸಬೇಕು ಎನ್ನುವ ಸಲಹೆ ಕೂಡ ಇದೇ ವೇಳೆ ಕೇಳಿಬಂದಿದೆ.ಏನು ಆಗಬೇಕು?

ನಗರದ ಪ್ರಮುಖ ಪ್ರದೇಶಗಳಲ್ಲಿ ಬಿಬಿಎಂಪಿ ಜಾಗ ಗುರುತಿಸಿ ಬಹುಮಹಡಿ ಪಾರ್ಕಿಂಗ್‌ ಸಂಕೀರ್ಣ ನಿರ್ಮಿಸಬೇಕುಕಟ್ಟಡ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ವಾಹನ ನಿಲುಗಡೆ ಪ್ರದೇಶದ ಕಟ್ಟಡ ತೆರವುಗೊಳಿಸಬೇಕುಖಾಸಗಿ ಸ್ಥಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆಗೆ ಪ್ರೋತ್ಸಾಹದಾಯಕ ಕ್ರಮ ಕೈಗೊಳ್ಳಬೇಕುವಿಶಾಲವಾದ ರಸ್ತೆಗಳಲ್ಲಿ ಸುರಕ್ಷಿತ ಪಾರ್ಕಿಂಗ್‌ಗೆ ವೈಜ್ಞಾನಿಕ ವ್ಯವಸ್ಥೆ ರೂಪಿಸಬೇಕು ಮತ್ತು ಅತ್ಯಲ್ಪ ಶುಲ್ಕವನನ್ನಷ್ಟೇ ವಿಧಿಸಬೇಕು (ಗಂಟೆಗಳ ಲೆಕ್ಕದಲ್ಲಿ ಇರಲೇಕೂಡದು)ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೆ 250 ಮೀಟರ್‌ ಸುತ್ತಳತೆಯಲ್ಲಿ ವಾಹನ ಸೌಲಭ್ಯ ಸಿಗಬೇಕು. ಕ್ಷಿಪ್ರ ಬಸ್‌ ಸಾರಿಗೆ, ಮಾನೊ, ಮೆಟ್ರೊ ಮತ್ತು ವರ್ತುಲ ರೈಲು ಸೌಲಭ್ಯ ಒದಗಿಸಬೇಕು. ಈ ಬಹುವಿಧ ಸಾರಿಗೆ ವ್ಯವಸ್ಥೆಯಿಂದ ನಗರದ ಎಲ್ಲ ಭಾಗವನ್ನೂ ಸಂಪರ್ಕಿಸಲು ಸಾಧ್ಯವಿರಬೇಕುಖಾಸಗಿ ಬಸ್‌ ನಿಲ್ದಾಣಗಳ ವ್ಯವಸ್ಥೆ ಆಗಬೇಕು. ಟ್ರಕ್‌ ಟರ್ಮಿನಲ್‌ಗಳನ್ನೂ ನಿರ್ಮಿಸಬೇಕುಖಾಲಿ ಇರುವ ನಿವೇಶನ ಮತ್ತು ಮೈದಾನಗಳನ್ನು ಪಾರ್ಕಿಂಗ್‌ಗೆ ಬಳಸಲು ಪ್ರಯತ್ನ ಮಾಡಬೇಕುಪಾರ್ಕಿಂಗ್‌ ಲಾಟ್‌ಗಳ ದುರುಪಯೋಗ ತಪ್ಪಿಸಲು ಲೈಸನ್ಸ್‌ ವ್ಯವಸ್ಥೆ ಜಾರಿಗೊಳಿಸಬೇಕುಮೆಟ್ರೊ ನಿಲ್ದಾಣ ಮತ್ತು ಬಸ್‌ ತಂಗುದಾಣಕ್ಕೆ ಹೊಂದಿಕೊಂಡಂತೆ ಪಾರ್ಕಿಂಗ್‌ ಸೌಲಭ್ಯ ಇರಬೇಕು

(ಡಲ್ಟ್‌ ವರದಿ ಮತ್ತು ಸಾರಿಗೆ ತಜ್ಞರಿಂದ ವ್ಯಕ್ತವಾದ ಕ್ರೋಡೀಕೃತ ಸಲಹೆಗಳು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry