ಪಾರ್ಕಿಂಗ್ ಸ್ಥಳ ಈಗ ಮುಕ್ತ... ಮುಕ್ತ!

ಮಂಗಳವಾರ, ಜೂಲೈ 23, 2019
20 °C

ಪಾರ್ಕಿಂಗ್ ಸ್ಥಳ ಈಗ ಮುಕ್ತ... ಮುಕ್ತ!

Published:
Updated:

ಹುಬ್ಬಳ್ಳಿ: ನಿನ್ನೆ-ಮೊನ್ನೆವರೆಗೆ ಗಿರಾಕಿಗಳು ಕುಳಿತು ಚಹಾ ಕುಡಿಯುತ್ತಿದ್ದ ಸ್ಥಳದಲ್ಲಿ ಇದೀಗ ವಾಹನಗಳು ಬಂದು ನಿಂತಿವೆ. ಆಸ್ಪತ್ರೆ ಪ್ರಯೋಗಾಲಯವಾಗಿದ್ದ ಜಾಗದಲ್ಲಿ `ಪಾರ್ಕಿಂಗ್~ ಎಂಬ ಬೋರ್ಡ್ ರಾರಾಜಿಸುತ್ತಿದೆ. ವಾಣಿಜ್ಯ ಸಂಕೀರ್ಣದ ಗುಜರಿ ದಾಸ್ತಾನಾಗಿ ಪರಿಣಮಿಸಿದ್ದ ಬೇಸ್‌ಮೆಂಟ್‌ನಲ್ಲಿ ಕಾರುಗಳು ಹಾಯಾಗಿ ಬಂದು ನಿಲ್ಲುವಷ್ಟು ಸ್ಥಳಾವಕಾಶ ಲಭ್ಯವಾಗಿದೆ.ಮಹಾನಗರ ಪಾಲಿಕೆಯು ಪಾರ್ಕಿಂಗ್ ಜಾಗವನ್ನು ತೆರವುಗೊಳಿಸಲು ನಡೆಸಿದ ಮೊದಲ ಹಂತದ ಕಾರ್ಯಾಚರಣೆಯ ಪರಿಣಾಮ ಇದು. ಪಾರ್ಕಿಂಗ್ ಸ್ಥಳವನ್ನು ಮುಕ್ತಗೊಳಿಸಲಾದ 45 ಕಟ್ಟಡಗಳ ಪೈಕಿ ಕೆಲವು ಕಟ್ಟಡಗಳಿಗೆ ಬುಧವಾರ ಸಂಜೆ ಪಾಲಿಕೆ ಆಯುಕ್ತ ಡಾ.ಕೆ.ವಿ.ತ್ರಿಲೋಕಚಂದ್ರ ಭೇಟಿ ನೀಡಿ, ಪರಿಶೀಲಿಸಿದರು. ಕೆಲವೆಡೆ ಅಗತ್ಯ ಸೂಚನೆಗಳನ್ನೂ ನೀಡಿದರು.ವಿದ್ಯಾನಗರದಲ್ಲಿ ಶಿವಲಿಂಗಯ್ಯ ಗಡ್ಡದೇವರಮಠ ಅವರ ಕಟ್ಟಡವಿದೆ. ಇಲ್ಲಿ ಬಜಾಜ್ ಶೋರೂಮ್ ತೆರೆಯಲಾಗಿದೆ. ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗೆ ಕಾಯ್ದಿರಿಸಿದ್ದ ಸ್ಥಳದಲ್ಲಿ ಮಳಿಗೆಗಳು ಎದ್ದಿದ್ದವು. ಮಾಲೀಕರು ಸ್ವಯಂ ಪ್ರೇರಣೆಯಿಂದ ಪಾರ್ಕಿಂಗ್ ಸ್ಥಳವನ್ನು ಮುಕ್ತಗೊಳಿಸಿದ್ದು, ಅವಶೇಷಗಳನ್ನು ಸಾಗಿಸುವ ಕೆಲಸ ಭರದಿಂದ ನಡೆಸಿದ್ದರು. `ಪಾರ್ಕಿಂಗ್‌ಗೆ ದಾರಿ~ ಎಂಬ ಫಲಕವೂ ಪಕ್ಕದಲ್ಲಿ ಢಾಳವಾಗಿ ಎದ್ದು ಕಾಣುತ್ತಿತ್ತು.ಗಡ್ಡದೇವರಮಠ ಅವರ ಕಟ್ಟಡದ ಪಕ್ಕದ್ದೇ ಸುಶ್ರುತಾ ಆಸ್ಪತ್ರೆ. ಅಲ್ಲಿಯ ಪಾರ್ಕಿಂಗ್ ಜಾಗವು ಪ್ರಯೋಗಾಲಯವಾಗಿ ಮಾರ್ಪಾಡು ಹೊಂದಿತ್ತು. ಇದೀಗ ಅಲ್ಲಿಯ ಎಲ್ಲ ಗೋಡೆಗಳನ್ನು ಒಡೆದು ಹಾಕಲಾಗಿದ್ದು, ರಸ್ತೆಯಿಂದ ವಾಹನಗಳು ಬಂದುಹೋಗಲು ಮಾರ್ಗವನ್ನು ಕಲ್ಪಿಸಲಾಗಿದೆ. ಸರ್ವಿಸ್ ರಸ್ತೆಯನ್ನು ಅತಿಕ್ರಮಿಸಿದ್ದ ಗಂಗೋತ್ರಿ ಹೋಟೆಲ್, ತನ್ನದಲ್ಲದ ಜಾಗದಲ್ಲಿದ್ದ ಕಟ್ಟಡವನ್ನು ಒಡೆದುಹಾಕಿದೆ.ಹೊಸೂರಿನ ವಾಸುದೇವ ಇನಾಂದಾರ್ ಅವರ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ನಾಲ್ಕಾರು ದಿನಗಳ ಹಿಂದಿನವರೆಗೂ ಹೊಟೆಲ್ ಇತ್ತು. ಹೋಟೆಲ್‌ಗಾಗಿ ಅಳವಡಿಸಲಾಗಿದ್ದ ಅಂದದ ಟೈಲ್ಸ್‌ಗಳ ಮೇಲೆ ಇದೀಗ ವಾಹನಗಳು ನಿಲ್ಲುತ್ತಿವೆ. ಆದರೆ, ಇಲ್ಲಿಯ ಪಾರ್ಕಿಂಗ್‌ಗೆ ಹೋಗುವ ದಾರಿ ಕಡಿದಾಗಿದ್ದು, ಸರಿಪಡಿಸುವಂತೆ ಆಯುಕ್ತರು ಕಟ್ಟಡದ ಮಾಲೀಕರಿಗೆ ಸೂಚನೆ ನೀಡಿದರು.ದೇಶಪಾಂಡೆನಗರದ ಡಾ. ಕಲ್ಯಾಣಪುರಕರ್ ಅವರ ಆಸ್ಪತ್ರೆಯಲ್ಲಿ ಪಾರ್ಕಿಂಗ್ ಜಾಗದಲ್ಲಿ ಕೆಲವು ಕೋಣೆಗಳನ್ನು ನಿರ್ಮಿಸಿ, ಚಿಕಿತ್ಸಾ ಉದ್ದೇಶಕ್ಕೆ ಅವುಗಳನ್ನು ಬಳಸಲಾಗುತ್ತಿತ್ತು. ಅಲ್ಲಿಯ ಎಲ್ಲ ಕೋಣೆಗಳನ್ನು ತೆರವುಗೊಳಿಸಲಾಗಿದ್ದು, ಪಾರ್ಕಿಂಗ್ ಸ್ಥಳ ಮುಕ್ತಗೊಂಡಿದೆ. ಕೇಶ್ವಾಪುರದ ಡಾ. ಖಾಜಿ ಅವರ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಕೆಲ ಅನಗತ್ಯ ವಸ್ತುಗಳನ್ನು ಸುರಿಯಲಾಗಿತ್ತು. ಈಗ ಅವೆಲ್ಲ ಮಾಯವಾಗಿವೆ. ಆದರೆ, ಪಾರ್ಕಿಂಗ್ ಸ್ಥಳಕ್ಕೆ ತೆರಳಲು ವಾಹನಗಳಿಗೆ ದಾರಿಯೇ ಇಲ್ಲ. ಎರಡೇ ದಿನದಲ್ಲಿ ದಾರಿಯ ವ್ಯವಸ್ಥೆ ಮಾಡಬೇಕು ಎಂದು ಆಯುಕ್ತರು ಆದೇಶಿಸಿದರು.ಕೇಶ್ವಾಪುರದಲ್ಲೇ ಇದ್ದ ಕೇಶವ ದೇಸಾಯಿ ಅವರ ಕಟ್ಟಡದಲ್ಲೂ ಪಾರ್ಕಿಂಗ್ ಜಾಗ ದೇವಸ್ಥಾನದ ಸರಕುಗಳಿಂದ ಜಾಮ್ ಆಗಿತ್ತು. ಅಲ್ಲಿಗ ವಾಹನಗಳು ಹಾಯಾಗಿ ನಿಲ್ಲುವಂತಹ ವ್ಯವಸ್ಥೆ ಮಾಡಲಾಗಿದೆ. ಹಳೇ ಬಸ್ ನಿಲ್ದಾಣದ ಮುಂದಿರುವ ಡಮ್ಮಣಗಿ ಕಾಂಪ್ಲೆಕ್ಸ್‌ನಲ್ಲೂ ಪಾರ್ಕಿಂಗ್ ಜಾಗ ಬಿಡದ ತಪ್ಪನ್ನು ರಿಪಡಿಸಲಾಗಿದೆ. ಪಕ್ಕದ ಖಾಲಿ ಜಾಗವನ್ನು ಖರೀದಿಸಿರುವ ಮಾಲೀಕರು ಪಾರ್ಕಿಂಗ್ ಸ್ಥಳವನ್ನು ಸಿದ್ಧಪಡಿಸುತ್ತಿದ್ದಾರೆ. ಎಲ್ಲ ಮುಕ್ತ ಪಾರ್ಕಿಂಗ್ ಸ್ಥಳಗಳನ್ನು ಡಾ. ತ್ರಿಲೋಕಚಂದ್ರ ಹೆಮ್ಮೆಯಿಂದ ತೋರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry