ಗುರುವಾರ , ಮೇ 19, 2022
24 °C

ಪಾರ್ಕ್ ತುಂಬ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡುಕರ ಕಾಟ

ವಾಲ್ಮೀಕಿ ನಗರದ 6-7ನೇ ಅಡ್ಡರಸ್ತೆ ಮಧ್ಯದಲ್ಲಿರುವ ಅಂಗಡಿಗಳ ಸಾಲಿನಲ್ಲಿ ಒಂದು ಅಂಗಡಿಯ ಮುಂದೆ ಫುಟ್‌ಪಾತ್‌ನಲ್ಲಿ ದೊಡ್ಡದಾದ ತಳ್ಳುಗಾಡಿಯನ್ನು ಕಾಯಂ ಆಗಿ ಸ್ಥಾಪಿಸಿದ್ದಾರೆ. ಅದರಲ್ಲಿ ದನದ ಮಾಂಸದ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಿ ಅಲ್ಲೇ ಮಾರಾಟ ಮಾಡುತ್ತಿದ್ದಾರೆ.ಇದರಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ತುಂಬಾ ಮುಜುಗರವಾಗಿದೆ. ಅಲ್ಲದೆ ಈ ಅಂಗಡಿಯಲ್ಲಿ ಸಂಜೆ 5 ಗಂಟೆಯಿಂದ ರಾತ್ರಿ 11.30ರ ವರೆಗೂ ವ್ಯಾಪಾರಮಾಡಲಾಗುತ್ತಿದೆ.ರಾತ್ರಿಯಾದಷ್ಟು ಇಲ್ಲಿ ಕುಡುಕರ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಇದರಿಂದಾಗಿ ರಸ್ತೆಯಲ್ಲಿ ಜನರಿಗೆ ತಿರುಗಾಡಲು ಜಾಗವಿಲ್ಲ. ಹೀಗಾಗಿ ಜಾಮ್ ಆಗುತ್ತದೆ. ಅಲ್ಲದೆ ಕುಡುಕರ ಕಾಟದಿಂದ ಹೆಂಗಸರು ಮಕ್ಕಳು ಇಲ್ಲಿ ಓಡಾಡಲು ತುಂಬಾ ಭಯಪಡುವಂತಾಗಿದೆ.ಇಷ್ಟೆಲ್ಲಾ ಆದರೂ ಪಕ್ಕದಲ್ಲೇ ಇರುವ ಉಪ ಠಾಣೆಯ ಪೊಲೀಸರು ಕ್ರಮ ಕೈಗೊಳ್ಳದೆ ಕಂಡೂ ಕಾಣದಂತೆ ಇದ್ದಾರೆ.  ಕಾನೂನು, ಶಿಸ್ತು ಕಾಪಾಡಬೇಕಾದ ಪೊಲೀಸರೇ ಸುಮ್ಮನೆ ಕುಳಿತರೆ ಜನಸಾಮಾನ್ಯರ ಗತಿ ಏನು. ದಯಮಾಡಿ ಕ್ರಮ ಜರುಗಿಸಿ.

ನಿವಾಸಿಗಳುಪೆಟ್ರೋಲ್ ಬಂಕ್‌ಗಳಲ್ಲಿ

ನಗರಗಳಲ್ಲಿ ಇತ್ತೀಚೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಉದ್ಯೋಗ ಮಾಡುತ್ತಿರುವವರ ನಡವಳಿಕೆಯಲ್ಲಿ ಬದಲಾವಣೆ ಕಂಡುಬರುತ್ತಿದೆ.ವರ್ಷಕ್ಕೆ ಆರೇಳು ಸಾರಿ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಇದಕ್ಕೆ ಕಾರಣ. ಇಲ್ಲಿ ಪೆಟ್ರೋಲ್ ಹಾಕುವ ಸಿಬ್ಬಂದಿ ಗ್ರಾಹಕರಿಗೆ ಎಳ್ಳಷ್ಟೂ ಮರ್ಯಾದೆ ಕೊಡುತ್ತಿಲ್ಲ. ಅನುಚಿತ ವರ್ತನೆ, ಅನಾಗರಿಕ ನಡವಳಿಕೆ, ಉದಾಸೀನದ ಮಾತುಗಳಂತೂ ಸಾಮಾನ್ಯ.ಕೆಲವು ಬಂಕ್‌ಗಳಲ್ಲಿ ಸೀಮೆಎಣ್ಣೆ ಮಿಶ್ರಣ, ಅಳತೆಯಲ್ಲಿ ವ್ಯತ್ಯಾಸ ಇವೇ ಮುಂತಾದ ಮೋಸದ ವ್ಯವಹಾರ ನಡೆಯುತ್ತಿರುತ್ತದೆ. ಇದು ಸಾಮಾನ್ಯವಾಗಿ ಎಲ್ಲಾ ವಾಹನ ಸವಾರರಿಗೂ, ಚಾಲಕರಿಗೂ ಆಗಿರುತ್ತದೆ.ಮೈಲೇಜ್ ಬರುತ್ತಿಲ್ಲ ಎಂದು ಗೊಣಗುವುದು  ಬಿಟ್ಟು ಬೇರೆ ದಾರಿಯೇ ಇಲ್ಲ. ಇದಕ್ಕೆಲ್ಲ ಕೊನೆ ಯಾವಾಗ?

ವಿ. ಹೇಮಂತಕುಮಾರ್

 

ಫುಟ್‌ಪಾತ್ ಮೇಲೆ ಹಕ್ಕು

ಉಪಮೇಯರ್ ದಯಾನಂದ ಅವರು ಪ್ರತಿನಿಧಿಸುವ 50ನೇ ವಾರ್ಡ್‌ನಲ್ಲಿರುವ ಸದಾನಂದ ನಗರದಲ್ಲಿ ರೈಲು ಹಳಿಯ ಪಕ್ಕ ಮತ್ತು ಕಸ್ತೂರಿನಗರದ ಒಂದನೇ ಮುಖ್ಯ ರಸ್ತೆಯ ಫುಟ್‌ಪಾತ್ ಗಳು ಏರಿಳಿತಗಳಿಲ್ಲದೇ ಒಂದೇ ರೀತಿಯಲ್ಲಿದ್ದು ಸುಂದರವಾಗಿ ಕಾಣುತ್ತವೆ.ಆದರೆ ಅದೇ ಕಸ್ತೂರಿನಗರದ ಎರಡನೇ ಮುಖ್ಯ ರಸ್ತೆಯಲ್ಲಿ ಫುಟ್‌ಪಾತ್‌ಗಳು ಏರುತಗ್ಗಿನಿಂದ ಕೂಡಿವೆ. ಖಾಲಿ ನಿವೇಶನಗಳ ಹತ್ತಿರ ಫುಟ್‌ಪಾತ್ ಒಂದೇ ತೆರನಾಗಿ ಕಂಡರೆ, ಮನೆಗಳು, ಅಂಗಡಿಗಳು ಇರುವಲ್ಲಿ ಚರಂಡಿಗಳು ಒತ್ತುವರಿಯಾಗಿವೆ, ಫುಟ್‌ಪಾತ್‌ಗಳು ಹೈಜಾಕ್ ಆಗಿವೆ.ಉದಾಹರಣೆಗೆ ಎರಡನೇ ಮುಖ್ಯರಸ್ತೆಯಲ್ಲಿ ಬಿ. ಚನ್ನಸಂದ್ರದ ಹತ್ತಿರದ ಅಂಗಡಿಯೊಂದರ ಜಾಹಿರಾತು ಫಲಕ ಫುಟ್‌ಪಾತ್ ಮೇಲೆಯೇ ಅಡ್ಡವಾಗಿ ನಿಂತಿದೆ.ಕೇಳುವವರೇ ಇಲ್ಲದಂತಾಗಿದೆ. ಸ್ಪೆನ್ಸರ್ ಅಂಗಡಿಯ ಮುಂದಿನ ಹೋಟೆಲ್‌ನ ಟೇಬಲ್‌ಗಳಂತೂ (ನಿಂತು ತಿಂಡಿ ತಿನ್ನಲು ಬಳಸುವ) ದಿನವೆಲ್ಲಾ ಫುಟ್‌ಪಾತ್ ಮೇಲೆಯೇ ಇರುತ್ತವೆ. ಪಕ್ಕದ ಪಾನ್ ಅಂಗಡಿ ಚರಂಡಿಯ ಮೇಲೆಯೇ ಇದೆ.ಪಕ್ಕದಲ್ಲಿ ಹೊಸದಾಗಿ ಚರಂಡಿ, ಕಾಮಗಾರಿ ನಡೆದರೂ ಅದಕ್ಕೆ ಧಕ್ಕೆಯಾಗಿಲ್ಲ. ಅಲ್ಲೇ ಅಕ್ಕಪಕ್ಕದಲ್ಲಿ ಚರಂಡಿಗಳು ಒತ್ತುವರಿಯಾಗಿವೆ. ಇದನ್ನು ಕಂಡರೂ ಸಂಬಂಧಿಸಿದ ಅಧಿಕಾರಿಗಳು ತೆರವಿಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಎಡೆಮಾಡುವಂತಿದೆ.ಹೇಗೆ ಬೇಕಾದರೂ ಕಟ್ಟಿಕೊಳ್ಳಲು ಮತ್ತು ವಿರೂಪಗೊಳಿಸಲು ಪುಟ್‌ಪಾತ್‌ಗಳು ಮತ್ತು ಚರಂಡಿಗಳು ಆಯಾ ಮನೆ, ಅಂಗಡಿಗಳವರ ಉಂಬಳಿಯೇ? ಈಗ ನಡೆದಿರುವ ಕಾಮಗಾರಿಗಳಲ್ಲಿ ಕೆಲವು ಕಡೆ ಕಲ್ಲು ಸಿಮೆಂಟ್‌ನಿಂದ ಸುಭದ್ರವಾದ ಬಾಕ್ಸ್ ಚರಂಡಿ ಕಟ್ಟಿದರೆ, ಇನ್ನೂ ಕೆಲವು ಕಡೆ  ಬಿಡಿಎ ಈ ಮೊದಲು ಚರಂಡಿಗಳ ಎಡಬಲಕ್ಕೆ ನಿಲ್ಲಿಸಿದ್ದ ಕಲ್ಲುಹಾಸಿನ ಮೇಲೆಯೇ ಚಿಕ್ಕದಾದ ಸಿಮೆಂಟ್ ಇಟ್ಟಿಗೆಗಳನ್ನು ಇರಿಸಿ ತಿಪ್ಪೆ ಸಾರಿಸಿದಂತೆ ಚರಂಡಿ ಕಟ್ಟಲಾಗುತ್ತಿದೆ.ಅಂದವಾಗಿ ಮೂಲಸೌಕರ್ಯಗಳ ಅಭಿವೃದ್ಧಿ ಕಾಣಬೇಕಿದ್ದ (ಉಪಮೇಯರ್ ಪ್ರತಿನಿಧಿಸುವ) ಈ ವಾರ್ಡು, ಉಳಿದ ವಾರ್ಡುಗಳಿಗೆ ಮಾದರಿಯಾಗುವುದರಲ್ಲಿ ಹಿಂದೆ ಬೀಳುತ್ತಿದೆ.ಕಸ್ತೂರಿನಗರ ಬಡಾವಣೆ ರೆವಿನ್ಯೂ ಬಡಾವಣೆಗಿಂತ ಕಡೆಯಾಗಿ ಅಂದಗೆಡುತ್ತಿದೆ. ಚುನಾಯಿತ ಪ್ರತಿನಿಧಿಗಳು ಮತ್ತು ಆಯುಕ್ತರು ಇತ್ತ ಗಮನಹರಿಸುವರೆ? 

ಶ್ರೀನಿವಾಸ ಜೆ.ಕೆ.ಪ್ರಯಾಣದ ಬವಣೆ

ಕೆಂಪೇಗೌಡ ಬಸ್ ನಿಲ್ದಾಣ, ಸಿಟಿ ಮಾರ್ಕೆಟ್ ಮತ್ತು ಶಿವಾಜಿನಗರಗಳಿಂದ ಎನ್‌ಜಿಇಎಫ್ ಮಾರ್ಗವಾಗಿ ರಾಮಮೂರ್ತಿ ನಗರ, ಕೆಆರ್‌ಪುರ, ಅಕ್ಷಯನಗರ, ಶಾಂತಿಕಾಲನಿ  ಮೊದಲಾದ ಕಡೆಗಳಲ್ಲಿ ಸಾಗುವ ಕೆಲವೇ ಬಸ್‌ಗಳು ಸದಾನಂದನಗರ, ಕಸ್ತೂರಿನಗರ ಬಡಾವಣೆಗಳಿಗೆ ಸಂಪರ್ಕ ಒದಗಿಸುತ್ತಿವೆ.ಆದರೆ ಅಂಥ ಕೆಲವೇ ಬಸ್‌ಗಳಲ್ಲಿನ ಕೆಲವು ಸಿಬ್ಬಂದಿಯ ಉದ್ಧಟತನದ ವರ್ತನೆ ಬಸ್ ಪ್ರಯಾಣವೇ ಬೇಡ ಎನಿಸುವಂತಿದೆ.

 

ಈಚೆಗೆ ಶಾಂತಿಕಾಲನಿಯ 315 ಪಿ  (ಕೆ ಎ 01 ಎಫ್ ಎ 969) ಬಸ್ಸಿನಲ್ಲಿ ಪ್ರಯಾಣಿಸುವಾಗ ಸಿಬ್ಬಂದಿಯ ಉದ್ಧಟತನದ ನಡವಳಿಕೆ ಮೇರೆ ಮೀರಿದಂತಿತ್ತು.ಶನಿವಾರ ಮಧ್ಯಾಹ್ನ ಲೈಫ್ ಸ್ಟೈಲ್ (ಸೆಕ್ರೆಡ್ ಹಾರ್ಟ್ ಚರ್ಚ) ಸ್ಟಾಪ್‌ನಲ್ಲಿ ಬಸ್ ನಿಲ್ಲಿಸದ ಸಿಬ್ಬಂದಿ, ಟ್ರಾಫಿಕ್ ಸಿಗ್ನಲ್ ಬಿದ್ದಾಗ ಬಸ್ಸಿಂದ ಇಳಿಯಿರಿ ಎಂದು ಪ್ರಯಾಣಿಕರಿಗೆ ಜೋರು ಮಾಡುತ್ತಿದ್ದರು.~ಹಿಂದೆ ಬರುವ ವಾಹನ ಡಿಕ್ಕಿ ಹೊಡೆದರೆ~ ಎಂಬ  ಆತಂಕದ ಉದ್ಗಾರಪ್ರಯಾಣಿಕರದ್ದಾದರೆ, ಡ್ರೈವರ್ ಮತ್ತು ಕಂಡಕ್ಟರ್ `ಸಾಯಿರಿ ನಾವೇನು ಮಾಡುವುದು~ ಎಂದು ಕೆಳಗಿಳಿಯಲು ಅವಸರಿಸುತ್ತಾ ದಬಾಯಿಸುತ್ತಿದ್ದರು.ಹಲಸೂರಿನ ಆದರ್ಶ ನಿಲುಗಡೆಯಲ್ಲಿ ಸಾಮಾನ್ಯವಾಗಿ ಬಸ್ಸುಗಳು ಸ್ವಲ್ಪ ಸಮಯ ಕೂಡ ನಿಲ್ಲದೇ ದಾರಿ ಸಿಕ್ಕತ್ತ ಮುಂದೆ ಹೋಗುತ್ತವೆ. ಹೀಗಾಗಿ ಮಹಿಳೆಯರು ಮತ್ತು ಮಕ್ಕಳು ಅಲ್ಲಿ ಬಸ್ ಹತ್ತುವುದೇ ದುಸ್ತರವಾಗಿದೆ.ನಿಗದಿತ ನಿಲುಗಡೆಯಲ್ಲಿ ನಿಲ್ಲಿಸದಿರುವುದರಿಂದ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಬಸ್ ಇಳಿಯಬೇಕು ಮತ್ತು ಹತ್ತಬೇಕು. ಈ ರೀತಿಯ ಉದ್ಧಟತನದ ವರ್ತನೆಯ ಬಸ್ ಸಿಬ್ಬಂದಿಗಳಿಂದ  ಅಬ್ಬರದ `ಬಸ್ ದಿನ~ದ ಆಚರಣೆಗೆ ಯಾವುದೇ ಅರ್ಥ ಬರುವುದಿಲ್ಲ.ಸಂಬಂಧಪಟ್ಟವರು ಬಸ್ ಸಿಬ್ಬಂದಿಗೆ ಸೌಜನ್ಯದ ನಡವಳಿಕೆ ಹೇಳಿಕೊಟ್ಟರೆ ಪ್ರಯಾಣಿಕರು ನೆಮ್ಮದಿಯಿಂದ ಪ್ರಯಾಣಿಸಲು ಅನುಕೂಲವಾದೀತು.ಅವಿನಾಶ ಎಸ್,ರಮೇಶ್ ಕೆ, ಮತ್ತು ಇತರರು

ಹರಿಗಾಲುವೆಗೆ ಜೀವ

ಕಳೆದ ಮಂಗಳವಾರ ಮೆಟ್ರೊ ಕುಂದುಕೊರತೆ ವಿಭಾಗದಲ್ಲಿ `ಮುಚ್ಚಿದ ಹಿರಿಗಾಲುವೆ, ಒತ್ತುವರಿಯಾದ ಚರಂಡಿ~ ತಲೆಬರಹದಲ್ಲಿ ಪ್ರಕಟವಾದ ದೂರಿಗೆ ಸಂಬಂಧಪಟ್ಟವರು ತಕ್ಷಣ ಸ್ಪಂದಿಸಿದ್ದನ್ನು ಕಂಡ ಕಸ್ತೂರಿ ನಗರದ ನಾಗರಿಕರಲ್ಲಿ ಪ್ರಜಾವಾಣಿಯ ಬಗ್ಗೆ ಮತ್ತಷ್ಟು ಹೆಮ್ಮೆ ಮೂಡಿದೆ.ಟಿ ಚಿದಾನಂದ ಮತ್ತಿತರರು ಬಡಾವಣೆಯಲ್ಲಿ ಈ ಮೊದಲು ರಸ್ತೆಯ ನೀರು ಪಕ್ಕದ ಚರಂಡಿಗೆ ಹರಿದುಹೋಗಲು 20 ಅಡಿಗೊಂದರಂತೆ ಮಾಡಿದ್ದ ಹರಿಗಾಲುವೆ ಮುಚ್ಚಲಾಗಿದೆ ಎಂದು ದೂರಿದ್ದರು. ಉದಾಹರಣೆಗೆ ಎಂಬಂತೆ ಎರಡನೇ ಮುಖ್ಯ ರಸ್ತೆಯ ಮಧ್ಯದ ಭಾಗದಲ್ಲಿ ಒಂದೆ ಒಂದು ಹರಿಗಾಲುವೆ ಇ್ದ್ದದ ಚಿತ್ರ ದೂರಿನೊಂದಿಗೆ ಪ್ರಕಟಗೊಂಡಿತ್ತು.ಈ ದೂರಿಗೆ ಸ್ಪಂದಿಸಿ ಒಟ್ಟು ಎಂಟು ಮನೆಗಳಿರುವ ರಸ್ತೆಯಲ್ಲಿ ಮುಂದೆ ಆರು ಮನೆಗಳ ನಂತರ ಇನ್ನೊಂದು ಹರಿಗಾಲುವೆಗಾಗಿ ಮಣ್ಣು ತೋಡಲಾಗಿದೆ.ಈ ಮೊದಲು ಹರಿಗಾಲುವೆಯು, ಮಳೆನೀರು ಹರಿಯುವ ಇಳಿಜಾರಿನತ್ತ ಮುಖಮಾಡಿದ್ದರೆ, ಈಗ ಹರಿಗಾಲುವೆ ಕಟ್ಟಲು ತೋಡಿದ ಕಾಲುವೆ ನೀರು ಹರಿಯುವ ಇಳಿಜಾರಿಗೆ ವಿರುದ್ಧ ದಿಕ್ಕು ದಕ್ಷಿಣ ದಿಕ್ಕಿಗೆ ಮುಖಮಾಡಿದೆ.ಹೀಗಾದರೆ ಮಳೆ ನೀರು ಹರಿಯುವುದೆಂತು? ಹಿಂದಿನ ಮನೆಗಳ ಮುಂದೆಯೂ ನೀರು ಹರಿಯಲು ಇಂಥ ಇನ್ನೊಂದೆರಡು ಇಳಿಜಾರಿನತ್ತ ಅಂದರೆ ಉತ್ತರ ದಿಕ್ಕಿಗೆ ಮುಖ ಮಾಡಿದ ಹರಿಗಾಲುವೆಗಳನ್ನು ನಿರ್ಮಿಸಲು ಅಧಿಕಾರಿಗಳು ಕ್ರಮ ಜರುಗಿಸುವರೆ? 

ಅವಿನಾಶ್. ಎನ್ಹೀಗಿದೆ ಬ್ಯಾಂಕ್

ಕೊಳೆತು ನಾರುತ್ತಿರುವ ಅನ್ನ ಸಾಂಬಾರ್‌ನ ಪ್ಲಾಸ್ಟಿಕ್ ಚೀಲಗಳು, ಮಧ್ಯೆ ಬಾಟಲಿಗಳು, ಅಸಹ್ಯ ಉಂಟುಮಾಡುವ ಮುಖ್ಯದ್ವಾರ. ಪಡಸಾಲೆಯ ಎಡಭಾಗದಲ್ಲಿ ಎಟಿಎಂ, ಬಲಭಾಗದ ಕೋಣೆಯಂತಿರುವ ಹಜಾರದಲ್ಲಿ ವಯಸ್ಸಾದ ಅನಾಥ ಹೆಂಗಸು ಮಲಗಿದ ಜಾಗದಲ್ಲೇ ಮಲಮೂತ್ರ ಮಾಡುತ್ತಾರೆ. ಆಕೆ ಸುತ್ತ ನೊಣ, ಸೊಳ್ಳೆಗಳು ಹಾರಾಡುತ್ತವೆ. ಅಲ್ಲಿ ಸಿಕ್ಕಾಪಟ್ಟೆ ಗಬ್ಬುನಾತ.ಮೆಟ್ಟಲುಗಳ ಮೇಲೆ ಎಲ್ಲಾ ತೆರನಾದ ಕಸಕಡ್ಡಿ ಮಣ್ಣು ಬಿದ್ದಿದ್ದು ಜನ ಮೂಗು ಮುಚ್ಚಿಕೊಂಡೇ ಪ್ರವೇಶಿಸಬೇಕು. ಇಷ್ಟಾದರೂ ಸಿಬ್ಬಂದಿವರ್ಗ ಹಾಗೂ ಮೇಲಧಿಕಾರಿಗಳು ಕಂಡೂಕಾಣದಂತೆ ಸುಮ್ಮನಿದ್ದಾರೆ. ಇದು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೆಂಗೇರಿ ಉಪನಗರ ಮುಖ್ಯ ರಸ್ತೆಯಲ್ಲಿನ ರಾಷ್ಟ್ರೀಕೃತ ಬ್ಯಾಂಕೊಂದರ ಶಾಖೆಯ ದುಸ್ಥಿತಿ.

 ನೊಂದ ಗ್ರಾಹಕರುದರದಲ್ಲಿ ತಾರತಮ್ಯ

ನಗರ ಸಾರಿಗೆ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ ನೀಡಿರುವ ಶೇ 25 ರಿಯಾಯ್ತಿಯನ್ನು ಮೊದಲನೆ ಹಂತ ಪ್ರಯಾಣಕ್ಕೂ ಕೊಡಬೇಕಾಗಿ ಕೋರುತ್ತೇನೆ.ಮೊದಲನೇ ಹಂತಕ್ಕೆ ಈಗ 4 ರೂಪಾಯಿ ದರ ಇದ್ದು, ರಿಯಾಯ್ತಿ ನೀಡಿದರೆ ಬಹಳಷ್ಟು ವೃದ್ಧರಿಗೆ ಅನುಕೂಲ ಆಗುತ್ತದೆ.ಎರಡನೆಯ ವಿಷಯ, ದಿನದ ಪಾಸುಗಳ ಗುರುತಿನ ಚೀಟಿಯಲ್ಲಿ ತಾರತಮ್ಯ. ಬಿಎಂಟಿಸಿ ಕೊಟ್ಟ ಚೀಟಿ ಇಲ್ಲದೆ ಇದ್ದರೆ ರೂ. 45, ಇದ್ದರೆ ರೂ. 40. ಚೀಟಿ ಪಡೆಯಲು 25 ರೂ ಬೇರೆ ಕೊಡಬೇಕು. ಹೀಗೆ ಸಾರ್ವಜನಿಕರಿಂದ ವಸೂಲಿ ಮಾಡಿ ಲಾಭ ಗಳಿಸುವುದು ಸರ್ಕಾರದ ಉದ್ದೇಶವೇ?ಸಾಮಾನ್ಯ ಪ್ರಜೆಯ ಸೌಕರ್ಯಕ್ಕಾಗಿ ಇರುವ ಬಿಎಂಟಿಸಿ ಹೀಗೆ ಹಣ ಬಾಚಲು ನಿಂತರೆ ಖಾಸಗಿಯವರಿಗೂ ಇವರಿಗೂ ಏನು ವ್ಯತ್ಯಾಸ? ಆದ್ದರಿಂದ ಗುರುತಿನ ಚೀಟಿ ಕಡ್ಡಾಯ ಎಂಬ ನಿಯಮ ಕೈಬಿಡಬೇಕು.ಅಲ್ಲದೆ ಮಾಸಿಕ ಪಾಸುದಾರರಿಗೆ ಕಪ್ಪು ಹಲಗೆ ಮತ್ತು ಕೆಂಪು ಹಲಗೆ ಬಸ್‌ಗಳಲ್ಲಿ ಭಿನ್ನ ದರ ಯಾಕೆ? ದಿನದ ಪಾಸ್‌ಗೆ ಒಂದೇ ದರ ಇರುವಾಗ ಮಾಸಿಕ ಪಾಸ್‌ನಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. 

 ಶ್ರಿನಿವಾಸಯ್ಯ

ಬೀದಿ ಕಾಮಣ್ಣರ ಕಾಟ ತಪ್ಪಿಸಿ

ಜೆಪಿ ನಗರ 4ನೇ ಹಂತ 16ನೇ ಅಡ್ಡರಸ್ತೆ ಮೆಡಿಕಲ್ ಸ್ಟೋರ್ ಹತ್ತಿರ ಬೇಕರಿ ಸರ್ಕಲ್‌ನಲ್ಲಿ ಬೆಳಿಗ್ಗೆ 7 ರಿಂದ ರಾತ್ರಿ 10 ಗಂಟೆಯ ವರೆಗೂ ಬೀದಿ ಕಾಮಣ್ಣರ ಕಾಟ ಹೆಚ್ಚಿದೆ.ಪಕ್ಕದಲ್ಲಿ ತರಕಾರಿ, ಹಣ್ಣಿನ ಅಂಗಡಿ ಮತ್ತು ರೇಷನ್ ಅಂಗಡಿ ಇದೆ. ಹೀಗಾಗಿ ಇಲ್ಲಿಗೆ ಮಹಿಳೆಯರು ಬರಲೇಬೇಕು.ಆದರೆ ಇಂಥ ಸ್ಥಳದಲ್ಲಿ ಕೆಲವು ಪುಂಡ ಹುಡುಗರು ಟೀ ಕಾಫಿ ಕುಡಿಯುತ್ತ ಸಿಗರೇಟ್ ಸೇದುತ್ತ ಮಹಿಳೆಯರಿಗೆ ಕಿರುಕುಳ ಕೊಡುತ್ತಾರೆ. ಕೇಳಲು ಹೋದರೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ.ಈ ಹಿಂದೆ ಅಕ್ಕ ಪಕ್ಕದ ಮನೆಯವರು ಹಾಗೂ ಹಿರಿಯ ನಾಗರಿಕರು ಬಿಬಿಎಂಪಿ ಆರೋಗ್ಯಾಧಿಕಾರಿಗಳಿಗೆ ದೂರನ್ನು ನೀಡಿದಾಗ ಕೆಲ ದಿನ ಈ ಬೇಕರಿಯಲ್ಲಿ ಕಾಫಿ, ಟೀ ಸರಬರಾಜು ನಿಂತಿತ್ತು.ಹೀಗಾಗಿ ಬೀದಿ ಕಾಮಣ್ಣರ ಕಾಟಕ್ಕೂ ಬ್ರೇಕ್ ಬಿದ್ದಿತ್ತು. ಈಗ 15 ದಿನಗಳಿಂದ ಕಾಫಿ, ಟೀಯನ್ನು ಮಾರಾಟ ಮತ್ತೆ ಶುರುವಾಗಿದೆ. ಬೀದಿ ಕಾಮಣ್ಣರ ಚೇಷ್ಟೆಗಳು ಹೆಚ್ಚಿವೆ.

ಇವರೆಲ್ಲ ರಸ್ತೆಗೆ ಅಡ್ಡಲಾಗಿ ಬೈಕ್‌ಗಳನ್ನು ನಿಲ್ಲಿಸುತ್ತಾರೆ. ಇದರಿಂದ ಅಕ್ಕ ಪಕ್ಕದವರು ರಸ್ತೆಯಲ್ಲಿ ಓಡಾಡಲು ಮತ್ತು ವಾಹನ ಓಡಿಸಲು ಕಷ್ಟವಾಗುತ್ತಿದೆ.ಈ ಬಡಾವಣೆಯ ಪಕ್ಕದಲ್ಲೇ ವಾಸವಾಗಿರುವ ಪಾಲಿಕೆ ಆಯುಕ್ತ ಸಿದ್ದಯ್ಯನವರು ಈ ಜಾಗವನ್ನು ಖುದ್ದಾಗಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸ್ ಆಯುಕ್ತರು ಕೂಡ ಕ್ರಮ ತೆಗೆದುಕೊಂಡು ಮಹಿಳೆಯರಿಗೆ ಸುರಕ್ಷತೆ ಒದಗಿಸಬೇಕು. 

 ವಿನುತಾ ಪ್ರಕಾಶ್ಪಾರ್ಕ್ ತುಂಬ ಸಮಸ್ಯೆಕುಮಾರಸ್ವಾಮಿ ಬಡಾವಣೆ ಪೊಲೀಸ್ ಸ್ಟೇಷನ್ ಹಿಂಭಾಗದ ಉದ್ಯಾನ ಹಲವಾರು ಸಮಸ್ಯೆಗಳಿಂದ ಕೂಡಿದೆ. ಉದ್ಯಾನದಲ್ಲಿ ಸಾಕಷ್ಟು ವಿದ್ಯುತ್ ಕಂಬಗಳಿವೆ. ಆದರೆ ಯಾವುದರಲ್ಲೂ ಬಲ್ಬ್‌ಗಳಿಲ್ಲ!ಉದ್ಯಾನದಲ್ಲಿ ಸಂಜೆ ಹೊತ್ತಿನಲ್ಲಿ ಬೆಳಕಿಲ್ಲದ ಕಾರಣ ಯಾರೂ ವಾಕ್ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿರಿಯ ನಾಗರಿಕರಿಗೆ ವಿರಮಿಸಲು ಕಷ್ಟವಾಗಿದೆ. ಕೆಲವರು ಇದನ್ನೇ `ಸದುಪಯೋಗ~ ಮಾಡಿಕೊಂಡು ಉದ್ಯಾನವನ್ನು ಕುಡಿವ ತಾಣ ಮಾಡಿಕೊಂಡಿದ್ದಾರೆ.ಸಮೀಪದಲ್ಲೇ ಪೊಲೀಸ್ ಠಾಣೆಯಿದ್ದರೂ ಸಹ ಇದ್ಯಾವುದನ್ನು ಪೊಲೀಸ್ ಸಿಬ್ಬಂದಿ ಗಮನಿಸದಿರುವುದು ಅತ್ಯಂತ ಸೋಜಿಗದ ಸಂಗತಿ.ಉದ್ಯಾನ ನೋಡಲು ಅಷ್ಟು ಅಂದವಾಗಿಲ್ಲ. ಅದರ ಉಸ್ತುವಾರಿಗೆ ಬಿಬಿಎಂಪಿ ಯಾರನ್ನೂ ನೇಮಿಸಿಲ್ಲ. ಹೀಗಾಗಿ ಎಲ್ಲಿ ನೋಡಿದರೂ ಕುಡಿದು ಬಿಸಾಡಿದ ಗಾಜಿನ ಹಾಗೂ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಲೋಟಗಳು, ಪೇಪರ್, ಕಸ, ನಾಯಿಗಳ ಒಣಗಿದ ಮಲ, ಉದುರಿದ ತರಗೆಲೆಗಳು ಹಾಗೂ ಕೊಂಬೆಗಳು ಬಿದ್ದು ಗಲೀಜು ರಾಚುತ್ತದೆ.ಉದ್ಯಾನವನ್ನು ಸ್ವಚ್ಛಗೊಳಿಸಿ ಸಾಕಷ್ಟು ದಿನಗಳಾಗಿವೆ. ಮಕ್ಕಳಿಗಾಗಿ ಆಡಲು ಯಾವುದೇ ಉಯ್ಯಾಲೆ, ಜಾರು ಬಂಡಿ ಹಾಗೂ ಇತರೇ ಯಾವುದೇ ಆಟೋಪಕರಣಗಳನ್ನು ಸಂಬಂಧಪಟ್ಟವರು ನಿರ್ಮಿಸಿಲ್ಲ. ಕಡೇ ಪಕ್ಷ ಒಂದು ನೀರಿನ ಕಾರಂಜಿಯೂ ಇಲ್ಲ.ಉದ್ಯಾನದ ಹುಲ್ಲು ಹಾಸಿನ ಕೆಲ ಭಾಗಗಳಲ್ಲಿ ಹುಲ್ಲು ಕಿತ್ತು ಹೋಗಿ ಬರಿ ಬರಡು ನೆಲ ಕಾಣುತ್ತಿದೆ.ಅಲ್ಲಿ ಬೆಳೆಸಿರುವ ಸಸ್ಯ ಹಾಗೂ ಗಿಡಗಳು ಅಷ್ಟು ಆಕರ್ಷಣೀಯವಾಗಿಲ್ಲ.ಆದ್ದರಿಂದ ಕೆಲ ಸಸ್ಯ ಗಿಡಗಳಾದ ಲಾಂಟನಾ, ಸಣ್ಣ ಸೇನಪಿ, ಕೇಪಳ, ಡೈಸಿ, ಹಮೋಲಿಯಾ, ಪೆಂಟಾಸ್, ತೇರು ಹೂ, ದಾಸವಾಳ ಹಾಗೂ ಗಿರಿಗಟ್ಲೆಗಳನ್ನು ಬೆಳೆಸಿದರೆ ಹಲವು ಚಿಟ್ಟೆಗಳು, ಪಕ್ಷಿಗಳು, ಜೇಡಗಳು ಹಾಗೂ ಇತರೆ ಸಣ್ಣಪುಟ್ಟ ಪ್ರಾಣಿಗಳು ಆಕರ್ಷಿತವಾಗಿ ಉದ್ಯಾನಕ್ಕೆ ಸೌಂದಯಧ ಬರುತ್ತದೆ.ಸ್ಥಳೀಯ ಜೀವವೈವಿಧ್ಯತೆಯನ್ನು ಹೆಚ್ಚು ಮಾಡುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದರೆ ವಾಕ್ ಮಾಡುವವರಿಗೆ ಹಾಗೂ ಸ್ಥಳೀಯರಿಗೆ ಭಾರಿ ಅನುಕೂಲವಾಗುತ್ತದೆ.

 

ಡಾ. ಎಲ್. ಶಶಿಕುಮಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.