ಪಾರ್ವತಿ ಸ್ವರೂಪಿಜಡೆ ಗಣಪತಿ

7

ಪಾರ್ವತಿ ಸ್ವರೂಪಿಜಡೆ ಗಣಪತಿ

Published:
Updated:

ಇಲ್ಲಿಯ ವಿನಾಯಕ ಎಲ್ಲರಂಥಲ್ಲ. ಜಡೆಯೇ ಇವನ ವಿಶೇಷ. ಅದಕ್ಕಾಗಿಯೇ ಈತ `ಜಡೆ ಗಣಪ'. ಗಣಪತಿ ಮೂರ್ತಿ ಹಿಂದೆ ಜಡೆ ಇದ್ದು, ಇದು ಪಾರ್ವತಿಯ ಸಾಕ್ಷಾತ್ ಸ್ವರೂಪವಾಗಿದೆ. ಉಗ್ರ ನರಸಿಂಹ ಸ್ವಾಮಿಯು ಗಣಪತಿಯ ಕೈಯಲ್ಲೇ ಆಸೀನನಾಗಿದ್ದಾನೆ. ಭಕ್ತರಿಗೆ ಅಭಯ ನೀಡುತ್ತಿರುವ ಅಪೂರ್ವ ಗಣೇಶ ಕೂಡ ಈತ.ಕುಜ ದೋಷ ಮತ್ತು ಕೇತು ದೋಷ ಪರಿಹಾರಕ್ಕೆ ಪ್ರಸಿದ್ಧಿ ಹೊಂದಿರುವ ಈ ಗಣಪತಿ ದೇವಳ ಇರುವುದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ. ಶ್ರೀ ಪ್ರಸನ್ನ ಗಣಪತಿ ದೇವಾಲಯ ಎಂದೇ ಪರಿಚಿತವಾಗಿರುವ ಈ ದೇವಾಲಯದಲ್ಲಿ ಏಕಶಿಲಾಮೂರ್ತಿ `ಜಡೆ ಗಣಪ' ಬಲು ಆಕರ್ಷಣೀಯ. ಸುಂದರ ರಾಜಗೋಪುರದ ನಡುವೆ ಕಂಗೊಳಿಸುವ ಈ ದೇವಾಲಯವನ್ನು ಪ್ರತಿಷ್ಠಾಪಿಸಿರುವ ಕೀರ್ತಿ ಒಂದನೇ ಮದಕರಿನಾಯಕರ ಮೈದುನನಾದ ಗುಲ್ಯಾಪ್ಪನಾಯಕನಿಗೆ ಸಲ್ಲುತ್ತದೆ. ಕ್ರಿ. ಶ.1475ರಲ್ಲಿ ಪ್ರಸನ್ನ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೊಂಡಿತು. ಸಂಕಷ್ಟಹರ ಬಯಲು ಗಣಪ, ಜಡೆ ಗಣಪತಿ ಎಂದೂ ಇದಕ್ಕಿದೆ ಖ್ಯಾತಿ.ಮೋದಕಹಸ್ತ, ಏಕದಂತ ಎಂದೆಲ್ಲಾ ಕರೆಸಿಕೊಳ್ಳುವ ಸಂಕಷ್ಟ ನಿವಾರಕ ಗಣಪನ ವಿಗ್ರಹ ಮೊದಲು ಬಯಲು ಪ್ರದೇಶದಲ್ಲಿ ಇತ್ತು. 1985ರಲ್ಲಿ ದೇವಾಲಯ ನಿರ್ಮಿಸಲಾಗಿದೆ.ಶಿಲ್ಪ ಆಗಮ ಶಾಸ್ತ್ರದ ಪ್ರಕಾರ 21 ಗಣಪತಿ ಪ್ರಭೇದಗಳಿವೆ. ಅವುಗಳಲ್ಲಿ ಒಂದಾದ ಪ್ರಸನ್ನ ಗಣಪತಿಗೆ ನಾಲ್ಕು ಕೈಗಳು. ಮೇಲಿನೆರಡರಲ್ಲಿ ಪಾಶ, ಅಂಕುಶಗಳು ಇದ್ದರೆ, ಕೆಳಗಿನ ಕೈಗಳು ಅಭಯ, ವರದ ಮುದ್ರೆಗಳನ್ನು ಪ್ರದರ್ಶಿಸುತ್ತವೆ. ಪ್ರಸನ್ನ ಮುಖಮುದ್ರೆ ಇರುವುದರಿಂದ ಶ್ರಿ ಪ್ರಸನ್ನ ಗಣಪತಿ ಎಂಬ ಹೆಸರು. ಈ ಗಣಪತಿ ಸರ್ವಾಭರಣ ಪ್ರಿಯ. ನರಸಿಂಹ ಸ್ವಾಮಿ ಸುಬ್ರಹ್ಮಣ್ಯನ ಅಂಶವುಳ್ಳ ದೇವತೆ. ಗಣಪತಿ ಮೂಲಾಧಾರ ಕ್ಷೇತ್ರಸ್ಥಿತನಾಗಿ ಕುಂಡಲಿನೀ ಶಕ್ತಿ ಪ್ರಚೋದಕರಾಗಿ ಉಗ್ರಸ್ವಾಮಿಯೊಂದಿಗೆ ನೆಲೆಸಿದ್ದಾನೆ. ಇಷ್ಟಾರ್ಥ ಸಿದ್ಧಿಗಾಗಿ ಬರುವ ಭಕ್ತ ಸಮೂಹ ಇಲ್ಲಿಗೆ ಬಂದು ಯಾವುದೇ ಬೇಡಿಕೆಯನ್ನಿಟ್ಟರೂ ನೆರವೇರುತ್ತದೆ ಎನ್ನುವ ಅಪಾರ ನಂಬಿಕೆ ಭಕ್ತರಲ್ಲಿದೆ.ಪೂಜಾ ವಿಶೇಷ

16.5 ಅಡಿ ಎತ್ತರ ಮತ್ತು 12.5 ಅಡಿ ಅಗಲವಿರುವ ಗಣಪತಿಗೆ ಬೆಣ್ಣೆ ಪೂಜೆಗೆ 85 ಕೆ.ಜಿ. ಬೆಣ್ಣೆ ಬೇಕಾಗುತ್ತದೆ. ಕಡುಬಿನ ಹಾರ, ಕುಂಕುಮ ಪೂಜೆ, ಅಭಿಷೇಕ. ಕ್ಷೀರಾಭಿಷೇಕ, ರುದ್ರಾಭಿಷೇಕ, ತೈಲಾಭಿಷೇಕ, ಹೂವಿನ ಪೂಜೆ, ಜನ್ಮ ದಿನಾಚರಣೆ ಶಾಂತಿ, ವಿವಾಹ ಸಮಾರಂಭಗಳು ನಡೆಯುತ್ತವೆ. ಗಣೇಶ ಚತುರ್ಥಿಯಂದು ದೇವರಿಗೆ ಬೆಳಿಗ್ಗೆ 5.30ರಿಂದಲೇ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಪೂಜೆ ಹಾಗೂ ಪ್ರಭಾವಳಿ ಅಲಂಕಾರ ಮಾಡಲಾಗುತ್ತದೆ. ಬೆಳಿಗ್ಗೆ 6.30ರಿಂದ ರಾತ್ರಿ 9.30ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ಹೊಳಲ್ಕೆರೆಯು ಶಿವಮೊಗ್ಗದಿಂದ 80 ಕಿ.ಮೀ, ಚಿತ್ರದುರ್ಗದಿಂದ 60ಕಿ.ಮೀ, ದಾವಣಗೆರೆಯಿಂದ 60 ಕಿ.ಮೀ ದೂರದಲ್ಲಿದೆ. ಮಾಹಿತಿಗೆ: 99867 22167.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry