ಸೋಮವಾರ, ಮೇ 16, 2022
24 °C

ಪಾರ್ಶ್ವವಾಯುವಿನಿಂದ ಪಾರಾಗಿ

ಡಾ.ಕೆ.ಎಸ್. ಪವಿತ್ರ Updated:

ಅಕ್ಷರ ಗಾತ್ರ : | |

ಅಕ್ಟೋಬರ್ 29ರ ದಿನವನ್ನು ಪ್ರತಿ ವರ್ಷ ಜಾಗತಿಕ ಪಾರ್ಶ್ವವಾಯು ಸಂಸ್ಥೆಯಿಂದ `ವಿಶ್ವ ಪಾರ್ಶ್ವವಾಯು ದಿನ~ವಾಗಿ ಆಚರಿಸಲಾಗುತ್ತದೆ.  ಪ್ರತಿ 6 ಸೆಕೆಂಡುಗಳಿಗೊಮ್ಮೆ ಲಿಂಗ - ವಯಸ್ಸಿನ ಭೇದವಿಲ್ಲದೆ ಜಗತ್ತಿನ ಯಾವುದಾದರೂ ಸ್ಥಳದಲ್ಲಿ ಯಾರಾದರೊಬ್ಬರು ಪಾರ್ಶ್ವವಾಯುವಿನಿಂದ ಅಂದರೆ ಲಕ್ವ ಹೊಡೆಯುವಿಕೆಯಿಂದ ಮರಣ ಹೊಂದುತ್ತಾರೆ.ಇದು ಕೇವಲ ಅಂಕಿ-ಅಂಶ ಎನ್ನುವುದಕ್ಕಿಂತ ಅಂಕಿ-ಅಂಶಗಳ ಹಿಂದಿನ ನೋವು, ಅಂಗವೈಕಲ್ಯತೆ, ರೋಗಿಯ ತಂದೆ/ತಾಯಿ/ಮಕ್ಕಳು/ಅಕ್ಕ-ತಂಗಿ-ಅಣ್ಣ ತಮ್ಮ ..... ಈ ಎಲ್ಲರ ಮೇಲೆ ಬೀಳುವ ಭಾವನಾತ್ಮಕ - ದೈಹಿಕ - ಆರ್ಥಿಕ ಸಂಕಷ್ಟಗಳು ಈ ಎಲ್ಲವನ್ನೂ ಗಮನಕ್ಕೆ ತರುತ್ತವೆ. ಹಾಗಾಗಿಯೇ ``ಆರರಲ್ಲಿ ಒಂದು, ಒಬ್ಬರು ನಾವ್ಯಾರೂ ಆಗಬಹುದು, ನಿಜಸ್ಥಿತಿ ಅರಿತು ತತ್‌ಕ್ಷಣ ಕಾರ್ಯೋನ್ಮುಖರಾಗಿ~~ (One in six, do not take chances, it could be you, learn the facts, act now) ಎಂಬ ಧ್ಯೇಯ ಈ ಬಾರಿಯದು.ಈ  ಆರರಲ್ಲಿ ಒಂದು ಕೇವಲ ಸಾವಿನ ಅಂಕಿ ಅಂಶವಷ್ಟೇ ಅಲ್ಲ.  ಜೊತೆಗೇ ಈ ಸಾವು-ನೋವನ್ನು ತಡೆಗಟ್ಟಲು ನಮ್ಮ ಮುಂದಿರುವ ಆರು ಸುಲಭ ಸವಾಲುಗಳನ್ನು ಒಳಗೊಂಡಿದೆ.* ವೈಯಕ್ತಿಕವಾಗಿ ಪಾರ್ಶ್ವವಾಯುವನ್ನು ತಂದೊಡ್ಡಬಲ್ಲ ರಕ್ತದೊತ್ತಡ, ಮಧುಮೇಹ, ರಕ್ತದಲ್ಲಿ ಹೆಚ್ಚಿನ ಕೊಲೆಸ್ಟರಾಲ್ ಮಟ್ಟ ಇವನ್ನು ತಡೆಗಟ್ಟುವುದು* ದೈಹಿಕ ವ್ಯಾಯಾಮ, ಚಟುವಟಿಕೆ* ಸರಿಯಾದ ಆಹಾರ ಕ್ರಮ ಮತ್ತು ಬೊಜ್ಜಿನ ನಿಯಂತ್ರಣ* ಮದ್ಯಪಾನ ಮಾಡದಿರುವುದು* ಧೂಮಪಾನ ಮಾಡದಿರುವುದು* ಪಾರ್ಶ್ವವಾಯುವಿನ ಲಕ್ಷಣಗಳನ್ನು ಗುರುತಿಸಲು ಕಲಿಯುವುದು ಮತ್ತು ತತ್‌ಕ್ಷಣ ಕಾರ್ಯೋನ್ಮುಖರಾಗುವುದುಪ್ರತಿ ವರ್ಷ 6 ಮಿಲಿಯನ್ ಜನ ಪಾರ್ಶ್ವವಾಯುವಿನಿಂದ ಮರಣ ಹೊಂದುತ್ತಾರೆ. 60ರ ಮೇಲಿನ ವ್ಯಕ್ತಿಗಳಲ್ಲಿ ಇದು ಎರಡನೇ ಅತಿ ಸಾಮಾನ್ಯ ಮರಣ ತಂದೊಡ್ಡುವ ಕಾಯಿಲೆಯಾದರೆ, 15 ರಿಂದ 59 ವರ್ಷ ವಯಸ್ಸಿನವರಲ್ಲಿ ಐದನೆಯ ಕಾರಣ.  ಏಡ್ಸ್, ಕ್ಷಯ ಮತ್ತು ಮಲೇರಿಯಾ ಮೂರೂ ಸೇರಿ ಎಷ್ಟು ಸಾವು-ನೋವುಗಳನ್ನು ತರಬಹುದೋ ಅದಕ್ಕಿಂತ ಹೆಚ್ಚು ಸಾವು-ನೋವನ್ನು ಪಾರ್ಶ್ವವಾಯು ತಂದೊಡ್ಡಬಹುದು.ಪಾರ್ಶ್ವವಾಯುವನ್ನು ``ಮಿದುಳು ಆಘಾತ~~ -  ಬ್ರೈನ್ ಅಟ್ಯಾಕ್  ಎಂದು ಪರಿಗಣಿಸಬಹುದು.  ಅಂದರೆ ಹೃದಯಾಘಾತದಂತೆಯೇ, ಮಿದುಳಿಗೆ ರಕ್ತ ಪರಿಚಲನೆ ಸ್ಥಗಿತವಾದಾಗ/ ಏರುಪೇರು ಉಂಟಾದಾಗ ಅದು ಪಾರ್ಶ್ವವಾಯು ತರುತ್ತದೆ.  ಮಿದುಳಿನ ಆ ಭಾಗದ ನರಕೋಶಗಳು ಆಮ್ಲಜನಕ - ಪೋಷಕಾಂಶಗಳಿಲ್ಲದೆ ಸಾಯಲಾರಂಭಿಸುತ್ತವೆ.  ಕೆಲವೊಮ್ಮೆ ರಕ್ತನಾಳದಲ್ಲಿ ಮುಚ್ಚುವಿಕೆ ಉಂಟಾದರೆ ಇನ್ನು ಕೆಲವೊಮ್ಮೆ ರಕ್ತನಾಳ ಒಡೆದು ಈ ಪಾರ್ಶ್ವವಾಯು ಉಂಟಾಗಬಹುದು.ಪಾರ್ಶ್ವವಾಯು ಉಂಟಾಗುವುದು ಮಿದುಳಿನಲ್ಲಾದರೂ, ಅದು ಇಡೀ ದೇಹವನ್ನೇ ಆಘಾತಕ್ಕೊಡ್ಡುತ್ತದೆ.  ಯೋಚನಾಶಕ್ತಿ, ಮಾತನಾಡುವಿಕೆ, ಭಾವನಾತ್ಮಕತೆ, ದೇಹದ ನಿಯಂತ್ರಣ, ಸ್ಪರ್ಶ ಈ ಎಲ್ಲವೂ ತೊಂದರೆಗೊಳಗಾಗುತ್ತವೆ.  ಪಾರ್ಶ್ವವಾಯುವನ್ನು ಗುರುತಿಸಲು ಕೆಲವು ಸಹಾಯಕ ಅಂಶಗಳು ಹೀಗಿವೆ. * ಮುಖದ ಒಂದು ಭಾಗ ಸೊಟ್ಟಗಾಗುವುದು* ಕೈಕಾಲುಗಳಲ್ಲಿ ಸ್ಪರ್ಶ - ಸಂವೇದನೆ ಇರದಿರುವುದು* ಮಾತನಾಡುವಾಗ ತೊದಲುವುದು* ನಡೆಯಲು ತೊಂದರೆ, ನಿಯಂತ್ರಣವಿರದಿರುವುದು* ದೃಷ್ಟಿಯಲ್ಲಿ ತೊಂದರೆ* ಹಠಾತ್, ಅತಿಯಾದ ತಲೆನೋವುಇವೆಲ್ಲವೂ ಕೆಲ ಕ್ಷಣಗಳ ಕಾಲದಲ್ಲಿ ನಡೆಯುವಂಥದ್ದು.  ಇವುಗಳನ್ನು ಗುರುತಿಸುವುದು ಸುಲಭವಾಗಿ ಸಾಧ್ಯ.ತತ್‌ಕ್ಷಣ ಕಾರ್ಯೋನ್ಮುಖರಾಗಿ!

ಪಾರ್ಶ್ವವಾಯುವಾದ ಕ್ಷಣ ಒಂದು ತುರ್ತು ಪರಿಸ್ಥಿತಿ.  ಪ್ರತಿ ನಿಮಿಷವೂ ಅಮೂಲ್ಯ.  ರಕ್ತ ಪರಿಚಲನೆಯ ಏರುಪೇರು ದೀರ್ಘವಾದಷ್ಟೂ, ಆಘಾತ ಹೆಚ್ಚು.  ತತ್‌ಕ್ಷಣದ ಚಿಕಿತ್ಸೆ ಜೀವವನ್ನುಳಿಸಬಲ್ಲದು, ಅವರು ಮರಳಿ ಸಹಜ ಸ್ಥಿತಿಗೆ ಬರುವಂತೆ ಮಾಡಬಲ್ಲುದು.ಪಾರ್ಶ್ವವಾಯುವಾದ ನಾಲ್ಕೂವರೆ ಗಂಟೆಗಳ ಒಳಗೆ ನರರೋಗ ತಜ್ಞರ ಬಳಿ ಧಾವಿಸಲು ಸಾಧ್ಯವಾದಲ್ಲಿ, ಅದು ರಕ್ತನಾಳ ಸ್ಥಗಿತಗೊಂಡಂಥ ಸಮಯದಲ್ಲಿr-t-PA ಎಂಬಂಥ ಔಷಧಿಯಿಂದ ಪಾರ್ಶ್ವವಾಯುವನ್ನು ಸಂಪೂರ್ಣವಾಗಿ ಗುಣಪಡಿಸಲು ಇಂದು ಸಾಧ್ಯ. 

ರಾಜ್ಯದ ಹಲವು ದೊಡ್ಡ ನಗರಗಳಲ್ಲಿ ಇಂದು ಇದರ ಲಭ್ಯತೆ ಇದೆ. ನಾಲ್ಕೂವರೆ ಗಂಟೆಗಳ ಸಮಯದ ಒಳಗೆ ಇದು ಉಪಯುಕ್ತವಾದರೂ, ಅದನ್ನು ಕೊಡಬೇಕಾದಾಗ ವೈದ್ಯರು ಮಾಡಬೇಕಾದ ವಿವಿಧ ಪರೀಕ್ಷೆಗಳು, ಸ್ಕ್ಯಾನ್‌ಗಳನ್ನು ಗಮನದಲ್ಲಿಟ್ಟುಕೊಂಡರೆ ಲಕ್ಷಣಗಳು ಕಾಣಿಸಿಕೊಂಡ ಒಂದು ಗಂಟೆಯ ಒಳಗೇ ರೋಗಿಯನ್ನು ನರರೋಗತಜ್ಞರ ಬಳಿಗೆ ಕರೆದೊಯ್ಯಬೇಕು. ಚಿಕಿತ್ಸೆ ದುಬಾರಿಯಾದರೂ ಪಾರ್ಶ್ವವಾಯು ತರಬಹುದಾದ ಸಾವು-ನೋವು, ದೀರ್ಘಕಾಲಿಕ ಆರೈಕೆಯ ಹೊರೆ, ಮತ್ತೆ ಮತ್ತೆ ಪಾರ್ಶ್ವವಾಯು ಉಂಟಾಗಬಹುದಾದ ಸಾಧ್ಯತೆಗಳನ್ನು ನೋಡಿದರೆ ಈ ಚಿಕಿತ್ಸೆ ಉಪಯುಕ್ತ ಮತ್ತು ಆರ್ಥಿಕವಾಗಿಯೂ ಹೊರೆಯೇನಲ್ಲ.ಆದರೂ ಯಾವುದೇ ರೋಗದಂತೆ ಪಾರ್ಶ್ವವಾಯುವಿಗೂ ಚಿಕಿತ್ಸೆಗಿಂತ ತಡೆಗಟ್ಟುವಿಕೆ ಹೆಚ್ಚು ಸೂಕ್ತ.  ಆದ್ದರಿಂದ* ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ* ಮಧುಮೇಹದಿಂದ ದೂರವಿರಿ, ನಿಯಂತ್ರಣದಲ್ಲಿಟ್ಟುಕೊಳ್ಳಿ* ಹಿತ-ಮಿತ ಆಹಾರ ಕ್ರಮ ನಿಮ್ಮದಾಗಲಿ * ಮದ್ಯಪಾನ - ಧೂಮಪಾನ ಸರ್ವಥಾ ಸಲ್ಲದು.* ಪ್ರತಿದಿನ 2-3 ಕಿ.ಮೀ. ನಡಿಗೆ / ಯಾವುದೇ ರೀತಿಯ ಸರಿಯಾದ ದೈಹಿಕ ವ್ಯಾಯಾಮ ತಪ್ಪಿಸಬೇಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.