ಪಾರ್ಶ್ವವಾಯು ಗುಣವಾಗುವ ಕಾಯಿಲೆ

7

ಪಾರ್ಶ್ವವಾಯು ಗುಣವಾಗುವ ಕಾಯಿಲೆ

Published:
Updated:

ಶಿವಮೊಗ್ಗ: ಪಾರ್ಶ್ವವಾಯು ಸಮಸ್ಯೆ ಇತರೆ ರೋಗಗಳಂತೆ ಗುಣಪಡಿಸಬಹುದಾದ ಹಾಗೂ ತಡೆಗಟ್ಟಬಹುದಾದ ರೋಗ ಎಂದು ಮಂಗಳೂರು ಎ.ಜೆ. ಆಸ್ಪತ್ರೆ ನರರೋಗ ತಜ್ಞ ಡಾ.ರಾಜೇಶ್ ಶೆಟ್ಟಿ ಹೇಳಿದರು.ನಗರದ ಐಎಂಎ ಸಭಾಂಗಣದಲ್ಲಿ ಭಾನುವಾರ ಸಹ್ಯಾದ್ರಿ ನರ, ಮನೋರೋಗ ತಜ್ಞರ ಸಂಘ ಹಮ್ಮಿಕೊಂಡಿದ್ದ  `ವಿಶ್ವ ಪಾರ್ಶ್ವವಾಯು ದಿನಾಚರಣೆ~ ಕಾರ್ಯಕ್ರಮದಲ್ಲಿ `ಪಾರ್ಶ್ವವಾಯು-ಚಿಕಿತ್ಸೆ, ನಿವಾರಣೆ~ ವಿಷಯ ಕುರಿತು ಉಪನ್ಯಾಸ ನೀಡಿದರು.ಮೆದುಳಿನ ಒಂದು ಭಾಗಕ್ಕೆ ರಕ್ತಸಂಚಾರ ನಿಂತಾಗ ದೇಹದ ಒಂದು ಭಾಗದ ಚಲನೆ ನಿಷ್ಕ್ರಿಯವಾಗುವುದನ್ನು ಪಾರ್ಶ್ವವಾಯು ಎನ್ನುತ್ತಾರೆ. ಪಾರ್ಶ್ವವಾಯುವಿನಲ್ಲಿ ಮೆದುಳಿನಲ್ಲಿ ರಕ್ತಸ್ರಾವದಿಂದ ಹಾಗೂ ರಕ್ತಚಲನೆ ನಿಲ್ಲುವ ಎರಡು ರೀತಿಯ ಪಾಶ್ವವಾಯು ಇದೆ ಎಂದರು. ಪಾರ್ಶ್ವವಾಯು ತಗಲುವುದು ಕೈ ಮತ್ತು ಕಾಲಿಗೆ ಎನ್ನುವ ನಂಬಿಕೆಯಿದೆ. ಆದರೆ, ಅದು ತಪ್ಪು. ಅದು ಮೆದುಳಿಗೆ ಸಂಬಂಧಿಸಿದೆ. ಕೈ ಮತ್ತು ಕಾಲಿಗೆ ಎಣ್ಣೆಯಿಂದ ಮಸಾಜ್ ಅಥವಾ ಚಿಕಿತ್ಸೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಮೆದುಳಿಗೆ ಪಾರ್ಶ್ವವಾಯು ತಗುಲಿದ 3ರಿಂದ 6ಗಂಟೆ ಅವಧಿಯ ಒಳಗೆ ಸೂಕ್ತ ಚಿಕಿತ್ಸೆ ದೊರೆತಲ್ಲಿ ನಿಷ್ಕ್ರಿಯಗೊಂಡ ದೇಹದ ಭಾಗವನ್ನು ಚಲನಶೀಲಗೊಳಿಸಬಹುದು ಎಂದರು.ಮುಂಜಾಗ್ರತಾ ಕ್ರಮಕೈಗೊಳ್ಳದಿದ್ದಲ್ಲಿ ಈ ರೋಗ ಎಲ್ಲಾ ವಯೋಮಾನದವರಿಗೂ ಕಾಣಿಸಿಕೊಳ್ಳುವುದು. ಲಕ್ವ ಹೊಡೆದಾಗ ಕೈ ತಿರುಚುವುದು, ಮುಖ  ಒಂದೆಡೆ ತಿರುಗುವುದು ಹಾಗೂ ದೇಹದ ಒಂದು ಭಾಗ ಸಂಪೂರ್ಣ ನಿಷ್ಕ್ರಿಯವಾಗುವುದು. ಹಾಗಾಗಿ, ಪ್ರತಿನಿತ್ಯ ವ್ಯಾಯಾಮ, ನಿಯಮಿತ ಆಹಾರ ಸೇವನೆ ಹಾಗೂ ವೈದ್ಯರ ಸಲಹೆ ಪಡೆಯುವ ಮೂಲಕ ಪಾರ್ಶ್ವವಾಯು ಬಾರದಂತೆ ತಡೆಯಬಹುದು ಎಂದರು.ಸಹ್ಯಾದ್ರಿ ನರ ಮತ್ತು ಮನೋರೋಗ ತಜ್ಞರ ಸಂಸ್ಥೆ ಅಧ್ಯಕ್ಷ ಡಾ.ಎ. ಶಿವರಾಮಕೃಷ್ಣ, ಭಾರತೀಯ ವೈದ್ಯಕೀಯ ಸಂಘ ಅಧ್ಯಕ್ಷ ಡಾ.ಮಹೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry