ಸೋಮವಾರ, ಮೇ 16, 2022
28 °C

ಪಾಲಿಕೆಗೂ ದಂಡ ವಿಧಿಸುವ ಅವಕಾಶ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರ ವ್ಯಾಪ್ತಿಯಲ್ಲಿ ರಸ್ತೆ ಅವ್ಯವಸ್ಥೆಯಿಂದ ಅವಘಡಗಳು ಸಂಭವಿಸಿದರೆ, ಸಾರ್ವಜನಿಕರಿಗೆ ತೊಂದರೆಯಾದರೆ ಪಾಲಿಕೆ ಆಡಳಿತಕ್ಕೆ ದಂಡ ವಿಧಿಸುವ ಅವಕಾಶವ ಕಲ್ಪಿಸಬೇಕು ಎಂದು ಧಾರವಾಡದ ಕೆ.ಎಚ್.ಕಬ್ಬೂರು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಪ್ರೊ.ಅರವಿಂದ ಕುಲಕರ್ಣಿ ಒತ್ತಾಯಿಸಿದರು.ನಗರದ ದೇಶಪಾಂಡೆ ಫೌಂಡೇಶನ್ ಸಭಾಂಗಣದಲ್ಲಿ ಮಂಗಳವಾರ ಪಾಲಿಕೆಯಿಂದ ಆಯೋಜಿಸಲಾಗಿದ್ದ `ಅವಳಿನಗರ ಸಮಗ್ರ ಅಭಿವೃದ್ಧಿ~ ಕುರಿತಾದ ವಿಚಾರ ಸಂಕಿರಣದಲ್ಲಿ ನಾಗರಿಕರ ಪರವಾಗಿ `ನಾವು ಮತ್ತು ನಮ್ಮ ಕನಸು~ ಎಂಬ ವಿಷಯ ಪ್ರಸ್ತಾಪಿಸಿ ಮಾತನಾಡಿದರು.ನಾಗರಿಕರಿಂದ ನಿಯಮಾವಳಿ ಉಲ್ಲಂಘನೆಯಾದರೆ ಅಥವಾ ನಿಗದಿತ ಅವಧಿಯಲ್ಲಿ ಶುಲ್ಕಗಳನ್ನು ಪಾವತಿಸದಿದ್ದರೆ ಪಾಲಿಕೆಯಿಂದ ದಂಡ ವಿಧಿಸಲಾಗುತ್ತದೆ. ಅದೇ ರೀತಿ ಮೂಲ ಸೌಕರ್ಯ ಕಲ್ಪಿಸದೆ ನಾಗರಿಕದ ಹಕ್ಕಿಗೆ ಚ್ಯುತಿ ಮಾಡಿದಾಗ ನಮಗೂ ನ್ಯಾಯ ಪಡೆಯುವ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಸದಾ ತಡವಾಗುತ್ತಿದೆ ಎಂದು ಹೇಳಿದ ಅವರು, ಬಹುಶಃ ರಾಜಧಾನಿ ಬೆಂಗಳೂರಿನಿಂದ ದೂರ ಇರುವುದೇ ಅವಳಿ ನಗರದ ಜನತೆಗೆ ಶಾಪವಾಗಿದೆ ಎಂದರು.ಬೆಂಗಳೂರು ನಗರವನ್ನು ಸಿಂಗಪುರ ಮಾಡುವುದಾಗಿ ಕನಸು ಕಾಣುವ ಜನಪ್ರತಿನಿಧಿಗಳು ಅದೇ ಕನಸನ್ನು ಹುಬ್ಬಳ್ಳಿ-ಧಾರವಾಡಕ್ಕೂ ವಿಸ್ತರಿಸಲಿ ಎಂದು ಮನವಿ ಮಾಡಿದ ಅವರು, ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹಾಗೂ ಉದ್ಯಾನವನಗಳ ಒತ್ತುವರಿ ಕುರಿತು ಮಾಧ್ಯಮಗಳಲ್ಲಿ ಪರಿಣಾಮಕಾರಿಯಾಗಿ ವರದಿಯಾಗುತ್ತಿದ್ದರೂ ಅದಕ್ಕೆ ನಿರೀಕ್ಷಿತ ಸ್ಪಂದನೆ ಸಂಬಂಧಿಸಿದ ಸಂಸ್ಥೆಗಳಿಂದ ದೊರೆಯುತ್ತಿಲ್ಲ ಎಂದು ಹೇಳಿದರು.ಬೆಂಗಳೂರು ಮಾದರಿಯಲ್ಲಿ ಪ್ರತೀ ವಾರ್ಡ್‌ನಲ್ಲಿ 5ರಿಂದ 8 ಉದ್ಯಾನವನಗಳು, ಚಂಡೀಗಢ ಮಾದರಿಯ ರಸ್ತೆ, ಚರಂಡಿ, ವಿದ್ಯುತ್‌ದೀಪ ಜೊತೆಗೆ ನಾಗರಿಕ ಪ್ರಜ್ಞೆ ನಮ್ಮಲ್ಲಿಯೂ ಕಾಣಬೇಕಿದೆ ಎಂದು ಹೇಳಿದರು.ಸಮಾರಂಭ ಉದ್ಘಾಟಿಸಿದ ನಗರಾಭಿವೃದ್ಧಿ ಸಚಿವ ಎಸ್.ಸುರೇಶಕುಮಾರ್ ಮಾತನಾಡಿ, ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಭೂಮಿಯ ಸಮರ್ಪಕ ಬಳಕೆ ಕಾಯ್ದೆ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು.

ಕಳೆದ 6 ದಶಕಗಳಲ್ಲಿ ಶೇ 6ರಿಂದ 8ರಷ್ಟು ಕೃಷಿ ಭೂಮಿ ಕಡಿಮೆಯಾಗಿದೆ. ಇದಕ್ಕೆ ನಗರೀಕರಣ, ಕೈಗಾರಿಕೆಗಳ ಸ್ಥಾಪನೆ ಮುಖ್ಯವಾದರೂ ಇದರ ಒಟ್ಟು ಪರಿಣಾಮ ಆಹಾರದ ಉತ್ಪಾದನೆಯ ಮೇಲೆ ಆಗಿದೆ ಎಂದರು.

ಅವಳಿ ನಗರದಲ್ಲಿ ಕಟ್ಟಡ ನಿರ್ಮಾಣ ವಿನ್ಯಾಸದ ವೇಳೆ ಅನುಸರಿಸುವ ಫ್ಲೋರ್ ಏರಿಯಾ ರೇಶಿಯೊ (ಎಫ್‌ಎಆರ್) ಹೆಚ್ಚಳಕ್ಕೆ ಈ ಭಾಗದ ಪರಿಣಿತ ತಜ್ಞರ ತಂಡವನ್ನು ಬೆಂಗಳೂರಿಗೆ ಕರೆ ತಂದಲ್ಲಿ ಚರ್ಚೆ ನಡೆಸಿ ಒಪ್ಪಿಗೆ ನೀಡಲಾಗುವುದು ಎಂದು ಮೇಯರ್ ಪಾಂಡುರಂಗ ಪಾಟೀಲ ಅವರಿಗೆ ಸಚಿವರು ಸೂಚಿಸಿದರು.ಮೇಯರ್ ಪಾಂಡುರಂಗ ಪಾಟೀಲ ಮಾತನಾಡಿ, ಅವಳಿ ನಗರದ ಅಭಿವೃದ್ಧಿ ಕುರಿತು ಮಹಾನಗರ ಪಾಲಿಕೆ ರಚನೆಯಾದಾಗಿನಿಂದ ಇಲ್ಲಿಯವರೆಗೆ ಸಾರ್ವಜನಿಕರೊಂದಿಗೆ ಚರ್ಚಿಸುವ ಮೊದಲ ಪ್ರಯತ್ನ ಇದಾಗಿದೆ ಎಂದರು.ಕೇವಲ ಅಧಿಕಾರಿ-ಜನಪ್ರತಿನಿಧಿಗಳು ಚರ್ಚಿಸುವ ಬದಲು ವೈಜ್ಞಾನಿಕವಾಗಿ, ತಾರ್ಕಿಕವಾಗಿ ಸಾರ್ವಜನಿಕರೊಂದಿಗೆ ವಿಚಾರ ಹಂಚಿಕೊಂಡರೆ ಅನೇಕ ಸಮಸ್ಯೆಗಳಿಗೆ ನೈಜ ಪರಿಹಾರ ದೊರೆಯಲಿವೆ ಎಂದು ಅಭಿಪ್ರಾಯಪಟ್ಟರು.ವಿಚಾರ ಸಂಕಿರಣದಲ್ಲಿ ಸಂಸದ ಪ್ರಹ್ಲಾದ ಜೋಶಿ, ಉಪಮೇಯರ್ ಭಾರತಿ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸಭಾ ನಾಯಕ ಪ್ರಕಾಶ ಗೋಡಬೋಲೆ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, ಪಾಲಿಕೆ ಸದಸ್ಯರಾದ ಅಶ್ವಿನಿ ಮಜ್ಜಗಿ, ಲಕ್ಷ್ಮೀ ಉಪ್ಪಾರ, ವಿಜಯಾನಂದ ಎಸ್.ಶೆಟ್ಟಿ, ರಾಜಣ್ಣಾ ಕೊರವಿ, ಉಪನ್ಯಾಸಕ ಸುರೇಶ ಕಿರೇಸೂರ, ಸರೋಜಾ ಬಿ.ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.`ಪಾಟೀಲ~ರ ಪ್ರಾಬಲ್ಯ

ಅವಳಿ ನಗರದಲ್ಲಿ ಈಗ ಪಾಟೀಲರದ್ದೇ ಆಡಳಿತ ಎಂದು ವಿಚಾರ ಸಂಕಿರಣ ಉದ್ಘಾಟಿಸಿದ ಸಚಿವ ಸುರೇಶ ಕುಮಾರ ಚಟಾಕಿ ಹಾರಿಸಿದರು. ಪಾಲಿಕೆ ಮೇಯರ್ ಪಾಂಡುರಂಗ ಪಾಟೀಲ, ಉಪಮೇಯರ್ ಭಾರತಿ ಪಾಟೀಲ, ಆಯುಕ್ತರು ವೈ.ಎಸ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಿಂಗರಾಜ ಪಾಟೀಲ ಹೀಗೆ ಪಾಟೀಲರದ್ದೇ ಪ್ರಾಬಲ್ಯ ಎಂದಾಗ ಸಭೆಯಲ್ಲಿ ನಗೆಯ ಹೊನಲು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.