ಪಾಲಿಕೆಗೆ ಎಂಟು ಬಡಾವಣೆ ಹಸ್ತಾಂತರ

7

ಪಾಲಿಕೆಗೆ ಎಂಟು ಬಡಾವಣೆ ಹಸ್ತಾಂತರ

Published:
Updated:

ಹುಬ್ಬಳ್ಳಿ: ಕರ್ನಾಟಕ ಗೃಹ ಮಂಡಳಿ ಹಾಗೂ ಪಾಲಿಕೆಯ ನಡುವೆ ಅಭಿವೃದ್ಧಿ ಶುಲ್ಕಕ್ಕೆ ಸಂಬಂಧಿಸಿ ಒಮ್ಮತ ಮೂಡದ ಕಾರಣ ದಶಕಗಳಿಂದ ಹಸ್ತಾಂತರ ಕಾರ್ಯ ಮುಂದೂಡಲಾದ ನಗರದ ಎಂಟು ಬಡಾವಣೆಗಳಿಗೆ ಶನಿವಾರ ಮುಕ್ತಿಯ ದಿನ.ಗಾಮನಗಟ್ಟಿ ಎರಡನೇ ಹಂತದ ಶಿವಾನಂದ ಮಠದ ಬಳಿ ನಡೆದ ಸಮಾರಂಭದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಮೇಯರ್ ಡಾ. ಪಾಂಡುರಂಗ ಪಾಟೀಲ ಅವರಿಗೆ ಬಡಾವಣೆಗಳನ್ನು ಹಸ್ತಾಂತರಿಸಿ ಎರಡು ಕೋಟಿ ರೂಪಾಯಿ ಚೆಕ್ ನೀಡಿದರು.ಸಮಾರಂಭದಲ್ಲಿ ಗಾಮನಗಟ್ಟಿ ಎರಡನೇ ಹಂತದ ಬಡಾವಣೆಯ ಮನೆ ಹಾಗೂ ನಿವೇಶನಗಳನ್ನು ಲಾಟರಿ ಎತ್ತುವ ಮೂಲಕ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಂಚಿಕೆ ಮಾಡಿದರು. ಧಾರವಾಡದ ಸತ್ತೂರ ಎರಡನೇ ಹಂತ ಹಾಗೂ ಹಿರೇಮಲ್ಲಿಗವಾಡ ಎರಡನೇ ಹಂತದ ವಸತಿ ಯೋಜನೆಗಳಿಗೆ ಅವರು ಅಡಿಗಲ್ಲು ಹಾಕಿದರು.ನಂತರ ಮಾತನಾಡಿದ ಜಗದೀಶ ಶೆಟ್ಟರ್, ಗೃಹಮಂಡಳಿಗೆ ಸಾಲದ ನೆರವು ನೀಡಿ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಸರ್ಕಾರ ನೆರವಾಗಲಿದೆ ಎಂದು ಹೇಳಿದರು. ಅಧಿಕೃತ ಬಡಾವಣೆಗಳನ್ನು ನಿರ್ಮಿಸುವುದರಿಂದ ಅಕ್ರಮ ಬಡಾವಣೆಗಳ ನಿರ್ಮಾಣ ಹಾಗೂ ಕೊಳಚೆ ಪ್ರದೇಶಗಳು ತಲೆ ಎತ್ತುವುದನ್ನು ತಡೆಯಬಹುದಾಗಿದೆ ಎಂದು ಹೇಳಿದರು.`ಅನಧಿಕೃತ ಬಡಾವಣೆಗಳ ನಿರ್ಮಾಣ ಎಲ್ಲ ಕಡೆಯಲ್ಲೂ ಕಂಡುಬರುವ ಸಮಸ್ಯೆ. ಸುಶಿಕ್ಷಿತರು, ಹಣವಂತರು ಕೂಡ ಕೊಳಚೆ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಮೋಸ ಮಾಡುವುದು ಸಾಮಾನ್ಯವಾಗಿದೆ. ಬಡಾವಣೆ ನಿರ್ಮಿಸುವಾಗ ಭೂಮಿ ಕಳೆದುಕೊಳ್ಳುವ ರೈತರಿಗೆ ನೀಡುವ ನಿವೇಶನದ ಅಳತೆಯನ್ನು ಹೆಚ್ಚಿಸುವ ಕುರಿತು ಗೃಹ ಮಂಡಳಿ ನಿರ್ಧಾರ ಕೈಗೊಳ್ಳಲಿದೆ~ ಎಂದು ಅವರು ಹೇಳಿದರು.ಬಡಾವಣೆ ನಿರ್ಮಾಣ ಕಾರ್ಯದಲ್ಲಿ ಕಳಪೆ ಕಾಮಗಾರಿ ಕಂಡು ಬಂದರೆ ತಕ್ಷಣ ಗೃಹ ಮಂಡಳಿಗೆ ತಿಳಿಸುವಂತೆ ಸೂಚಿಸಿದ ಸಚಿವ ವಿ.ಸೋಮಣ್ಣ, ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.`ರೈತರಿಂದ ಪಡೆದ ಜಮೀನಿಗೆ ತಗಲುವ ಮೊತ್ತವನ್ನು ಆಸ್ತಿಗೆ ಜಿ.ಪಿ.ಎ ಪಡೆದ ವ್ಯಕ್ತಿಯ ಕೈಗೆ ನೀಡುವ ಬದಲು ನೇರವಾಗಿ ರೈತರಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ.  ಇದರಿಂದಾಗಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದಾಗಿದೆ. ಫಲಾನುಭವಿಗಳು ನಾಲ್ಕು ಕಂತುಗಳಲ್ಲಿ ಮಂಡಳಿಗೆ ಕಟ್ಟುವ ಹಣವನ್ನು ಆರು ಕಂತುಗಳಿಗೆ ವಿಸ್ತರಿಸುವ ಕುರಿತು ಚಿಂತನೆ ನಡೆದಿದೆ ಎಂದು ಅವರು ಹೇಳಿದರು.ಸಂಸದರ ಮನವಿ: ಸಂಸದ ಪ್ರಹ್ಲಾದ ಜೋಶಿ ಮಾತನಾಡಿ ಬಡಾವಣೆ ನಿರ್ಮಿಸಲು ಜಾಗ ನೀಡಿದ ರೈತರಿಗೆ ದೊಡ್ಡ ನಿವೇಶನವನ್ನು ನೀಡಬೇಕು, ಬಡಾವಣೆಗಳ ಅಭಿವೃದ್ಧಿ ಮಾಡುವವರು ಕಳಪೆ ಕಾಮಗಾರಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು, ಪಾಲಿಕೆಗೆ ಹಸ್ತಾಂತರ ಮಾಡಿರುವ ಬಡಾವಣೆಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಶಾಸಕ ಚಂದ್ರಕಾಂತ ಬೆಲ್ಲದ ಅವರ ಅಧ್ಯಕ್ಷತೆ ವಹಿಸಿದ್ದರು. ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕರಾದ ಎಸ್.ಐ.ಚಿಕ್ಕನಗೌಡರ, ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ಮೋಹನ ಲಿಂಬಿಕಾಯಿ, ಉಪಮೇಯರ್ ಭಾರತಿ ಪಾಟೀಲ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ರುದ್ರಪ್ಪ ಕೊಮಾರಾದೇಸಾಯಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಶರಥರಾವ ಕೇಶವರಾವ್ ದೇಸಾಯಿ, ಗೃಹಮಂಡಳಿ ಆಯುಕ್ತ ಎಸ್.ಎನ್. ಜಯರಾಂ, ಜಿಲ್ಲಾಧಿಕಾರಿ ಸಮೀರ್ ಶುಕ್ಲ ಮತ್ತಿತರರು ಉಪಸ್ಥಿತರಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry