ಗುರುವಾರ , ಜೂನ್ 17, 2021
28 °C

ಪಾಲಿಕೆಗೆ 1000 ಕೋಟಿ ಅನುದಾನ: ಬಿಜೆಪಿ ಸ್ವಾಗತ, ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2012-13ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಬಿಬಿಎಂಪಿಗೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಿರುವುದನ್ನು ಪಾಲಿಕೆಯ ಆಡಳಿತಾರೂಢ ಬಿಜೆಪಿ ಸ್ವಾಗತಿಸಿದ್ದರೆ, ವಿರೋಧ ಪಕ್ಷವಾದ ಕಾಂಗ್ರೆಸ್ ಟೀಕಿಸಿದೆ.ಬಜೆಟ್‌ನ ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನದಿಂದ ನಗರದಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದು ಪ್ರತಿಕ್ರಿಯಿಸಿರುವ ಮೇಯರ್ ಪಿ. ಶಾರದಮ್ಮ, ಉಪ ಮೇಯರ್ ಎಸ್. ಹರೀಶ್ ಹಾಗೂ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ಅಭಿನಂದಿಸಿದ್ದಾರೆ.ಪ್ರಯೋಜನವಿಲ್ಲ: ಬಿಬಿಎಂಪಿಗೆ ಈ ಬಾರಿಯ ಬಜೆಟ್‌ನಲ್ಲಿಯೂ ವಿಶೇಷ ಅನುದಾನ ನೀಡದಿರುವುದರಿಂದ ನಗರದ ಅಭಿವೃದ್ಧಿಗೆ ಪೂರಕವಾದ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ಅವರು ಟೀಕಿಸಿದ್ದಾರೆ.2010-11ನೇ ಸಾಲಿನ ಬಿಬಿಎಂಪಿ ಬಜೆಟ್‌ನಲ್ಲಿ ಸರ್ಕಾರದಿಂದ 1300 ಕೋಟಿ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ, ಬಿಡುಗಡೆಯಾಗಿದ್ದು ರೂ. 300 ಕೋಟಿ ಮಾತ್ರ. ಅಂತೆಯೇ, 2011-12ನೇ ಸಾಲಿನ ಪಾಲಿಕೆ ಬಜೆಟ್‌ನಲ್ಲಿಯೂ ಸರ್ಕಾರದಿಂದ 1,500 ಕೋಟಿ ರೂಪಾಯಿ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ, ಅನುದಾನ ಬಿಡುಗಡೆಯಾದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.2012-13ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಬಿಬಿಎಂಪಿಗೆ 1000 ಕೋಟಿ ನೆರವು ಪ್ರಕಟಿಸಿದ್ದರೂ ಈ ಮೊತ್ತವನ್ನು ಹಿಂದಿನ ಅವಧಿಯ ಯೋಜನೆಗಳಿಗೆ ಪೂರಕವಾಗಿ ನಿಗದಿತ ಕಾಮಗಾರಿಗಳಿಗೆ ನಿಗದಿಪಡಿಸಿರುವುದಾಗಿ ತಿಳಿದು ಬಂದಿದೆ.

 

ಪಾಲಿಕೆಯ ಆರ್ಥಿಕ ಹಿತದೃಷ್ಟಿಯಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ನಗರದ ಅಭಿವೃದ್ಧಿಗೆ ಸರ್ಕಾರಕ್ಕೆ ಕಾಳಜಿ ಇಲ್ಲದಿರುವುದು ಕಂಡು ಬರುತ್ತದೆ. ಹೀಗಾಗಿ, ಸರ್ಕಾರದ ಘೋಷಣೆ ಊಟಕ್ಕೆ ಉಪ್ಪಿನಕಾಯಿ ತರ ಎನಿಸಿದೆ ಎಂದು ಟೀಕಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.