ಶನಿವಾರ, ಮೇ 28, 2022
25 °C

ಪಾಲಿಕೆಯಲ್ಲಿ ಫಲಿಸದ ಬಿಜೆಪಿ ಆಪರೇಷನ್, ಕೈ ಹಿಡಿದ ಜೆಡಿಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಲಿಕೆಯಲ್ಲಿ ಫಲಿಸದ ಬಿಜೆಪಿ ಆಪರೇಷನ್, ಕೈ ಹಿಡಿದ ಜೆಡಿಎಸ್

ಗುಲ್ಬರ್ಗ: ಗುಲ್ಬರ್ಗ ನಾಗರಿಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮೇಯರ್ ಸ್ಥಾನವನ್ನು ಮಹ್ಮದ್ ಅಷ್ಫಕ್ ಚುಲ್‌ಬುಲ್ ಹಾಗೂ ಉಪಮೇಯರ್ ಸ್ಥಾನವನ್ನು ಬಾಬು ಸುಂಟಾಣ ಅಲಂಕರಿಸಿದರು. ಭಾನುವಾರ ಪಾಲಿಕೆಯ ಇಂದಿರಾ ಸ್ಮಾರಕ ಭವನದಲ್ಲಿ ನಡೆದ ಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದರು.ಮೇಯರ್: ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮಹ್ಮದ್ ಅಷ್ಫಕ್ ಚುಲ್‌ಬುಲ್, ಬಂಡಾಯ ಕಾಂಗ್ರೆಸ್‌ನಿಂದ ಆಲಿಖಾನ್ ಎಂ.ಡಿ.ಖಾನ್ ಹಾಗೂ ಬಿಜೆಪಿಯಿಂದ ರಾಜಗೋಪಾಲ ರೆಡ್ಡಿ ಅವರು ಸ್ಪರ್ಧಿಸಿದ್ದರು. ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಿಂದಾಗಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತು. ಚುಲ್‌ಬುಲ್ 36, ಆಲಿಖಾನ್-20 ಹಾಗೂ ರಾಜಗೋಪಾಲ ರೆಡ್ಡಿ-3 ಮತ ಪಡೆದರು.

 

ಚುಲ್‌ಬುಲ್ ಅವರಿಗೆ ಕಾಂಗ್ರೆಸ್ ನಿಷ್ಠರಾದ 11 ಮಂದಿ ಹಾಗೂ ಜೆಡಿಎಸ್‌ನ 23 ಮತ್ತು ಇಬ್ಬರು ಶಾಸಕರು (ಖಮರುಲ್ ಇಸ್ಲಾಂ ಮತ್ತು ಅರುಣಾ ಸಿ.ರೇವೂರ ಪಾಟೀಲ) ಮತ ಹಾಕಿದರು. ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯ 10 ಸದಸ್ಯರು ಮತ್ತು ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಲಿಖಾನ್ ಅವರನ್ನು ಬೆಂಬಲಿಸಿದರು. ಉಳಿದಂತೆ 8 ಮಂದಿ ಬಂಡಾಯ ಕಾಂಗ್ರೆಸಿಗರು ಅವರಿಗೆ ಮತ ಹಾಕಿದರು.ಬಿಜೆಪಿಯ ಮೂವರು ಸದಸ್ಯರು ಮಾತ್ರ ಅಧಿಕೃತ ಅಭ್ಯರ್ಥಿ ರಾಜಗೋಪಾಲ ರೆಡ್ಡಿ ಅವರಿಗೆ ಮತದಾನ ಮಾಡಿದರು. 36-20 ಮತಗಳ ಅಂತರದಿಂದ ಚುಲ್‌ಬುಲ್ ಆಯ್ಕೆಯಾದರು.ಉಪಮೇಯರ್: ಉಪಮೇಯರ್ ಸ್ಥಾನಕ್ಕೆ ಮೊದಲಿಗೆ ನಾಲ್ಕು ಮಂದಿ ಸ್ಫರ್ಧಿಸಿದ್ದರು. ವಿನೋದ್ ಕೆ.ಬಿ. ಶಾಣಪ್ಪ, ಬಾಬು ಸುಂಟಾಣ, ಸೋಮಶೇಖರ್ ಎಂ. ಮತ್ತು ವಸಂತ ಜಾಧವ ನಾಮಪತ್ರ ಸಲ್ಲಿಸಿದ್ದರು. ಆದರೆ ಸೋಮಶೇಖರ್ ಎಂ. ಮತ್ತು ವಸಂತ ಜಾಧವ ನಾಮಪತ್ರ ಹಿಂದಕ್ಕೆ ಪಡೆದ ಪರಿಣಾಮ ನೇರ ಸ್ಪರ್ಧೆ ಏರ್ಪಟ್ಟಿತ್ತು. ಬಾಬು ಸಂಟಾಣ ಅವರು 36-23 ಮತಗಳ ಅಂತರದಲ್ಲಿ ವಿನೋದ್ ಕೆ.ಬಿ.ಶಾಣಪ್ಪ ಅವರನ್ನು ಸೋಲಿಸಿ, ಆಯ್ಕೆಯಾದರು.ಮತದಾನ; ಮಹಾ ನಗರ ಪಾಲಿಕೆ ಇಂದಿರಾ ಸ್ಮಾರಕ ಭವನದಲ್ಲಿ ನಡೆದ ವಿಶೇಷ ಸಭೆಯಲ್ಲಿ ಆಯ್ಕೆ ನಡೆಯಿತು. 55 ಸದಸ್ಯರು ಹಾಗೂ ಐದು ಜನಪ್ರತಿನಿಧಿಗಳ ಪೈಕಿ ಮಲ್ಲಿಕಾರ್ಜುನ ಖರ್ಗೆ ಮಾತ್ರ ಗೈರಾಗಿದ್ದರು. ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್ ಅವರು ಚುನಾವಣಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದರು. ಆಯುಕ್ತ ಮನೋಜ್ ಜೈನ್ ಹಾಗೂ ಅಧಿಕಾರಿಗಳು ಹಾಜರಿದ್ದರು.ರಾಜಕಾರಣ: ಆಪರೇಷನ್ ಕಮಲದ ಪ್ರಯತ್ನ, ನಮೋಶಿ ಹಾಗೂ ರೇವೂರ ನಡುವಿನ ರಾಜಕೀಯ ವೈಷಮ್ಯ, ನಿಯಂತ್ರಣ ಉಳಿಸಿಕೊಳ್ಳುವ ಶಾಸಕ ಖಮರುಲ್ ಇಸ್ಲಾಂ ಯತ್ನಗಳ ನಡುವಿನ ಜಿದ್ದಾಜಿದ್ದಿನಲ್ಲಿ ಮೇಯರ್-ಉಪಮೇಯರ್ ಸ್ಥಾನದ ಸ್ಪರ್ಧೆಯು ತೀವ್ರ ಕುತೂಹಲ ಮೂಡಿಸಿತ್ತು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯು ಶತಾಯಗತಾಯ ಮೇಯರ್ ಹುದ್ದೆ ಪಡೆಯಲು ಯತ್ನಿಸಿತ್ತು. ಈ ಜಿದ್ದಿನ ನಡುವೆ ಜೆಡಿಎಸ್‌ನ ರೇವೂರ ಬೆಂಬಲಿಗರು ಹಾಗೂ ಖಮರುಲ್ ಜೊತೆಗಿರುವ ಕಾಂಗ್ರೆಸ್ ನಿಷ್ಠರು ಒಂದಾಗಿ ಅಧಿಕಾರ ಹಿಡಿದರು. 8 ಮಂದಿ ಕಾಂಗ್ರೆಸ್ ಸದಸ್ಯರನ್ನು ‘ಅಪರೇಷನ್ ಕಮಲ’ದ ಖೆಡ್ಡಾಕ್ಕೆ ಕೆಡವಲು ಬಿಜೆಪಿ ಯತ್ನಿಸಿದರೂ, ಅಧಿಕಾರ ಹಿಡಿಯಲು ಸಫಲವಾಗಲಿಲ್ಲ.ಗೆಲವು:ಮೇಯರ್-ಉಪಮೇಯರ್ ಇಬ್ಬರೂ ಎರಡನೇ ಬಾರಿಗೆ ಪಾಲಿಕೆಗೆ ಆಯ್ಕೆಯಾಗಿದ್ದಾರೆ. 26ನೇ ವಾರ್ಡ್ ಪ್ರತಿನಿಧಿಸುತ್ತಿರುವ ಚುಲ್‌ಬುಲ್ ಅವರು ಈ ಹಿಂದೆ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಅವರು ಕಾಂಗ್ರೆಸ್ ತೆಕ್ಕೆಗೆ ಸೇರಿದ್ದರು. ನಗರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಅವರು, ರಾಜಕೀಯದಲ್ಲಿಯೂ ಸಕ್ರಿಯವಾಗಿದ್ದಾರೆ. ಇನ್ನೊಂದೆಡೆ 37ನೇ ವಾರ್ಡ್ ಪ್ರತಿನಿಧಿ ಬಾಬು ಸುಂಟಾಣ ಕಾಂಗ್ರೆಸ್‌ನಿಂದ ಎರಡು ಬಾರಿ ಆಯ್ಕೆಯಾಗಿದ್ದಾರೆ.‘ನಗರದ ಅಭಿವೃದ್ಧಿ ಕಾರ್ಯಗಳಿಗೆ ಅದ್ಯತೆ ನೀಡುತ್ತೇವೆ. ಎಲ್ಲರು ಜೊತೆಯಾಗಿ ಕಾರ್ಯನಿರ್ವಹಿಸುವುದು, ಜನರ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸುವುದು. ಆ ಮೂಲಕ ಗುಲ್ಬರ್ಗವನ್ನು ಮಾದರಿ ಪಾಲಿಕೆ ಮಾಡುವ ಗುರಿ ಹೊಂದಿದ್ದೇವೆ’ ಎಂದು ನೂತನ ಮೇಯರ್ ಹಾಗೂ ಉಪಮೇಯರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.