ಬುಧವಾರ, ಮಾರ್ಚ್ 3, 2021
19 °C
ಆಯುಕ್ತರ ಕಚೇರಿಯಲ್ಲಿ ಅಪರಿಚಿತರ ‘ಕಾರುಬಾರು’

ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ

ಪ್ರಜಾವಾಣಿ ವಾರ್ತೆ/ಕೆ.ಎನ್‌.ನಾಗಸುಂದ್ರಪ್ಪ Updated:

ಅಕ್ಷರ ಗಾತ್ರ : | |

ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ

ತುಮಕೂರು: ನಗರದ ನಗರ ಪಾಲಿಕೆ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗಿಂತ ಮಧ್ಯವರ್ತಿಗಳ ಸಂಖ್ಯೆಯೇ ಹೆಚ್ಚಾಗಿದೆ. ಯಾವುದೇ ಕೆಲಸ ಆಗಬೇಕೆಂದರೂ ಮಧ್ಯವರ್ತಿಗಳ ಮೂಲಕವೇ ಹೋಗಬೇಕು. ಮಧ್ಯವರ್ತಿಗಳ ಹಾವಳಿಯಿಂದ ಜನತೆ ಕಂಗೆಟ್ಟಿದ್ದಾರೆ.ತುಮಕೂರು ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದರೂ ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸಿದೆಯೇ ಹೊರತು ಪ್ರಯೋಜನವಾಗಿಲ್ಲ. ಪಾಲಿಕೆ ಆಡಳಿತ ಜನರಿಂದ ಅಂತರ ಕಾಯ್ದುಕೊಳ್ಳುತ್ತಿದೆ ಎನ್ನುವ ಕೂಗು ಸಾರ್ವಜನಿಕರಿಂದ ಬಂದಿದೆ.

ನಗರಸಭೆ ಮಾಜಿ ಸದಸ್ಯರು, ನಗರ ಪಾಲಿಕೆಯ ಕೆಲವು ಹಾಲಿ ಸದಸ್ಯರು ಮತ್ತು ಅವರ ಸಂಬಂಧಿಕರು, ಆಯುಕ್ತರಿಗೆ ಬೇಕಾದವರು ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಸಾಮಾನ್ಯ ಜನತೆ ನೇರವಾಗಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಲು ಆಗುತ್ತಿಲ್ಲ. ಅದರಲ್ಲಿಯೂ ಕಳೆದ ಐದಾರು ತಿಂಗಳ ಅವಧಿಯಲ್ಲಿ ಈ ಸಮಸ್ಯೆ ಬಿಗಾಡಿಯಿಸಿದೆ ಎಂದು ಹೆಸರು ಹೇಳಲು ಇಚ್ಛಿಸದ ನಗರ ಪಾಲಿಕೆ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನೂತನ ಕಟ್ಟಡ ನಕ್ಷೆ ಮಂಜೂರಾತಿ, ಕಟ್ಟಡ ನಿರ್ಮಾಣ ಲೈಸೆನ್ಸ್‌, ಅಂಗಡಿ ಲೈಸೆನ್ಸ್‌, ಖಾತೆ ಬದಲಾವಣೆ, ತಿದ್ದುಪಡಿ, ಜನನ, ಮರಣ ಪ್ರಮಾಣ ಪತ್ರ ಮತ್ತು ವಿವಿಧ ಸವಲತ್ತು ಪಡೆಯಲು ಅರ್ಜಿ ಸಲ್ಲಿಸುವುದು ಸೇರಿದಂತೆ ಯಾವುದೇ ಕೆಲಸ ಆಗಬೇಕಾದರೂ ಮಧ್ಯವರ್ತಿಗಳ ಮೂಲಕವೇ ಹೋಗಬೇಕು. ಇಲ್ಲದಿದ್ದಲ್ಲಿ ‘ಇದು ಸರಿಯಿಲ್ಲ, ಅದು ಸರಿಯಿಲ್ಲ’ ಎಂದು ಅಧಿಕಾರಿಗಳು ‘ಕೊಕ್ಕೆ’ ಹಾಕುತ್ತಾರೆ. ಮಧ್ಯವರ್ತಿಗಳ ಮೂಲಕ ಹೋದರೆ ಯಾವುದೇ ತಕರಾರು ಇಲ್ಲದೆ ಕೆಲಸ ಆಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.ನಗರಪಾಲಿಕೆ ಆಯುಕ್ತ ಅಷದ್‌ ಆರ್‌.ಷರೀಪ್‌ ಅವರನ್ನು ಸಹ ನೇರವಾಗಿ ಕಾಣಲು ಸಾಧ್ಯವಾಗುತ್ತಿಲ್ಲ. ಆಯುಕ್ತರ ಕಚೇರಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ 10ರಿಂದ 15 ಮಂದಿ ಇರುತ್ತಾರೆ. ಅದರಲ್ಲಿ ಕೆಲವರು ನಗರ ಪಾಲಿಕೆ ಸದಸ್ಯರು. ಉಳಿದವರು ಮಧ್ಯವರ್ತಿಗಳು ಎನ್ನುವ ಆರೋಪವಿದೆ.ಆಯುಕ್ತ ಷರೀಪ್‌ ಅವರು ಕೊಠಡಿಯಲ್ಲಿ ಇಲ್ಲದಿದ್ದರೂ ಈ ಗುಂಪು ಯಾವಾಗಲೂ ಅಲ್ಲಿಯೇ ಇರುತ್ತದೆ. ಅಪರಿಚಿತ ವ್ಯಕ್ತಿಗಳಿಗೆ ಆಯುಕ್ತರ ಕೊಠಡಿಯಲ್ಲಿ ಏನು ಕೆಲಸ. ಆಯುಕ್ತರು ಏಕೆ ಇಂತಹ ವ್ಯಕ್ತಿಗಳಿಗೆ ಅವಕಾಶ ನೀಡಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಆಯುಕ್ತರೂ ಸಾರ್ವಜನಿಕರಿಗೆ ಸಿಗುವುದಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ.ಅಲ್ಲದೆ ಕುಡಿಯುವ ನೀರು, ಚರಂಡಿ, ರಸ್ತೆ ಮುಂತಾದವುಗಳ ಬಗ್ಗೆ ಸಾರ್ವಜನಿಕರಿಂದ ದೂರು ಪಡೆಯಲು ಇಲ್ಲಿನ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಾರ್ಯಪಾಲಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌ಗಳು ದೂರವಾಣಿ ಕರೆ ಸ್ವೀಕರಿಸುವುದಿಲ್ಲ. ನಗರಪಾಲಿಕೆ ಕಚೇರಿಯಲ್ಲಿ ಸಹ ಇರುವುದಿಲ್ಲ. ಇವರಿಗೆ ಯಾವಾಗ, ಹೇಗೆ ದೂರು ಸಲ್ಲಿಸಬೇಕು ಎಂಬುದು ಜನರಿಗೆ ತಿಳಿಯದಾಗಿದೆ.ನಗರದ ಕಸದ ಸಮಸ್ಯೆ ಬಗೆಹರಿಸಲೂ ಸಹ ನಗರಪಾಲಿಕೆಗೆ ಇದುವರೆಗೆ ಸಾಧ್ಯವಾಗಿಲ್ಲ. ಕಸವನ್ನು ಎಲ್ಲಿಗೆ ಸಾಗಿಸಲಾಗುತ್ತದೆ ಎಂಬ ಪ್ರಶ್ನೆಗೆ ಆಯುಕ್ತರು, ಪರಿಸರ ಎಂಜಿನಿಯರ್‌, ಆರೋಗ್ಯಾಧಿಕಾರಿ ಯಾರಲ್ಲಿಯೂ ಉತ್ತರವಿಲ್ಲ. ಅಲ್ಲದೆ ಈಗ ಬೇಸಿಗೆ ಕಾಲ ಬರುತ್ತಿದೆ.

ಬೇಸಿಗೆಯನ್ನು ಎದುರಿಸಲು ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರೂ ಆಯುಕ್ತರು ಇದುವರೆಗೆ ಉತ್ತರಿಸಲು ಮುಂದಾಗಿಲ್ಲ.

ನಗರದ ಹಲವು ಸಮಸ್ಯೆಗಳ ಬಗ್ಗೆ ಉತ್ತರ ಪಡೆಯಲು ಆಯುಕ್ತರನ್ನು ನೇರವಾಗಿ ಮತ್ತು ದೂರವಾಣಿಯಲ್ಲಿ ‘ಪ್ರಜಾವಾಣಿ’ ಪ್ರತಿನಿಧಿ ಐದಾರು ಬಾರಿ ಸಂಪರ್ಕಿಸಿದರೂ ಅವರು ಸಮರ್ಪಕ ಉತ್ತರ ನೀಡಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.