ಪಾಲಿಕೆಯಿಂದಲೇ ವಾಯು ಮಾಲಿನ್ಯ

7

ಪಾಲಿಕೆಯಿಂದಲೇ ವಾಯು ಮಾಲಿನ್ಯ

Published:
Updated:

ಬೆಳಗಾವಿ: ನಗರವನ್ನು ಸ್ವಚ್ಛಗೊಳಿಸಬೇಕಾದ ಮಹಾನಗರಪಾಲಿಕೆಯ ಸಿಬ್ಬಂದಿಯೇ ವಾಯು ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುತ್ತದೆ ಎಂದು ಮಾರಾಟ ಬಂದ್ ಮಾಡಿರುವ  ಪಾಲಿಕೆ ಸಿಬ್ಬಂದಿ, ಇನ್ನೊಂದೆಡೆ ರಸ್ತೆ ಬದಿಯ ಕಸಕ್ಕೆ ಪ್ಲಾಸ್ಟಿಕ್ ಸಮೇತ ಬೆಂಕಿ ಹಚ್ಚುವ ಮೂಲಕ ಪರಿಸರವನ್ನು ಕಲುಷಿತಗೊಳಿಸುತ್ತಿದ್ದಾರೆ.ರಸ್ತೆ ಬದಿಗಳಲ್ಲಿ ಗಿಡಗಳಿಂದ ಉದುರುವ ಒಣ ಮತ್ತು ಹಸಿ ಎಲೆ, ಸಾರ್ವಜನಿಕರು ಎಸೆಯುವ ಪ್ಲಾಸ್ಟಿಕ್ ಹಾಗೂ ಹಾಳೆಗಳನ್ನು ನಗರದ ವಿವಿಧ ವಾರ್ಡ್‌ಗಳಲ್ಲಿ ವಾರಕ್ಕೆ ಒಂದರಿಂದ ಎರಡು ಬಾರಿ ಪಾಲಿಕೆ ಸಿಬ್ಬಂದಿ ಒಂದು ಕಡೆಗೆ ಗುಡ್ಡೆ ಹಾಕುತ್ತಾರೆ.ಹಾಗೆ ಒಂದೆಡೆ ಕೂಡು ಹಾಕುವ ಆ ವಸ್ತುಗಳನ್ನು ಲಾರಿಗಳಲ್ಲಿ ನಗರದ ಹೊರವಲಯದಲ್ಲಿರುವ ತ್ಯಾಜ್ಯ ಘಟಕಕ್ಕೆ ಸಾಗಿಸುವ ಗೋಜಿಗೆ ಪಾಲಿಕೆ ಸಿಬ್ಬಂದಿ ಹೋಗುವುದೇ ಇಲ್ಲ. ಅಲ್ಲಿಯೆ ಕಡ್ಡಿ ಕೊರೆದು ಬೆಂಕಿ ಹಚ್ಚಿ ಮುಂದಕ್ಕೆ ಸಾಗಿ ಬಿಡುತ್ತಾರೆ.ಬೆಳಗಿನ ಹೊತ್ತು ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪಾಲಿಕೆ ಸಿಬ್ಬಂದಿಯು ರಸ್ತೆಯುದ್ದಕ್ಕೂ ಕಸದ ಗುಂಪುಗಳಿಗೆ ಬೆಂಕಿ ಹಚ್ಚಿರುತ್ತಾರೆ. ಅದರಲ್ಲಿ ಪ್ಲಾಸ್ಟಿಕ್ ಚೀಲಗಳು ಹಾಗೂ ಹಸಿ ಎಲೆಗಳು ಇರುವುದರಿಂದ ಹೊಗೆ ದಟ್ಟವಾಗುತ್ತಾ ಹೋಗುತ್ತದೆ.ಬೆಳಗಾವಿಯು ಪರಿಸರ ಶುದ್ಧತೆಗೆ ಹೆಸರಾಗಿದೆ. ಆದರೆ ಪಾಲಿಕೆಯ ಸಿಬ್ಬಂದಿಯ ಕೈಚಳಕದಿಂದಾಗಿ ಪರಿಸರ ಹೊಗೆಮಯವಾಗುತ್ತದೆ. ಬೆಳಗಿನ ಹೊತ್ತು `ವಾಕಿಂಗ್~ ತೆರಳುವ ನೂರಾರು ಮಂದಿ ಹಿಡಿ ಶಾಪ ಹಾಕುತ್ತಾ, ಹೊಗೆಗೆ ಕೆಮ್ಮುತ್ತಾ ಮುಂದೆ ಸಾಗುತ್ತಿರುತ್ತಾರೆ.ಬೆಳಿಗ್ಗೆ ಪರಿಸರ ಚೆನ್ನಾಗಿ ಇರುತ್ತದೆ ಎಂದು ವಾಕಿಂಗ್ ಹೋಗುತ್ತೇವೆ. ಆದರೆ ರಸ್ತೆ ಬದಿಗಳಲ್ಲಿ ಹಚ್ಚಿರುವ ಬೆಂಕಿಯಿಂದ ಹೊಗೆ ತುಂಬಿರುತ್ತದೆ. ಹೀಗಾಗಿ ವಾಕಿಂಗ್ ಹೋಗುವುದೇ ವ್ಯರ್ಥವಾಗುತ್ತಿದೆ ಎನ್ನುತ್ತಾರೆ ಪ್ರದೀಪ ಕಟ್ಟಿಮನಿ.ತ್ಯಾಜ್ಯ ವಿಲೇವಾರಿಯನ್ನು ಮಹಾನಗರಪಾಲಿಕೆಯು ಬಹುತೇಕ ವಾರ್ಡ್‌ಗಳಲ್ಲಿ ಗುತ್ತಿಗೆಗೆ ನೀಡಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ ಬೆಳಗಿನ ಹೊತ್ತು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಹೇಗೆ ಕೆಲಸ ಮಾಡುತ್ತಾರೆ ಎನ್ನುವುದನ್ನು ನೋಡುವ ಪುರಸೊತ್ತು ಅಧಿಕಾರಿಗಳಿಗಿಲ್ಲ.ಕೆಲ ತಿಂಗಳುಗಳ ಹಿಂದೆ ಪಾಲಿಕೆ ಸಾಮಾನ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪವಾದಾಗ ಪಾಲಿಕೆ ಆರೋಗ್ಯಾಧಿಕಾರಿಗಳು ಮೊದಲು ಕಸಕ್ಕೆ ಎಲ್ಲಿಯೂ ಬೆಂಕಿ ಹಚ್ಚುತ್ತಿಲ್ಲ ಎಂದಿದ್ದರು. ಸದಸ್ಯರು ವಾದಕ್ಕಿಳಿದ ಮೇಲೆ, ಹೀಗಾಗುತ್ತಿದ್ದರೆ ಅದನ್ನು ತಡೆಗಟ್ಟಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಜಾರಿಯಾಗಿಲ್ಲ. ಅದರ ಪರಿಣಾಮವನ್ನು ನಾಗರಿಕರು ಅನುಭವಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry