ಗುರುವಾರ , ಮೇ 19, 2022
21 °C

ಪಾಲಿಕೆಹೇಳಿದ್ದೊಂದು, ಮಡಿದ್ದೊಂದು !

ಪ್ರಜಾವಾಣಿ ವಾರ್ತೆ/ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಉದನೂರು ಗ್ರಾಮದ ಸಮೀಪ ತ್ಯಾಜ್ಯ ವಿಲೇವಾರಿ ಕಾರ್ಯ ಆರಂಭಿಸುವ ಮೊದಲು ಮಹಾನಗರ ಪಾಲಿಕೆಯ ಅಧಿಕಾರಿಗಳು ಗ್ರಾಮಸ್ಥರಿಂದ ಒಪ್ಪಿಗೆ ಪಡೆದಿದ್ದಾರೆ. ಆಗ ಪಾಲಿಕೆ ಅಧಿಕಾರಿಗಳು ದೂರದರ್ಶನ ಮೂಲಕ ವೈಜ್ಞಾನಿಕ  ಪದ್ಧತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ತೋರಿಸಿ ಮೋಸ ಮಾಡಿದರು ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡುತ್ತೇವೆ ಎನ್ನುವುದು ಬರೀ ಕಾಗದದಲ್ಲಿ ಉಳಿದು ಹೋಯಿತು. ವೈಜ್ಞಾನಿಕವಾಗಿ ವಿಲೇವಾರಿ ಕೈಗೊಂಡಿದ್ದರೆ ಉದನೂರು ನೊಣಗಳ ತಾಣ, ರಣಹದ್ದು ಸಂಕುಲವನ್ನು ಸಾಕುವ ದುಃಸ್ಥಿತಿಗೆ  ಬರುತ್ತಿರಲಿಲ್ಲ. `ಮೊದಲೇ ಹೊರಗೆ ಹಾಕ್ಬೇಕಿತ್ತು' ಎಂದು ಗ್ರಾಮದ ಅನೇಕ ಮುಖಂಡರು ಆಕ್ರೋಶಭರಿತ ಮಾತುಗಳನ್ನಾಡುತ್ತಿದ್ದಾರೆ.ಈ ಹಿಂದೆ ಮಹಾನಗರ ಪಾಲಿಕೆ ಆಯುಕ್ತರಾಗಿದ್ದವರೆಲ್ಲರೂ ಉದನೂರು ಗ್ರಾಮಸ್ಥರ ಸಮಸ್ಯೆ ಪರಿಹರಿಸುವ ಬಗ್ಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು.ಆದರೆ ಯಾವುದು ಕಾರ್ಯರೂಪಕ್ಕೆ ಬಂದಿಲ್ಲ. ಒಳ್ಳೆಯ ಕೆಲಸಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶವನ್ನು ಗ್ರಾಮಸ್ಥರು ಹೊಂದಿದ್ದಾರೆ. ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ಆರಂಭದಲ್ಲಿ ಹೇಳಿದ್ದು ಒಂದು, ಈಗ ಆಗುತ್ತಿರುವುದು ಮತ್ತೊಂದು.

ಉದನೂರು ಗ್ರಾಮಕ್ಕೆ ಹೊಂದಿಕೊಂಡಿರುವ 28 ಎಕರೆ ಪ್ರದೇಶವು ಗೋಮಾಳ ಜಾಗ ಎಂದು ಕಂದಾಯ ಇಲಾಖೆ ಗುರುತಿಸಿತ್ತು.2002 ರಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಈ ಜಾಗವನ್ನು ತ್ಯಾಜ್ಯ ವಿಲೇವಾರಿಗೆ ಆಯ್ಕೆ ಮಾಡಿಕೊಂಡರು. ನಿಗದಿತ ಜಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಿದಾಗ ಗ್ರಾಮಸ್ಥರು ವಿರೋಧಿಸಿದರು. ;ಈ ಜಾಗದಲ್ಲಿ ಉದ್ಯಾನ ನಿರ್ಮಿಸಲಾಗುತ್ತಿದೆ' ಎಂದು ಪಾಲಿಕೆ ಅಧಿಕಾರಿಗಳು ಸಮಜಾಯಿಸಿ ನೀಡಿದರು.ದಿನ ಕಳೆದಂತೆ ತ್ಯಾಜ್ಯ ತಂದು ಹಾಕುವ ಯೋಜನೆ ಬಯಲಾಯಿತು. ವಿಧಿಯಿಲ್ಲದೆ ತ್ಯಾಜ್ಯ ವಿಲೇವಾರಿ ಯೋಜನೆಯನ್ನು ಅಧಿಕಾರಿಗಳು ಗ್ರಾಮಸ್ಥರಿಗೆ ವಿವರಿಸಿದರು.`ತ್ಯಾಜ್ಯ ವಿಲೇವಾರಿಗಾಗಿ ಬೃಹತ್ ಕಂಪೆನಿಯೊಂದು ಬರುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ಸಾಕಷ್ಟು ಉದ್ಯೋಗಾಕಾಶ ದೊರೆಯುವುದರೊಂದಿಗೆ ರೈತರ ಕೃಷಿಗೆ ಒಳ್ಳೆಯ ಗೊಬ್ಬರ ಕೂಡ ದೊರೆಯುತ್ತದೆ. ತ್ಯಾಜ್ಯವನ್ನು ಸಂಪೂರ್ಣ ವಿಲೇವಾರಿ ಮಾಡುವುದರಿಂದ ಯಾವುದೇ ಗಲೀಜು ಸ್ಥಳದಲ್ಲಿ ಉಳಿದುಕೊಳ್ಳುವುದಿಲ್ಲ' ಎಂದು ವಿವರಿಸುವ ವಿಡಿಯೋ ತುಣುಕುಗಳನ್ನು ಗ್ರಾಮಸ್ಥರಿಗೆ ತೋರಿಸಲಾಯಿತು. ಇದನ್ನೆಲ್ಲ ನೋಡಿದ ಉದನೂರು ಗ್ರಾಮಸ್ಥರು ಖುಷಿಯಾಗಿದ್ದರು.ಘನತ್ಯಾಜ್ಯ ನಿರ್ವಹಣೆಗಾಗಿ ರಾಜ್ಯ ಸರ್ಕಾರದ ಸೂಚನೆಯಂತೆ ಮಹಾನಗರ ಪಾಲಿಕೆ ಅಧಿಕಾರಿಗಳು ಒಳ್ಳೆಯ ಯೋಜನೆಯನ್ನು ಸಿದ್ಧಪಡಿಸಿದ್ದರು. ಇದಕ್ಕಾಗಿ ಸಮರ್ಪಕ ತಯಾರಿಯನ್ನು ಮಾಡಿಕೊಂಡಿದ್ದರು.ಯೋಜನೆ ಮಾತ್ರ ಇನ್ನೂ ಜಾರಿಯಾಗಿಲ್ಲ. ಪ್ರತಿನಿತ್ಯ 160 ಟನ್ ತ್ಯಾಜ್ಯವು ಯಾವುದೇ ಸಂಸ್ಕರಣೆಗೆ ಒಳಗಾಗದೆ ಬಂದು ಉದನೂರು ಹತ್ತಿರ ಸಂಗ್ರಹವಾಗುತ್ತಿದೆ.`ಉದನೂರು ಗ್ರಾಮದ ಮಧ್ಯೆದಿಂದ ತ್ಯಾಜ್ಯ ಸಾಗಿಸುವ ಮಾರ್ಗವನ್ನು ಮಹಾನಗರ ಪಾಲಿಕೆ ಬದಲಾಯಿಸಿದೆ. ಆದರೆ ಒತ್ತಾಯಪೂರ್ವಕವಾಗಿ ರೈತರ ಜಾಗವನ್ನು ಒತ್ತುವರಿ ಮಾಡಿಕೊಂಡು ಗ್ರಾಮದ ಹೊರವಲಯದಲ್ಲಿ ಮತ್ತೊಂದು ರಸ್ತೆ ನಿರ್ಮಿಸಿದ್ದಾರೆ' ಎನ್ನುವುದು ಗ್ರಾಮಸ್ಥರ ಆರೋಪ.ತ್ಯಾಜ್ಯ ಹಾಕುವುದಕ್ಕೆ ಅಡ್ಡಿಪಡಿಸಿದ ಗ್ರಾಮಸ್ಥರ ವಿರುದ್ಧ ಪೊಲೀಸ್ ಠಾಣೆಗೆ ಮಹಾನಗರ ಪಾಲಿಕೆ ಅಧಿಕಾರಿಗಳು ದೂರು ಸಲ್ಲಿಸಿದ್ದರು. ಗ್ರಾಮದ ಸಮಸ್ಯೆಗಾಗಿ ಹೋರಾಟ ಮಾಡಿ, ಹೈರಾಣರಾದವರ ಕಥೆ ಇನ್ನೊಂದು    ಬಗೆಯದ್ದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.