ಗುರುವಾರ , ಮೇ 13, 2021
38 °C

ಪಾಲಿಕೆ ಅಧಿಕಾರಿಯ ಪಾಸ್‌ವರ್ಡ್‌ಗೆ ಕನ್ನ!

ಪ್ರಜಾವಾಣಿ ವಾರ್ತೆ ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅಂತರರಾಷ್ಟ್ರೀಯ ಮಟ್ಟದ ಕಳ್ಳರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ಎಚ್. ನರೇಗಲ್ ಅವರ ಪಾಸ್‌ವರ್ಡ್‌ಗೆ ಕನ್ನ ಹಾಕಿದ್ದಾರೆ!ಪಾಸ್‌ವರ್ಡ್ ಕದ್ದು ಸಂದೇಶ ಕಳುಹಿಸಿ ಜನರಿಗೆ ಮೋಸ ಮಾಡಲು ಕಳ್ಳರು ಬೀಸಿದ ಜಾಲ ಯಶಸ್ವಿಯಾಗಲಿಲ್ಲ. ಆದ್ದರಿಂದ ಅಧಿಕಾರಿಯ ಸಂಪರ್ಕವಿರುವವರು `ಪಂಗನಾಮ~ ಹಾಕಿಸಿಕೊಳ್ಳುವುದು ತಪ್ಪಿದೆ. ಆದರೆ ಮೋಸ ಮಾಡಲು ಯತ್ನಿಸಿದವರನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿ ಮಾಡಬೇಕೆಂದು ಬಯಸಿರುವ ಅಧಿಕಾರಿ ಮಂಗಳವಾರ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರಿಗೆ ದೂರು ನೀಡಲು ಮುಂದಾಗಿದ್ದಾರೆ.ಸೈಬರ್ ಅಪರಾಧದ ಬಲಿಪಶು ಮಾಡಲು ಕಳ್ಳರು ಆರಿಸಿಕೊಂಡದ್ದು ಪಾಲಿಕೆಯ ಅಧಿಕೃತ ಇ-ಮೇಲ್ ಐಡಿ. ಪಾಲಿಕೆಯ ಕಾರ್ಯಕ್ರಮಗಳ ವರದಿಯನ್ನು ಮಾಧ್ಯಮಗಳಿಗೆ ನೀಡುವ, ಸರ್ಕಾರದ ವಿವಿಧ ಇಲಾಖೆಗಳಿಗೆ ಕಳುಹಿಸಿಕೊಡುವ ನರೇಗಲ್ ಅವರ ಇ-ಮೇಲ್ ಐಡಿ (prohdmc@yahoo.com) ಹಾಗೂ ಪಾಸ್‌ವರ್ಡ್ `ಹ್ಯಾಕ್~ ಮಾಡಿದ ಕಳ್ಳರು ಈ ಅಧಿಕಾರಿಯ ಗ್ರೂಪಿಂಗ್‌ನಲ್ಲಿರುವ ಎಲ್ಲರಿಗೂ ಸಂದೇಶವೊಂದನ್ನು ಕಳುಹಿಸಿದ್ದಾರೆ.ಆ ಸಂದೇಶ ಹೀಗಿತ್ತು:  `ನಾನು ನನ್ನ ಕುಟುಂಬದ ಸದಸ್ಯರೊಂದಿಗೆ ಈಗ ಫಿಲಿಪ್ಪೀನ್ಸ್‌ನ ಮನಿಲಾಗೆ ಬಂದಿದ್ದು ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದೇವೆ. ಕೆಲವು ದಿನ ಇಲ್ಲಿ ಆರಾಮವಾಗಿದ್ದ ನಮ್ಮ ಮೇಲೆ ನಿನ್ನೆ ರಾತ್ರಿ ಹಲ್ಲೆ ನಡೆದಿದ್ದು ಕೈಯಲ್ಲಿದ್ದ ಹಣ ಹಾಗೂ ವಸ್ತುಗಳೆಲ್ಲವನ್ನೂ ಕಸಿದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ನಾನು ದೇವರ ದಯೆಯಿಂದ ಬದುಕಿದ್ದೇನೆ. ಆದರೆ ಈಗ ಕೈ ಖಾಲಿಯಾಗಿದೆ. ಹೀಗಾಗಿ ನಿಮ್ಮ ಸಹಾಯ ಬೇಕಾಗಿದೆ.ನಿಮ್ಮ ಹಣವನ್ನು ನಾನು ಮನೆಗೆ ತಲುಪಿದ ಕೂಡಲೇ ವಾಪಸ್ ಮಾಡುವ ವ್ಯವಸ್ಥೆ ಮಾಡುತ್ತೇನೆ. ಈ ಸಂದೇಶ ಸಿಕ್ಕಿದ ಕೂಡಲೇ ನನ್ನನ್ನು ಸಂಪರ್ಕಿಸಿ. ಹಣವನ್ನು ಹೇಗೆ ಕಳುಹಿಸಬೇಕು ಎಂಬುದನ್ನು ತಿಳಿಸುತ್ತೇನೆ...~

ಈ ಸಂದೇಶ ಜಿಲ್ಲಾ ಮಟ್ಟದ ಕೆಲ ಅಧಿಕಾರಿಗಳಿಗೆ, ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳಿಗೆ ಹಾಗೂ ಪತ್ರಿಕಾ ಕಚೇರಿಗಳಿಗೆ ತಲುಪಿದೆ. ಅವರೆಲ್ಲರೂ ಸಂದೇಶ ಓದಿ ಅಧಿಕಾರಿ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿದ್ದಾಗ ನರೇಗಲ್ ಪಾಲಿಕೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು!ತಮ್ಮ ಅಧಿಕೃತ ಐಡಿ ಹಾಗೂ ಪಾಸ್‌ವರ್ಡ್‌ಗೆ ಕನ್ನ ಹಾಕಿರುವ ವಿಷಯವನ್ನು ಮರುದಿನ ತಿಳಿದ ನರೇಗಲ್, ಪಾಲಿಕೆ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

`ಇದು ಅಂತರಾರಾಷ್ಟ್ರೀಯ ಕದೀಮರ ತಂಡದ ಕೆಲಸ. ಹಣ ಮಾಡುವ ಉದ್ದೇಶದಿಂದ ಇದನ್ನು ಮಾಡಿದ್ದಾರೆ. ಎಚ್‌ಡಿಎಂಸಿ ಎಂದರೆ ಯಾವುದೋ ಬೃಹತ್ ಕಂಪನಿ ಎಂದು ತಿಳಿದು ಅದರ ಸಾರ್ವಜನಿಕ ಸಂಕರ್ಪ ಅಧಿಕಾರಿಯ `ಸಂಪರ್ಕ~ಗಳ ದುರುಪಯೋಗ ಪಡೆಯಲು ಪ್ರಯತ್ನಿಸಿದ್ದಾರೆ. ಸಂದೇಶ ನೋಡಿದ ಕೂಡಲೇ ಯಾರೂ ಹಣವನ್ನು ಕಳುಹಿಸಲು ಮುಂದಾಗದೇ ಇದ್ದುದರಿಂದ ಅವರ ತಂತ್ರ ಫಲಿಸಲಿಲ್ಲ~ ಎಂದು ನರೇಗಲ್ `ಪ್ರಜಾವಾಣಿ~ಗೆ ತಿಳಿಸಿದರು.`ನನ್ನ ಇ-ಮೇಲ್ ಐಡಿ ಹಾಗೂ ಪಾಸ್‌ವರ್ಡ್ ಕದ್ದು ಎಲ್ಲ ಸೆಂಟ್ ಐಟಂಗಳನ್ನು ಡಿಲಿಟ್ ಮಾಡಿ ಈ ಸಂದೇಶವನ್ನು ಕಳುಹಿಸಿದ್ದಾರೆ. ವಿಷಯ ತಿಳಿದ ಕೂಡಲೇ ನಾನು ಆ ಐಡಿಯನ್ನು ಲಾಕ್ ಮಾಡಿ ಈಗ ಬೇರೆ ಅಕೌಂಟ್‌ನಿಂದ ಸಂದೇಶಗಳನ್ನು ಕಳುಹಿಸುತ್ತಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ದೂರು ದಾಖಲಿಸಲಾಗುವುದು~ ಎಂದು ಅವರು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.