ಪಾಲಿಕೆ ಆಯುಕ್ತರಿಂದ `ರಾತ್ರಿ ಸಂಚಾರ'

7

ಪಾಲಿಕೆ ಆಯುಕ್ತರಿಂದ `ರಾತ್ರಿ ಸಂಚಾರ'

Published:
Updated:

ಬೆಂಗಳೂರು: `ನಗರದ ಕಸ ವಿಲೇವಾರಿ, ರಸ್ತೆ ಗುಂಡಿಗಳ ಸಮಸ್ಯೆ, ರಸ್ತೆ ದೀಪಗಳ ವ್ಯವಸ್ಥೆಯನ್ನು ಪರಿಶೀಲಿಸಲು ಇನ್ನು ಮುಂದೆ ಪ್ರತಿ ಶನಿವಾರ ಹಾಗೂ ರಜೆ ದಿನಗಳಲ್ಲಿ ನಗರದಲ್ಲಿ ರಾತ್ರಿ ವೇಳೆ ಪರಿಶೀಲನೆ ನಡೆಸಲಾಗುವುದು' ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಂಗಾಮಿ ಆಯುಕ್ತ ಸಿದ್ದಯ್ಯ ಹೇಳಿದರು.ಶನಿವಾರ ರಾತ್ರಿ ನಗರದ ವಿವಿಧ ಕಡೆ ಪರಿಶೀಲನಾ ಭೇಟಿ ನಡೆಸಿದ ಅವರು, `ನಗರದಲ್ಲಿ ಕಸದ ವಿಲೇವಾರಿ ಸೇರಿದಂತೆ ಮೂಲ ಸೌಕರ್ಯಗಳ ಸಮಸ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕಾರ್ಯಪ್ರವೃತ್ತರನ್ನಾಗಿ ಮಾಡಲು ಈ ಪರಿಶೀಲನಾ ಭೇಟಿ ನಡೆಸಲಾಗುತ್ತಿದೆ' ಎಂದರು.

`ಮುಂದಿನ ದಿನಗಳಲ್ಲಿ ಕಸದ ವಿಂಗಡಣೆಗೆ ಹೆಚ್ಚು ಒತ್ತು ನೀಡಲಾಗುವುದು. ಬೃಹತ್ ಪ್ರಮಾಣದಲ್ಲಿ ಕಸ ಉತ್ಪಾದನೆ ಮಾಡುವ ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಅಲ್ಲಿನ ಕಸವನ್ನು ಅಲ್ಲೇ ವಿಂಗಡಣೆ ಮಾಡಿ, ಸಂಸ್ಕರಣೆ ಮಾಡಲು ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದರು.`ಪರ್ಯಾಯ ಸ್ಥಳ ದೊರೆಯುವವರೆಗೆ ಮಂಡೂರಿನಲ್ಲಿ ಕಸ ಸುರಿಯುವುದು ಅನಿವಾರ್ಯ. ತ್ಯಾಜ್ಯ ಸಂಸ್ಕರಣೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ಸೇರಿದಂತೆ ವಿವಿಧ ಕಡೆಗಳಲ್ಲಿ ಒಂದು ಸಾವಿರ ಎಕರೆ ಜಮೀನಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ನಗರದ ಕಸದ ಸಮಸ್ಯೆ ಸದ್ಯದಲ್ಲೇ ಮುಗಿಯುವಂಥದ್ದಲ್ಲ. ಎರಡು ವರ್ಷಗಳು ಸರಿಯಾಗಿ ಕೆಲಸ ನಿರ್ವಹಿಸದರೆ ಕಸದ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದು' ಎಂದು ಅವರು ತಿಳಿಸಿದರು.ಮಹಾತ್ಮ ಗಾಂಧಿ ರಸ್ತೆಯಿಂದ ರಾತ್ರಿ ಹತ್ತು ಗಂಟೆಗೆ ಪರಿಶೀಲನೆ ಆರಂಭಿಸಿದ ಅವರು, ಇಂದಿರಾ ನಗರ, ಸಂಜಯನಗರ, ಮೇಖ್ರಿ ವೃತ್ತ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆಸಿ ಕಸ ವಿಲೇವಾರಿ ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

`ಇಷ್ಟು ದಿನ ನಿದ್ರೆ ಮಾಡ್ತಿದ್ರಾ'

`ಇಷ್ಟು ದಿನ ಕೆಲಸ ಮಾಡದೇ ನಿದ್ರೆ ಮಾಡ್ತಿದ್ರಾ. ನೀವೇನು ಕಾಡಿನಿಂದ ಬಂದವರಾ. ಕೆಲಸ ಮಾಡಲು ನಿಮಗೆ ಮನಸ್ಸಿಲ್ಲವಾ'

-ಹೀಗೆ ತಮ್ಮ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಇರುವ ಅಧಿಕಾರಿಗಳನ್ನು ಸಿದ್ದಯ್ಯ ತರಾಟೆಗೆ ತೆಗೆದುಕೊಂಡರು.

ಆಯುಕ್ತರ ಭೇಟಿಯ ಕಾರಣಕ್ಕಾಗಿ ರಾತ್ರಿ ಹತ್ತು ಗಂಟೆಗೆ ಮಹಾತ್ಮ ಗಾಂಧಿ ರಸ್ತೆ, ಡಿಕಿನ್‌ಸನ್ ರಸ್ತೆ, ಕಬ್ಬನ್ ರಸ್ತೆ, ಸಿಎಂಎಚ್ ರಸ್ತೆ, ಟ್ರಿನಿಟಿ ರಸ್ತೆಗಳಲ್ಲಿ ಪಾದಚಾರಿ ಮಾರ್ಗದಲ್ಲಿ ರಾಶಿ ಬಿದ್ದಿದ್ದ ಕಸ ಮತ್ತು ಮಣ್ಣನ್ನು ಅಧಿಕಾರಿಗಳು ತೆಗೆಸುತ್ತಿದ್ದರು. ಇದನ್ನು ನೋಡಿದ ಸಿದ್ದಯ್ಯ ವಿಳಂಬ ಮಾಡದೇ ಕಸ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry