ಬುಧವಾರ, ನವೆಂಬರ್ 20, 2019
20 °C

ಪಾಲಿಕೆ ಆಯುಕ್ತರಿಗೆ ನೋಟಿಸ್: ಬೊಮ್ಮಾಯಿ

Published:
Updated:

ಗುಲ್ಬರ್ಗ: ಬೇಜವಾಬ್ದಾರಿಯಿಂದ ವರ್ತಿಸಿದ ಗುಲ್ಬರ್ಗ ಮಹಾನಗರ ಪಾಲಿಕೆಯ ಆಯುಕ್ತರ ಸಹಿತ  ಹಿರಿಯ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಸಚಿವರ ನಗರ ಭೇಟಿ ಸಂದರ್ಭ ಪಾಲಿಕೆಯ ಹಿರಿಯ ಅಧಿಕಾರಿಗಳು ಗೈರಾಗಿದ್ದರೆ, ಸ್ಥಳದಲ್ಲಿದ್ದ ಅಧಿಕಾರಿಗಳ ಬಳಿ ಮಾಹಿತಿ ಇರಲಿಲ್ಲ.100 ಕೋಟಿ: ಮುಖ್ಯಮಂತ್ರಿ ವಿಶೇಷ ಅನುದಾನದ ನೂರು ಕೋಟಿ ರೂಪಾಯಿ ಕಾಮಗಾರಿಯ ಪರಿಶೀಲನೆಗೆ ಉನ್ನತ ಮಟ್ಟದ ಮೇಲ್ವಿಚಾರಣಾ ಸಮಿತಿ ರಚಿಸಲಾಗುವುದು. ಈ ಸಮಿತಿ ನಿರಂತರ ಪರಿಶೀಲನೆ ನಡೆಸಲಿದೆ. 15 ದಿನಕ್ಕೊಮ್ಮೆ ತಾವು ಸ್ವತಃ ಪರಿಶೀಲಿಸುವುದಾಗಿ ಸಚಿವ ಬೊಮ್ಮಾಯಿ ಭರವಸೆ ನೀಡಿದರು.ಮುಖ್ಯಮಂತ್ರಿ ವಿಶೇಷ ಅನುದಾನದ ಎರಡನೇ ಕಂತಿನ ನೂರು ಕೋಟಿ ರೂಪಾಯಿಯಲ್ಲಿ 25 ಕೋಟಿ ರೂಪಾಯಿಯ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಇನ್ನು 25 ಕೋಟಿ ರೂಪಾಯಿ ಮಂಜೂರಾಗಿದೆ ಎಂದರು.ಮೊದಲ ಕಂತಿನ ನೂರು ಕೋಟಿ ರೂಪಾಯಿಯಲ್ಲಿ 38.5 ಕೋಟಿ ರೂಪಾಯಿ ಭೂ ಸ್ವಾಧೀನಕ್ಕೆ ಮೀಸಲು ಇರಿಸಲಾಗಿತ್ತು. ಹೀಗಾಗಿ ಹೆಚ್ಚಿನ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಹಣವನ್ನು ವಿಶೇಷ ಅನುದಾನದ ಮೂಲಕ ಮುಖ್ಯಮಂತ್ರಿ ನೀಡುವುದಾಗಿ ತಿಳಿಸಿದ್ದಾರೆ ಎಂದರು.ಕೊಳಚೆ-ಕುಡಿಯುವ ನೀರು: `ಕೊಳಚೆ ನೀರು ನೇರವಾಗಿ ಭೀಮಾ ನದಿಗೆ ಸೇರುವುದನ್ನು ತಪ್ಪಿಸಲು ಹೊಸತಾದ ಕೊಳಚೆ ನೀರು ನಿರ್ವಹಣಾ ಘಟಕ ತೆರೆಯಲಾಗುವುದು. ಅಲ್ಲಿ ತನಕ 67 ಲಕ್ಷದಲ್ಲಿ ಪರ್ಯಾಯ ಚರಂಡಿ ನಿರ್ಮಿಸಿ ಕೊಳಚೆ ನೀರನ್ನು ಹರಿಸಲಾಗುವುದು~ ಎಂದು ಸಚಿವರು ಹೇಳಿದರು.ಕುಡಿಯುವ ನೀರು ಪೂರೈಕೆ ಮತ್ತು ಸರಬರಾಜು ಯೋಜನೆಯನ್ನು ಒಂದೇ ಸಂಸ್ಥೆಯ ಉಸ್ತುವಾರಿಗೆ ನೀಡಲಾಗುವುದು. ಆ ಮೂಲಕ ಸಮಸ್ಯೆಗಳು ಇಳಿಕೆಯಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.ಹಸಿರು-ಝೂ: ಗುಲ್ಬರ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು ಮೂರು ಲಕ್ಷ ಗಿಡ ನೆಡಲು ಯೋಜನೆ ರೂಪಿಸಲಾಗಿದೆ. ಈ ಮಳೆಗಾಲದಲ್ಲಿ ತ್ವರಿತಗತಿಯಲ್ಲಿ ನಾಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಿರು ಪ್ರಾಣಿ ಸಂಗ್ರಹಾಲಯ ಸ್ಥಳಾಂತರವನ್ನು ಕೈ ಬಿಡುವಂತೆ ಸಂಬಂಧಿತ ಸಚಿವರಿಗೆ ಮನವಿ ಮಾಡುತ್ತೇನೆ ಎಂದರು.ರಾಜ್ಯದ ಎಲ್ಲ ಕಾಡಾಗಳಿಗೆ ಸ್ವತಂತ್ರ ಎಂಜಿನಿಯರ್‌ಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.ಕ್ಯಾನ್ಸರ್: ಹೈದರಾಬಾದ್ ಕರ್ನಾಟಕ ಪ್ರದೇಶದ ಜನತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ತನಕ ಪ್ರಾದೇಶಿಕ ಕ್ಯಾನ್ಸರ್ ಆಸ್ಪತ್ರೆಯನ್ನು ಮುಂದುವರಿಸಲಾಗುವುದು. ಸಂಬಂಧಿತ ಸಚಿವರು, ಕಿದ್ವಾಯಿ ಅಧಿಕಾರಿಗಳು, ವೈದ್ಯರ  ಜೊತೆ ಚರ್ಚೆ ನಡೆಸಿ, ಮೂರು ದಿನಗಳ ಒಳಗೆ ಸ್ಥಳಾಂತರ ಆದೇಶ ರದ್ದು ಮಾಡುವುದಾಗಿ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)