ಪಾಲಿಕೆ ಆಯುಕ್ತ ಎತ್ತಂಗಡಿ!

ಶುಕ್ರವಾರ, ಮೇ 24, 2019
29 °C

ಪಾಲಿಕೆ ಆಯುಕ್ತ ಎತ್ತಂಗಡಿ!

Published:
Updated:

ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆಗೆ ಆಯುಕ್ತರಾಗಿದ್ದ ಮನೋಜ್ ಜೈನ್ ಅವರನ್ನು ಸರ್ಕಾರವು ಯಾವುದೇ ಸದ್ದುಗದ್ದಲವಿಲ್ಲದೆ ರಾಯಚೂರಿಗೆ ವರ್ಗಾವಣೆ ಮಾಡಿದೆ.ಉತ್ತರ ಪ್ರದೇಶದ ಮಸ್ಸೂರಿಗೆ ಆಗಸ್ಟ್ 19ರಿಂದ ಹದಿನೈದು ದಿನ ತರಬೇತಿಗೆ ತೆರಳಿದ್ದ ಮನೋಜ್ ಜೈನ್, ಮರಳುತ್ತಿದ್ದಂತೆಯೆ ವರ್ಗಾವಣೆ ಆದೇಶ ನೀಡಲಾಗಿದೆ. `ಐದು ದಿನಗಳ ಹಿಂದೆಯೇ ಪಾಲಿಕೆ ಆಯುಕ್ತ ಸ್ಥಾನದಿಂದ ಮನೋಜ್ ಜೈನ್ ಬಿಡುಗಡೆ ಪಡೆದಿದ್ದಾರೆ~ ಎಂದು ಜಿಲ್ಲಾಧಿಕಾರಿ ಡಾ. ವಿಶಾಲ ಆರ್. ಖಚಿತಪಡಿಸಿದ್ದಾರೆ.ರಾಯಚೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ)ಯಾಗಿ ಗುರುವಾರ ಮನೋಜ್ ಜೈನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಾಯಚೂರು ಕಚೇರಿ ಮೂಲಗಳು ತಿಳಿಸಿವೆ.ವರ್ಗಾವಣೆಗೆ ಕಾರಣ: ಮುಖ್ಯಮಂತ್ರಿಗಳ ರೂ. 100 ಕೋಟಿ ವಿಶೇಷ ಯೋಜನೆಯು ಗುಲ್ಬರ್ಗ ನಗರದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಮೂರು ತಿಂಗಳ ಹಿಂದೆಯೇ ಪಾಲಿಕೆ ಆಯುಕ್ತರ ವಿರುದ್ಧ ಗರಂ ಆಗಿದ್ದರು.ಆನಂತರ ಗುಲ್ಬರ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲೆಲ್ಲ ಸಚಿವ ಬೊಮ್ಮಾಯಿ ಅವರು ಮಹಾನಗರದಲ್ಲಿನ ಕಾಮಗಾರಿಗಳನ್ನು ವೀಕ್ಷಿಸುತ್ತಿದ್ದರು. ಮೂರು ತಿಂಗಳಾದರೂ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ ಎನ್ನಲಾಗುತ್ತಿದ್ದು, ಸಚಿವರ ಈ ಅಸಮಾಧಾನವು ಆಯುಕ್ತ ಜೈನ್ ಎತ್ತಂಗಡಿಗೆ ಕಾರಣವಾಗಿದೆ ಎನ್ನಲಾಗಿದೆ.ಹೈಕೋರ್ಟ್ ಸಂಚಾರಿ ಪೀಠದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದ ಪ್ರತಿಯೊಬ್ಬ ಸಚಿವರು ಮಹಾನಗರ ಪಾಲಿಕೆ ಬಗ್ಗೆ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದ್ದರು. `ಗುಲ್ಬರ್ಗದಲ್ಲೊಂದು ಮಹಾನಗರ ಪಾಲಿಕೆ ಇದೆ~ ಎನ್ನುವುದೇ ಅನುಮಾನ ಎಂದು ನಗರದ ಸಮಸ್ಯೆಗಳನ್ನು ವೀಕ್ಷಿಸಿದ ನಂತರ ಬಹುತೇಕ ಉನ್ನತ ಅಧಿಕಾರಿಗಳು ಹೇಳಿಕೆ ನೀಡಿದ್ದರು.ನಗರದಲ್ಲಿ ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಈಚೆಗೆ ಪಾಲಿಕೆ ಹಾಗೂ ಜಲಮಂಡಳಿ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಗುಲ್ಬರ್ಗ ಸಮೀಪದ ಕಟ್ಟಿ ಸಂಗಾವಿಯಲ್ಲಿ ನೀರೆತ್ತುವ ಪಂಪ್ ಕೆಟ್ಟಿದ್ದರಿಂದ, ಅದನ್ನು ದುರಸ್ತಿಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪಾಲಿಕೆ ಹಾಗೂ ಜಲಮಂಡಳಿ ನಡುವೆ ಸಾಕಷ್ಟು ಅಸಮಾಧಾನ ಭುಗಿಲೆದ್ದಿತ್ತು. ಅಧಿಕಾರಿಗಳು ಪರಸ್ಪರ ದೋಷಾರೋಪಣೆ ಮಾಡಿಕೊಂಡು, ನೀರು ಪೂರೈಸದೆ ಜನರನ್ನು ಸಂಕಷ್ಟದಲ್ಲಿ ಮುಳುಗಿಸಿದ್ದರು. ಈ ಸಂಕಷ್ಟದ ನಡುವೆಯೇ ಪಾಲಿಕೆ ಆಯುಕ್ತ ಮನೋಜ್ ಜೈನ್ 15 ದಿನ ರಜೆಯ ಮೇಲೆ ತೆರಳಿದ್ದರು. ಮೂಲ ಸೌಕರ್ಯ ಸಮಸ್ಯೆ ಪರಿಹರಿಸಲು ಸಾಧ್ಯವಾಗದುದು,  ಅನುದಾನ ನೀಡಿದರೂ ಕಾಮಗಾರಿ ಅನುಷ್ಠಾನಕ್ಕೆ ತ್ವರಿತ ಕ್ರಮ ಕೈಗೊಳ್ಳಲಿಲ್ಲ ಎನ್ನುವುದನ್ನೂ  ಸರ್ಕಾರ ಗಮನಿಸಿದಂತಿದೆ.

ಅನಿಶ್ಚಿತ ಸ್ಥಿತಿಯಲ್ಲಿ ಪಾಲಿಕೆ: ಉನ್ನತ ಹುದ್ದೆಗಳು ಸೇರಿದಂತೆ `ಡಿ~ ದರ್ಜೆ ನೌಕರರ ಕೊರತೆ ಅನಭವಿಸುತ್ತಿರುವ ಗುಲ್ಬರ್ಗ ಮಹಾನಗರ ಪಾಲಿಕೆ ಇದೀಗ ಆಯುಕ್ತರು ಸಹ ಇಲ್ಲದೆ ಅನಿಶ್ಚಿತ ಸ್ಥಿತಿ ಎದುರಿಸುತ್ತಿದೆ. ಖಾಲಿಯಾಗಿರುವ ಪಾಲಿಕೆ ಆಯುಕ್ತರ ಸ್ಥಾನಕ್ಕೆ ಇನ್ನೂ ಯಾರನ್ನು ನೇಮಕ ಮಾಡಿಲ್ಲ.ಸದ್ಯ ಪಾಲಿಕೆಯಲ್ಲಿ ಹೊರಗುತ್ತಿಗೆ ನೌಕರರಿಂದ ಹಗಲಿರುಳು ಕೆಲಸ ತೆಗೆದುಕೊಳ್ಳುವ ಕ್ರಮ ಮುಂದುವರಿದಿದೆ. ಕೆಲಸದ ಅನುಭವ ಪರಿಗಣಿಸಿ, ಮುಂಬರುವ ದಿನಗಳಲ್ಲಿ ಪಾಲಿಕೆ ನೌಕರರನ್ನಾಗಿ ನೇಮಿಸಿಕೊಳ್ಳಬಹುದು ಎಂದುಕೊಂಡು ಹೊರಗುತ್ತಿಗೆ ನೌಕರರು ಸಮರ್ಪಕ ಸಂಬಳವಿಲ್ಲದಿದ್ದರೂ ಮೇಲಧಿಕಾರಿಗಳ ಸೂಚನೆಗೆ ತಲೆ ಬಾಗುತ್ತಿದ್ದಾರೆ.ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಇದೀಗ ಪ್ರಭಾರ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದು, ನೂತನ ಆಯುಕ್ತರಿಗಾಗಿ ಕಾಯಬೇಕಾದ ಸ್ಥಿತಿ ಇದೆ.ಎಲ್ಲ ವಿಭಾಗಕ್ಕೂ ಸಿಬ್ಬಂದಿ ನೇಮಕಗೊಳ್ಳಲಿ: ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು, ಗುಲ್ಬರ್ಗ ಮಹಾನಗರದ ಸುಧಾರಣೆಗಾಗಿ ಪಾಲಿಕೆಯನ್ನು ಬಲಪಡಿಸಲು ಮುಂದಾದರೆ, ಮೊದಲು ಸಾಕಷ್ಟು ಸಿಬ್ಬಂದಿಯನ್ನು ನೇಮಕಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಆರು ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಇರುವ ಮಹಾನಗರಕ್ಕೆ ಆಯುಕ್ತ ಹುದ್ದೆಯೊಂದಿಗೆ ವಿವಿಧ ವಿಭಾಗಗಳಿಗೆ ಉಪ ಆಯುಕ್ತರನ್ನು ನೇಮಿಸಬೇಕು. ಅದರೊಂದಿಗೆ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು `ಡಿ~ ದರ್ಜೆ ನೌಕರರನ್ನು ನೇಮಕ ಮಾಡಿಕೊಳ್ಳಬೇಕೆಂಬ ಆಗ್ರಹ ಜನತೆಯದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry