ಪಾಲಿಕೆ ಕ್ರಮಕ್ಕೆ ಹೈಕೋರ್ಟ್‌ ಗರಂ

7

ಪಾಲಿಕೆ ಕ್ರಮಕ್ಕೆ ಹೈಕೋರ್ಟ್‌ ಗರಂ

Published:
Updated:

ಧಾರವಾಡ: ಸ್ಥಾಯಿ ಸಮಿತಿ ಅನು­ಮೋದನೆ ನೀಡಿದ್ದರೂ, ಕಟ್ಟಡ  ಪರ­ವಾನ­ಗಿ ನೀಡದ ಹುಬ್ಬಳ್ಳಿ–ಧಾರವಾಡ ಮಹಾ­ನಗರಪಾಲಿಕೆ ಕ್ರಮಕ್ಕೆ ಇಲ್ಲಿನ ಹೈಕೋರ್ಟ್‌ಪೀಠ ಗುರುವಾರ ತೀವ್ರ ಅತೃಪ್ತಿ ವ್ಯಕ್ತಪಡಿಸಿ, ನ್ಯಾಯಪೀಠದ ಮುಂದೆ ಹಾಜರಾಗಿದ್ದ ಪಾಲಿಕೆ ಜಂಟಿ ಆಯು­ಕ್ತರನ್ನು ತರಾಟೆಗೆ ತೆಗೆದು­ಕೊಂಡಿತು.ಸ್ಥಾಯಿ ಸಮಿತಿ ಪರವಾನಗಿ ನೀಡಲು ಅನುಮೋದನೆ ನೀಡಿ ಆರು ವರ್ಷಗಳು ಕಳೆದಿದ್ದರೂ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲು ನಿಮಗಿರುವ ತೊಂದರೆ­­ಗಳೇನು? ನಿಮ್ಮ ಸ್ಥಾಯಿ ಸಮಿತಿ ನೀಡಿರುವ ಆದೇಶವನ್ನು ಪಾಲಿಸಿ ಎಂದು ನ್ಯಾಯಾಲಯ ಹೇಳುತ್ತಿದೆ. ಇದಕ್ಕೆ ನ್ಯಾಯಾಲಯದ ಮತ್ತೊಂದು ಆದೇ­ಶದ ಅಗತ್ಯವಿಲ್ಲ. ಇದು ನಿಮ್ಮ ಅಧಿಕಾರಿಗಳು ಕೆಲಸ ಮಾಡುವ ರೀತಿಯನ್ನು ತೋರುತ್ತದೆ. ಆಯುಕ್ತರಿಗೆ ಸ್ಥಾಯಿ ಸಮಿತಿ ಆದೇಶವನ್ನು ತಿರ­ಸ್ಕರಿಸಲು ಅಧಿಕಾರವಿದೆಯೇ ಎಂದು ನ್ಯಾಯಮೂರ್ತಿ ಅರವಿಂದಕುಮಾರ ಅವರಿದ್ದ ಏಕಸದಸ್ಯಪೀಠ ಪ್ರಶ್ನಿಸಿತು.‘ನೀವು ಸಕಾರಾತ್ಮಕ ಕ್ರಮ ಕೈಗೊಳ್ಳದಿದ್ದರೆ ನಗರಾಭಿವೃದ್ಧಿ ಇಲಾ­ಖೆಯ ಪ್ರಧಾನ ಕಾರ್ಯದರ್ಶಿ­ಗಳಿಗೆ ನ್ಯಾಯಾ­ಲಯದ ಮುಂದೆ ಖುದ್ದು ಹಾಜರಾಗುವಂತೆ ನಿರ್ದೇಶನ ನೀಡ­ಬೇಕಾ­ಗುತ್ತದೆ. ವಿಳಂಬಕ್ಕೆ ಕಾರಣ­ರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡ­ಬೇಕಾ­ಗುತ್ತದೆ’ ಎಂದು ನ್ಯಾಯಪೀಠ ಒಂದು ಹಂತದಲ್ಲಿ ಎಚ್ಚರಿಕೆಯನ್ನೂ ನೀಡಿತು.ಹುಬ್ಬಳ್ಳಿಯ ಉಣಕಲ್‌ನ ಕಾಳಿ­ದಾಸನಗರದ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದ ವಿನಾಯಕ ಕೃಷ್ಣರಾವ್‌ ಕುಲಕರ್ಣಿ ಎನ್ನುವವರು ಕಟ್ಟಡ ನಿರ್ಮಾಣ ಮಾಡಲು ಅನುಮತಿ ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ತಿರಸ್ಕೃತವಾಗಿತ್ತು. ಇದನ್ನು ಪ್ರಶ್ನಿಸಿ ಸ್ಥಾಯಿ ಸಮಿತಿಗೆ ಮೇಲ್ಮನವಿ ಸಲ್ಲಿಸಿ­ದ್ದರು. ವಿಚಾರಣೆ ನಡೆಸಿದ್ದ ಸಮಿತಿ 2008ರ ಜುಲೈ 16ರಂದು ಪರವಾನಗಿ ನೀಡಲು ಅನುಮೋದನೆ ನೀಡಿತ್ತು. ಅಲ್ಲದೇ, ಅದೇ ಬಡಾವಣೆಯ ಕೆಲ ನಿವೇ­ಶನದಾರರು ಹೈಕೋರ್ಟ್‌ ಮೆಟ್ಟಿಲೇರಿ ಪರವಾನಗಿ ಪಡೆಯಲು ಆದೇಶ ಪಡೆದಿದ್ದರು.ಹೀಗಾಗಿ ಕೃಷ್ಣರಾವ್‌ ಕುಲ­ಕರ್ಣಿ ಸಮಿತಿ ಅನುಮೋದನೆ ಮತ್ತು ನ್ಯಾಯಾ­ಲಯದ ಆದೇಶದ ಹಿನ್ನೆಲೆ­ಯಲ್ಲಿ ತಮ್ಮ ಅರ್ಜಿ ಪರಿಗಣಿಸಿ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೋರಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯೂ ತಿರ­ಸ್ಕೃತಗೊಂಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿ­ದಾರರು ಹೈಕೋರ್ಟ್‌­­­ನಲ್ಲಿ ರಿಟ್‌ ಅರ್ಜಿ ದಾಖಲಿಸಿದ್ದಾರೆ.‘ಪಾಲಿಕೆ ಆಯುಕ್ತರು ರಜೆಯ ಮೇಲಿ­ರುವುದರಿಂದ, ಮರಳಿದ ನಂತರ ಅವರೊಂದಿಗೆ ಚರ್ಚಿಸಿ, ಸಕಾರಾತ್ಮಕ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಪರ ವಕೀಲರು ನ್ಯಾಯ­ಪೀಠಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಚಾ­ರಣೆಯನ್ನು ಇದೇ 20ಕ್ಕೆ ಮುಂದೂಡಿತು. ಅರ್ಜಿದಾರರ ಪರವಾಗಿ ಸೀಮಾ ಶಿವ ನಾಯಕ ಮತ್ತು ಪ್ರಮೋದ ಭಟ್‌ ವಕಾಲತ್ತು ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry