ಪಾಲಿಕೆ ಟೆಂಡರ್‌ಗೆ ಗುತ್ತಿಗೆದಾರನ ಮುನಿಸು...!

ಭಾನುವಾರ, ಜೂಲೈ 21, 2019
26 °C

ಪಾಲಿಕೆ ಟೆಂಡರ್‌ಗೆ ಗುತ್ತಿಗೆದಾರನ ಮುನಿಸು...!

Published:
Updated:

ಗುಲ್ಬರ್ಗ: ನಗರದಲ್ಲಿ ವಿವಿಧ ಕಾಮಗಾರಿಗಳನ್ನು ವಹಿಸಲು ಮಹಾನಗರ ಪಾಲಿಕೆ ಒಂದು ವರ್ಷದಿಂದ ಪ್ರಕಟಿಸುತ್ತಿರುವ ಟೆಂಡರ್‌ಗಳಿಗೆ ಅರ್ಜಿ ಸಲ್ಲಿಸಲು ಬಹುತೇಕ ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರಾಜ್ಯದ ಹಣಕಾಸು ನೆರವು (ಎಸ್‌ಎಫ್‌ಸಿ) ಮತ್ತು 100 ಕೋಟಿ ಅನುದಾನ ಯೋಜನೆಗಳನ್ನು ಜಾರಿಗೊಳಿಸುವುದು ಪಾಲಿಕೆಗೆ ದುಸ್ತರವಾಗಿ ಪರಿಣಮಿಸಿದೆ.ಚರಂಡಿ, ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳ ಕಾರ್ಯಯೋಜನೆ ನೆನೆಗುದಿಗೆ ಬಿದ್ದಿರುವ ಕಾರಣ, ಈ ಸಲದ ಮಳೆಗಾಲದಲ್ಲೂ ಕಳೆದ ಬಾರಿ ಕಾಣುತ್ತಿದ್ದ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

 

ಮಳೆ ನೀರಿನಿಂದ ಸಾಮಾನ್ಯವಾಗಿ ಜಲಾವೃತವಾಗುತ್ತಿದ್ದ ಪ್ರದೇಶಗಳಲ್ಲಿ ಮಾತ್ರ ಕಾಮಗಾರಿಗಳನ್ನು ಚುರುಕಾಗಿ ಜರುಗಿಸಲಾಗುತ್ತಿದೆ. ಈಗಾಗಲೇ ಮಳೆ ಸುರಿಯುತ್ತಿರುವುದರಿಂದ ಈ ಕಾಮಗಾರಿಗಳು ಅರ್ಧಕ್ಕೆ ಉಳಿಯಬಹುದು. ಹಿಂದಿನ ಒಂದು ವರ್ಷಾವಧಿಯಲ್ಲಿ ನಗರದ ವಿವಿಧ ಸಮಸ್ಯೆಗಳನ್ನು ಹೊಗಲಾಡಿಸಲು ಏಕೆ ಸಾಧ್ಯವಾಗಲಿಲ್ಲ.

 

`ಗಡ್ಡಕ್ಕೆ ಬೆಂಕಿ ಹೊತ್ತಿಕೊಂಡಾಗ ಮಾತ್ರ ಏಕೆ ಬಾವಿ ತೊಡಿಸುವ ಕೆಲಸ ಮಾಡುತ್ತಿದ್ದೀರಿ~ ಎನ್ನುವ ಪ್ರಶ್ನೆಗೆ ಮಹಾನಗರ ಪಾಲಿಕೆಯ ಆಯುಕ್ತ ಮನೋಜಕುಮಾರ್ ನೀಡಿದ ಉತ್ತರ ಹೀಗಿದೆ...`ಗುಲ್ಬರ್ಗದಲ್ಲಿ ಗುತ್ತಿಗೆದಾರರ ಕೊರತೆ ಇದ್ದು, ಕೈಯಲ್ಲಿರುವ ಕೆಲಸ ಮುಗಿಯುವ ತನಕ ಬೇರೆ ಕೆಲಸ ವಹಿಸಿಕೊಳ್ಳಲು ಇಲ್ಲಿನ ಗುತ್ತಿಗೆದಾರರು ಮುಂದೆ ಬರುವುದಿಲ್ಲ. ಗುಲ್ಬರ್ಗಕ್ಕೆ ಹೊರಗಿನ ಗುತ್ತಿಗೆದಾರರು ಭಾಗವಹಿಸುವುದಿಲ್ಲ. ಹೀಗಾಗಿ 100 ಕೋಟಿ ರೂಪಾಯಿ ಅನುದಾನ ಯೋಜನೆ, ಎಸ್‌ಎಫ್‌ಸಿ ಯೋಜನೆಗಳನ್ನು ಜಾರಿಗೊಳಿಸುವುದು ಕಷ್ಟವಾಗಿದೆ.ಇ-ಟೆಂಡರ್‌ಗೆ ಸ್ವಲ್ಪ ಪ್ರತಿಕ್ರಿಯೆ ಸಿಕ್ಕುತ್ತಿದೆ. ಏನೇ ಆಗಲಿ 2011ರ ಮಾರ್ಚ್ 31ರೊಳಗೆ ಬಹುತೇಕ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದರು.ಸಮಸ್ಯೆಯ ಮೂಲ: ಪಾಲಿಕೆ ಸದಸ್ಯರನ್ನು ಈ ಬಗ್ಗೆ ವಿಚಾರಿಸಿದಾಗ, `ಗುಲ್ಬರ್ಗದಲ್ಲಿ ಗುತ್ತಿಗೆದಾರರ ಕೊರತೆ ಇಲ್ಲ. ಕಾಮಗಾರಿಯನ್ನು ಪ್ಯಾಕೇಜ್ ರೂಪದಲ್ಲಿ ನೀಡದೆ, ಪ್ರತ್ಯೇಕವಾಗಿ ವಹಿಸಿದರೆ ಒಂದು ವರ್ಷದಲ್ಲಿ ಎಸ್‌ಎಫ್‌ಸಿ ಅಡಿಯಲ್ಲಿ ಎಲ್ಲ ಕಾಮಗಾರಿಗಳು ಅನುಷ್ಠಾನವಾಗುತ್ತವೆ~ ಎಂದರು.ಗುತ್ತಿಗೆದಾರರು ಏನಂತಾರೆ?: `ಮಹಾನಗರ ಪಾಲಿಕೆಯು ಹೊಸ ಹೊಸ ನಿಯಮಗಳನ್ನು ಹೇರುವುದರಿಂದ ಕಾಮಗಾರಿಯಲ್ಲಿ ಯಾವುದೇ ಲಾಭ ಬರುವುದಿಲ್ಲ. ಅಲ್ಲದೆ, ವಾಸ್ತವದ ದರಕ್ಕಿಂತ ಕಡಿಮೆ ದರದಲ್ಲಿ ಅಂದಾಜು ಪಟ್ಟಿ ತಯಾರಿಸಿ ಟೆಂಡರ್ ನೀಡಲಾಗುತ್ತದೆ. ಮುಖ್ಯವಾಗಿ ವಾರ್ಡ್ ವ್ಯಾಪ್ತಿಯಲ್ಲಿ ಗುಣಮಟ್ಟದ ಕಾರ್ಯ ಕೈಗೊಳ್ಳಲು ಪಾಲಿಕೆ ಸದಸ್ಯರ ಕಿರಿಕಿರಿ ಹೆಚ್ಚಾಗಿದೆ. ಹೀಗಾಗಿ ಪಾಲಿಕೆಯ ಕಾಮಗಾರಿ ಗುತ್ತಿಗೆ ಪಡೆಯುವುದು ದೊಡ್ಡ ತಲೆನೋವು ತಂದುಕೊಂಡಂತಾಗುತ್ತದೆ~ ಎನ್ನುವುದು ಹೆಸರು ಹೇಳಲಿಚ್ಚಿಸದ ಗುತ್ತಿಗೆದಾರನ ಅಭಿಮತ.ಕಾಮಗಾರಿಯಲ್ಲಿ `ರೆಡಿ ಮಿಕ್ಸ್ ಕಾಂಕ್ರೀಟ್-ಆರ್‌ಎಂಸಿ~ ಬಳಸಬೇಕೆನ್ನುವುದು ಪಾಲಿಕೆಯ ಹೊಸ ನಿಯಮ. ಆದರೆ, ಗುಲ್ಬರ್ಗದಲ್ಲಿ ಒಂದು ಕಡೆಯಲ್ಲಿ ಮಾತ್ರ ಆರ್‌ಎಂಸಿ ದೊರೆಯುತ್ತಿದ್ದು, ಇದರ ಗುಣಮಟ್ಟದ ಮೇಲೆ ಗುತ್ತಿಗೆದಾರರಿಗೆ ನಂಬಿಕೆ ಇಲ್ಲ. ಕಾಮಗಾರಿ ಪೂರ್ಣಗೊಂಡ 24 ತಿಂಗಳಿನ ಬಳಿಕ ಪಾಲಿಕೆಯು ಟೆಂಡರ್ ಬಿಲ್ ಪಾವತಿಸುವುದರಿಂದ, ಅದರೊಳಗೆ ಕಾಮಗಾರಿ ಕಳಪೆಯಾದರೆ ಹಣ ಮುಳುಗಿ ಹೋಗುತ್ತದೆ.ಕಣ್ಮುಂದೆ ತಯಾರಾಗುವ ಕಾಂಕ್ರೀಟ್ ಮೇಲೆ ನಂಬಿಕೆ ಇಡದೆ ಪಾಲಿಕೆಯು ಆರ್‌ಎಂಸಿ ಹೋಗಿರುವುದರಿಂದ ಟೆಂಡರ್‌ಗೆ ಯಾವ ಗುತ್ತಿಗೆದಾರರೂ ಅರ್ಜಿ ಹಾಕುತ್ತಿಲ್ಲ. ಆರ್‌ಎಂಸಿ ಗುಣಮಟ್ಟದ ಹೊಣೆಯನ್ನು ಪಾಲಿಕೆ ಹೊತ್ತುಕೊಳ್ಳುವುದಾದರೆ, ಎಲ್ಲ ಗುತ್ತಿಗೆದಾರರು ಅರ್ಜಿ ಹಾಕುವುದಕ್ಕೆ ಮುಂದೆ ಬರುತ್ತಾರೆ.ಸದ್ಯಕ್ಕೆ ಸುರಪುರ, ಶಹಾಪುರ ಭಾಗದ ಗುತ್ತಿಗೆದಾರರು ಟೆಂಡರ್ ಪಡೆಯುತ್ತಿದ್ದಾರೆ. ಕಾಲಕ್ರಮೇಣ ಅವರಿಗೂ ವಾಸ್ತವದ ಅರಿವು ಬರುತ್ತದೆ. ಗುಲ್ಬರ್ಗದಲ್ಲಿ ಗುತ್ತಿಗೆದಾರರಿಗೆ ಕೊರತೆ ಇಲ್ಲ. ಆದರೆ, ಸಿಮೆಂಟ್ ದರ ಮತ್ತು ಕಬ್ಬಿಣದ ದರ ಬದಲಾಗಿರುವುದನ್ನು ಪರಿಗಣಿಸಿ ಟೆಂಡರ್ ಮೊತ್ತ ನೀಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ನಷ್ಟದಲ್ಲಿ ಕೆಲಸ ಮಾಡಲು ಗುತ್ತಿಗೆದಾರರು ಮುಂದೆ ಬರುವುದಿಲ್ಲ ಎನ್ನುವುದು ಇನ್ನೊಬ್ಬ ಗುತ್ತಿಗೆದಾರನ ಅನಿಸಿಕೆ.ಸಿವಿಲ್ ಕಾಮಗಾರಿ ವಹಿಸಿಕೊಳ್ಳಲು ಗುಲ್ಬರ್ಗ ಮಹಾನಗರ ಪಾಲಿಕೆಯಲ್ಲಿ ಒಟ್ಟು 150 ನೋಂದಾಯಿತ ಗುತ್ತಿಗೆದಾರರಿದ್ದಾರೆ.ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಎ. ಪೀರ್ ಹೇಳುವಂತೆ, `ಇ-ಟೆಂಡರ್‌ನಲ್ಲಿ ಅರ್ಜಿಗಳು ಬರುತ್ತಿವೆ. ಈಗ ನಿಧಾನವಾಗಿ ಕಾಮಗಾರಿಗಳನ್ನು ವಹಿಸಲಾಗುತ್ತಿದೆ. ಆರ್‌ಎಂಸಿ ಕಡ್ಡಾಯ ಮಾಡಿರುವುದರಿಂದ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲು ಮುಂದೆ ಬರುತ್ತಿಲ್ಲ ಎನ್ನುವ ಸಂಗತಿ ಗೊತ್ತಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲೇ ಹೆಚ್ಚಿನ ಸಮಯ ಹೋಗುತ್ತಿದೆ. ಹೀಗಾಗಿ ಯೋಜನೆ ಅನುಷ್ಠಾನ ನಿಧಾನವಾಗಿದೆ~ ಎಂದರು.ಸಮಸ್ಯೆಗಳು ದ್ವಿಗುಣ: ಮಳೆಯಿಂದ ಜಲಾವೃತವಾಗುವ ಪ್ರದೇಶದಿಂದ ನೀರು ಹರಿದು ಹೋಗಲು ವ್ಯವಸ್ಥೆ ಮಾಡದಿದ್ದರೆ, ವರ್ಷದಿಂದ ವರ್ಷಕ್ಕೆ ಆ ತಗ್ಗು ಪ್ರದೇಶದ ವ್ಯಾಪ್ತಿ ದ್ವಿಗುಣವಾಗುತ್ತ ಹೋಗುತ್ತದೆ. ಆದರೆ, ಪಾಲಿಕೆಯು ಅಂದಾಜಿಸಿದ ಯೋಜನಾ ವೆಚ್ಚ ಸ್ಥಿರವಾಗಿ ಉಳಿಯುತ್ತದೆ. ಗುತ್ತಿಗೆ ವಹಿಸುವ ಕೆಲಸ ಮಾತ್ರ ಮುಂದೂಡುತ್ತಾ ಹೋಗುವುದರಿಂದ ಸಮಸ್ಯೆಗಳು ದ್ವಿಗುಣಗೊಂಡು, ನಂತರ ಕೈಗೊಳ್ಳುವ ಕಾಮಗಾರಿಗಳಿಂದ ಪೂರ್ಣ ಪರಿಹಾರ ದೊರೆಯುವುದಿಲ್ಲ.ನಗರದಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣವೇ ಪರಿಹಾರ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದರೆ ಎಲ್ಲರಿಗೂ ಅನುಕೂಲ. ವಾಸ್ತವ ನೆಲೆಗಟ್ಟಿನ ವೆಚ್ಚದಲ್ಲಿ ಗುತ್ತಿಗೆ ವಹಿಸಿದರೆ, ಗುಣಮಟ್ಟದ ಕಾಮಗಾರಿಗಳು ನಡೆಯುತ್ತವೆ. ಪಾಲಿಕೆಯು ಈ ಬಗ್ಗೆ ಗಂಭೀರವಾಗಿ ಯೋಚಿಸಿ  ಮುಂದುವರಿಯಬೇಕೆಂಬ ಕೋರಿಕೆ ಗುತ್ತಿಗೆದಾರರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry