ಶುಕ್ರವಾರ, ಮೇ 20, 2022
26 °C

ಪಾಲಿಕೆ ನಿರ್ಲಕ್ಷ್ಯ: ಮನೆಗೆ ನುಗ್ಗಿದ ಟ್ಯಾಂಕ್ ನೀರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಾನಗರ ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರಿಂದ ಓವರ್‌ಹೆಡ್ ಟ್ಯಾಂಕ್‌ಗೆ ತುಂಬಿಸಬೇಕಾಗಿದ್ದ ಕುಡಿಯುವ ನೀರು ಸಮೀಪದ ಮನೆಗೆ ನುಗ್ಗಿ ಮನೆಮಂದಿಯೆಲ್ಲ ಬುಧವಾರ ಇಡೀರಾತ್ರಿ ಜಾಗರಣೆ ಮಾಡಿದ ಘಟನೆ ಎಸ್.ಬಿ. ಮಹಾವಿದ್ಯಾಲಯದ ಪಕ್ಕದ ವಿದ್ಯಾನಗರದಲ್ಲಿ ನಡೆದಿದೆ.ಮಧ್ಯರಾತ್ರಿ ಸುಮಾರು 2 ಗಂಟೆಗೆ ಓವರ್‌ಹೆಡ್ ಟ್ಯಾಂಕ್ ಭರ್ತಿಯಾಗಿ ನೀರು ಹೊರಗೆ ಬೀಳಲಾರಂಭಿಸಿತು. ಕೂಡಲೇ ನೀರು ಪೂರೈಕೆಯನ್ನು ಸ್ಥಗಿತಗೊಳಿಸಬೇಕಾದ ಸಿಬ್ಬಂದಿ ಟ್ಯಾಂಕ್ ಹತ್ತಿರ ಇರಲೇ ಇಲ್ಲ. ನೀರು ಕಂಪೌಂಡ್‌ನಿಂದ ಹೊರಗೆ ಹರಿದು, ತಗ್ಗು ಪ್ರದೇಶದಲ್ಲಿರುವ ಗುರುರಾಜ ಕುಲಕರ್ಣಿ ಅವರ ಮನೆಗೆ ನುಗ್ಗಿತು.ಟ್ಯಾಂಕ್ ನೀರು ಬೀಳುವ ರಭಸವನ್ನು, ಮಳೆ ಬೀಳುತ್ತಿರಬಹುದು ಎಂದು ಭಾವಿಸಿದ ಗುರುರಾಜ ಹಾಗೂ ಮನೆಮಂದಿಯೆಲ್ಲ ಆರಾಮ ಮಲಗಿದ್ದರು. ಎಲ್ಲರೂ ಪಲ್ಲಂಗ ಮೇಲೆ ಮಲಗಿಕೊಂಡಿದ್ದರಿಂದ 2.30ರ ತನಕ ಮನೆಯಲ್ಲಿ ನೀರು ತುಂಬಿಕೊಂಡಿರುವುದು ಗೊತ್ತಾಗಿಲ್ಲ. ಅನಂತರ ಗಾಬರಿಗೊಂಡು ಮನೆಬಾಗಿಲು ತೆಗೆದು ನೋಡಿದಾಗ ಸತ್ಯ ಗೊತ್ತಾಗಿದೆ. ಗುರುರಾಜ ದಂಪತಿ, ಮಕ್ಕಳು ಹಾಗೂ ಹಿರಿಯ ವಯಸ್ಸಿನ ಪಾಲಕರು ಇಡೀರಾತ್ರಿ ಸಂಕಷ್ಟ ಅನುಭವಿಸುವ ಪರಿಸ್ಥಿತಿಗೆ ಈಡಾದರು.ನೀರು ಪೂರೈಕೆಯನ್ನು ಸ್ಥಗಿತಗೊಳಿಸುವುದಕ್ಕೆ ಸ್ಥಳದಲ್ಲಿ ಸಿಬ್ಬಂದಿ ಇಲ್ಲದ್ದರಿಂದ ಗುರುರಾಜ ಅವರು ಸ್ನೇಹಿತರಿಗೆ ಫೋನ್ ಮಾಡಿದರು. ಬೆಳಗಾಗುವ ಹೊತ್ತಿಗೆ ನೀರು ಬರುವುದು ಸ್ಥಗಿತಗೊಂಡ ಬಳಿಕ, ಮತ್ತೆ ಮನೆಮಂದಿಯೆಲ್ಲ ಮೊಣಕಾಲುದ್ದ ತುಂಬಿಕೊಂಡಿದ್ದ ನೀರನ್ನು ಎತ್ತಿಹಾಕಿದ್ದಾರೆ.`ಹಿಂದೆಂದೂ ಈ ರೀತಿ ಆಗಿರಲಿಲ್ಲ. ಹಗಲಿನ ಹೊತ್ತಿನಲ್ಲಿ ನೀರು ಬೀಳಲಾರಂಭಿಸಿದರೆ ಗೊತ್ತಾಗುತ್ತಿತ್ತು. ಪಾಲಿಕೆಯವರು ಸರಿಯಾಗಿ ಕೆಲಸ ಮಾಡದೇ ಇರುವುದರಿಂದ ನಮ್ಮ ಮನೆ ತುಂಬೆಲ್ಲ ನೀರು ತುಂಬಿಕೊಂಡಿದೆ. ಘಟನೆ ನಡೆದ ನಂತರವೂ ಯಾವ ಪಾಲಿಕೆ ಸಿಬ್ಬಂದಿಯು ಮನೆ ಬಳಿ ಬಂದಿಲ್ಲ. ಪಾಲಿಕೆ ಮೇಯರ್ ಅವರಿಗೆ ಮನವಿ ಕೊಟ್ಟು ಬಂದಿದ್ದೇವೆ~ ಎಂದರು ಗುರುರಾಜ ಅಳಲು ತೋಡಿಕೊಂಡರು.ಟ್ಯಾಂಕ್ ತುಂಬಿಕೊಳ್ಳುವುದು ನೀರು ಹೊರಗೆ ಬೀಳುವುದು ಹೊಸತಲ್ಲ. ಆದರೆ ಹೊರಗೆ ಬೀಳುವ ನೀರು ಸೇರಬೇಕಾದ ಜಾಗಕ್ಕೆ ಸೇರುವ ವ್ಯವಸ್ಥೆ ಮಾಡಬೇಕಿದ್ದ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ. ಓವರ್‌ಹೆಡ್ ಟ್ಯಾಂಕ್‌ಗೆ ನೀರು ತುಂಬಿಸುವಾಗಲಾದರೂ ಸಿಬ್ಬಂದಿ ಎಚ್ಚರ ವಹಿಸಬೇಕಿತ್ತು.

 

ಈ ಘಟನೆ ನಡೆಯಲು ಕಾರಣವಾದ ಸಿಬ್ಬಂದಿ ವಿರುದ್ಧ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಓವರ್‌ಹೆಡ್ ಟ್ಯಾಂಕ್ ನಿರ್ವಹಿಸುವ ಸಿಬ್ಬಂದಿ ಜಾಗರೂಕತೆ ಕೆಲಸ ಮಾಡುವಂತೆ ತಾಕೀತು ಮಾಡಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.