ಪಾಲಿಕೆ ಬಜೆಟ್‌ಗೆ ಅನುಮೋದನೆ ಪಡೆಯಲು ವಿಫಲ

7

ಪಾಲಿಕೆ ಬಜೆಟ್‌ಗೆ ಅನುಮೋದನೆ ಪಡೆಯಲು ವಿಫಲ

Published:
Updated:

ಬೆಂಗಳೂರು:  `ಅಕ್ಟೋಬರ್ ತಿಂಗಳು ಕಳೆಯುತ್ತಾ ಬಂದರೂ ಬಿಬಿಎಂಪಿಯ 2011-12ನೇ ಸಾಲಿನ ಬಜೆಟ್‌ಗೆ ಸರ್ಕಾರದ ಅನುಮೋದನೆ ಪಡೆಯುವಲ್ಲಿ ಬಿಜೆಪಿ ಆಡಳಿತ ವಿಫಲವಾಗಿದ್ದು, ಅಭಿವೃದ್ಧಿ ಕುಂಠಿತವಾಗಿದೆ~ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ಆರೋಪಿಸಿದರು.`ಆ.18ರಂದು ಬಜೆಟ್ ಮಂಡಿಸಿದ ಬಿಜೆಪಿ ಆಡಳಿತವು, ಸೆ.3ಕ್ಕೆ ಸಭೆಯ ಅನುಮೋದನೆ ಪಡೆಯಿತು. ಬಳಿಕ ಸೆ. 28ರಂದು ಸರ್ಕಾರದ ಅನುಮೋದನೆಗಾಗಿ ಕಳುಹಿಸಿಕೊಟ್ಟಿದೆ. ಬಜೆಟ್ ಮಂಡನೆಯಾದ 40 ದಿನಗಳ ಬಳಿಕ ಸರ್ಕಾರದ ಅನುಮೋದನೆಗೆ ಕಳುಹಿಸಿಕೊಡುವ ಮೂಲಕ ಸಾಕಷ್ಟು ವಿಳಂಬ ಮಾಡಿರುವುದು ಅನುಮಾನ ಮೂಡಿಸಿದೆ~ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.`2011-12ನೇ ಸಾಲಿನಲ್ಲಿ ರೂ 9,315 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಏಳು ತಿಂಗಳ ಅವಧಿಯಲ್ಲಿ ಸಂಗ್ರಹವಾಗಿರುವುದು ರೂ 1,878 ಕೋಟಿ (ಶೇ 20) ಮಾತ್ರ. ಉಳಿದ ಐದು ತಿಂಗಳಲ್ಲಿ ಶೇ 80ರಷ್ಟು ಆದಾಯ ಸಂಗ್ರಹಿಸಲು ಸಾಧ್ಯವೆ~ ಎಂದು ಪ್ರಶ್ನಿಸಿದರು.`ಹಾಗೆಯೇ ಪ್ರಸಕ್ತ ಸಾಲಿನಲ್ಲಿ 9,398 ಕೋಟಿ ರೂಪಾಯಿ ವೆಚ್ಚ ಮಾಡುವ ಅಂದಾಜು ಇದ್ದು, ಈಗಾಗಲೇ 2004 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಪಾಲಿಕೆಯ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ~ ಎಂದರು.`ವಿಪತ್ತು ನಿರ್ವಹಣೆ ಹಾಗೂ ತುರ್ತು ಕಾಮಗಾರಿಗಳಿಗೆ ಪ್ರಸಕ್ತ ಸಾಲಿನಲ್ಲಿ ಕಾಯ್ದಿರಿಸಲಾಗಿದ್ದ ರೂ 85 ಕೋಟಿ ಅನುದಾನದಡಿ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ ಈಗಾಗಲೇ ಜಾಬ್‌ಕೋಡ್ ನೀಡಲಾಗಿದೆ. ಆದರೆ ಬಜೆಟ್ ಅನುಮೋದನೆಗೆ ಮುನ್ನವೇ ಜಾಬ್‌ಕೋಡ್ ನೀಡಿರುವುದು ಅನುಮಾನ ಮೂಡಿಸಿದೆ~ ಎಂದರು.`ಈಗಾಗಲೇ ಜಾಬ್‌ಕೋಡ್ ನೀಡಿರುವುದರಿಂದ ಮುಂದೆ ವಿಪತ್ತು ಸಂಭವಿಸಿದರೆ ತುರ್ತು ಪರಿಹಾರ ಕಾರ್ಯವನ್ನು ಯಾವ ಅನುದಾನದಲ್ಲಿ ಕೈಗೊಳ್ಳಲಾಗುತ್ತದೆ ಎಂಬುದೇ ಪ್ರಮುಖ ಪ್ರಶ್ನೆ~ ಎಂದು ಹೇಳಿದರು.`ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಡಿ.ವಿ. ಸದಾನಂದಗೌಡ ಅವರು ಬೆಂಗಳೂರು ಅಭಿವೃದ್ಧಿಗೆ ಗಮನ ನೀಡಿಲ್ಲ. ನಗರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಲು ಒತ್ತು ನೀಡದಿರುವುದು ದುರದೃಷ್ಟಕರ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry