ಪಾಲಿಕೆ ವಶಕ್ಕೆ ಡಾ. ಗಂಗಲ್ ಆಸ್ಪತ್ರೆ ಕಟ್ಟಡ

7

ಪಾಲಿಕೆ ವಶಕ್ಕೆ ಡಾ. ಗಂಗಲ್ ಆಸ್ಪತ್ರೆ ಕಟ್ಟಡ

Published:
Updated:

ಹುಬ್ಬಳ್ಳಿ: ನಗರದ ಹೊಸೂರು ವೃತ್ತದಲ್ಲಿ ನಿರ್ಮಿಸಿದ್ದ , ಸಂಕೀರ್ಣದಲ್ಲಿ ಡಾ.ಎಚ್.ಟಿ. ಗಂಗಲ್ ಅವರ ಆಸ್ಪತ್ರೆಗೆ ನೀಡಲಾಗಿದ್ದ ಮಹಾನಗರ ಪಾಲಿಕೆ ಒಡೆತನದ 40 ಮಳಿಗೆಗಳನ್ನು ಸರ್ಕಾರದ ಆದೇಶದಂತೆ ಪಾಲಿಕೆ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದುಕೊಂಡರು.`ಡಾ. ಗಂಗಲ್ ಆಸ್ಪತ್ರೆ ವ್ಯವಸ್ಥಾಪಕರು ಕರಾರಿನ ಪ್ರಕಾರ ಪಾಲಿಕೆಗೆ ಬಾಡಿಗೆ ತುಂಬಿರಲಿಲ್ಲ. ಹೀಗಾಗಿ 2010ರ ಅಕ್ಟೋಬರ್ 19ರಂದು ಎಲ್ಲ ಮಳಿಗೆಗಳನ್ನು ಯಥಾಸ್ಥಿತಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಬಾಡಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಎಲ್ಲೆಡೆ ಪಾಲಿಕೆ ಪರವಾಗಿಯೇ ತೀರ್ಪು ಬಂದಿದ್ದು, ಸರ್ಕಾರದ ಆದೇಶ ಪ್ರಕಾರ ಕಟ್ಟಡವನ್ನು ವಶಕ್ಕೆ ಪಡೆಯುತ್ತಿದ್ದೇವೆ~ ಎಂದು ಕಾರ್ಯಾಚರಣೆ ಉಸ್ತುವಾರಿ ಹೊತ್ತಿದ್ದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಬಿ. ಪಾಟೀಲ ವಿವರಿಸಿದರು.ತುಕ್ಕುಹಿಡಿದ ಎಕ್ಸ್-ರೇ ಯಂತ್ರ, ಜನರೇಟರ್, ಪ್ರಯೋಗಾಲಯ ಸಾಮಗ್ರಿ, ಗ್ರಂಥಾಲಯ, ಪೀಠೋಪಕರಣಗಳು ಅಲ್ಲಿಯ ಮಳಿಗೆಗಳಲ್ಲಿ ತುಂಬಿದ್ದವು. ಎಲ್ಲೆಲ್ಲೂ ಜೇಡರ ಬಲೆ ಕಟ್ಟಿಕೊಂಡಿದ್ದು, ಭಾರಿ ದೂಳು ನೆಲದ ಮೇಲೆ ಇತ್ತು. ಸುಮಾರು 25ಕ್ಕೂ ಅಧಿಕ ಕಾರ್ಮಿಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೆಲ್ಲ ಮುಖಗವಸು ಒದಗಿಸಲಾಗಿತ್ತು.`ಮೊದಲ ಮತ್ತು ಎರಡನೇ ಮಹಡಿಯಲ್ಲಿ ಹರಡಿಕೊಂಡಿರುವ ಈ 40 ಮಳಿಗೆಗಳು ಒಟ್ಟಾರೆ 15,659 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಡಾ. ಗಂಗಲ್ ಆಸ್ಪತ್ರೆ ವ್ಯವಸ್ಥಾಪಕರಿಂದ ಪಾಲಿಕೆಗೆ 63,39,583 ರೂಪಾಯಿ ಬಾಡಿಗೆ ಬರಬೇಕಿದೆ~ ಎಂದು ಪಾಲಿಕೆ ಅಧಿಕಾರಿ ಎಂ.ಎನ್. ಪುಟ್ಟಣ್ಣ `ಪ್ರಜಾವಾಣಿ~ಗೆ ತಿಳಿಸಿದರು.ಎಲ್ಲ ಮಳಿಗೆಗಳಲ್ಲಿದ್ದ ಸಾಮಗ್ರಿಗಳನ್ನು ಒಂದೇ ಕೋಣೆಯಲ್ಲಿ ಸಂಗ್ರಹಿಸಿ ಇಡಲಾಯಿತು. ಬಾಡಿಗೆದಾರರಿಗೂ ಮಳಿಗೆ ವಶಪಡಿಸಿಕೊಳ್ಳುವ ಮಾಹಿತಿಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಆಸ್ಪತ್ರೆಯನ್ನು ಪ್ರತಿನಿಧಿಸುವ ಒಬ್ಬ ವ್ಯಕ್ತಿಯೂ ಸ್ಥಳದಲ್ಲಿ ಹಾಜರಿರಲಿಲ್ಲ. ಪ್ರತಿ ತಿಂಗಳಿಗೆ ರೂ 2,000 ಬಾಡಿಗೆ ಕರಾರಿನ ಮೇರೆಗೆ ಈ 40 ಮಳಿಗೆಗಳನ್ನು 1970ರ ಜೂನ್ 28ರಿಂದ 1980ರ ಜೂನ್ 27ರವರೆಗೆ ಡಾ. ಗಂಗಲ್ ಅವರಿಗೆ ಬಾಡಿಗೆ ನೀಡಲಾಗಿತ್ತು. ಬಾಡಿಗೆ ನವೀಕರಣಕ್ಕೆ ಮತ್ತೆ ಅವರು ಅರ್ಜಿ ಸಲ್ಲಿಸಿದ್ದರಿಂದ ಶೇ 10ರಷ್ಟು ಸ್ಟಾಲೇಜ್ ಹೆಚ್ಚಿಸಿ, 1986ರ ಮಾರ್ಚ್ 31ರವರೆಗೆ ಬಾಡಿಗೆ ಮುಂದುವರಿಸಲಾಗಿತ್ತು.ಆಮೇಲೆ ಮತ್ತೆ ನವೀಕರಣಕ್ಕೆ ಅರ್ಜಿ ಬಂದಾಗ ಪಾಲಿಕೆ ವಾರ್ಷಿಕ ರೂ 1.20 ಲಕ್ಷ ಸ್ಟಾಲೇಜ್ ಶುಲ್ಕ ನಿಗದಿ ಮಾಡಿತ್ತು. ಅದಕ್ಕೆ ಒಪ್ಪದ ಡಾ. ಗಂಗಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಎಲ್ಲ ನ್ಯಾಯಾಲಯಗಳಲ್ಲಿ ಪಾಲಿಕೆ ಪರವಾಗಿಯೇ ತೀರ್ಪು ಬಂದರೂ ಡಾ. ಗಂಗಲ್ ಬಾಡಿಗೆ ಮೊತ್ತವನ್ನು ಪಾತಿಸದೆ ಉಳಿಸಿಕೊಂಡು ಬಂದಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.2005ರ ಫೆಬ್ರುವರಿ 25ರಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಟ್ಟಡವನ್ನು ಪಾಲಿಕೆ ವಶಕ್ಕೆ ತೆಗೆದುಕೊಳ್ಳಲು ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಧಾರದ ವಿರುದ್ಧವೂ ಡಾ. ಗಂಗಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗಲೂ ಪಾಲಿಕೆ ಪರವೇ ತೀರ್ಪು ಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟಡವನ್ನು ವಶಕ್ಕೆ ತೆಗೆದುಕೊಳ್ಳಲು ಆದೇಶಿಸಿದೆ ಎಂದು ಅವರು ಹೇಳಿದರು.`ಕಟ್ಟಡವನ್ನು ಈಗಷ್ಟೇ ವಶಕ್ಕೆ ಪಡೆದಿದ್ದೇವೆ. ಇದನ್ನು ಸಂಪೂರ್ಣವಾಗಿ ನವೀಕರಿಸಬೇಕಿದೆ. ಬಳಿಕ ಮತ್ತೆ ಈ ಕಟ್ಟಡವನ್ನು ಬಾಡಿಗೆ ನೀಡಬಹುದು~ ಎಂದು ತಿಳಿಸಿದರು.ವಶಕ್ಕೆ ಪಡೆದ ಇಡೀ ಘಟನಾವಳಿಯನ್ನು ಪಾಲಿಕೆ ಅಧಿಕಾರಿಗಳು ವಿಡಿಯೊ ಚಿತ್ರೀಕರಣ ಮಾಡಿಕೊಂಡರು. ಪ್ರತಿ ಕೋಣೆಗಳ ಸ್ಥಿತಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಯಿತು. ಅಧಿಕಾರಿಗಳಾದ ಎಸ್.ಎನ್. ಗಣಾಚಾರಿ, ವಿ.ಎಂ. ಹಿರೇಮಠ, ವಕೀಲರಾದ ಜಿ.ಆರ್.ರೋಣ, ಆರೋಗ್ಯಾಧಿಕಾರಿ ಡಾ. ಪ್ರಭು ಬಿರಾದಾರ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry