ಪಾಲಿಕೆ ವಿಸರ್ಜನೆಗೆ ಒತ್ತಾಯಿಸಿ ಪ್ರತಿಭಟನೆ

7

ಪಾಲಿಕೆ ವಿಸರ್ಜನೆಗೆ ಒತ್ತಾಯಿಸಿ ಪ್ರತಿಭಟನೆ

Published:
Updated:
ಪಾಲಿಕೆ ವಿಸರ್ಜನೆಗೆ ಒತ್ತಾಯಿಸಿ ಪ್ರತಿಭಟನೆ

ಬೆಳಗಾವಿ: ಕನ್ನಡ ವಿರೋಧಿ ಚಟುವಟಿಕೆ ನಡೆಯುತ್ತಿರುವ ಮಹಾನಗರ ಪಾಲಿಕೆಯನ್ನು ಕೂಡಲೇ ವಿಸರ್ಜಿಸಿ, ಮುಖ್ಯಮಂತ್ರಿಗಳು ಪಾಲಿಕೆಯ ಮೇಲೆ ಕನ್ನಡ ಬಾವುಟ ಹಾರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಒತ್ತಾಯಿಸಿದರು.ನಗರದಲ್ಲಿ ವೇದಿಕೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಬಳಿಕ ಪ್ರಭಾರಿ ಜಿಲ್ಲಾಧಿಕಾರಿ ಡಾ.ಅಜಯ ನಾಗ ಭೂಷಣ ಅವರಿಗೆ ಮನವಿ ಸಲ್ಲಿಸಿದ ಅವರು, ಕನ್ನಡಿಗರ ಹಾಗೂ ಮರಾಠಿಗರ ನಡುವೆ ದ್ವೇಷದ ಬೀಜವನ್ನು ಬಿತ್ತುತ್ತಿರುವ ಶಿವಸೇನೆ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಘಟನೆಗಳನ್ನು ಕೂಡಲೇ ನಿಷೇಧಿಸಿ, ಕಾರ್ಯಕರ್ತರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.ಮಹಾಜನ್ ವರದಿ ಪ್ರಕಾರ ಮಹಾರಾಷ್ಟ್ರದ ಜಟ್ಟಾ, ಅಕ್ಕಲಕೋಟೆ, ಶೋಲಾಪುರ ಮತ್ತಿತರ ಪ್ರದೇಶಗಳನ್ನು ಕೂಡಲೇ ಕರ್ನಾಟಕಕ್ಕೆ ಸೇರಿಸಬೇಕು. ಬೆಳಗಾವಿ ಗಡಿ ಭಾಗದಲ್ಲಿರುವ ಮರಾಠಿ ನಾಮಫಲಕಗಳನ್ನು ತೆರವುಗೊಳಿಸಿ ಕನ್ನಡ ನಾಮಫಲಕಗಳನ್ನು ಹಾಕಬೇಕು. ಬೆಳಗಾವಿಯಲ್ಲಿ ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.ಎಂಇಎಸ್ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ಮೇಯರ್ ಮಂದಾ ಬಾಳೇಕುಂದ್ರಿ ಹಾಗೂ ಉಪ ಮೇಯರ್ ರೇಣು ಕಿಲ್ಲೇಕರ ಅವರ ಸದಸ್ಯತ್ವ ರದ್ದುಗೊಳಿಸಿ, ಪಾಲಿಕೆಯನ್ನು ವಿಸರ್ಜಿಸಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಪ್ರತಿಕೃತಿ ದಹಿಸಿದ ಎಂಇಎಸ್ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು. ಕಂಬಾರರ ಮೇಲೆ ಅವಹೇಳನಕಾರಿಯಾಗಿ `ಸಾಮ್ನಾ~ ಪತ್ರಿಕೆಯಲ್ಲಿ ಬರೆದ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆಯನ್ನು ಕೇಂದ್ರ ಸರ್ಕಾರವು ದೇಶದ್ರೋಹಿ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ರಾಜ್ಯ ಬಂದ್‌ಗೆ ಕರೆ ನೀಡಿ ಉಗ್ರ ಹೋರಾಟ ನಡೆ ಸಲಾಗುವುದು ಎಂದು ಪ್ರವೀಣ ಶೆಟ್ಟಿ ಎಚ್ಚರಿಸಿದರು.ಬೃಹತ್ ಮೆರವಣಿಗೆ

ಮಹಾನಗರ ಪಾಲಿಕೆ ವಿಸರ್ಜನೆಗೆ ಆಗ್ರಹಿಸಿ ಕರವೇಯ ಸುಮಾರು ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೇಂದ್ರ ಬಸ್‌ನಿಲ್ದಾಣ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು, ಕೆಲ ಕಾಲ ಅಲ್ಲೇ ಧರಣಿ ಕುಳಿತರು.

ಡಾ.ಕಂಬಾರರ ವಿರುದ್ಧ ಅವಹೇ ಳನಕಾರಿಯಾಗಿ ಮಾತನಾಡಿದ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ವಿರುದ್ಧ ಘೋಷಣೆಗಳನ್ನು ಕೂಗಿದರು.ಠಾಕ್ರೆ ಭಾವಚಿತ್ರಕ್ಕೆ ಮಸಿ ಬಳಿದು, ಚಪ್ಪಲಿಹಾರ ಹಾಕಿ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು. ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳನ್ನು ನಿಷೇ ಧಿಸಬೇಕು ಎಂದು ಒತ್ತಾಯಿಸಿದರು.ಮೆರವಣಿಗೆಯಲ್ಲಿ ಕರವೇ ಪ್ರವೀಣ ಶೆಟ್ಟಿ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ರಣಗಟ್ಟಿಮಠ, ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ, ಕಿರಣ ಡಮಾಮಗರ, ರಾವಸಾಹೇಬ ಐಹೊಳೆ, ಮಹಾದೇವ ಕಿಚಡಿ, ದುಂಡು ಹಿರೇಮಠ, ಹುಲೆಪ್ಪ ಬಗನಾಳ, ಬಸವರಾಜ ಬಂಗಿ, ರಾಜು ಬೈ, ಉದಯ ಮಾಸ್ತಿಹೊಳಿಮಠ, ಬಸವರಾಜ ಕರೋಶಿ, ವಿನಾಯಕ ಡವಳಿ, ನಾಗಯ್ಯ ಕಲ್ಮಠ, ಗಂಗಾರಾಮ ನಾಯಕ ಮತ್ತಿತರರು ಪಾಲ್ಗೊಂಡಿದ್ದರು.ಕಾರ್ಯಕರ್ತರ ಬಂಧನ

ನಗರದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು, ಪ್ರಭಾರಿ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಹೊರಟರು.

ಕೋರ್ಟ್ ರಸ್ತೆಯಲ್ಲಿ ಹೊರಟಿದ್ದ ಕರವೇಯ ಸುಮಾರು ಇನ್ನೂರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.ನಾಲ್ಕು ಪೊಲೀಸ್ ವಾಹನಗಳಲ್ಲಿ ಕಾರ್ಯಕರ್ತರನ್ನು ತುಂಬಿಕೊಂಡು ಹೋಗಿ ನಗರದ ಹೊರವಲಯದ ಹುಬ್ಬಳ್ಳಿ ಮಾರ್ಗದಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry