ಪಾಲಿಕೆ ಶಾಲೆಗಳಲ್ಲಿ ಸೌಲಭ್ಯ ಕೊರತೆ

7

ಪಾಲಿಕೆ ಶಾಲೆಗಳಲ್ಲಿ ಸೌಲಭ್ಯ ಕೊರತೆ

Published:
Updated:

ಬೆಂಗಳೂರು: `ಸರ್ಕಾರಿ, ಅನುದಾನಿತ ಮತ್ತು ಮಹಾನಗರ ಪಾಲಿಕೆಯ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ~ ಎಂದು `ಸಿಕ್ರಂ~ ಸಂಸ್ಥೆಯ ಗಂಗಾಧರ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಸಹಯೋಗದಲ್ಲಿ ಸಂಸ್ಥೆಯು ನಗರದ ಐದು ವಾರ್ಡ್‌ಗಳಲ್ಲಿ ಅಂದರೆ, ಕೃಷ್ಣರಾಜಪುರ, ಚಾಮರಾಜಪೇಟೆ, ಶಿವಾಜಿನಗರ, ವಸಂತನಗರ ಹಾಗೂ ಪುಲಿಕೇಶಿನಗರದ ಸರ್ಕಾರಿ, ಅನುದಾನಿತ ಮತ್ತು ಮಹಾನಗರ ಪಾಲಿಕೆಯ ಒಟ್ಟು 47 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ನಡೆಸಲಾಯಿತು.ಸಮೀಕ್ಷೆಯಲ್ಲಿ ಪ್ರಮುಖವಾಗಿ ಮೂಲಭೂತ ಸೌಕರ್ಯ, ಹಾಜರಾತಿ, ದಾಖಲಾತಿ, ಮಧ್ಯಾಹ್ನದ ಬಿಸಿಯೂಟ ಮತ್ತು ಪ್ರೋತ್ಸಾಹ ಧನ ಹಾಗೂ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಸಂಗ್ರಹಿಸಲಾಯಿತು~ ಎಂದು ಮಾಹಿತಿ ನೀಡಿದರು.ಸೌಕರ್ಯಗಳ ಕೊರತೆ: `ಬಹುತೇಕ ಶಾಲಾ ಕಟ್ಟಡಗಳು ಹಳೆಯದಾಗಿದ್ದು, ಗಾಳಿ ಮತ್ತು ಬೆಳಕಿನ ವ್ಯವಸ್ಥೆಯಿರುವುದಿಲ್ಲ. ಕುಡಿಯುವ ನೀರು ಮತ್ತು ಶೌಚಾಲಯವೇ ಇಲ್ಲ. ಕೆಲವು ಕಡೆ ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯಗಳಿಲ್ಲ. ಕೆಲವು ಶಾಲೆಗಳಲ್ಲಿ ಸಾರ್ವಜನಿಕರ ಶೌಚಾಲಯವನ್ನು ಮಕ್ಕಳು ಬಳಸುತ್ತಿದ್ದಾರೆ~ ಎಂದರು.`ಬಹುತೇಕ ಶಾಲೆಗಳಲ್ಲಿ ಆಟದ ಮೈದಾನವಿಲ್ಲ. ನಾವು ಸಮೀಕ್ಷೆ ನಡೆಸಿದ 47 ಶಾಲೆಗಳಲ್ಲಿ ಗ್ರಂಥಾಲಯಕ್ಕೆಂದು ಪ್ರತ್ಯೇಕ ಕೊಠಡಿಯಿಲ್ಲ. ಗ್ರಂಥಾಲಯಕ್ಕೆಂದು ಸರ್ಕಾರ ಸರಬರಾಜು ಮಾಡಿರುವ ಪುಸ್ತಕಗಳನ್ನು ಮುಖ್ಯೋಪಾಧ್ಯಾಯರು ಕೊಠಡಿಯಲ್ಲಿರುವ ಬೀರುವಿನಲ್ಲಿ ಇಟ್ಟು ಬೀಗ ಹಾಕಿರುವುದು ಸಾಮಾನ್ಯವಾಗಿ ಕಂಡು ಬಂದಿತು~ ಎಂದು ವಿವರಿಸಿದರು.ಪ್ರೋತ್ಸಾಹ ಧನದ ವಿತರಣೆ: ಎಲ್ಲ ಶಾಲೆಗಳಲ್ಲೂ ಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಲಾಗುತ್ತದೆ. ಆದರೆ, ಮಕ್ಕಳ ಅಳತೆಗೆ ಅನುಗುಣವಾಗಿ ಸಮವಸ್ತ್ರವನ್ನು ನೀಡದ ಕಾರಣದಿಂದ ಮಕ್ಕಳು ಉಪಯೋಗಿಸಲು ಆಗುತ್ತಿಲ್ಲ. ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಅರ್ಹರಾಗಿದ್ದರೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿಲ್ಲ. ಇದಕ್ಕೆ ಕಾರಣ ಜಾತಿ ಪ್ರಮಾಣ ಪತ್ರ ಪಡೆಯಬೇಕಾಗಿರುವುದು. ಪೋಷಕರು ತಮ್ಮ ಸಮಯವನ್ನು ವ್ಯಯಿಸಿ ಪ್ರಮಾಣ ಪತ್ರವನ್ನು ತರಲು ಶಕ್ತರಾಗಿಲ್ಲ~ ಎಂದು ಹೇಳಿದರು.ಮಧ್ಯಾಹ್ನದ ಬಿಸಿಯೂಟ: ಇಸ್ಕಾಂ, ಮೌಸಿಂ, ಷರೀಫ್ ಫೌಂಡೇಶನ್ ಮತ್ತು ಅದಮ್ಯ ಚೇತನ ಮತ್ತು ಇನ್ನಿತರ ಪ್ರಮುಖ ಸಂಸ್ಥೆಗಳು ಮಧ್ಯಾಹ್ನದ ಬಿಸಿಯೂಟ ಸರಬರಾಜು ಮಾಡುತ್ತವೆ. ಆದರೆ, ಇಲ್ಲಿ ಸರಬರಾಜಾಗುವ ಊಟ ಗುಣಮಟ್ಟದಿಂದ ಕೂಡಿಲ್ಲ ಎಂಬುದು ಕಂಡು ಬಂದಿದೆ. ಅನ್ನ ಗಂಜಿಯಂತಿರುತ್ತದೆ ಇಲ್ಲವೇ ಗಟ್ಟಿಯಾಗಿರುತ್ತದೆ. ಸರ್ಕಾರ ನಿಗದಿಪಡಿಸಿದಂತೆ ಆಹಾರ ಪೂರೈಕೆಯಾಗುತ್ತಿಲ್ಲ~ ಎಂದು ಆಪಾದಿಸಿದರು.ಗೋಷ್ಠಿಯಲ್ಲಿ ಕಾರ್ಯಕರ್ತರಾದ ಚಿತ್ರಾ, ಮಾರ್ಗರೇಟ್, ಪ್ರಕಾಶ್ ,ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry