ಗುರುವಾರ , ಅಕ್ಟೋಬರ್ 17, 2019
28 °C

ಪಾಲಿಕೆ ಶಾಲೆ ಶಿಕ್ಷಣ ಇಲಾಖೆಯಡಿ ತರಲು ಚಿಂತನೆ

Published:
Updated:

ಬೆಂಗಳೂರು: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳು ನಡೆಸುತ್ತಿರುವ ಶಾಲೆ ಮತ್ತು ಕಾಲೇಜುಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಸೇರಿಸಲು ಚಿಂತನೆ ನಡೆಸಿದ್ದು, ವಿವಿಧ ಹಂತಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ ಸಮಾಲೋಚನೆ ಆರಂಭವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಮಂಗಳವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳು ಶಾಲೆ ಹಾಗೂ ಕಾಲೇಜುಗಳನ್ನು ನಡೆಸುತ್ತಿವೆ. ಸ್ಥಳೀಯ ಸಂಸ್ಥೆಗಳು ತಮ್ಮ ಮಿತಿಯೊಳಗೆ ಶಿಕ್ಷಣ ನೀಡುತ್ತಿರುವುದರಿಂದ ಗುಣಮಟ್ಟದ ಕೊರತೆ ಇದೆ. ಅದನ್ನು ತಪ್ಪಿಸಲು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಶಾಲೆ ಹಾಗೂ ಕಾಲೇಜುಗಳನ್ನು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ತರಲು ಯೋಚಿಸಲಾಗಿದೆ~ ಎಂದರು.ಶಿಕ್ಷಣ ಇಲಾಖೆಯಲ್ಲಿ ಶಾಲೆ ಮತ್ತು ಕಾಲೇಜುಗಳ ನಿರ್ವಹಣೆಗೆ ವಿವಿಧ ಹಂತಗಳಲ್ಲಿ ಸುಸಜ್ಜಿತ ವ್ಯವಸ್ಥೆ ಇದೆ. ಜಿಲ್ಲೆ, ವಿಭಾಗ, ವಲಯ, ತಾಲ್ಲೂಕು ಮಟ್ಟದಲ್ಲಿ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ ಮಹಾನಗರ ಪಾಲಿಕೆಗಳು, ನಗರ ಪಾಲಿಕೆಗಳು, ನಗರಸಭೆಗಳು ಮತ್ತಿತರ ನಗರ ಸ್ಥಳೀಯ ಸಂಸ್ಥೆಗಳ ಶಾಲೆ, ಕಾಲೇಜುಗಳ ನಿರ್ವಹಣೆಗೆ ಇಂತಹ ವ್ಯವಸ್ಥೆ ಇಲ್ಲ. ಇದರಿಂದಾಗಿ ಆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಅಲ್ಲಿಯೂ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಇಂತಹ ಕ್ರಮ ಅನಿವಾರ್ಯ ಎಂದು ಹೇಳಿದರು.`ಬೆಂಗಳೂರು ನಗರದ ಉಸ್ತುವಾರಿ ಸಚಿವರಾಗಿರುವ ಆರ್.ಅಶೋಕ ಅವರೊಂದಿಗೆ ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಶಾಲೆ, ಕಾಲೇಜುಗಳನ್ನು ನಡೆಸುತ್ತಿರುವ ನಗರ ಸ್ಥಳೀಯ ಸಂಸ್ಥೆಗಳ ಮೇಯರ್, ಉಪ ಮೇಯರ್, ಆ ಭಾಗದ ಶಾಸಕರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಮೊದಲು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರಲಾಗುವುದು. ನಂತರ ಪ್ರೌಢ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳನ್ನೂ ತರಲಾಗುವುದು~ ಎಂದರು.

Post Comments (+)