ಪಾಲಿಕೆ ಸದಸ್ಯ ಶಕೀಲ್ ಬಂಧನ

7

ಪಾಲಿಕೆ ಸದಸ್ಯ ಶಕೀಲ್ ಬಂಧನ

Published:
Updated:

ಬೆಂಗಳೂರು: ಪಾನಮತ್ತನಾಗಿ ಪಬ್ ಮಾಲೀಕನ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಬಿಎಂಪಿ ಭಾರತಿನಗರ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಶಕೀಲ್ ಅಹಮ್ಮದ್ (37) ಮತ್ತು ಅವರ ನಾಲ್ವರು ಸ್ನೇಹಿತರನ್ನು ಕಬ್ಬನ್‌ಪಾರ್ಕ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.ಸಲ್ಮಾನ್ ಅಲಿಯಾಸ್ ಶೂಟರ್ ಸಲ್ಮಾನ್ (29), ಐಸಾನ್ (32), ಖಾದಿರ್ (41) ಮತ್ತು ಫೈರೋಜ್ (36) ಇತರೆ ಬಂಧಿತ ಆರೋಪಿಗಳು. ಶಕೀಲ್ ಮತ್ತು ಸ್ನೇಹಿತರು ಮಂಗಳವಾರ ರಾತ್ರಿ ಪಾನಮತ್ತರಾಗಿ ಚರ್ಚ್‌ಸ್ಟ್ರೀಟ್‌ನ `ಲೇಸ್~ ಪಬ್‌ನ ಮಾಲೀಕ ನಹೀಮ್ ಅವರೊಂದಿಗೆ ಜಗಳವಾಡಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.ಆ ಐದು ಮಂದಿ ಪಾನಮತ್ತರಾಗಿ ರಾತ್ರಿ 11.20ರ ಸುಮಾರಿಗೆ ಕಾರಿನಲ್ಲಿ ಲೇಸ್ ಪಬ್‌ಗೆ ಬಂದರು. ಆ ವೇಳೆಗಾಗಲೇ ವಹಿವಾಟು ಮುಗಿದಿದ್ದರಿಂದ ನಹೀಮ್ ಪಬ್‌ನ ಬಾಗಿಲು ಮುಚ್ಚಿ ಮನೆಗೆ ಹೋಗಲು ಸಿದ್ಧರಾಗುತ್ತಿದ್ದರು. ಆದರೆ ಶಕೀಲ್ ಮತ್ತು ಸ್ನೇಹಿತರು ಪಬ್‌ನ ಬಾಗಿಲು ತೆರೆದು ಮದ್ಯ ನೀಡುವಂತೆ ತಾಕೀತು ಮಾಡಿದರು. ವಹಿವಾಟು ಮುಗಿದಿರುವುದರಿಂದ ಮದ್ಯ ನೀಡಲು ಸಾಧ್ಯವಿಲ್ಲ ಎಂದು ನಹೀಮ್ ಹೇಳಿದರು.ಇದರಿಂದ ಕೋಪಗೊಂಡ ಶಕೀಲ್, `ನಾನು ಯಾರು ಗೊತ್ತೇ? ಪಾಲಿಕೆ ಸದಸ್ಯನಿಗೆ ಮದ್ಯ ನೀಡುವುದಿಲ್ಲ ಎನ್ನುತ್ತೀಯ, ಕೊಲೆ ಮಾಡಿ ಬಿಡುತ್ತೇನೆ~ ಎಂದು ಬೆದರಿಕೆ ಹಾಕಿದ. ಆದರೂ ಅವರು ಪಬ್‌ನ ಬಾಗಿಲು ತೆರೆಯದಿದ್ದಾಗ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿ ಕೈಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲೇ ಇದ್ದ ಕಬ್ಬನ್‌ಪಾರ್ಕ್ ಠಾಣೆ ಪೊಲೀಸ್ ಸಿಬ್ಬಂದಿ ಮಧ್ಯ ಪ್ರವೇಶಿಸಿ ಶಕೀಲ್ ಮತ್ತು ಸ್ನೇಹಿತರನ್ನು ನಿಯಂತ್ರಿಸಲು ಯತ್ನಿಸಿದರು. ಆದರೆ ಅವರು ಪೊಲೀಸ್‌ರ ಮೇಲೂ ಹಲ್ಲೆ ನಡೆಸಿದ್ದಾರೆ.ಈ ಎಲ್ಲ ದೃಶ್ಯಗಳು ಪಬ್‌ನ ಮುಂಭಾಗದಲ್ಲಿ ಅಳವಡಿಸಿದ್ದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಆರೋಪಿಗಳನ್ನು ನಗರದ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಶಿವಾಜಿನಗರ ಠಾಣೆಯ ರೌಡಿ ಪಟ್ಟಿಯಲ್ಲಿ ಶಕೀಲ್‌ನ ಹೆಸರಿದೆ. ಕುಖ್ಯಾತ ರೌಡಿ ಕೋಳಿ ಫಯಾಜ್‌ನ ಅಣ್ಣನ ಮಗನಾದ ಆತ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1996ರಲ್ಲಿ ನಡೆದಿದ್ದ ಫರೂಕ್ ಎಂಬುವರ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಅಲ್ಲದೇ ಚರ್ಚ್‌ಸ್ಟ್ರೀಟ್‌ನಲ್ಲಿ 1997ರಲ್ಲಿ ನಡೆದಿದ್ದ ಬಾಂಬೆ ಹಮೀದ್ ಎಂಬುವರ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದ. ಶಿವಾಜಿನಗರದಲ್ಲಿ ಗುಲಾಬ್ ಎಂಬ ವ್ಯಾಪಾರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ. 2011ರ ಜನವರಿಯಲ್ಲಿ ಕೊಲೆಯಾದ ಪಾಲಿಕೆಯ ಮಾಜಿ ಸದಸ್ಯ ದಿವಾನ್ ಅಲಿಯ ಸಹಚರನಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮತ್ತೊಬ್ಬ ಆರೋಪಿ ಸಲ್ಮಾನ್ ಸಹ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದಾನೆ. ಕುಖ್ಯಾತ ವಾಹನ ಕಳ್ಳ ಎ.ಕೆ.ಸಿಂಗ್‌ನ (ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ) ಸಹಚರನಾಗಿದ್ದ ಆತನ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ಅಪಹರಣ ಮತ್ತು ಆಡುಗೋಡಿ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿವೆ.ಸಂಜಯನಗರ ಮುಖ್ಯರಸ್ತೆಯ ಅಶ್ವತ್ಥನಗರದ ಬಳಿ 2010ರ ಸೆಪ್ಟೆಂಬರ್‌ನಲ್ಲಿ ಪೊಲೀಸರು ಎ.ಕೆ.ಸಿಂಗ್‌ನನ್ನು ಅಡ್ಡಗಟ್ಟಿ ಬಂಧಿಸಲು ಮುಂದಾದಾಗ ಆತನ ಜತೆಗಿದ್ದ ಸಲ್ಮಾನ್ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಡಾ.ಜಿ.ರಮೇಶ್, ಕಬ್ಬನ್‌ಪಾರ್ಕ್ ಉಪ ವಿಭಾಗದ ಎಸಿಪಿ ದೇವರಾಜು ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry