ಶುಕ್ರವಾರ, ಜೂನ್ 25, 2021
29 °C

ಪಾಲಿಕೆ: ಸಿಎಂ ಸಕಾರಾತ್ಮಕ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ದಿನದ 24 ಗಂಟೆ ನಿರಂತರ ವಿದ್ಯುತ್ ಕಲ್ಪಿಸುವ ಹಾಗೂ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತಿಸಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ರಾಯಚೂರು ವಾಣಿಜ್ಯೋದ್ಯಮ ಸಂಘದ ನಿಯೋಗದ ಮನವಿಗೆ  ಮುಖ್ಯಮಂತ್ರಿಗಳು ಸಕಾರತ್ಮಕವಾಗಿ ಸ್ಪಂದನೆ ನೀಡಿದ್ದಾರೆ ಎಂದು ವಾಣಿಜ್ಯೋದ್ಯಮ ಸಂಘದ ಪ್ರಧಾನ ಕಾರ್ಯದರ್ಶಿ ತ್ರಿವಿಕ್ರಮ ಜೋಶಿ ಅವರು ತಿಳಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜುಂಡಪ್ಪ ವರದಿ ಅನುಷ್ಠಾನ ಹಾಗೂ ನೀರಾವರಿ ಯೋಜನೆ, ಮೂಲಭೂತ ಸೌಲಭ್ಯಗಳು ಸೇರಿದಂತೆ ಅನೇಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಳೆದ ವರ್ಷದ ರಾಜ್ಯ ಬಜೆಟ್‌ಗಿಂತ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸದಾನಂದಗೌಡ ಅವರು ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.ರಾಯಚೂರು ಮತ್ತು ಶಕ್ತಿನಗರದಲ್ಲಿ ಒಟ್ಟು ಜನಸಂಖ್ಯೆ ಮೂರು ಲಕ್ಷಕ್ಕೂ ಅಧಿಕವಾಗಿದೆ. ಈ ಎರಡನ್ನೂ ಸೇರಿಸಿ  ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತನೆಗಾಗಿ ನರಾಭಿವೃದ್ಧಿ ಇಲಾಖೆಗೆ ಸಂಘವು ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ನಕ್ಷೆ ಹಾಗೂ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ಕೋರಿದ್ದಾರೆ. ಮಹಾನಗರಪಾಲಿಕೆ ಪರಿವರ್ತನೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳನ್ನೊಂಡ ಸಭೆಯನ್ನು ನಡೆಸಲಾಗುವುದು. ನಗರಸಭೆಯನ್ನು ಮಹಾನಗರ ಪಾಲಕೆಯನ್ನಾಗಿ ಪರಿವರ್ತನೆಗೆ ಇನ್ನೂ 15ದಿನಗಳಲ್ಲಿ ಅಗತ್ಯ ದಾಖಲೆ, ನಕ್ಷೆಯನ್ನು ಸಲ್ಲಿಸಲಾಗುವುದು ಎಂದು ವಿವರಿಸಿದರು.ಏಷ್ಯಾದಲ್ಲಿ ಹತ್ತಿ ಮಾರುಕಟ್ಟೆ ಎರಡನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಮಾಡಬೇಕು ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಸೌಕರ್ಯ ಕಲ್ಪಿಸಬೇಕು ಎಂಬ ಮನವಿಯನ್ನು ಸಂಘವು ಮಾಡಿಕೊಂಡಿದೆ ಎಂದು ಹೇಳಿದರು.ಲಿಂಗಸುಗೂರಿನಲ್ಲಿ 250 ಎಕರೆ ಪ್ರದೇಶದಲ್ಲಿ ಗ್ರಾನೈಟ್ ಕ್ಲಸ್ಟರ್ ಸ್ಥಾಪನೆಗಾಗಿ ಹೈದರಾಬಾದ್ ಕರ್ನಾಟಕದಲ್ಲಿ ಏಪ್ರಿಲ್ ತಿಂಗಳಲ್ಲಿ  ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಕೈಗಾರಿಕೆ ಖಾತೆ ಸಚಿವರ ಮುರುಗೇಶ ನಿರಾಣಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.ಬಿಜಾಪೂರು- ರಾಯಚೂರು ಪ್ಯಾಸೆಂಜರ್ ರೈಲನ್ನು ವಿಸ್ತರಣೆ ಮಾಡಬೇಕು ಹಾಗೂ ರೈಲ್ವೆ ವಿಭಾಗದ ಪರಿವರ್ತನೆ ಸೇರಿದಂತೆ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್ ಮುನಿಯಪ್ಪ ಅವರಿಗೆ ಮನವಿ ಮಾಡಲಾಗಿದ್ದು, ಅವರೂ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.ರಾಯಚೂರು ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಜವಾಹರ ಜೈನ್,  ಎಸ್ ಕಮಲಕುಮಾರ್, ಮೈಲಾಪುರ ಎನ್ ಮೂರ್ತಿ, ಉದಯಕುಮಾರ ಯಾದಪಲದಿನ್ನಿ, ಸಾವಿತ್ರಿ ನಾಗರಾಜ, ಮಲ್ಲನಗೌಡ, ಹೇಮಣ್ಣ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.