ಪಾಲಿಕೆ ಹಗರಣ: ಸಿಬಿಐ ತನಿಖೆಗೆ ಒತ್ತಾಯ

7

ಪಾಲಿಕೆ ಹಗರಣ: ಸಿಬಿಐ ತನಿಖೆಗೆ ಒತ್ತಾಯ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2008-2011ರ ಅವಧಿಯಲ್ಲಿ ನಡೆದಿರುವ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಗರಣದ ಹಿಂದೆ ಚುನಾಯಿತ ಪ್ರತಿನಿಧಿಗಳ ಕೈವಾಡ ಇದೆ. ಸತ್ಯಾಂಶ ಹೊರತರಬೇಕಾದರೆ ಈ ಕುರಿತ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಜೆಡಿಎಸ್ ನಾಯಕ ಎಂ.ಸಿ.ನಾಣಯ್ಯ ಒತ್ತಾಯಿಸಿದರು.

ಶುಕ್ರವಾರ ವಿಧಾನ ಪರಿಷತ್‌ನಲ್ಲಿ ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, `ಸಿಐಡಿ ಸರ್ಕಾರದ ಅಂಗ ಸಂಸ್ಥೆ. ಸರ್ಕಾರದ ಸೂಚನೆಯಂತೆ ಅಲ್ಲಿ ಎಲ್ಲವೂ ನಡೆಯುತ್ತದೆ. ಇಂತಹ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ಒಪ್ಪಿಸುವುದು ಸ್ಮಶಾನಕ್ಕೆ ಶವ ಕಳುಹಿಸಿದಂತೆ. ಪಾಲಿಕೆಯ ಬೊಕ್ಕಸವನ್ನು ಲೂಟಿ ಮಾಡಿದವರನ್ನು ಪತ್ತೆಮಾಡಿ, ಶಿಕ್ಷೆಗೆ ಗುರಿಪಡಿಸಬೇಕಾದರೆ ಸಿಬಿಐ ತನಿಖೆ ನಡೆಯಲೇಬೇಕು~ ಎಂದರು.

ಪಾಲಿಕೆಯ ಮಲ್ಲೇಶ್ವರ, ಗಾಂಧಿನಗರ ಮತ್ತು ರಾಜರಾಜೇಶ್ವರಿನಗರ ಎಂಜಿನಿಯರಿಂಗ್ ವಲಯಗಳಲ್ಲಿ 1,539 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ನಡೆಸಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ, ಹಣ ಲೂಟಿ ಮಾಡಿರುವ ಬಗ್ಗೆ ಬಿಬಿಎಂಪಿಯ ಆಯುಕ್ತರ ತಾಂತ್ರಿಕ ಜಾಗೃತ ಘಟಕ ಸಂಶಯ ವ್ಯಕ್ತಪಡಿಸಿದೆ. ಈ ಪೈಕಿ ರೂ 32 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳು ಮಾತ್ರ ತನಿಖಾ ತಂಡಕ್ಕೆ ದೊರೆತಿವೆ. ಅವುಗಳಲ್ಲಿ ರೂ 9 ಕೋಟಿ ಭ್ರಷ್ಟಾಚಾರ ನಡೆದಿರುವುದು ತನಿಖೆಯಲ್ಲಿ ಬಯಲಾಗಿದೆ. ಹತ್ತು ಸಾವಿರಕ್ಕೂ ಹೆಚ್ಚು ಕಡತಗಳು ಇದುವರೆಗೂ ತನಿಖಾ ತಂಡಕ್ಕೆ ದೊರೆತಿಲ್ಲ. ಇವೆಲ್ಲವುಗಳ ಹಿಂದೆ ಪ್ರಭಾವಿ ವ್ಯಕ್ತಿಗಳಿರುವುದು ಖಚಿತ ಎಂದು ಅನುಮಾನ ವ್ಯಕ್ತಪಡಿಸಿದರು.

ತನಿಖೆಗೆ ಲಭ್ಯವಾದ ಕಡತಗಳ ಆಧಾರದಲ್ಲೇ ಸರಾಸರಿ ಲೆಕ್ಕ ಹಾಕಿದರೆ ಈ ಮೂರು ವಲಯಗಳಲ್ಲೇ 429 ಕೋಟಿ ರೂಪಾಯಿ ಮೊತ್ತದ ಅಕ್ರಮ ನಡೆದಿದೆ. ನಿಜವಾಗಿಯೂ ನಡೆದ ಕಾಮಗಾರಿಗಳಲ್ಲಿ ರೂ 450 ಕೋಟಿಯಷ್ಟು ಲೂಟಿ ಆಗಿದೆ. ಪಾಲಿಕೆಯ ಇನ್ನೂ 26 ಎಂಜಿನಿಯರಿಂಗ್ ವಲಯಗಳಲ್ಲಿ ನಡೆದಿರಬಹುದಾದ ಅಕ್ರಮವನ್ನು ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ ಎಂದರು.

ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಒಬ್ಬ ಕಾರ್ಯನಿರ್ವಾಹಕ ಎಂಜಿನಿಯರ್ ವಾರ್ಷಿಕವಾಗಿ 20 ಕೋಟಿ ರೂಪಾಯಿ ವೆಚ್ಚ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಬ್ಬ ಅಧಿಕಾರಿ 200-500 ಕೋಟಿ ರೂವರೆಗೆ ಖರ್ಚು ಮಾಡಿರುವ ಬಗ್ಗೆ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಐದು ಕೋಟಿ ರೂ ಬಿಡುಗಡೆ ಮಾಡಲು ಮುಖ್ಯಮಂತ್ರಿಯವರೇ ಆದೇಶಿಸಿದರೂ ಹಣಕಾಸು ಇಲಾಖೆ ಹಲವು ಪ್ರಶ್ನೆಗಳನ್ನು ಎತ್ತುತ್ತದೆ.ಹಗರಣದ ತನಿಖೆಗೆ ಆದೇಶಿಸಿದ ಅಧಿಕಾರಿಯನ್ನೇ ಆಯುಕ್ತರ ಹುದ್ದೆಯಿಂದ ಎತ್ತಂಗಡಿ ಮಾಡಲಾಗಿದೆ. ಇದೆಲ್ಲವನ್ನೂ ಗಮನಿಸಿದರೆ ಹಗರಣ ಮುಚ್ಚಿಹಾಕುವ ಹುನ್ನಾರ ಇದ್ದಂತೆ ಕಾಣುತ್ತದೆ ಎಂದು ಆರೋಪಿಸಿದರು.

`ಈ ಹಗರಣದಲ್ಲಿ ಕೇವಲ ಅಧಿಕಾರಿಗಳು, ಗುತ್ತಿಗೆದಾರರು, ಮಧ್ಯವರ್ತಿಗಳ ಕೈವಾಡ ಅಲ್ಲ, ಚುನಾಯಿತ ಪ್ರತಿನಿಧಿಗಳ ಕೈವಾಡವೂ ಇದೆ. ಈ ಕಾರಣದಿಂದಲೇ ಬೆಂಗಳೂರು ಮಹಾನಗರ ಕಾರ್ಯಪಡೆಯ ತನಿಖೆಗೆ ಸಹಕಾರ ದೊರೆಯಲಿಲ್ಲ. ಪಾಲಿಕೆಯ ಬೊಕ್ಕಸವನ್ನು ಲೂಟಿ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸುವ ಬದ್ಧತೆ ಇದ್ದರೆ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಬೇಕು. ಬಿಜೆಪಿಗೆ ಸಿಬಿಐ ಕುರಿತು ತಾತ್ವಿಕ ಭಿನ್ನಾಭಿಪ್ರಾಯ ಇದ್ದರೆ ಲೋಕಾಯುಕ್ತ ತನಿಖೆಗೆ ಈ ಪ್ರಕರಣವನ್ನು ಒಪ್ಪಿಸಬೇಕು~ ಎಂದು ನಾಣಯ್ಯ ಒತ್ತಾಯಿಸಿದರು.

ನಾಣಯ್ಯ ಅವರ ಬೇಡಿಕೆಯನ್ನು ಕಾಂಗ್ರೆಸ್ ಬೆಂಬಲಿಸಿದೆ. ಈ ಕುರಿತು ಸಮಗ್ರ ವಿವರಗಳನ್ನು ಪಡೆದು ಸೋಮವಾರ ಸದನದಲ್ಲಿ ಉತ್ತರ ನೀಡುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಪ್ರತಿಪಕ್ಷಗಳಿಗೆ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry