ಮಂಗಳವಾರ, ಅಕ್ಟೋಬರ್ 22, 2019
22 °C

ಪಾಲಿಕೆ 27ನೇ ವಾರ್ಡ್ ಉಪ ಚುನಾವಣೆ

Published:
Updated:

ದಾವಣಗೆರೆ: `ಅರ್ಹತೆಯ ಮೇಲೆ ಜನ ನನ್ನನ್ನು ಗೆಲ್ಲಿಸುತ್ತಾರೆ~ - ಇದು ಜೆಡಿಎಸ್ ಅಭ್ಯರ್ಥಿ ಎಸ್. ಅಬ್ದುಲ್ ಸಮದ್ ಅವರ ವಿಶ್ವಾಸ. ಪಾಲಿಕೆ  ವಾರ್ಡ್ ನಂ. 27ರ ಉಪ ಚುನಾವಣೆ  ಸಂಬಂಧಿಸಿ  ಪ್ರಚಾರನಿರತ  ಅವರು ಈ ಅನಿಸಿಕೆ ಹಂಚಿಕೊಂಡರು.ಬೇರೆಯವರ ಟೀಕೆ-ಟಿಪ್ಪಣಿ ಮಾಡುವುದಿಲ್ಲ. ಮುಂದೆ ನಾನೇನು ಮಾಡುತ್ತೇನೆ ಎಂದು ಹೇಳುತ್ತಲೇ ಮತ ಯಾಚಿಸುತ್ತೇನೆ ಎನ್ನುತ್ತಾರೆ ಅವರು.ಕೆಟಿಜೆ ನಗರ, ಕೆಬಿ ಬಡಾವಣೆಗಳಲ್ಲಿ `ಹೊರೆ ಹೊತ್ತ ಮಹಿಳೆ~ ಮತ ಯಾಚಿಸುತ್ತಿದ್ದಾಳೆ. ತಾವು ಈ ವಾರ್ಡ್‌ನದೇ ನಿವಾಸಿ. ಇಲ್ಲಿನ ಸಮಸ್ಯೆಗಳ ನಿವಾರಣೆಯನ್ನೇ ಮುಂದಿಟ್ಟುಕೊಂಡು ಕಣಕ್ಕಿಳಿದಿದ್ದೇನೆ ಎನ್ನುತ್ತಾರೆ ಸಮದ್.

ಆಟೋರಿಕ್ಷಾಗಳ ಧ್ವನಿವರ್ಧಕಗಳಲ್ಲಿ ಪಕ್ಷದ ಪರ ಘೋಷಣೆ ಕೇಳುತ್ತಿದೆ. ಧ್ವಜ ಹಾರಾಡುತ್ತಿದೆ. ಓಣಿಗಳ ಒಂದಿಷ್ಟು ಹುಡುಗರು ಕಾರ್ಯಕರ್ತ ರನ್ನು ಹಿಂಬಾಲಿಸುತ್ತಿದ್ದಾರೆ.ಸಮದ್ ಮೂಲತಃ ಆರೋಗ್ಯ ಉತ್ಪನ್ನಗಳ ಮಾರಾಟ ಉದ್ಯಮಿ. ಮೂರು ವರ್ಷಗಳ ಹಿಂದೆ ಜೆಡಿಎಸ್ ಸಿದ್ಧಾಂತವನ್ನು ಒಪ್ಪಿ ಪಕ್ಷ ಸೇರಿದರು. ಅದಕ್ಕೂ ಮುನ್ನ ಕಾಂಗ್ರೆಸ್‌ನಲ್ಲಿದ್ದವರು. ಅಲ್ಲಿನ ನೀತಿಯಿಂದ ಬೇಸತ್ತು ಹೊರಬಂದರು. ಜೆಡಿಎಸ್‌ನ ಉತ್ತರ ವಿಧಾನಸಭಾ ಕ್ಷೇತ್ರದ ಹಿರಿಯ ಉಪಾಧ್ಯಕ್ಷರ ಹುದ್ದೆ ಸಿಕ್ಕಿತು. ರೈತರ, ಅಲ್ಪಸಂಖ್ಯಾತರಪರ ಹೋರಾಟಗಳಲ್ಲಿ ಸಕ್ರಿಯವಾಗಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ ಅವರು.ವಾರ್ಡ್ ಜನರು ಬುದ್ಧಿವಂತರು. ವಿದ್ಯಾವಂತರನ್ನೇ ಆಯ್ಕೆ ಮಾಡುತ್ತಾರೆ. ಅಲ್ಲದೇ ತಾವು ಸುನ್ನಿ ಪಂಗಡಕ್ಕೆ ಸೇರಿದವರು. ಈ ಪಂಗಡದವರು ಇಲ್ಲಿ ಬಹುಸಂಖ್ಯಾತರು ಇರುವುದರಿಂದ ಮತದಾನ ತಮ್ಮ ಪರ ಆಗಬಹುದು ಎಂಬ ನಿರೀಕ್ಷೆಯಿದೆ. ತಮಗೆ ಕಾಂಗ್ರೆಸ್ ಸವಾಲೇ ಅಲ್ಲ. ತಾವು ಎದುರಿಸಬೇಕಾದದ್ದು ಬಿಜೆಪಿಯನ್ನು. ಯಾಕೆಂದರೆ ಅವರು ಅಧಿಕಾರದಲ್ಲಿ ಇದ್ದಾರೆ. ತಾವು ಈ ಎಲ್ಲ ಸವಾಲು ಗಳನ್ನು ಎದುರಿಸಿ ಮುಂದೆ ಬರಬೇಕಿದೆ ಎಂದು ಅಭಿಪ್ರಾಯಪಡುತ್ತಾರೆ.ಈ ಹಿಂದೆ ಪಕ್ಷ ಕೊನೇ ಕ್ಷಣದಲ್ಲಿ ತನ್ನ ತಟಸ್ಥ ನೀತಿಯಿಂದ ಸೋತಿತ್ತು. ಈ ಬಾರಿ ಜಿದ್ದಿನಿಂದ ಹೋರಾಡುತ್ತೇವೆ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಟಿ. ದಾಸಕರಿಯಪ್ಪ, ಕಾರ್ಯಾಧ್ಯಕ್ಷ ಬಿ.ಎಂ. ಸತೀಶ್, ಉತ್ತರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎಸ್. ಸಂಗನಗೌಡ, ಹೂವಿನಮಡು ಚಂದ್ರಪ್ಪ, ಷಫಿ ಅಹಮದ್ ಸೇರಿದಂತೆ ಮಹಿಳಾ ಘಟಕದ ಕಾರ್ಯಕರ್ತರ ಬೆಂಬಲದಿಂದ ಜಯ ಗಳಿಸುತ್ತೇನೆ ಎಂದು ಸಮದ್ ಹೇಳುತ್ತಾರೆ.

ಈ ಎಲ್ಲ ನಿರೀಕ್ಷೆಗಳಿಗೆ ಜ. 10 ಉತ್ತರ ನೀಡಲಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)