ಪಾಲಿಟೆಕ್ನಿಕ್ ಸೀಟು ಆಯ್ಕೆಗೆ ಮುಕ್ತ ಅವಕಾಶ

7

ಪಾಲಿಟೆಕ್ನಿಕ್ ಸೀಟು ಆಯ್ಕೆಗೆ ಮುಕ್ತ ಅವಕಾಶ

Published:
Updated:

ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‌ಗಳ ಮಾದರಿಯಲ್ಲೇ ಡಿಪ್ಲೊಮಾ ಪ್ರವೇಶಕ್ಕೂ ಕೇಂದ್ರೀಕೃತ ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆ ಮಾಡುವ ಹೊಸ ಪದ್ಧತಿಯನ್ನು ಈ ವರ್ಷ ಜಾರಿಗೊಳಿಸಲಾಗಿದೆ. ಇದರಿಂದ ರಾಜ್ಯದ ಯಾವುದೇ ಮೂಲೆಯಲ್ಲಿರುವ ಪಾಲಿಟೆಕ್ನಿಕ್‌ನಲ್ಲಿ ಸೀಟು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ವಿದ್ಯಾರ್ಥಿಗಳಿಗೆ ದೊರೆಯಲಿದೆ.ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪಾಲಿಟೆಕ್ನಿಕ್‌ಗಳಲ್ಲಿ ಸರ್ಕಾರಿ ಕೋಟಾದಡಿ 42,796 ಸೀಟುಗಳು ಲಭ್ಯವಾಗಲಿವೆ. ಈ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕೌನ್ಸೆಲಿಂಗ್ ಮೂಲಕ ಹಂಚಿಕೆ ಮಾಡಲಿದೆ.ಮೊದಲ ಬಾರಿಗೆ ಡಿಪ್ಲೊಮಾ ಪ್ರವೇಶಕ್ಕೂ ರಾಜ್ಯಮಟ್ಟದಲ್ಲಿ ಕೌನ್ಸೆಲಿಂಗ್ ನಡೆಸುತ್ತಿರುವುದರಿಂದ, ಮೊದಲಿನ ಹಾಗೆ ನೋಡಲ್ ಕೇಂದ್ರದ ವ್ಯಾಪ್ತಿಯ ಪಾಲಿಟೆಕ್ನಿಕ್‌ಗಳಲ್ಲಿ ಮಾತ್ರ ಪ್ರವೇಶ ಪಡೆಯಬೇಕು ಎಂಬ ನಿರ್ಬಂಧ ಇರುವುದಿಲ್ಲ ಎಂದು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಎಚ್.ಯು.ತಳವಾರ ಅವರು `ಪ್ರಜಾವಾಣಿ~ಗೆ ತಿಳಿಸಿದರು.ರಾಜ್ಯ ಸರ್ಕಾರ ಇದೇ 5ರಂದು ಹೊರಡಿಸಿರುವ ಆದೇಶದ ಪ್ರಕಾರ ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆ ಮಾಡುವ ಜವಾಬ್ದಾರಿಯನ್ನು ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಅರ್ಜಿ ಸಲ್ಲಿಸಲು ಮತ್ತು ದಾಖಲೆಗಳ ಪರಿಶೀಲನೆಗಾಗಿ ರಾಜ್ಯದ ವಿವಿಧ ಭಾಗಗಳ 43 ಕಡೆ ದಾಖಲೆಗಳ ಪರಿಶೀಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಆ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 5ರವರೆಗೂ ಅವಕಾಶ ಇದೆ.ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವಾಗಲೇ ಜೆರಾಕ್ಸ್ ಪ್ರತಿಯೊಂದಿಗೆ, ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು.ಅರ್ಜಿಯೊಂದಿಗೆ ಓಎಂಆರ್ ಶೀಟ್ ಮತ್ತು ಬ್ಯಾಂಕ್ ಚಲನ್ ನೀಡ ಲಾಗುತ್ತದೆ. ನಿಗದಿತ ಶುಲ್ಕವನ್ನು ಬ್ಯಾಂಕಿನಲ್ಲಿ ಪಾವತಿ ಮಾಡಿದ ನಂತರ ಅದರ ಪ್ರತಿ ಮತ್ತು ಭರ್ತಿ ಮಾಡಿದ ಓಎಂಆರ್ ಶೀಟ್ ಅನ್ನು ದಾಖಲೆಗಳ ಪರಿಶೀಲನಾ ಕೇಂದ್ರದಲ್ಲಿ ನೀಡಬೇಕಾಗುತ್ತದೆ.ಇದಾದ ನಂತರ ಪ್ರಾಧಿಕಾರವು ಜೂನ್ 15ರಂದು ವೆಬ್‌ಸೈಟ್‌ನಲ್ಲಿ ಮೆರಿಟ್ ಪಟ್ಟಿಯನ್ನು ಪ್ರಕಟಿಸುತ್ತದೆ. ಇದರ ಆಧಾರದ ಮೇಲೆ ಪ್ರಾಧಿಕಾರವು ಸೀಟು ಹಂಚಿಕೆ ಮಾಡುತ್ತದೆ. ಕೌನ್ಸೆಲಿಂಗ್‌ಗೆ ಹೋಗುವಾಗ ನಿಗದಿತ ಶುಲ್ಕದ ಡಿ.ಡಿ.ಯನ್ನು ತೆಗೆದುಕೊಂಡು ಹೋಗಬೇಕಾ ಗುತ್ತದೆ. ಸೀಟು ಹಂಚಿಕೆಯಾದ ನಂತರ ವಿದ್ಯಾರ್ಥಿಗೆ `ಪ್ರವೇಶ ಕಾರ್ಡ್~ ನೀಡಲಾಗುತ್ತದೆ. ಅದನ್ನು ತೆಗೆದುಕೊಂಡು ಹೋಗಿ ಸಂಬಂಧಪಟ್ಟ ಪಾಲಿಟೆಕ್ನಿಕ್‌ನಲ್ಲಿ ಪ್ರವೇಶ ಪಡೆಯಬೇಕು ಎಂದು ಅವರು ವಿವರಿಸಿದರು.ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಶೇ 100 ಹಾಗೂ ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಶೇ 80ರಷ್ಟು ಸೀಟುಗಳು ಕೌನ್ಸೆಲಿಂಗ್ ಮೂಲಕ ಹಂಚಿಕೆಯಾಗಲಿವೆ. ಇನ್ನು 167 ಖಾಸಗಿ ಪಾಲಿಟೆಕ್ನಿಕ್‌ಗಳ ಪೈಕಿ 84 ಪಾಲಿಟೆಕ್ನಿಕ್‌ಗಳು 7,193 ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಿವೆ. ಈ ಸೀಟುಗಳು ಸರ್ಕಾರಿ ಕೋಟಾ ಮೂಲಕ ಹಂಚಿಕೆಗೆ ಲಭ್ಯವಾಗಲಿವೆ. ಮೂರು ಸುತ್ತುಗಳಲ್ಲಿ ಕೌನ್ಸೆಲಿಂಗ್ ನಡೆಯಲಿದ್ದು, ಜುಲೈ 23ಕ್ಕೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.ಸೂಪರ್ ನ್ಯೂಮರರಿ ಕೋಟಾ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಸೂಚನೆ ಯಂತೆ ಈ ವರ್ಷದಿಂದ ಎಲ್ಲ ಪಾಲಿ ಟೆಕ್ನಿಕ್‌ಗಳಲ್ಲೂ ಶೇ 5ರಷ್ಟು ಸೀಟುಗಳು ಸೂಪರ್ ನ್ಯೂಮರರಿ ಕೋಟಾದಡಿ ದೊರೆಯಲಿವೆ.ವಾರ್ಷಿಕ ರೂ 4.5 ಲಕ್ಷಕ್ಕಿಂತ ಕಡಿಮೆ ಆದಾಯವುಳ್ಳ ಪೋಷಕರ ಮಕ್ಕಳು ಈ ಕೋಟಾದಡಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.ಒಟ್ಟು 89,418 ಸೀಟುಗಳಿವೆ. ಶೇ 5ರ ಪ್ರಕಾರ 4,450 ಸೀಟುಗಳು ಸೂಪರ್ ನ್ಯೂಮರರಿ ಕೋಟಾದಡಿ ದೊರೆಯಲಿವೆ. ಈ ಸೀಟುಗಳನ್ನೂ ಪ್ರಾಧಿಕಾರದ ಮೂಲಕವೇ ಭರ್ತಿ ಮಾಡಲಾಗುತ್ತದೆ.ಈ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಬೋಧನಾ ಶುಲ್ಕದಿಂದ ವಿನಾಯಿತಿ ಪಡೆಯಲಿದ್ದಾರೆ. ಉಳಿದಂತೆ ಅಭಿವೃದ್ಧಿ ಶುಲ್ಕ ಮತ್ತು ಇತರೆ ಶುಲ್ಕ 1,300 ರೂಪಾಯಿ ಪಾವತಿಸಬೇಕಾಗುತ್ತದೆ.ಇತರ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ರೂ 3,500, ಅನುದಾನಿತ ಕಾಲೇಜುಗಳಲ್ಲಿ ರೂ 4,500 ಮತ್ತು ಅನುದಾನರಹಿತ ಕಾಲೇಜುಗಳಲ್ಲಿ ರೂ 8,300 ಶುಲ್ಕ ಪಾವತಿಸಬೇಕಾಗುತ್ತದೆ.ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆ ಮಾಡುವ ಸಂಬಂಧ ಸರ್ಕಾರ ತಡವಾಗಿ ತೀರ್ಮಾನ ತೆಗೆದುಕೊಂಡಿದೆ. ಆದ್ದರಿಂದ ಈ ವರ್ಷ ಅರ್ಜಿ ಸಲ್ಲಿಕೆಗೆ ಕಡಿಮೆ ಕಾಲಾವಕಾಶ ನೀಡಲಾಗಿದೆ.ಅಲ್ಲದೆ ಬೆಂಗಳೂರಿನಲ್ಲಿ ಮಾತ್ರ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಮುಂದಿನ ವರ್ಷ ಆನ್‌ಲೈನ್ ಕೌನ್ಸೆಲಿಂಗ್ ಜಾರಿಗೊಳಿಸಲಾಗುವುದು ಎಂದು ತಳವಾರ ತಿಳಿಸಿದರು.ಉಪನ್ಯಾಸಕರ ನೇಮಕ: ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಖಾಲಿ ಇರುವ 675 ಉಪನ್ಯಾಸಕರ ನೇಮಕಾತಿ ಪಟ್ಟಿ ಸಿದ್ಧವಾಗಿದೆ. ವರ್ಗಾವಣೆ ಪ್ರಕ್ರಿಯೆ ಮುಗಿದ ಕೂಡಲೇ ನೇಮಕಾತಿ ಆದೇಶ ನೀಡಲಾಗುವುದು. ಇದರಿಂದ ಸಿಬ್ಬಂದಿ ಕೊರತೆ ನೀಗಲಿದೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry