ಬುಧವಾರ, ನವೆಂಬರ್ 20, 2019
20 °C
ಕಾಂಗ್ರೆಸ್‌ನಲ್ಲಿ ಹೆಚ್ಚಿದ ಗೊಂದಲ ಭುಗಿಲೆದ್ದ ಅತೃಪ್ತಿ

ಪಾಲಿಸದ ಮಾನದಂಡ

Published:
Updated:

ನವದೆಹಲಿ: ಕಾಂಗ್ರೆಸ್ ಟಿಕೆಟ್ ಹಂಚಿಕೆ ಗೊಂದಲ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಪಕ್ಷದಲ್ಲಿ ಭುಗಿಲೆದ್ದಿರುವ ಅತೃಪ್ತಿ- ಅಸಮಾಧಾನ ಶಮನಗೊಳಿಸಲು ಹಿರಿಯ ನಾಯಕರು ಕೆಲವು ದಿನಗಳಿಂದ ಸತತ ಪ್ರಯತ್ನ ನಡೆಸಿದ್ದರೂ ಸಾಧ್ಯವಾಗಿಲ್ಲ. ನಾಮಪತ್ರ ಸಲ್ಲಿಕೆ ಗಡುವು ಮುಗಿಯುವವರೆಗೂ ಮುಂದುವರಿಯುವ ಲಕ್ಷಣಗಳು ಕಾಣುತ್ತಿವೆ.ಸುಮಾರು 200 ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಪ್ರತಿಪಾದಿಸುತ್ತಿದ್ದರೂ, ಶುಕ್ರವಾರ 177 ಹೆಸರು ಮಾತ್ರ ಪ್ರಕಟಿಸಲು ಸಾಧ್ಯವಾಗಿದೆ. 47 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ವಿದೇಶ ಪ್ರವಾಸದಲ್ಲಿರುವ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮರಳಿದ ಬಳಿಕವಷ್ಟೇ ಬಿಕ್ಕಟ್ಟು ನಿವಾರಣೆ ಸಾಧ್ಯವೆಂದು ಮೂಲಗಳು ಖಚಿತಪಡಿಸಿವೆ.ಆದರೆ, ತೆರೆಮರೆಯಲ್ಲಿ ಅತೃಪ್ತಿ- ಅಸಮಾಧಾನ ಬಗೆಹರಿಸುವ ಪ್ರಯತ್ನ ಮುಂದುವರಿದಿದೆ. ಗೋವಾ ಮುಖ್ಯಮಂತ್ರಿ ಲುಸಿಯಾನ್ಹೊ ಫೆಲೆರೊ  ನೇತೃತ್ವದ ಅಭ್ಯರ್ಥಿಗಳ ಆಯ್ಕೆ ಸಮಿತಿ ಸೂಕ್ತ ಅಭ್ಯರ್ಥಿಗಳ ಹೆಸರನ್ನು ಸೋನಿಯಾ ಅವರಿಗೆ ಶಿಫಾರಸು ಮಾಡುವ ಪ್ರಯತ್ನ ಮುಂದುವರಿಸಿದೆ. ಆಸ್ಕರ್ ಫರ್ನಾಂಡಿಸ್ ಮತ್ತಿತರ ನಾಯಕರೂ ಕೈಜೋಡಿಸಿದ್ದಾರೆ.ವಿಧಾನಸಭೆ ಚುನಾವಣೆ ಕುರಿತು ಚರ್ಚಿಸಲು ಸೋನಿಯಾ ಅಧ್ಯಕ್ಷತೆಯಲ್ಲಿ ಸೇರಿದ್ದ ಮೊದಲ ಸಭೆಯಲ್ಲಿ `ಕೇಂದ್ರ ಚುನಾವಣಾ ಸಮಿತಿ' (ಸಿಇಸಿ) ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಕೆಲವು ಮಾನದಂಡ ನಿಗದಿಪಡಿಸಿತ್ತು. `ಆಪರೇಷನ್ ಕಮಲಕ್ಕೆ ಬಲಿಯಾದವರು, ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದಿರುವ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರು; ಅಪರಾಧ ಪ್ರಕರಣದಲ್ಲಿ ಶಿಕ್ಷೆಗೊಳಗಾದವರು ಮತ್ತು ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಿಂದ ಸೋತವರಿಗೆ ಟಿಕೆಟ್ ಕೊಡಬಾದೆಂದು ತೀರ್ಮಾನಿಸಲಾಗಿತ್ತು.ಈ ಸಭೆಯ ಬಳಿಕ ರಾಜ್ಯದ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ ಮಿಸ್ತ್ರಿ ಮಾಧ್ಯಮಗಳಿಗೆ ಸಮಿತಿ ತೀರ್ಮಾನ ಕುರಿತು ಹೇಳಿಕೆಯನ್ನು ನೀಡಿದ್ದರು. ಆದರೆ, ಆಪರೇಷನ್ ಕಮಲಕ್ಕೆ ಬಲಿಯಾದವರನ್ನು ಹೊರತುಪಡಿಸಿ ಉಳಿದವರಿಗೆ ಟಿಕೆಟ್ ನೀಡಿ ತಾನೇ ನಿಗದಿಪಡಿಸಿದ್ದ ಮಾನದಂಡ ಪಾಲಿಸದೆ ಕಾಂಗ್ರೆಸ್ ಗೊಂದಲ ಸೃಷ್ಟಿಸಿತು. ಇದೇ ಬಿಕ್ಕಟ್ಟಿಗೆ ಕಾರಣವಾಯಿತು ಎಂದು ಮೂಲಗಳು ವಿವರಿಸಿವೆ.ಅಡ್ಡ ಮತದಾನ ಮಾಡಿದ ಆರೋಪಕ್ಕೊಳಗಾಗಿರುವ ಹಾವೇರಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. `ವಿಧಾನ  ಪರಿಷತ್ ಚುನಾವಣೆ ರಹಸ್ಯ ಮತದಾನದ ಮೂಲಕ ನಡೆಯುವುದರಿಂದ ಯಾರನ್ನು ಸಂಶಯದಿಂದ ನೋಡುವುದು ಕಷ್ಟ. ಹೀಗಾಗಿ ಟಿಕೆಟ್ ನಿರಾಕರಿಸುವುದು ಉಚಿತವಲ್ಲ' ಎಂಬ ನಿಲುವು ತಳೆದು ಅನೇಕರಿಗೆ ಟಿಕೆಟ್ ನೀಡಲಾಗಿದೆ.ಹಿಂದಿನ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರಾಗಿ ಆಯ್ಕೆ ಆಗಿ ಬಿಜೆಪಿ ಸರ್ಕಾರದ ಜತೆ ಕೈಜೋಡಿಸಿ ಅಧಿಕಾರ ಅನುಭವಿಸಿದವರಿಗೆ ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡಿರುವ ಹೈಕಮಾಂಡ್ ನಿಲುವು ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಡಿ. ಸುಧಾಕರ ಹಾಗೂ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಟಿಕೆಟ್ ಕೊಡುವ ವಿಷಯದಲ್ಲಿ ಬಿಕ್ಕಟ್ಟು ಮುಂದುವರಿದಿದೆ.ಶಿವರಾಜ ತಂಗಡಗಿ ಮತ್ತು ವೆಂಕಟರಮಣಪ್ಪ ಅವರ ಪುತ್ರ ಟಿಕೆಟ್ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ. ಯಲಬುರ್ಗಾದಲ್ಲಿ ಬಸವರಾಜ ರಾಯರೆಡ್ಡಿ, ಸೊರಬದಲ್ಲಿ ಕುಮಾರ್ ಬಂಗಾರಪ್ಪ ಹಾಗೂ ಶಿವಮೊಗ್ಗ ಗ್ರಾಮೀಣದಲ್ಲಿ ಕರಿಯಣ್ಣ ಒಳಗೊಂಡಂತೆ 20 ಸಾವಿರಕ್ಕಿಂತ ಅಧಿಕ ಮತಗಳಿಂದ ಸೋತ ಅನೇಕರಿಗೆ ಟಿಕೆಟ್ ನೀಡಲಾಗಿದೆ.ಅನೇಕ ಕ್ಷೇತ್ರಗಳಲ್ಲಿ ಅತ್ಯಲ್ಪ ಮತಗಳಿಂದ ಸೋತವರಿಗೂ ಟಿಕೆಟ್ ಕೈತಪ್ಪಿದೆ. ಕಾಪು ಕ್ಷೇತ್ರದಲ್ಲಿ ಬರೀ  967 ಮತಗಳ ಅಂತರದಿಂದ ಗೆಲ್ಲುವ ಅವಕಾಶ ಕಳೆದುಕೊಂಡ ವಸಂತ ಸಾಲಿಯಾನ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಸ್ಥಳೀಯ ಗುಂಪುಗಾರಿಕೆ ಸಾಲಿಯಾನ ಟಿಕೆಟ್‌ಗೆ ಅಡ್ಡಿಯಾಗಿದೆ. ಹಾಗೇ ಬಾದಾಮಿಯಲ್ಲಿ ಬಿ.ಬಿ. ಚಿಮ್ಮನಕಟ್ಟಿ ಹಾಗೂ ಬೀಳಗಿಯಲ್ಲಿ ಅಜಯಕುಮಾರ್ ಸರ್‌ನಾಯಕ್ ಅವರನ್ನು ಕಡೆಗಣಿಸಲಾಗಿದೆ.ಭದ್ರಾವತಿಯಲ್ಲಿ ಇಬ್ರಾಹಿಂ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಅಭ್ಯರ್ಥಿಗಳ ಆಯ್ಕೆ ಸಮಿತಿ  ಖಚಿತಪಡಿಸಿತ್ತು. ಇದರಿಂದ ಹಾಲಿ ಶಾಸಕ ಸಂಗಮೇಶ್ವರ ಅವರಿಗೆ ಟಿಕೆಟ್ ಖಚಿತ ಎಂದು ಭಾವಿಸಲಾಗಿತ್ತು. ಆದರೆ, ಭದ್ರಾವತಿ ಟಿಕೆಟ್ ಹಂಚಿಕೆ ಗೊಂದಲ ಮುಂದುವರಿದಿದೆ. ಮಾಲೂರಿನಲ್ಲಿ ಕೃಷ್ಣಸಿಂಗ್, ಪದ್ಮನಾಭ ನಗರದಲ್ಲಿ ಗುರಪ್ಪ ನಾಯ್ಡು ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ಜಯನಗರದಲ್ಲಿ ವೇಣುಗೋಪಾಲ್ ಟಿಕೆಟ್ ಖಚಿತವಾಗಿತ್ತು. ವ್ಯಾಪಕ ವಿರೋಧದಿಂದ ಈ ಹೆಸರುಗಳನ್ನು ತಡೆ ಹಿಡಿಯಲಾಯಿತು ಎಂದು ಉನ್ನತ ಮೂಲಗಳು ವಿವರಿಸಿವೆ.ಹಾಲಿ ಶಾಸಕರಲ್ಲಿ 62 ಮಂದಿಗೆ ಕಾಂಗ್ರೆಸ್ ಟಿಕೆಟ್ ದಕ್ಕಿದೆ. ವಿಧಾನ ಪರಿಷತ್ತಿನ ಒಬ್ಬರು ಸದಸ್ಯರಿಗೆ ಟಿಕೆಟ್ ಕೊಡಲಾಗಿದೆ. ಏಳು ಮಂದಿ ಮಹಿಳೆಯರು 177 ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 41 ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಕೇಂದ್ರ ಸಚಿವರ ಮಕ್ಕಳ ಭವಿಷ್ಯ ಸೋನಿಯಾ ಮೇಡಂ ಮರಳಿದ ಬಳಿಕ ತೀರ್ಮಾನವಾಗಲಿದೆ.ಹಣದ ಕೈವಾಡ-ಆರೋಪ ಸುಳ್ಳು- ಪರಮೇಶ್ವರ್

ಬೆಂಗಳೂರು:
`ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಅನುಮಾನ ಯಾರಿಗಾದರೂ ಇದ್ದಲ್ಲಿ ಅವರು ನೇರವಾಗಿ ಎಐಸಿಸಿಗೆ ದೂರು ಸಲ್ಲಿಸಬಹುದು' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಹಣದ ವಹಿವಾಟು ನಡೆದಿದೆ ಎಂದು ಕೆಲವೆಡೆ ಟಿಕೆಟ್ ವಂಚಿತರು ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದರು. `ಇದು ಸತ್ಯಕ್ಕೆ ದೂರವಾದ ಆರೋಪ. ಯಾವುದೇ ಹಂತದಲ್ಲೂ ಅಂತಹ ಕೆಲಸ ನಡೆದಿಲ್ಲ' ಎಂದರು.ಪಕ್ಷದ ಅಭ್ಯರ್ಥಿಗಳ ಆಯ್ಕೆಯ ಪ್ರತಿ ಹಂತದಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳ ಲಾಗಿದೆ. ಹಣದ ಪ್ರಭಾವ ಬಳಸಿ ಯಾವುದೇ ವ್ಯಕ್ತಿ ಟಿಕೆಟ್ ಪಡೆದಿರಬಹುದು ಎಂಬ ಅನುಮಾನಗಳು ಇದ್ದಲ್ಲಿ ಯಾರು ಬೇಕಾದರೂ ಪಕ್ಷದ ಹೈಕಮಾಂಡ್‌ಗೆ ದೂರು ಸಲ್ಲಿಸಬಹುದು. ಎಐಸಿಸಿ ವರಿಷ್ಠರು ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸುತ್ತಾರೆ ಎಂದು ತಿಳಿಸಿದರು.`ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಈ ಬಾರಿ ಹೆಚ್ಚಿನ ಗೊಂದಲ ಇಲ್ಲದೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಬಾಕಿ ಇರುವ 47 ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸೋನಿಯಾ ಅವರ ಒಪ್ಪಿಗೆ ಪಡೆದು 47 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶೈಕ್ಷಣಿಕ ಅರ್ಹತೆ ಮತ್ತು ಉತ್ತಮ ಚಾರಿತ್ರ್ಯ ಹೊಂದಿರುವವರಿಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಆದ್ಯತೆ ನೀಡಲಾಗಿದೆ. 177 ಅಭ್ಯರ್ಥಿಗಳಲ್ಲಿ 31 ಮಂದಿ ವಕೀಲರಿದ್ದಾರೆ. 11 ಎಂಜಿನಿಯರುಗಳು, ಏಳು ಮಂದಿ ವೈದ್ಯರು, ಮೂರು ಮಂದಿ ಪಿಎಚ್.ಡಿ ಪದವೀಧರರು, 65 ಜನ ಪದವೀಧರರಿಗೆ ಟಿಕೆಟ್ ಕೊಡಲಾಗಿದೆ. 44 ಅಭ್ಯರ್ಥಿಗಳು ಪದವಿಪೂರ್ವ ಹಂತ ಮತ್ತು ಅದಕ್ಕಿಂತ ಕಡಿಮೆ ಶಿಕ್ಷಣ ಪಡೆದಿದ್ದಾರೆ ಎಂದು ಪರಮೇಶ್ವರ್ ವಿವರ ನೀಡಿದರು.`ಸಾಮಾಜಿಕ ನ್ಯಾಯದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಆದರೆ, ಎಲ್ಲ ಕ್ಷೇತ್ರಗಳಲ್ಲೂ ಕೇವಲ ಜಾತಿಯನ್ನು ಗಣನೆಗೆ ತೆಗೆದುಕೊಂಡು ಟಿಕೆಟ್ ಹಂಚಿಕೆ ಮಾಡಿಲ್ಲ. ಹಲವು ಕಡೆಗಳಲ್ಲಿ ಸಣ್ಣ ಜಾತಿಯನ್ನು ಪ್ರತಿನಿಧಿಸುವವರಿಗೂ ಅವಕಾಶ ನೀಡಲಾಗಿದೆ. ನಮ್ಮ ಪಕ್ಷಕ್ಕೆ ಜಾತಿ ಪದ್ಧತಿಯಲ್ಲಿ ನಂಬಿಕೆ ಇಲ್ಲ. ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇದೆ' ಎಂದರು.ವೀಕ್ಷಕರ ನಿಯೋಜನೆ: ವಿಧಾನಸಭಾ ಚುನಾವಣೆಗೆ ಪಕ್ಷದ ಹೈಕಮಾಂಡ್ ಲೋಕಸಭಾ ಕ್ಷೇತ್ರವಾರು ವೀಕ್ಷಕರನ್ನು ನಿಯೋಜಿಸಿದೆ. ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಸಂಸದರು ಹಾಗೂ ಪಕ್ಷದ ಪ್ರಮುಖ ಮುಖಂಡರನ್ನು ವೀಕ್ಷಕರನ್ನಾಗಿ ನಿಯೋಜಿಸಲಾಗಿದೆ. ಕೆಲವರು ಈಗಾಗಲೇ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ತಿಳಿಸಿದರು.`ಪಕ್ಷದ ಅಭ್ಯರ್ಥಿಗಳ ಪ್ರಚಾರ, ಟಿಕೆಟ್ ಆಕಾಂಕ್ಷಿಗಳ ಬಂಡಾಯ ಮತ್ತಿತರ ವಿಷಯಗಳ ಕುರಿತು ವೀಕ್ಷಕರು ಪರಿಶೀಲನೆ ನಡೆಸುತ್ತಾರೆ. ಟಿಕೆಟ್ ದೊರೆಯದೇ ಅಸಮಾಧಾನಗೊಂಡಿರುವ ಮುಖಂಡರ ಜೊತೆಗೂ ಚರ್ಚೆ ನಡೆಸುತ್ತಾರೆ. ಬಳಿಕ ವಸ್ತುಸ್ಥಿತಿ ಕುರಿತು ಹೈಕಮಾಂಡ್‌ಗೆ ವರದಿ ಸಲ್ಲಿಸುತ್ತಾರೆ' ಎಂದರು.ಈ ಬಾರಿ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಲಭಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

.......`ಒಂದು ಕುಟುಂಬದ ಒಬ್ಬರಿಗೆ ಮಾತ್ರ ಟಿಕೆಟ್ ಎಂಬ ಸೂತ್ರವನ್ನು ಕಾಂಗ್ರೆಸ್ ಯಾವತ್ತೂ ಪ್ರಕಟಿಸಿರಲಿಲ್ಲ. ರಾಜಕೀಯದಲ್ಲಿ ಇರುವವರ ಮಕ್ಕಳು, ಸಂಬಂಧಿಗಳು ರಾಜಕಾರಣಕ್ಕೆ ಬರಬಾರದು ಎಂಬ ಕಾನೂನು ದೇಶದಲ್ಲಿ ಇಲ್ಲ. ಕೇಂದ್ರ ಸಚಿವರ ಮಕ್ಕಳು ಕೂಡ ಟಿಕೆಟ್ ಬಯಸಿದ್ದಾರೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ಈ ಕುರಿತು ತೀರ್ಮಾನಕ್ಕೆಬರುತ್ತಾರೆ'.                                  

ಡಾ. ಜಿ. ಪರಮೇಶ್ವರ್

ಪ್ರತಿಕ್ರಿಯಿಸಿ (+)