ಬುಧವಾರ, ನವೆಂಬರ್ 20, 2019
20 °C

ಪಾಳಿ ಹಚ್ಚಿದ ಚಪ್ಪಲಿ, ಕಸಬರಿಗೆ

Published:
Updated:

ಮುದ್ದೇಬಿಹಾಳ: ನೀರಿಗಾಗಿ ಸಾಲು, ಪಡಿತರ ಆಹಾರಕ್ಕಾಗಿ ಸಾಲು, ಬೀಜಕ್ಕಾಗಿ ಸಾಲು, ಈಗ ಗೊಬ್ಬರಕ್ಕೂ ಸಾಲು. ಎಲ್ಲೆಲ್ಲೂ ಸಾಲು. ಇದು ರೈತರನ್ನು ವರ್ಷವಿಡೀ ಸರತಿಯಲ್ಲಿ ನಿಲ್ಲಿಸಿ ಕಾಡಿ, ಕಾಯುವಂತೆ ಮಾಡುತ್ತದೆ.ಸರತಿಯಲ್ಲಿ ನಿಂತು ಬೇಸತ್ತ ರೈತರು ತಮ್ಮ ಪರವಾಗಿ ಕಲ್ಲು, ಕಸಬರಿಗೆ, ಚಪ್ಪಲಿಗಳನ್ನು ಸರತಿಯಲ್ಲಿ ಇಟ್ಟು, ಅವುಗಳನ್ನೇ ಕಾಯಿಸಿದ ಕುತೂಹಲದ ಘಟನೆ ಇಲ್ಲಿಯ ತಾಲ್ಲೂಕು ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್)ದ ಎದುರು ನಡೆಇದೆ.ಮುಂಗಾರು ಬಿತ್ತನೆಯ ಜೊತೆಗೆ ಹೊಲಕ್ಕೆ ಗೊಬ್ಬರ ಹಾಕಲು ಬೇಕಾದ ಡಿಎಪಿ ಗೊಬ್ಬರಕ್ಕಾಗಿ ರೈತರು ಕಳೆದ ಮೂರು ದಿನಗಳಿಂದ ಕಾಯುತ್ತಿದ್ದರು. ಎಷ್ಟೇ ಕಾಯ್ದರು ಗೊಬ್ಬರ ಬರಲಿಲ್ಲ. ದಿನವಿಡೀ ಪಾಳಿಯಲ್ಲಿ ನಿಂತು ಕಾಯಲು ಸಾಧ್ಯವಾಗದೇ ರೈತರು ಪರ‌್ಯಾಯ ಕಂಡುಕೊಂಡರು.ತಮ್ಮ ಪರವಾಗಿ ಕೆಲವರು ಕಲ್ಲು ಇಟ್ಟರೆ, ಇನ್ನು ಕೆಲವರು ಕಸಬರಿಗೆ, ಚಪ್ಪಲಿ ಇಟ್ಟು ತಮ್ಮ ಉಪಸ್ಥಿತಿ ತೋರಿಸಿದರು. ಇದನ್ನು ಮೀರಿಸಿದ ಇನ್ನು ಕೆಲವು ರೈತರು ತಾವು ತೊಟ್ಟ ಅಂಗಿಯನ್ನೇ ಸಾಲಿನಲ್ಲಿಟ್ಟಿದ್ದು ವಿಶೇಷವಾಗಿತ್ತು.ಗೊಬ್ಬರಕ್ಕಾಗಿ ರೈತರು ಪಾಳಿ ಹಚ್ಚಿ ದಿನಗಟ್ಟಲೆ ಕಾಯ್ದರೂ ಗೊಬ್ಬರ ಸಿಗಲಿಲ್ಲ. ನೆರಬೆಂಚಿ, ಚವನಬಾವಿ, ಹುಲಬಾಳ, ಕೋಳೂರು, ಅಡವಿ ಸೋಮಬಾಳ, ನೇಬಗೇರಿ, ಹಿರೇಮುರಾಳ ಗ್ರಾಮದ ರೈತರು ಮೂರು ರಾತ್ರಿ ಸಂಘದ ಕಚೇರಿ ಎದುರು ನಿಂತರೂ ಪ್ರಯೋಜನ ಆಗಿಲ್ಲ. ರೊಚ್ಚಿಗೆದ್ದ ರೈತರು ಕಚೇರಿಗೆ ದಾಳಿ ನಡೆಸಲು ತೀರ್ಮಾನಿಸಿದರು. ಮಧ್ಯ ಪ್ರವೇಶಿಸಿದ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದರು.ರೈತರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಕೊನೆಗೂ 15 ಟನ್ ಗೊಬ್ಬರ ತಂದರು. ಪ್ರತಿ ರೈತರಿಗೆ ಎರಡು ಪಾಕೆಟ್ ನೀಡಿದರು. ಅದೂ ಸಾಕಾಗದು ಎನಿಸಿದಾಗ ಒಬ್ಬರಿಗೆ ಒಂದೇ ಚೀಲ ಕೊಟ್ಟು ಕೈ ತೊಳೆದುಕೊಂಡರು. ಮೂರು ದಿನ ರಾತ್ರಿಯಿಡೀ ಕಾಯ್ದ ರೈತರ ಬೇಡಿಕೆ ಮಾತ್ರ ಪೂರ್ಣವಾಗಿ ಈಡೇರಲಿಲ್ಲ.

ಪ್ರತಿಕ್ರಿಯಿಸಿ (+)