ಪಾಳುಬಿದ್ದಿರುವ ಕೆನ್ಸಿಂಗ್ಟನ್ ಈಜುಕೊಳ

7

ಪಾಳುಬಿದ್ದಿರುವ ಕೆನ್ಸಿಂಗ್ಟನ್ ಈಜುಕೊಳ

Published:
Updated:

ಬೆಂಗಳೂರು: ದೇಶದ ಹಳೆಯ ಹಾಗೂ ಪ್ರತಿಷ್ಠಿತ ಈಜುಕೊಳಗಳಲ್ಲಿ ಒಂದೆನಿಸಿದ ಉದ್ಯಾನ ನಗರಿಯ ಕೆನ್ಸಿಂಗ್ಟನ್ ಈಜುಕೊಳವೀಗ ಪಾಳುಬಿದ್ದ ಗೂಡಾಗಿದೆ. ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಮತ್ತು ಗುತ್ತಿಗೆದಾರರ ನಡುವಿನ ಹಣಕಾಸಿನ ವಿಷಯ ಸೇರಿದಂತೆ ಹಲವು ವಿವಾದಗಳಿಂದಾಗಿ ಮೂರು ವರ್ಷಗಳಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿಯೇ ಉಳಿದಿದೆ.ಹಲವು ಚಾಂಪಿಯನ್‌ಗಳು ಉದಯಿಸಲು ಕಾರಣವಾಗಿದ್ದ ಅಲಸೂರು ಲೇಕ್ ಬಳಿ ಇರುವ ಈ ಈಜುಕೊಳದ ಕಾಮಗಾರಿ ಅರ್ಧದಲ್ಲೇ ಸ್ಥಗಿತಗೊಂಡಿದ್ದು, ಇದರ ಪ್ರಾಂಗಣದಲ್ಲಿ ಈಗ ವಿಸ್ಕಿ, ರಮ್ ಮದ್ಯದ ಬಾಟಲಿಗಳನ್ನು ಕಾಣಬಹುದು.ಇಲ್ಲಿದ್ದ ಜಿಮ್ ಕೂಡ ಈಗ ಉಪಯೋಗಕ್ಕೆ ಬರುತ್ತಿಲ್ಲ. ಜಿಮ್ ಸಾಧನಗಳನ್ನು ಒಂದು ಕೊಠಡಿಗೆ ಹಾಕಿ ಬೀಗ ಜಡಿಯಲಾಗಿದೆ. ಈಜುಕೊಳದ ನಿರ್ಮಾಣ ಹಂತದಲ್ಲಿರುವ ಪೆವಿಲಿಯನ್‌ನ ಕೆಳಭಾಗದ ಕೊಠಡಿಯೊಂದರಲ್ಲಿ ಒಬ್ಬ ಮಹಿಳೆ ಸೇರಿದಂತೆ ಕೆಲವರು ವಾಸಿಸುತ್ತಿರುವ ವಿಷಯವೂ ಗಮನಕ್ಕೆ ಬಂದಿದೆ. ಆಂಧ್ರಪ್ರದೇಶದ ನರಸಿಂಹಯ್ಯ ಎಂಬಾತನನ್ನು ಭದ್ರತಾ ಸಿಬ್ಬಂದಿಯಾಗಿ ನೇಮಿಸಲಾಗಿದೆ.ದುರಸ್ತಿ ಹಾಗೂ ನವೀಕರಣ ಕಾರಣ 2008ರಲ್ಲಿ ಇದನ್ನು ಮುಚ್ಚಲಾಗಿತ್ತು. ಈಜುಕೊಳದ ಡೈವಿಂಗ್ ಭಾಗದ ಆಳ ಕಡಿಮೆ ಮಾಡುವುದು, ಸೋರುವಿಕೆ ನಿಯಂತ್ರಿಸಲು ದುರಸ್ತಿ, ನೂತನ ಡೈವಿಂಗ್ ಪ್ಲಾಟ್‌ಫಾರ್ಮ್ ನಿರ್ಮಾಣ, ನೀರಿನ ಶುದ್ಧೀಕರಣ ಘಟಕ ದುರಸ್ತಿ, ಗ್ಯಾಲರಿ, ಸ್ಥಾನಗೃಹ ಹಾಗೂ ಶೌಚಾಲಯ ನಿರ್ಮಾಣ ಸಂಬಂಧದ ಕಾಮಗಾರಿಗೆ ಕ್ರೀಡಾ ಇಲಾಖೆ ಮುಂದಾಗಿತ್ತು.ಅದಕ್ಕಾಗಿ 2009ರಲ್ಲಿ ಎರಡು ಬಾರಿ ಟೆಂಡರ್ ಕರೆಯಲಾಗಿತ್ತು. ದಾಖಲೆಗಳು ಸರಿ ಇಲ್ಲ ಎಂದು ಒಮ್ಮೆ ಟೆಂಡರ್ ರದ್ದುಗೊಳಿಸಲಾಗಿತ್ತು. ಮತ್ತೊಂದು ಟೆಂಡರ್ ಪ್ರಕ್ರಿಯೆ ಬಳಿಕ ಏಳು ತಿಂಗಳಲ್ಲಿ ಕಾಮಗಾರಿ ಮುಗಿಸುವಂತೆ 1.33 ಕೋಟಿ ರೂಪಾಯಿ ಮೊತ್ತಕ್ಕೆ  ಎಚ್.ವಿ.ಶ್ರೀನಿವಾಸಗೌಡ ಎಂಬುವವರಿಗೆ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿ ಶುರುವಾಗಿದ್ದು 2010ರ ಮೇನಲ್ಲಿ. ಆದರೆ ನಿಗದಿತ ಸಮಯದಲ್ಲಿ ಕೆಲಸ ಮುಗಿಯಲೇ ಇಲ್ಲ. 2011ರ ಏಪ್ರಿಲ್‌ನಿಂದ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಅಷ್ಟು ಮಾತ್ರವಲ್ಲದೇ, ಈ ಕಾಮಗಾರಿಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರ ನ್ಯಾಯಾಲಯದ ಮುಂದಿದೆ.ಕಾಮಗಾರಿ ಸ್ಥಗಿತಗೊಂಡು ಸುಮಾರು 10 ತಿಂಗಳು ಕಳೆದಿದೆ. ಈ ಕಾರಣ ಕ್ರೀಡಾ ಇಲಾಖೆ ಗುತ್ತಿಗೆದಾರರಿಗೆ ಅಂತಿಮ ನೋಟಿಸ್ ಕೂಡ ಜಾರಿ ಮಾಡಿದೆ. `2010ರ ಅಕ್ಟೋಬರ್‌ನಲ್ಲಿ ನಾವು ಕಾಮಗಾರಿ ಸಂಬಂಧ ಗುತ್ತಿಗೆದಾರರಿಗೆ 19 ಲಕ್ಷ ರೂ. ಹಣ ಪಾವತಿ ಮಾಡಿದ್ದೆವು. ಬಳಿಕ 2011ರ ಏಪ್ರಿಲ್‌ನಲ್ಲಿ ಮತ್ತೆ 20 ಲಕ್ಷ ರೂ. ಪಾವತಿ ಮಾಡಬೇಕಿತ್ತು. ಆದರೆ ಈ ಸಂದರ್ಭದಲ್ಲಿ ಕಾನೂನು ತೊಡುಕು ಶುರುವಾಯಿತು. ಹಣದ ಸಂಬಂಧ ಗುತ್ತಿಗೆದಾರರು ತಗಾದೆ ತೆಗೆದರು. ಬಳಿಕ ಕೆಲಸ ಕೂಡ ಸ್ಥಗಿತಗೊಳಿಸಿದರು~ ಎಂದು ಇಲಾಖೆಯ ಜಂಟಿ ನಿರ್ದೇಶಕ ಕಾಂತರಾಜ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.`ಈಗಾಗಲೇ ತುಂಬಾ ವಿಳಂಬವಾಗಿದೆ. ಇದಕ್ಕೆ ನಾವು ಕೂಡ ಕಾರಣ. ಫೆಬ್ರುವರಿ 10ರಂದು ನಾವು ಈಗ ನಡೆದಿರುವ ಕಾಮಗಾರಿಯ ಅಳತೆ ತೆಗೆದುಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ಹಾಜರಿರುವಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದೇವೆ. ಎಷ್ಟು ಕೆಲಸ ಆಗಿದೆ ಎಂದು ನೋಡಿ ಹಣ ಪಾವತಿ ಮಾಡಲಿದ್ದೇವೆ. ಬಳಿಕ ಹೊಸ ಟೆಂಡರ್ ಕರೆಯುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ~ ಎಂದು ಅವರು ತಿಳಿಸಿದ್ದಾರೆ.ಡೈವಿಂಗ್ ಪ್ಲಾಟ್‌ಫಾರ್ಮ್ ಕಟ್ಟಲು ಕಬ್ಬಿಣದ ಸಲಾಕೆಗಳನ್ನು ಹಾಕಿ ಹಾಗೇ ಬಿಡಲಾಗಿದೆ. ಈಜುಕೊಳದ ಆಳವನ್ನು ಕಡಿಮೆ ಮಾಡಲಾಗಿದೆ. ಟೈಲ್ಸ್ ಅಳವಡಿಕೆ ಸೇರಿದಂತೆ ಇನ್ನೂ ತುಂಬಾ ಕಾಮಗಾರಿ ನಡೆಯಬೇಕಿದೆ.

`ಕಾಮಗಾರಿ ಸ್ಥಗಿತಗೊಳಿಸಿದ್ದ ಸಂಬಂಧ ನಾವೀಗಾಗಲೇ ಗುತ್ತಿಗೆದಾರರಿಗೆ ಮೂರು ನೋಟಿಸ್ ಜಾರಿ ಮಾಡಿದ್ದೇವೆ. ಈ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ಕೂಡ ನೀಡಿದ್ದೇವೆ. ನಾವು ಸೂಚಿಸಿರುವ ದಿನಾಂಕದಂದು ಗುತ್ತಿಗೆದಾರರು ಬರಬೇಕು. ಏನು ಕೆಲಸ ಆಗಿದೆ ಎಂಬುದನ್ನು ಪರಿಶೀಲಿಸಲಿದ್ದೇವೆ.ಅದರ ಆಧಾರದ ಮೇಲೆ ಹಣಕಾಸು ವ್ಯವಹಾರ ಚುಕ್ತಾಗೊಳಿಸಲಿದ್ದೇವೆ. ಜೊತೆಗೆ ಗುತ್ತಿಗೆದಾರನಿಗೆ 13.38 ಲಕ್ಷ ದಂಡ ವಿಧಿಸಲಾಗುವುದು~ ಎಂದು ಇಲಾಖೆಯ ಸಹಾಯಕ ಎಂಜಿನಿಯರ್ ಹರೀಶ್ ಹೇಳಿದ್ದಾರೆ.

ಪುಟ್ಟ ಮಕ್ಕಳಿಗಾಗಿ ಸಣ್ಣ ಈಜುಕೊಳ ಕೂಡ ಇಲ್ಲಿದೆ. ಆದರೆ ಅದಿನ್ನು ಉದ್ಘಾಟನೆಯೇ ಆಗಿಲ್ಲ. ಕಾರ್ಪೊರೇಷನ್‌ನ ಆಸ್ತಿಯಾಗಿರುವ ಈ ಈಜುಕೊಳವನ್ನು 1970, ಮೇ 17ರಂದು ಅಂದಿನ ಮೈಸೂರು ರಾಜ್ಯದ ರಾಜ್ಯಪಾಲ ಧರ್ಮ ವೀರಾ ಉದ್ಘಾಟಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry