ಮಂಗಳವಾರ, ಏಪ್ರಿಲ್ 13, 2021
25 °C

ಪಾಳುಬಿದ್ದ ಸಮುಚ್ಚಯ ; ಬೀದಿ ಪಾಲಾದ ವ್ಯಾಪಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: `ಇದ್ದೂ ಇಲ್ಲದ ಸ್ಥಿತಿಗೆ~ ಅಕ್ಷರಶಃ ಉದಾಹರಣೆಯಾಗಿ ನಿಂತಿದೆ ಇಲ್ಲಿನ ಪುರಸಭೆಯ ತರಕಾರಿ ಮಾರುಕಟ್ಟೆ ಸಮುಚ್ಚಯ.ಪಟ್ಟಣದ ವೃತ್ತದಲ್ಲಿದ್ದ ಹಳೇ ತರಕಾರಿ ಮಾರುಕಟ್ಟೆಯನ್ನು ತೆರವುಗೊಳಿಸಿದ ಪುರಸಭೆ ಅದೇ ಸ್ಥಳದಲ್ಲಿ  ನೂತನ ತರಕಾರಿ ಮಾರುಕಟ್ಟೆ ಸಮುಚ್ಚಯ ನಿರ್ಮಿಸಿದೆ. ಉದ್ಘಾಟನೆಯಾಗಿ ಹಲವು ತಿಂಗಳು ಕಳೆದರೂ ವರ್ತಕರ ಈ ಮಳಿಗೆಗಳು ವರ್ತಕರಿಗೆ ಹಂಚಿಕೆಯಾಗಿಲ್ಲ. ಹೀಗಾಗಿ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಐಡಿಎಸ್‌ಎಂಟಿ ಯೋಜನೆಯಡಿ 97 ಲಕ್ಷ ರೂಪಾಯಿ ವೆಚ್ಚದಲ್ಲಿ 38 ತರಕಾರಿ ಅಂಗಡಿ ಮಳಿಗೆಗಳ ನಿರ್ಮಿಸಲಾಗಿತ್ತು.ಈಗ ಸಮುಚ್ಚಯ ಪಾಳು ಬಿದ್ದಿರುವುದರಿಂದ ಪಟ್ಟಣದ ಪ್ರಮುಖ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ತರಕಾರಿ ಅಂಗಡಿ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಮುಖ್ಯ ರಸ್ತೆಗಳಲ್ಲಿ ವಾಹನ  ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದೆ.`ನೂತನ ತರಕಾರಿ ಮಾರುಕಟ್ಟೆ ಕಟ್ಟಡ ಕಾಮಗಾರಿ ಮುಗಿದು ಆರು ತಿಂಗಳು ಕಳೆದರೂ ಇಲ್ಲಿನ ಪುರಸಭೆ ಸಮುಚ್ಚಯಗಳಿಗೆ ನೀರು, ವಿದ್ಯುತ್ ಸೌಲಭ್ಯ ನೀಡದಿರುವುದರಿಂದ ಸಮಸ್ಯೆ ಉದ್ಭವಿಸಿದೆ~ ಎಂದು ಹೆಸರು ಹೇಳಲು ಇಚ್ಛಿಸದ ತರಕಾರಿ ವ್ಯಾಪಾರಸ್ಥರು ಹೇಳಿದರು.ಗುಲಾಬ್‌ಜಾನ್ ಪುರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತರಾತುರಿಯಲ್ಲಿ ಕಟ್ಟಡ ಉದ್ಘಾಟಿಸಿದ್ದರು. ಆದರೆ ಇದುವರೆಗೂ ಅಂಗಡಿ ಮಳಿಗೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದರಲ್ಲಿ ಪುರಸಭೆ ವಿಫಲವಾಗಿದೆ. ಬಹಿರಂಗ ಹರಾಜು ಪ್ರಕ್ರಿಯೆ ಸಹ ನಡೆಸಿಲ್ಲ. ಸ್ಥಳೀಯ ಆಡಳಿತವು ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನುತ್ತಾರೆ ಸ್ಥಳೀಯರು. ಪುರಸಭೆ ನೀತಿಯಿಂದ ನೂತನ ತರಕಾರಿ ಮಾರುಕಟ್ಟೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ.   ವರ್ತಕರಿಗೆ ಅಂಗಡಿಗಳನ್ನು ನೀಡದೇ ಇರುವುದರಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನರಕವಾದಂತಾಗಿದೆ ಎಂದು ಪಟ್ಟಣದ ನಿವಾಸಿ ಶೇಖರ `ಪ್ರಜಾವಾಣಿ~ಗೆ ತಿಳಿಸಿದರು.ಸಂಚಾರದ ಸಮಸ್ಯೆಯ ಜತೆಗೆ ತರಕಾರಿ ಖರೀದಿಸಲು ನಾಗರಿಕರು ಪರದಾಡುವಂತಾಗಿದೆ. ಪುರಸಭೆಯು ಆದಷ್ಟೂ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.