ಭಾನುವಾರ, ಮಾರ್ಚ್ 7, 2021
31 °C
ಚಿಂತಮಾಕಲದಿನ್ನೆ ಗ್ರಾಮದಲ್ಲಿ ಕಟ್ಟಡವಿದ್ದರೂ ಜನರು ವಾಸವಿಲ್ಲ

ಪಾಳು ಬಿದ್ದ ದೆವ್ವದ ಮನೆಗಳು...!

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಪಾಳು ಬಿದ್ದ ದೆವ್ವದ ಮನೆಗಳು...!

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಹೋಬಳಿಯ ಮಾರ್ಗಾನಕುಂಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಚಿಂತಮಾಕಲದಿನ್ನೆ ಗ್ರಾಮದಲ್ಲಿ ವಸತಿ ರಹಿತ ನಿವಾಸಿಗಳಿಗೆ ಸೂರು ಕಲ್ಪಿಸಲೆಂದೇ 15 ವರ್ಷಗಳ ಹಿಂದೆ ನಿರ್ಮಿಸಲಾದ ಮನೆಗಳು ಈಗ ಅಕ್ಷರಶಃ ಪಾಳು ಬಿದ್ದಿವೆ. ಒಂದು ಕೋಣೆ ಸೌಲಭ್ಯವುಳ್ಳ ಮನೆಗಳ ಕಿಟಕಿ ಮತ್ತು ಬಾಗಿಲು ಕಣ್ಮರೆಯಾಗಿದ್ದು, ಯಾರೂ ಸಹ ಅವುಗಳನ್ನು ಬಳಸುತ್ತಿಲ್ಲ. ದೆವ್ವದ ಮನೆಗಳು ಎಂಬ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ!ವಸತಿರಹಿತರಿಗೆ ಆಶ್ರಯ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು 2000ನೇ ಇಸವಿ ಆಸುಪಾಸಿನಲ್ಲಿ 8 ಮನೆಗಳನ್ನು ನಿರ್ಮಿಸಿಕೊಟ್ಟಿತು ಅಲ್ಲದೇ ವಾಸಯೋಗ್ಯ ಸ್ಥಳವೆಂದು ಘೋಷಣೆ ಸಹ ಮಾಡಿತು. ಆದರೆ ಈವರೆಗೆ ಯಾರೂ ಸಹ ಮನೆಯಲ್ಲಿ ಉಳಿಯಲು ಮುಂದಾಗಿಲ್ಲ. ಸರ್ಕಾರದ ಸೂಚನೆ, ಮಣರ್ಗದರ್ಶನ ಅನ್ವಯ ಇಲ್ಲಿ ವಾಸಿಸಲು ಯಾರೂ ಸಹ ಇಚ್ಛಿಸುತ್ತಿಲ್ಲ. ಹೀಗಾಗಿ ಈ ಮನೆಗಳು ಯಾವುದೇ ರೀತಿಯಲ್ಲೂ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿವೆ.ಆಂಧ್ರಪ್ರದೇಶದ ಹಿಂದೂಪುರ ತಾಲ್ಲೂಕಿನ ಸೋಮಘಟ್ಟ ಸಮೀಪದ ಗಡಿಭಾಗವಾದ ಚಿಂತಮಾಕಲದಿನ್ನೆ ಬಳಿ  ಮನೆಗಳನ್ನು ನಿರ್ಮಿಸಲಾಗಿದ್ದು, ಈ ಸ್ಥಳವು ಬಾಗೇಪಲ್ಲಿಯಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ಹಕ್ಕಿಪಿಕ್ಕಿ ಸಮುದಾಯ ಮತ್ತು ಇನ್ನಿತರ ಅಲೆಮಾರಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಮನೆಗಳನ್ನು ನಿರ್ಮಿಸುವುದರ ಜೊತೆಗೆ ಅಗತ್ಯ ಮೂಲಸೌಕರ್ಯ ಸಹ ಒದಗಿಸುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.ಮನೆಗಳಲ್ಲಿ ಜನರು ಯಾಕೆ ವಾಸುತ್ತಿಲ್ಲ ಎಂಬುದಕ್ಕೆ ಹಲವು ಕಾರಣಗಳಿವೆ. ಆರಂಭದಲ್ಲಿ ಒಂದೆರಡು ವಾರ ಮಾತ್ರ ಇದ್ದ ಜನರು ಅಲ್ಲಿಂದ ಬೇರೆಡೆ ಹೋಗಲು ಕಾರಣವೇನೆಂದು ತಡಕಾಡಿದಾಗ, ಹಲವು ವಿಷಯಗಳು ಬೆಳಕಿಗೆ ಬಂದವು.  ಸ್ಥಳೀಯರು ಹೇಳುವಂತೆ, ಮನೆಗಳಿಗೆ ಸರ್ಕಾರವು ಸರಿಯಾದ ಸೌಕರ್ಯ ಕಲ್ಪಿಸಲಿಲ್ಲ. ನೀರು ಮತ್ತು ವಿದ್ಯುತ್ ವ್ಯವಸ್ಥೆ ಒದಗಿಸಲಿಲ್ಲ. ಗ್ರಾಮದ ಹೊರವಲಯದಲ್ಲಿ ಇರುವ ಕಾರಣ ಕೆಲವರಲ್ಲಿ ಮೂಢನಂಬಿಕೆಯೂ ಕಾಡಿತು. ಇದರಿಂದಾಗಿ ಜನರು ಮನೆಗಳಿಂದ ದೂರವುಳಿಯುವುದೇ ಉತ್ತಮವೆಂದು ಭಾವಿಸಿ, ಅವುಗಳತ್ತ ಸುಳಿಯಲಿಲ್ಲ ಎಂದು ಶಿಕ್ಷಕ ಲಕ್ಷ್ಮಿನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.ವರ್ಷಗಳು ಕಳೆದಂತೆ ಮನೆಗಳು ಶಿಥಿಲವಾಗತೊಡಗಿದವು. ಕೆಲವರು ಕಿಟಕಿ, ಬಾಗಿಲು ಕಿತ್ತೊಯ್ದರು. ಜನರು ವಾಸವಿರಬೇಕಾದ ಜಾಗದಲ್ಲಿ ಜಾನುವಾರುಗಳನ್ನು ಬಿಡಲಾಯಿತು. ಅಲ್ಲೇ ಮೇವು ಹಾಕುವ ಮತ್ತು ಗಲೀಜು  ಮಾಡುವ ಪ್ರವೃತ್ತಿಯೂ ಮುಂದುವರೆಯಿತು. ಅಕ್ರಮ ಚಟುವಟಿಕೆಗೂ ಬಳಕೆಯಾಗತೊಡಗಿತು. ಇದೆಲ್ಲವೂ ಸರ್ಕಾರದ ಆಸ್ತಿಯಾಗಿದ್ದರೂ ಯಾರೂ ಸಹ ಇಲ್ಲಿ ಭೇಟಿ ನೀಡಿಲ್ಲ. ಪರಿಶೀಲನೆಯೂ ಸಹ ನಡೆಸಿಲ್ಲ ಎಂದು ಅವರು ತಿಳಿಸಿದರು.ಈ ಮನೆಗಳಲ್ಲಿ ವಾಸಿಸಲು ಜನರು ಈಗಲೂ ಸಿದ್ಧರಿದ್ದಾರೆ. ಆದರೆ ಕನಿಷ್ಠ ಮೂಲಸೌಕರ್ಯ ಒದಗಿಸಬೇಕಾದದ್ದು ಸರ್ಕಾರದ ಆದ್ಯ ಕರ್ತವ್ಯ. ಪುನಃ ಕಿಟಕಿ, ಬಾಗಿಲು ಅಳವಡಿಸಿ ಮನೆಗಳನ್ನು ನವೀಕರಣಗೊಳಿಸಿದ್ದಲ್ಲಿ ಹಕ್ಕಿಪಿಕ್ಕಿ ಸಮುದಾಯದವರು ಇಲ್ಲವೇ ಬೇರೆ ಸಮುದಾಯದವರು ವಾಸಿಸುತ್ತಾರೆ. ಸರ್ಕಾರ ಆಸ್ತಿಯನ್ನು ವ್ಯರ್ಥ ಮಾಡುವ ಬದಲು ಅದರ ಸದ್ಬಳಕೆಗೆ ಸರ್ಕಾರ ವಿಶೇಷ ಗಮನಹರಿಸಬೇಕು ಎಂದು ಗ್ರಾಮಸ್ಥ ಬಾಬು ತಿಳಿಸಿದರು.ಗ್ರಾಮಸ್ಥರ ಮನದಲ್ಲಿ ಈ ಮನೆಗಳ ಬಗ್ಗೆ ತಪ್ಪು ಭಾವನೆ ಮೂಡಿದೆ. ದೆವ್ವದ ಮನೆಗಳು, ಆಶುಭ ಸ್ಥಳ ಎಂದೆಲ್ಲಾ ವದಂತಿಗಳು ಹಬ್ಬಿವೆ. ಇದೆಲ್ಲವನ್ನೂ ಹೋಗಲಾಡಿಸಿ ಮನೆಗಳನ್ನು ವಾಸಯೋಗ್ಯ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಗಮನಹರಿಸಬೇಕು ಎಂದು ಅವರು ತಿಳಿಸಿದರು.***

ಸರ್ಕಾರದಿಂದ ನಿರ್ಮಿಸಿದ ಮನೆಗಳು ವಾಸಯೋಗ್ಯ ಆಗಬೇಕು. ಜನರಿಂದ ಸದ್ಬಳಕೆಯೂ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಗಮನಹರಿಸಬೇಕು.

-ಬಾಬು,
ಗ್ರಾಮಸ್ಥ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.