ಸೋಮವಾರ, ಮೇ 17, 2021
29 °C

ಪಾಳು ಬಿದ್ದ ಪಾಲಿಟೆಕ್ನಿಕ್ ವಸತಿಗೃಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಲ್ಲಿನ ಚಂದ್ರಶೇಖರ್ ಪಾಟೀಲ ಕ್ರೀಂಡಾಗಣದ ಮುಂಭಾಗದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ವಸತಿ ಗೃಹ ಪಾಳುಬಿದ್ದರೂ ಕೇಳುವವರೆ ಇಲ್ಲ ಎನ್ನುವಂತಾಗಿದೆ.ನಿಲಯದಲ್ಲಿ ಇಂಥ ಅವ್ಯವಸ್ಥೆ ಇದ್ದರೂ ಪ್ರತಿ ವರ್ಷ ನೂರಕ್ಕೂ ಹೆಚ್ಚು ಪಾಲಿಟೆಕ್ನಿಕ್ ವಿದ್ಯಾರ್ಥಿಗಳನ್ನು ವಸತಿ, ಊಟಕ್ಕಾಗಿ ಸೇರ್ಪಡೆ ಮಾಡಿಕೊಳ್ಳುವುದನ್ನು ಮಾತ್ರ ನಿಲ್ಲಿಸಿಲ್ಲ.

 

ಈ ವಸತಿಗೃಹವು ಸಮಾಜ ಕಲ್ಯಾಣ ಇಲಾಖೆ ಅಥವಾ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯಲ್ಲಿಲ್ಲ. ಲೋಕೋಪಯೋಗಿ ಇಲಾಖೆಯು ಈ ವಸತಿ ನಿಲಯವನ್ನು ನಿರ್ಮಿಸಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಹಸ್ತಾಂತರಿಸಿ ಅರ್ಧ ಶತಮಾನ ಕಳೆದಿದೆ.ವಸತಿಗೃಹವು ಸರ್ಕಾರಿಯಾಗಿದ್ದರೂ ಪ್ರತಿ ವಿದ್ಯಾರ್ಥಿಗಳಿಂದ ವರ್ಷಕ್ಕೆ ರೂ. 2,600 ಶುಲ್ಕ ಭರಿಸಿಕೊಳ್ಳಲಾಗುತ್ತದೆ. ಅಗ್ಗದಲ್ಲಿ ಕಾಲೇಜಿನ ಹತ್ತಿರವೆ ರೂಮ್ ಸಿಗುತ್ತದೆ ಎಂದುಕೊಂಡು ಈ ವಸತಿ ನಿಲಯದ ಪ್ರವೇಶಕ್ಕೆ ಎಲ್ಲಿಲ್ಲದ ಸ್ಪರ್ಧೆ ನಡೆಯುತ್ತದೆ. ವಿದ್ಯಾರ್ಥಿಗಳ ನಡುವಿನ ಈ ಸ್ಪರ್ಧೆಯನ್ನೆ ಬಂಡವಾಳ ಮಾಡಿಕೊಂಡಿರುವ ಲೋಕೋಪಯೋಗಿ ಇಲಾಖೆ ಹಾಗೂ ಕಾಲೇಜಿನ ಪ್ರಾಂಶುಪಾಲರು, ವಸತಿ ನಿಲಯ ಸುಧಾರಿಸುವ ಬಗ್ಗೆ ತಲೆಕೆಡೆಸಿಕೊಂಡಿಲ್ಲ.ವಸತಿ ನಿಲಯದ ಸುತ್ತ ಹಾಗೂ ಒಳಭಾಗದಲ್ಲಿ ಕಸದರಾಶಿಯೊಂದಿಗೆ ನಿರಪಯುಕ್ತ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಇದರಲ್ಲೆ ವಿದ್ಯಾರ್ಥಿಗಳು ಮೂತ್ರ ಮಾಡಿ ಗಬ್ಬೆಬ್ಬಿಸಿದ್ದಾರೆ. `ಹಾಸ್ಟೆಲ್‌ನಲ್ಲಿ ಮೇಲಿಂದ ಮೇಲೆ ಶೌಚಾಲಯ ಹಾಳಾಗುತ್ತವೆ. ಏನು ಮಾಡುವುದು ಸರ್, ರಾತ್ರಿ ಎಲ್ಲಿ ಬೇಕೋ ಅಲ್ಲೆ ಹುಡುಗ್ರೂ ಏಕಿ ಮಾಡ್ತಾವ್. ಹೇಳಿಹೇಳಿ ಸಾಕಾಗೇದ~ ಎಂದು ವಸತಿ ನಿಲಯದ ಕೆಲಸಗಾರನೊಬ್ಬ ಬೇಸರದಿಂದ ನುಡಿದ.ಕೋಣೆ ಬಾಡಿಗೆಯಿಂದ ಹಿಡಿದು ಊಟಕ್ಕಾಗಿ ಪ್ರತಿ ತಿಂಗಳು ವಿದ್ಯಾರ್ಥಿಗಳೆ ಹಂಚಿಕೊಂಡು ಹಣ ಕಟ್ಟುತ್ತಿದ್ದಾರೆ. ಸದ್ಯ ವಸತಿ ನಿಲಯದಲ್ಲಿ 130 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳಿಂದ ಸಂಗ್ರಹವಾಗುವ ರೂ. 3.38 ಲಕ್ಷವನ್ನು ವಸತಿ ನಿಲಯದ ನಿರ್ವಹಣೆಗೆ ಬಳಸುತ್ತಿಲ್ಲ ಎನ್ನುವುದು ವಿಷಾದದ ಸಂಗತಿ.

 

ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಕೆಲಸವನ್ನು ಪಾಲಿಟೆಕ್ನಿಕ್ ಕಾಲೇಜು ಮಾಡುವುದರಿಂದ ವಿದ್ಯಾರ್ಥಿಗಳ ಅಂಕ  ಆಧರಿಸಿದ ಭವಿಷ್ಯ ಶಿಕ್ಷಕರ ಕೈಯಲ್ಲೆ ಇರುತ್ತದೆ. ಹೀಗಾಗಿ ವಸತಿ ನಿಲಯದ  ಅವ್ಯವಸ್ಥೆ ಬಗ್ಗೆ ಯಾವುದೇ ವಿದ್ಯಾರ್ಥಿ ದೂರು ಹೇಳುವ ಧೈರ್ಯ ಮಾಡುತ್ತಿಲ್ಲ.`ಇಂಟರ್ನಲ್ ಮಾರ್ಕ್ಸ್ ಅವರ ಕಡೆಗೆ ಇರ‌್ತಾವ್ರಿ.. ಹಾಸ್ಟೆಲ್ ಬಗ್ಗೆ ಕೇಳಿದ್ರ್ ಮಾರ್ಕ್ಸ್ ಕಡಿಮೆ ಹಾಕ್ತಾರಿ.. ಅದಕ್ ಏಲ್ಲಾರೂ ಸುಮ್ನೆ ಇದ್ದಾರಿ~ ಎಂದು ವಿದ್ಯಾರ್ಥಿಯೊಬ್ಬ ಅಳಲು ತೋಡಿಕೊಂಡ.`ಹಾಸ್ಟೆಲ್‌ಗೆ ಪ್ರತ್ಯೇಕ ಬೊರ್‌ವೆಲ್ ಇದೆ. ಅದೇ ನೀರನ್ನು ಸೇವಿಸಲು ಬಳಸುತ್ತೇವೆ. ಫಿಲ್ಟರ್.. ಗಿಲ್ಟರ್ ಏನೂ ಇಲ್ರೀ..~ ಎಂದು ಇನ್ನೊಬ್ಬ ವಿದ್ಯಾರ್ಥಿ ವಿವರಿಸಿದ.`ಈ ನೀರ್ ಕುಡ್ದು.. ಕಿಡ್ನಿ ಸ್ಟೋನ್ ಆಗ್ಯಾವ್ರೀ ನನಗ~ ಎಂದು ಇನ್ನೊಬ್ಬ ವಿದ್ಯಾರ್ಥಿ ಮುಖ ಕಪ್ಪಿಟ್ಟುಕೊಂಡು ಹೇಳಿದ.ವಸತಿ ನಿಲಯದಲ್ಲಿರುವ ಕೆಲಸಗಾರರು ಹೇಳುವ ಪ್ರಕಾರ `ಹದಿನೈದು ವರ್ಷದಿಂದ ಈ ಹಾಸ್ಟೆಲ್‌ಗೆ ಬಣ್ಣ ಹಾಕಿಲ್ರೀ... ಹಿಂದೊಮ್ಮೆ ಪಿಡಬ್ಲ್ಯುಡಿಯಿಂದ ಅಧಿಕಾರಿಗಳು ಬಂದಿದ್ರೂ... ಏನಾದ್ರೂ ಮಾಡಿಕೊಡ್ತಾರ್ ಅಂತ ಕಾಯ್ದಿವ್ರೀ.. ಇನ್ನು ಯಾವ ಸವಲತ್ ಮಾಡಿ ಕೊಟ್ಟಿಲ್ಲ. ಯಾರ ಮುಂದ ಸಮಸ್ಯೆ ಹೇಳ್ಕೊಬೇಕು ಅಂಥ ಚಿಂತ್ಯಾಗೈತ್ರಿ~ ಎಂದರು.

ಸಂಬಂಧಿಸಿದ ಅಧಿಕಾರಿಗಳು, ಕಾಲೇಜಿನ ಪ್ರಾಂಶುಪಾಲರು ಈಗಲಾದರೂ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದು ಗುಲ್ಬರ್ಗದ ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.