ಬುಧವಾರ, ಮೇ 12, 2021
18 °C

ಪಾಳ್ಯ ಜನರ ಗೋಳು ಕೇಳೋರು ಯಾರು?

ಪ್ರಜಾವಾಣಿ ವಾರ್ತೆ/ವಿಶೇಷ ವರದಿ/ಡಿ.ವೆಂಕಟಾಚಲ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಚರಂಡಿ ಇಲ್ಲದೇ  ಮನೆಗಳ ಮುಂದೆಯೇ ಹರಿಯುವ ತ್ಯಾಜ್ಯ ನೀರು, ಎಲ್ಲೆಂದರಲ್ಲಿ ಹಳ್ಳ ಬಿದ್ದ ಮಣ್ಣಿನ ರಸ್ತೆ, ಕುಡಿಯುವ ನೀರಿಗೆ ಪರದಾಟ, ಮುಸ್ಸಂಜೆ ಆಗುತ್ತಿದ್ದಂತೆಯೇ ಮನೆಗೆ ನುಗ್ಗುವ ಸೊಳ್ಳೆಗಳ ಕಾಟ, ಕಾಲುದಾರಿಯಲ್ಲೇ ಬೆಳೆದ ಗಿಡ-ಗಂಟಿ...

ಇದು ತಾಲ್ಲೂಕಿನ ಪಾಳ್ಯ ಗ್ರಾಮದ ಇಂದಿನ ಸ್ಥಿತಿ.ಗ್ರಾಮದ ಕೆಲವು ಬಡಾವಣೆಗಳಲ್ಲಿ ಹಲವು ವರ್ಷಗಳಿಂದ ರಸ್ತೆಗಳು ತೀರ ಅದಗೆಟ್ಟಿವೆ. ಈಗಲೂ ಮಣ್ಣಿನ ರಸ್ತೆಯಾಗಿದ್ದು ಎಲ್ಲೆಂದರಲ್ಲಿ ಹಳ್ಳ ಬಿದ್ದಿವೆ. ಮಳೆಗಾಲದಲ್ಲಿ ಇದರಲ್ಲಿ ನೀರು ತುಂಬಿಕೊಳ್ಳುತ್ತಿದೆ. ಪ್ರತಿಯೊಬ್ಬರ ಮನೆ ಮುಂದೆ ಕೆರೆಯೇ ನಿರ್ಮಾಣವಾಗುತ್ತದೆ.ಮನೆಯ ತ್ಯಾಜ್ಯ ಇದರಲ್ಲಿ ಸೇರಿಕೊಂಡು ಗ್ರಾಮದ ಪರಿಸರ ಸಂಪೂರ್ಣ ಹಾಳಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಗ್ರಾಮಸ್ಥರನ್ನು ಕಾಡುತ್ತಿದೆ.ಮೋರಿಗಳಲ್ಲಿನ ಹೂಳೆತ್ತಿ ಬಹಳ ದಿನಗಳೇ ಕಳೆದಿವೆ. ಎಲ್ಲೆಂದರಲ್ಲಿ ಕಟ್ಟಿಕೊಂಡ ಮೋರಿಗಳು ಗಬ್ಬು ನಾರುತ್ತಿವೆ. ಈ ದುರ್ವಾಸನೆಯಲ್ಲಿಯೇ ಜನ ಬದುಕುತ್ತಿದ್ದಾರೆ.ಮನೆಗಳ ಮುಂದೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ ಎಂದು ಆರೋಗ್ಯ ಇಲಾಖೆ ಡಂಗುರ ಸಾರುತ್ತಿದೆ. ಆದರೆ, ಈ ಗ್ರಾಮದಲ್ಲಿ ಮಳೆ ನೀರು ಹರಿದುಹೋಗಲು ಚರಂಡಿಯೇ ಇಲ್ಲ. ಅಲ್ಲಲ್ಲಿ ನಿಂತ ನೀರಿನಲ್ಲಿ  ಸೊಳ್ಳೆಗಳು ಹುಟ್ಟಿಕೊಳ್ಳುತ್ತಿವೆ.  ಇದನ್ನು ಸರಿಪಡಿಸುವ ಬಗ್ಗೆ ಮನವಿ ಮಾಡಿದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಾರೆ ಗ್ರಾಮದ ನಿವಾಸಿ ಸಿದ್ದರಾಜು.ಇನ್ನೂ ನೀಗದ ನೀರಿನ ಸಮಸ್ಯೆ

ಗ್ರಾಮದಲ್ಲಿ ಕೆಲವು ನೀರಿನ ತೊಂಬೆಗಳು ಇದ್ದರೂ ನಲ್ಲಿ ಸಂಪರ್ಕ ಕಲ್ಪಿಸಿಲ್ಲ. ವಿದ್ಯುತ್ ಅಸಮರ್ಪಕ ಪೂರೈಕೆಯಿಂದಾಗಿ ನೀರಿನ ಸಮಸ್ಯೆ ತಲೆದೋರಿದ್ದು, ಬೋರ್‌ವೆಲ್ ಬಳಿ ನೀರಿಗಾಗಿ ಕಾದು ಕುಳಿತುಕೊಳ್ಳಬೇಕಾಗಿದೆ. ಮಹಿಳೆಯರು ಮಾತ್ರವಲ್ಲದೇ ಮಕ್ಕಳು ಕೂಡ ಶಾಲೆ, ಕಾಲೇಜು ಬಿಟ್ಟು ನೀರು ಹಿಡಿಯಲಯ ಅಲೆದಾಡುವ ಸ್ಥಿತಿ ಇದೆ. ಕೆಲವು ತೊಂಬೆಗಳಂತೂ ನೀರು ಪೂರೈಕೆಯಾಗದೇ ಸ್ಮಾರಕವಾಗಿ ನಿಂತಿವೆ.`ಅಂತರ್ಜಲ ಕುಸಿತ ಮತ್ತು ವಿದ್ಯುತ್ ಸಮರ್ಪಕ ಪೂರೈಕೆ ನೀರಿನ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಜನತೆ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮೂಲಕ ಗ್ರಾಮದ ರಸ್ತೆ,ಚರಂಡಿ ಮತ್ತಿತರ ಕಾಮಗಾರಿಗಳನ್ನು ಮಾಡಬಹುದಾಗಿದೆ. ಆದರೆ, ಜನರು ನರೇಗಾ ಕೆಲಸಕ್ಕೆ ಮುಂದೆ ಬಾರದಿರುವುದೇ ಮುಖ್ಯ ಸಮಸ್ಯೆಯಾಗಿದೆ' ಎನ್ನುವುದು ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ ನಾಯಕ ಅವರ ಸಮಜಾಯಿಷಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.