ಪಾವಂಜೆ ಮಹಾಲಿಂಗೇಶ್ವರ

7

ಪಾವಂಜೆ ಮಹಾಲಿಂಗೇಶ್ವರ

Published:
Updated:

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಶೈವ ದೇವಾಲಯಗಳಲ್ಲಿ ಪಾವಂಜೆಯ ಮಹಾಲಿಂಗೇಶ್ವರ ದೇವಸ್ಥಾನವೂ ಒಂದು. ಇದು ಎತ್ತರದ ದಿಣ್ಣೆಯ ಮೇಲಿದ್ದು ಬಹು ದೂರದಿಂದಲೇ ಕಣ್ಣಿಗೆ ಗೋಚರಿಸುತ್ತದೆ. ಒಳಗೆ ಚತುರಸ ಗರ್ಭಗುಡಿ, ಎದುರು ತೀರ್ಥಮಂಟಪ, ಸುತ್ತಲೂ ಪೌಳಿ, ಹೊರಗೆ ಗಜಮುಖನ ಗುಡಿ, ಮಾತ್ರವಲ್ಲದೆ ವಿಶಾಲವಾದ ಹೊರಾಂಗಣ ಹೊಂದಿದೆ. ಆಗಿನ ಕಾಲಕ್ಕೆ ಸೇರಿದ ಕೆಲವು ಶಾಸನಗಳು ಮತ್ತು ಸತಿಗಲ್ಲನ್ನು ಕೂಡಾ ಇಲ್ಲಿ ಕಾಣಬಹುದು. ಕೈಯಲ್ಲಿ ಕುಠಾರಿಯನ್ನು ಹಿಡಿದು ನಿಂತ ಒಂದಡಿ ಎತ್ತರದ ಪಂಚಲೋಹದ ಬಲಿಮೂರ್ತಿ ಈ ಜಿಲ್ಲೆಯಲ್ಲಿಯೇ ಅಪರೂಪ ಎಂದೂ ಹೇಳುತ್ತಾರೆ.



ದ್ವಾಪರದಲ್ಲಿ ಭಾರ್ಗವ ಋಷಿಯು ಪಾವಂಜೆಗೆ ಬಂದು ಇದೇ ಜಾಗದಲ್ಲಿ ತಪಸ್ಸು ಮಾಡಿ ಅದರ ಕುರುಹಾಗಿ ಲಿಂಗವೊಂದನ್ನು ಪ್ರತಿಷ್ಠಾಪಿಸಿದ ಎನ್ನುತ್ತದೆ ಸ್ಥಳಪುರಾಣ. ಹಿಂದೆ ಇದು (ಹಾವುಂಜೆ) ಹಾವುಗಳ ಸ್ಥಳವಾಗಿತ್ತಂತೆ.  ಕ್ರಮೇಣ ಜನಭಾಷೆಯಲ್ಲಿ ಪಾವುಂಜೆಯಾಯಿತು ಎನ್ನುತ್ತಾರೆ ಕೆಲ ಹಿರಿಯರು. ದೇವಸ್ಥಾನದ ಆವರಣದಲ್ಲಿ ಗಣಪತಿಯೂ ವಿರಾಜಮಾನನಾಗಿರುವ ಕಾರಣ ಇದನ್ನು ಒಟ್ಟಾಗಿ ಪಾವಂಜೆ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನವೆಂದು ಕರೆಯುವುದು ರೂಢಿ.

ದೇವಾಲಯದ ಗುಡ್ಡದಿಂದ ಇಳಿದು ಬರುವಾಗ ಮೊದಲು ಗ್ರಾಮವನ್ನು ರಕ್ಷಿಸುವ ರಕ್ತೇಶ್ವರಿ ಗುಡಿ, ನಂತರ ದುರ್ಗಾಪರಮೇಶ್ವರಿ ಹಾಗೂ ಜ್ಞಾನ ಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಸಿಗುತ್ತದೆ. ದುರ್ಗೆಯ ಗುಡಿ ಇನ್ನೂರು ವರ್ಷಗಳಷ್ಟು ಹಳೆಯದು. ಈ ಗ್ರಾಮದಲ್ಲಿ ಹಿಂದೆ ಸತಿ ಹೋದ ಗೌರವ್ವ ಎಂಬಾಕೆಯ ಗೌರವಾರ್ಥಒಂದು ಸತಿಗ್ಲ್ಲಲಿದೆ. ಅದರ ಮೇಲೆ  ಹೆಡೆ ಬಿಚ್ಚಿ ನಿಂತ ಸರ್ಪದ ಕೆತ್ತನೆಯಿದ್ದು ಅದು ಸಹಗಮನ ಮಾಡಿದ ಹೆಣ್ಣಿಗೆ ಕೊಡೆ ಹಿಡಿದು ನಿಂತಂತೆ ಭಾಸವಾಗುತ್ತದೆ.



ಪ್ರತೀ ವರ್ಷ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಿಂದ ಎಂಟು ದಿನ ಜಾತ್ರೆ ನಡೆಯುತ್ತದೆ. ರಥೋತ್ಸವ, ದೀಪೋತ್ಸವ, ರಂಗಪೂಜೆ, ಕಟ್ಟೆಪೂಜೆ, ತೆಪ್ಪೋತ್ಸವ, ದೇವರ ಸವಾರಿ ಈ ಸಮಯದಲ್ಲಿ ನಡೆಯುವ ವಿಶೇಷ ಆಚರಣೆಗಳು.



 ಜಾತ್ರೆ ಅವಧಿಯಲ್ಲಿ ಗ್ರಾಮದ ಜನರು ಮನೆಗಳಲ್ಲಿ ಮದುವೆ, ಮುಂಜಿ ಮೊದಲಾದ ಶುಭ ಕಾರ್ಯ ನಡೆಸುವುದಾಗಲೀ, ಬೇರೆ ಊರಿಗೆ ಪ್ರಯಾಣ ಬೆಳೆಸುವುದಾಗಲೀ ಮಾಡಕೂಡದಂತೆ!



ಒಂದು ವೇಳೆ ಅನಿವಾರ್ಯ ಕಾರಣಗಳಿಂದಾಗಿ ಪರ ಊರಿಗೆ ಹೋಗಲೇಬೇಕಾದ ಪರಿಸ್ಥಿತಿ ಬಂದರೆ ಜಾತ್ರೆ ಮುಗಿಯುವುದರೊಳಗೆ ವಾಪಸ್ಸಾಗಬೇಕು ಎಂಬುದು ಇಲ್ಲಿನ ನಿಯಮ. ಈ ದೇವಸ್ಥಾನವು ಮಂಗಳೂರಿನಿಂದ 26 ಕಿ.ಮೀ ದೂರ ಪಡುಬಿದ್ರೆಗೆ  ಹೋಗುವ ದಾರಿಯಲ್ಲಿ ರಸ್ತೆಗೆ ತಾಗಿಕೊಂಡಂತಿದೆ. ಸುರತ್ಕಲ್ ಹಾಗೂ ಮೂಲ್ಕಿಯಲ್ಲಿ ವಸತಿ ಸೌಲಭ್ಯಗಳಿವೆ. ಮಾಹಿತಿಗೆ 08242 282004, 94491 31617.



ಸೇವೆಗಳ ವಿವರ

ರುದ್ರಾಭಿಷೇಕ  50 ರೂ, ಬಿಲ್ವಾರ್ಚನೆ 25 ರೂ

ಶಿವಾರ್ಚನೆ  25 ರೂ, ಪಂಚಾಮೃತ ಅಭಿಷೇಕ  75 ರೂ

ಗಣಹೋಮ  300 ರೂ, ತುಲಾಭಾರ ಸೇವೆ  100 ರೂ

ನಂದಾದೀಪ ಸೇವೆ ತಿಂಗಳಿಗೆ 100 ರೂ ಸರ್ವಸೇವೆ 500 ರೂ

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry