ಪಾವಗಡಕ್ಕೆ ಕುಡಿಯುವ ನೀರು ಸಚಿವ ಬೊಮ್ಮಾಯಿ ಭರವಸೆ

7

ಪಾವಗಡಕ್ಕೆ ಕುಡಿಯುವ ನೀರು ಸಚಿವ ಬೊಮ್ಮಾಯಿ ಭರವಸೆ

Published:
Updated:

ಬೆಂಗಳೂರು: ಪಾವಗಡ ತಾಲ್ಲೂಕಿಗೆ ಶುದ್ಧ ಕುಡಿಯುವ ನೀರು ನೀಡಲು ಸರ್ಕಾರ ಕಟಿಬದ್ಧವಾಗಿದ್ದು, ಈ ಸಲದ ಬಜೆಟ್‌ನಲ್ಲಿ ಈ ಯೋಜನೆ ಸಲುವಾಗಿ ಹಣ ಮೀಸಲು ಇಡುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.ಕುಡಿಯುವ ನೀರಿಗಾಗಿ ಆಗ್ರಹಿಸಿ ಪಾವಗಡದಿಂದ ಪಾದಯಾತ್ರೆ ಮೂಲಕ ಬಂದ ರೈತರು ಮತ್ತು ಸ್ವಾಮೀಜಿಗಳ ನೇತೃತ್ವದ ನಿಯೋಗಕ್ಕೆ ಈ ಮುಖಂಡರು ಈ ಭರವಸೆ ನೀಡಿದ್ದಾರೆ.ಪಾವಗಡದ ಸ್ವಾಮಿ ವಿವೇಕಾನಂದ ಗ್ರಾಮೀಣ ಆರೋಗ್ಯ ಕೇಂದ್ರದ ಮುಖ್ಯಸ್ಥರಾದ ಜಪಾನಂದ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಚಿತ್ರದುರ್ಗದ ಸಂಸದ ಜನಾರ್ದನ ಸ್ವಾಮಿ, ಪಟ್ನಾಯಕನಹಳ್ಳಿಯ ನಂಜಾವಧೂತ ಸ್ವಾಮಿ ಕೂಡ ಕೈಜೋಡಿಸಿದ್ದಾರೆ.ಈ ಮೂವರು ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿ ಸದಾನಂದ ಗೌಡರನ್ನು ಅವರ ಗೃಹ ಕಚೇರಿ `ಕೃಷ್ಣಾ~ದಲ್ಲಿ ಭೇಟಿ ಮಾಡಿ, ಪಾವಗಡ ತಾಲ್ಲೂಕಿನಲ್ಲಿನ ನೀರಿನ ಸಮಸ್ಯೆ ಬಗ್ಗೆ ವಿವರಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ `ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಯೋಜನೆ ಕುರಿತು ಪರಿಶೀಲಿಸಲು ಸೂಚಿಸಲಾಗುವುದು~ ಎಂದು ಹೇಳಿದರು.ಫ್ರೀಡಂ ಪಾರ್ಕ್‌ನಲ್ಲಿ ಧರಣಿ: ಇದೇ 8ರಂದು ಪಾವಗಡದಿಂದ ಹೊರಟ ರೈತರು, ಮಠಾಧೀಶರು ಮತ್ತು ಸಾರ್ವಜನಿಕರ 180 ಕಿ.ಮೀ ಪಾದಯಾತ್ರೆ ಸೋಮವಾರ ನಗರ ತಲುಪಿತು. ಮಧ್ಯಾಹ್ನ 12ಕ್ಕೆ ಇಲ್ಲಿನ ಫ್ರೀಡಂ ಪಾರ್ಕ್ ತಲುಪಿತು. `ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಪಾವಗಡ ತಾಲ್ಲೂಕು ಸೇರುತ್ತದೆ. ಇಲ್ಲಿನ ನೀರಿನ ಸಮಸ್ಯೆ ನೀಗಿಸಲು ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡಬಹುದು. ಇದಕ್ಕೆ ಸುಮಾರು 360 ಕೋಟಿ ರೂಪಾಯಿ ಯೋಜನೆ ಸಿದ್ಧವಾಗಿದ್ದು, ಈ ಸಲದ ಬಜೆಟ್‌ನಲ್ಲಿ ಹೆಚ್ಚಿನ ಹಣ ಒದಗಿಸಬೇಕು~ ಎಂದು ಸಂಸದ ಜನಾರ್ದನ ಸ್ವಾಮಿ ಆಗ್ರಹಿಸಿದರು.`ನೀರಿಗಾಗಿ ಹೋರಾಟ ಈಗಷ್ಟೇ ಆರಂಭವಾಗಿದೆ. ಮುಂದೆ ಮತ್ತಷ್ಟು ತೀವ್ರಗೊಳ್ಳುತ್ತದೆ. ಈ ಸಲ ಯೋಜನೆಗೆ ಚಾಲನೆ ನೀಡದಿದ್ದಲ್ಲಿ  ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಲಾಗುತ್ತದೆ~ ಎಂದು ಜಪಾನಂದ ಸ್ವಾಮಿ ಎಚ್ಚರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry