ಪಾವಗಡಕ್ಕೆ ಶುದ್ಧ ಕುಡಿಯುವ ನೀರು

7

ಪಾವಗಡಕ್ಕೆ ಶುದ್ಧ ಕುಡಿಯುವ ನೀರು

Published:
Updated:

ಬೆಂಗಳೂರು: ಪಾವಗಡ ತಾಲ್ಲೂಕಿಗೆ ಶುದ್ಧ ಕುಡಿಯುವ ನೀರು ನೀಡಲು ಸರ್ಕಾರ ಕಟಿಬದ್ಧವಾಗಿದ್ದು, ಈ ಸಲದ ಬಜೆಟ್‌ನಲ್ಲಿ ಈ ಯೋಜನೆ ಸಲುವಾಗಿ ಹಣ ಮೀಸಲಿಡುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.ಕುಡಿಯುವ ನೀರಿಗಾಗಿ ಆಗ್ರಹಿಸಿ ಪಾವಗಡದಿಂದ ಪಾದಯಾತ್ರೆ ಮೂಲಕ ಬಂದ ರೈತರು ಮತ್ತು ಸ್ವಾಮೀಜಿಗಳ ನೇತೃತ್ವದ ನಿಯೋಗಕ್ಕೆ ಇವರಿಬ್ಬರೂ ನೀರು ನೀಡುವ ಆಶ್ವಾಸನೆ ನೀಡಿದ್ದಾರೆ.ಪಾವಗಡದ ಸ್ವಾಮಿ ವಿವೇಕಾನಂದ ಗ್ರಾಮೀಣ ಆರೋಗ್ಯ ಕೇಂದ್ರದ ಮುಖ್ಯಸ್ಥರಾದ ಜಪಾನಂದ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಚಿತ್ರದುರ್ಗ ಸಂಸದ ಜನಾರ್ದನ ಸ್ವಾಮಿ, ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ ಕೂಡ ಕೈಜೋಡಿಸಿದ್ದಾರೆ. ಈ ಮೂವರು ಸೋಮವಾರ ಬೆಳಿಗ್ಗೆ ಮುಖ್ಯಮಂತ್ರಿ ಸದಾನಂದ ಗೌಡರನ್ನು ಅವರ ಗೃಹ ಕಚೇರಿ `ಕೃಷ್ಣಾ~ದಲ್ಲಿ ಭೇಟಿ ಮಾಡಿ, ಪಾವಗಡ ತಾಲ್ಲೂಕಿನಲ್ಲಿನ ನೀರಿನ ಸಮಸ್ಯೆ ಬಗ್ಗೆ ವಿವರಿಸಿದರು.ಇದನ್ನು ಕೇಳಿದ ನಂತರ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ `ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಯೋಜನೆ ಕುರಿತು ಪರಿಶೀಲಿಸಲು ಸೂಚಿಸಲಾಗುವುದು. ಬಜೆಟ್‌ನಲ್ಲೂ ಅದಕ್ಕೆ ಇಂತಿಷ್ಟು ಹಣ ಮೀಸಲಿಡುವ ಬಗ್ಗೆಯೂ ಪರಿಶೀಲಿಸಲಾಗುವುದು~ ಎಂದು ಹೇಳಿದರು.ಫ್ರೀಡಂ ಪಾರ್ಕ್‌ನಲ್ಲಿ ಧರಣಿ

ಫೆ.8ರಂದು ಪಾವಗಡದಿಂದ ಹೊರಟ ರೈತರು, ಮಠಾಧೀಶರು ಮತ್ತು ಸಾರ್ವಜನಿಕರ 180 ಕಿ.ಮೀನ ಪಾದಯಾತ್ರೆ ಸೋಮವಾರ ನಗರ ತಲುಪಿತು. ಮಧ್ಯಾಹ್ನ 12ಕ್ಕೆ ಇಲ್ಲಿನ ಫ್ರೀಡಂ ಪಾರ್ಕ್ ತಲುಪಿತು. ನಂತರ ಇಡೀ ದಿನ ಪ್ರತಿಭಟನಾ ಸಭೆ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಯಿತು.ಮನವಿ ಪತ್ರ ಸ್ವೀಕರಿಸಲು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಸಚಿವ ಬಸವರಾಜ ಬೊಮ್ಮಾಯಿ ಅವರು `ಕೇವಲ ಪಾವಗಡ ತಾಲ್ಲೂಕಿಗೆ ಮಾತ್ರವಲ್ಲದೆ, ಕೂಡ್ಲಿಗಿ, ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕುಗಳಿಗೂ ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶ ಇದ್ದು, ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು~ ಎಂದರು.ಈ ಸಂದರ್ಭದಲ್ಲಿ ಸಂಸದರಾದ ಜನಾರ್ದನ ಸ್ವಾಮಿ ಮತ್ತು ಜಿ.ಎಸ್.ಬಸವರಾಜು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು. ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಪಾವಗಡದ ಜನರು ತೀವ್ರ ಸಂಕಷ್ಟದಲ್ಲಿದ್ದು, ಹಲವು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ ಎಂದು ವಿವರಿಸಿದರು.ಪಾದಯಾತ್ರೆ ಫ್ರೀಡಂ ಪಾರ್ಕ್‌ಗೆ ಬಂದಾಗ ಬೆಂಗಳೂರಿನ ವಿವಿಧೆಡೆ ಕೆಲಸ ಮಾಡುತ್ತಿರುವ ಪಾವಗಡ ತಾಲ್ಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಎಲ್ಲರನ್ನೂ ಸ್ವಾಗತಿಸಿದರು.`ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಪಾವಗಡ ತಾಲ್ಲೂಕು ಸೇರುತ್ತದೆ. ಇಲ್ಲಿನ ನೀರಿನ ಸಮಸ್ಯೆ ನೀಗಿಸಲು ತುಂಗಭದ್ರೆಯಿಂದ ನೀರು ಸರಬರಾಜು ಮಾಡಬಹುದು. ಇದಕ್ಕೆ ಸುಮಾರು ರೂ.360 ಕೋಟಿ ಯೋಜನೆ ಸಿದ್ಧವಾಗಿದ್ದು, ಈ ಸಲದ ಬಜೆಟ್‌ನಲ್ಲಿ ಹೆಚ್ಚಿನ ಹಣ ಒದಗಿಸಬೇಕು~ ಎಂದು ಸಂಸದ ಜನಾರ್ದನ ಸ್ವಾಮಿ ಆಗ್ರಹಪಡಿಸಿದರು.`ನೀರಿಗಾಗಿ ಹೋರಾಟ ಈಗಷ್ಟೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಅದು ಮತ್ತಷ್ಟು ತೀವ್ರತೆ ಪಡೆದುಕೊಳ್ಳಲಿದೆ. ಈ ಸಲದ ಬಜೆಟ್‌ನಲ್ಲಿ ಹಣ ಮೀಸಲು ಇಟ್ಟು, ಯೋಜನೆಗೆ ಚಾಲನೆ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರ ನಿರಾಕರಣೆ ಸೇರಿದಂತೆ ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಲಾಗುತ್ತದೆ~ ಎಂದು ಜಪಾನಂದ ಸ್ವಾಮಿ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry