ಬುಧವಾರ, ನವೆಂಬರ್ 13, 2019
23 °C

ಪಾವಗಡದಿಂದ ತಿರುಪ್ಪೂರಿಗೆ ಯುವತಿಯರ ಸಾಗಣೆ

Published:
Updated:

ತುಮಕೂರು: ಸತತ 8 ವರ್ಷ ಬರಗಾಲ, ಹೊಲದಲ್ಲಿ ಬೆಳೆ ಇಲ್ಲ- ಕೈಲಿ ಕಾಸಿಲ್ಲ. ಇಂಥ ಸಂದರ್ಭದಲ್ಲಿ ಬೆಳೆದು ನಿಂತ ಹೆಣ್ಣು ಮಕ್ಕಳ ಮದುವೆ ದೊಡ್ಡ ಸವಾಲು. ಈ ಸವಾಲು ನಿಭಾಯಿಸುವುದು ಹೇಗೆಂದು ದಾರಿ ಕಾಣದ ಪಾವಗಡ ತಾಲ್ಲೂಕಿನ ಹಲವು ಪೋಷಕರು ತಮ್ಮ ಮಕ್ಕಳನ್ನು ತಮಿಳುನಾಡಿನ ತಿರುಪ್ಪೂರಿಗೆ ದುಡಿಯಲು ಕಳುಹಿಸುತ್ತಿದ್ದಾರೆ.

ಪಾವಗಡ ಹಿಂದೂಪುರ ರಸ್ತೆಯಲ್ಲಿ ಸೋಮವಾರ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 15ರಿಂದ 18 ವರ್ಷದ 42 ಹುಡುಗಿಯರು ಮತ್ತು 16 ಹುಡುಗರು ಪತ್ತೆಯಾಗುವುದರೊಂದಿಗೆ ಮಾನವ ಸಾಗಣೆಯ ಬೃಹತ್ ಜಾಲ ಬೆಳಕಿಗೆ ಬಂದಿದೆ.

ಪಾವಗಡ ತಾಲ್ಲೂಕಿನಲ್ಲಿ ಕಳೆದ ಐದು ವರ್ಷದಿಂದ ಸಕ್ರಿಯವಾಗಿರುವ ಈ ಜಾಲಕ್ಕೆ ಸಿಕ್ಕ ಸುಮಾರು 2500 ಯುವತಿಯರು ತಿರುಪ್ಪೂರಿನ ಹಲವು ಮಿಲ್‌ಗಳಲ್ಲಿ ಕೈದಿಗಳಂತೆ ದಿನದೂಡುತ್ತಿದ್ದಾರೆ ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಾಥಮಿಕ ಹಂತದ ವಿಚಾರಣೆಗಳಿಂದ ದೊರೆತಿರುವ ಮಾಹಿತಿ ಪ್ರಕಾರ ಈ ಯುವತಿಯರು ಹಲವು ಹಂತದಲ್ಲಿ ಬಲಿಪಶುಗಳಾಗುತ್ತಿದ್ದಾರೆ. ಇವರನ್ನು ದಾಳವಾಗಿಸಿಕೊಂಡು ಹಲ ಮಧ್ಯವರ್ತಿಗಳು ಕಾಸು ಕಮಾಯಿಸುತ್ತಿದ್ದಾರೆ.

ಹತ್ತಿ ಸಾಮ್ರಾಜ್ಯ: ಹತ್ತಿ ಬಟ್ಟೆಗೆ ಪ್ರಸಿದ್ಧವಾಗಿರುವ ತಮಿಳುನಾಡಿನ ತಿರುಪ್ಪೂರಿನಲ್ಲಿ ನೂರಾರು ಗಾರ್ಮೆಂಟ್ಸ್‌ಗಳಿವೆ. ಹತ್ತಿಯಿಂದ ನೂಲು ತೆಗೆಯುವ ಹಾಗೂ ಬಟ್ಟೆ ಹೊಲಿಯುವ ಉದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.

ಕಾರ್ಖಾನೆಗಳಿಗೆ ಅಗತ್ಯವಿರುವಷ್ಟು ಕಾರ್ಮಿಕರು ಸ್ಥಳೀಯವಾಗಿ ಸಿಗುತ್ತಿಲ್ಲ. ಇದ `ಲೇಬರ್ ಕಾಂಟ್ರಾಕ್ಟ್' ದಂಧೆಗೆ ದಾರಿ ಮಾಡಿಕೊಟ್ಟಿದೆ. ಕಾರ್ಖಾನೆ ಆಡಳಿತ ಮಂಡಳಿಗಳು ಕಾರ್ಮಿಕರನ್ನು ಒದಗಿಸುವ ಗುತ್ತಿಗೆದಾರರನ್ನು ಗುರುತಿಸಿ ದೂರದ ಪ್ರದೇಶಗಳಿಂದ ಕಾರ್ಮಿಕರನ್ನು ಹೊಂಚಿ ತರುವಂತೆ ಬೆನ್ನು ತಟ್ಟಿದ್ದಾರೆ.

ಈ ಏಜೆಂಟರು ಹಳ್ಳಿಗಳಲ್ಲಿರುವ ಕೆಲವರನ್ನು ಗುರುತಿಸಿ ತಮಗೆ ಯುವತಿಯರ ಮಾಹಿತಿ ತಲುಪುವ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಒಮ್ಮೆ ಮಾಹಿತಿ ದೊರೆತ ನಂತರ ಹಳ್ಳಿಗಳಿಗೆ ತೆರಳುವ ಏಜೆಂಟರು ಯುವತಿಯರ ತಂದೆಯ ಕೈಗಿಷ್ಟು ಹಣ ಇಟ್ಟು, ಬಣ್ಣದ ಮಾತಿನಿಂದ ಮರಳು ಮಾಡಿ ಯುವತಿಯರನ್ನು ತಿರುಪ್ಪೂರಿನ ಬಸ್ ಹತ್ತಿಸುತ್ತಾರೆ.

ಬಂಧನದ ಬದುಕು

ತಿರುಪ್ಪೂರು ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುವವರಿಗೆ ಅತಿ ಕಡಿಮೆ ಸಂಬಳ ದೊರೆಯುತ್ತದೆ. ಅವರದು ಸ್ವಾತಂತ್ರ್ಯವಿಲ್ಲದ ಬಂಧನದ ಬದುಕು. ಕಾರ್ಖಾನೆ ಆವರಣದಲ್ಲಿಯೇ ವಸತಿ ಸೌಲಭ್ಯವೂ ಇರುತ್ತದೆ. ಯಾವುದೇ ಕಾರಣಕ್ಕೂ ಇವರನ್ನು ಆಚೆಗೆ ಕಳುಹಿಸುವುದಿಲ್ಲ. ಒಂದು ವೇಳೆ ಹೊರಗೆ ಕಳಿಸುವುದಿದ್ದರೂ ಏಜೆಂಟ್ ಅವರೊಂದಿಗೆ ಇರುತ್ತಾನೆ. ಮೂರು ವರ್ಷ ದುಡಿಸಿಕೊಂಡು ಅವರನ್ನು ಆ ನಂತರ ಆಚೆ ದೂಡಲಾಗುತ್ತದೆ. ಮೂರು ವರ್ಷದ ನಂತರ ಕೆಲಸಕ್ಕಿಟ್ಟುಕೊಂಡರೆ ಕಾರ್ಮಿಕ ಕಾನೂನು ಪ್ರಕಾರ ಸೌಲಭ್ಯ ಕೊಡಬೇಕಾದ ಹಿನ್ನೆಲೆಯಲ್ಲಿ ಅವರನ್ನು ಆಚೆ ದೂಡಲಾಗುತ್ತದೆ ಎಂದು ಹೇಳಲಾಗಿದೆ.

ಡಬಲ್ ಕಮಿಷನ್

ಲೇಬರ್ ಕಾಂಟ್ರಾಕ್ಟ್ ವಹಿಸಿಕೊಂಡ ಗುತ್ತಿಗೆದಾರನಿಗೆ ಒಬ್ಬ ಯುವತಿಯನ್ನು ಕಾರ್ಖಾನೆಗೆ ತಲುಪಿಸಿದ್ದಕ್ಕೆ ಮಾಲೀಕನ ಕಡೆಯಿಂದ ಸಾಮಾನ್ಯವಾಗಿ ರೂ 3000 ಸಗಟು ಕಮಿಷನ್ ಸಿಗುತ್ತದೆ. ಯುವತಿಯರಿಗೆ ಕೊಡಬೇಕಾದ ಸಂಬಳವನ್ನು ಕಾರ್ಖಾನೆ ಆಡಳಿತ ಮಂಡಳಿ ಗುತ್ತಿಗೆದಾರರಿಗೆ ನೀಡುತ್ತದೆ. ಅದರಲ್ಲಿಯೂ ತನ್ನ ಪಾಲಿನ ಕಮಿಷನ್ ಹಿಡಿದುಕೊಂಡೇ ಗುತ್ತಿಗೆದಾರ ಯುವತಿಯರಿಗೆ ಸಂಬಳ ಪಾವತಿಸುತ್ತಾನೆ.

ಇಂದು ವಿಚಾರಣೆ

ಪಾವಗಡದಿಂದ ತಿರುಪ್ಪೂರಿಗೆ ಬಸ್ ಮತ್ತು ಕ್ರೂಸರ್‌ಗಳಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಒಟ್ಟು 79 ಮಂದಿಯನ್ನು ಪೊಲೀಸರು ಸೋಮವಾರ ರಕ್ಷಿಸಿದ್ದಾರೆ. ಅವರ ವಿಚಾರಣೆಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಬುಧವಾರ ಪಾವಗಡ ಪಟ್ಟಣದಲ್ಲಿ ನಡೆಸಲಿದೆ.

ಯುವತಿಯರ ವಿಚಾರಣೆಯ ನಂತರ ಮಾನವ ಸಾಗಣೆಯ ಕಾರಣ ಕುರಿತು ಸಮಿತಿ ಪೊಲೀಸರಿಗೆ ವರದಿ ನೀಡಲಿದೆ. ಮುಂದಿನ ದಿನಗಳಲ್ಲಿ ಇಂಥ ಘಟನೆ ತಡೆಗಟ್ಟುವ ದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೂ ಸಮಿತಿ ವರದಿ ಸಲ್ಲಿಸಲಿದೆ.

ಪ್ರತಿಕ್ರಿಯಿಸಿ (+)