ಪಾವೂರು: ಎನ್‌ಪಿಆರ್ ಕಾರ್ಡ್‌ ಗೊಂದಲ

7
ಭಾವಚಿತ್ರ ತೆಗೆಸಲು ಕಾದು ಸುಸ್ತಾದ ಜನ

ಪಾವೂರು: ಎನ್‌ಪಿಆರ್ ಕಾರ್ಡ್‌ ಗೊಂದಲ

Published:
Updated:

ಮುಡಿಪು: ಪಾವೂರು ಗ್ರಾಮ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯ (ಎನ್‌ಪಿಆರ್) ಕಾರ್ಡ್ ಪ್ರಕ್ರಿಯೆ ಆರಂಭ­ಗೊಂಡಿದ್ದು, ಭಾವಚಿತ್ರ ತೆಗೆಸಲು ಪಾವೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನೂಕು ನುಗ್ಗಲು ಆರಂಭವಾಗಿದೆ.ಯೋಜನೆಗೆ ಭಾವಚಿತ್ರ ತೆಗೆಯುವ ಕಾರ್ಯಕ್ರಮಕ್ಕಾಗಿ ಕಳೆದ ಭಾನುವಾರದಿಂದ ಪಂಚಾಯಿತಿಗೆ ಮೂವರು ಸಿಬ್ಬಂದಿ ಧಿಡೀರ್‌ ಆಗಮಿಸಿದ್ದರು. ಆ ಬಳಿಕವೇ ಗ್ರಾಮಸ್ಥರಿಗೆ ಮಾಹಿತಿ ದೊರಕಿತ್ತು. ಅಲ್ಲದೆ ಈ ಕಾರ್ಡ್ಗೆ ಭಾವಚಿತ್ರ ತೆಗೆಸುವ ವ್ಯವಸ್ಥೆ ಕೇವಲ ಒಂದು ವಾರವಷ್ಟೇ ಇದೆ. ಈ ಕಾರ್ಡ್ ಅಗತ್ಯ ಎನ್ನುವ ಪ್ರಚಾರ ಗ್ರಾಮದಲ್ಲಿದೆ. ಈ ಆತಂಕದಿಂದ ಕೆಲಸಕ್ಕೆ ರಜೆ ಹಾಕಿ ಬೆಳಿಗ್ಗೆಯಿಂದ ಸಂಜೆವರೆಗೂ ಸರತಿ ಸಾಲಲ್ಲಿ ನಿಂತುಕೊಂಡಿರುವ ದೃಶ್ಯ ಕಂಡುಬರುತ್ತಿದೆ.ಎಂಟು ವರ್ಷ ಮೀರಿದ ಭಾವಚಿತ್ರ, ಕೈ ಬೆರಳುಗಳ ಗುರುತು ಹಾಗೂ ಕಣ್ಣಿನ ಗುರುತು ತೆಗೆಯಲಾಗುತ್ತಿದ್ದು, ಒಬ್ಬರಿಗೆ ಕನಿಷ್ಠ 20 ನಿಮಿಷ ಹಿಡಿಯುತ್ತಿದೆ. ಗ್ರಾಮದಲ್ಲಿ ಎಂಟು ವರ್ಷ ಮೀರದಿ 6,500 ಮಂದಿ ಇದ್ದು, ಮೂರು ಕಂಪ್ಯೂಟರ್ ಮತ್ತು ಮೂವರು ಸಿಬ್ಬಂದಿ ಮಾತ್ರವೇ ಕೇಂದ್ರದಲ್ಲಿ ಈ ಕೆಲಸಕ್ಕೆ ನಿಯೋಜನೆಗೊಂಡಿದ್ದಾರೆ. ಸರ್ಕಾರಿ ಲೆಕ್ಕಾಚಾರ­ದ ಪ್ರಕಾರ ದಿನಕ್ಕೆ 800 ಮಂದಿಯ ಭಾವಚಿತ್ರ ತೆಗೆಯಬೇಕಾಗಿದೆ. ಆದರೆ ದಿನವೊಂದಕ್ಕೆ 400 ಮಂದಿಯ ಭಾವಚಿತ್ರ ತೆಗೆಯಲಾಗುತ್ತಿದ್ದು, ಇದರಂತೆ ವಾರದಲ್ಲಿ 2,800 ಮಂದಿಯ ಭಾವಚಿತ್ರ ತೆಗೆಯಬಹುದಾಗಿದೆ. ಭಾನುವಾರದಿಂದ ಭಾವಚಿತ್ರ ತೆಗೆಯುವ ಕಾರ್ಯ ಆರಂಭಗೊಂಡಿದ್ದು, ಸ್ಮಾರ್ಟ್ ಕಾರ್ಡ್ ಯೋಜನೆ ಎಂದು ಗ್ರಾಮಸ್ಥರಿಗೆ ಹೇಳಲಾಗಿದೆ. ಆದರೆ ಈಗಾಗಲೇ ಗ್ರಾಮದಲ್ಲಿ ಹಲವರಿಗೆ ಕರಾವಳಿ ಗುರುತು ಚೀಟಿ ಬಂದಿದೆ. ಎನ್‌ಪಿಆರ್ ಕಾರ್ಡ್‌ದಾರರಿಗೆ ಆಧಾರ್ ಕಾರ್ಡ್ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದ್ದು, ಉಳ್ಳಾಲ, ಚೆಂಬುಗುಡ್ಡೆ, ಅಸೈಗೋಳಿ ಮುಂತಾದ ಕಡೆಗಳಲ್ಲಿ ಕೆಲವು ದಿನಗಳವರೆಗೆ ನಿರಂತರವಾಗಿ ಅಲೆದಾಡಿ ಆಧಾರ್ ಕಾರ್ಡ್ ಮಾಡಿಸಿದವರಲ್ಲಿ ಗೊಂದಲ ನಿರ್ಮಾಣ ಮಾಡಿದೆ.2010ರಲ್ಲಿ ಮನೆ ಮನೆ ಜನಸಂಖ್ಯೆ ಅಧಾರಿತ ಸಮೀಕ್ಷೆ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ ಎನ್‌ಪಿಆರ್ ಕಾರ್ಡ್ ಯೋಜನೆ ಹಮ್ಮಿ­ಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಗ್ರಾಮಸ್ಥರಿಗೆ ಸ್ಪಷ್ಟ ಮಾಹಿತಿ ಇಲ್ಲ. ಪಂಚಾಯಿತಿ ಜನಪ್ರತಿನಿಧಿಗಳು, ಅಧಿಕಾರಿ­ಗಳಿಗೂ ಮಾಹಿತಿ ಕೊರತೆ ಕಂಡು ಬಂದಿದೆ. ಅಲ್ಲದೆ ಕಾರ್ಡ್ ಮಾಡಿಸಲು ಮುಂದಾದ ಹಲವರ ಹೆಸರು ಪಟ್ಟಿಯಲ್ಲೇ ಇಲ್ಲದೆ ಇರುವುದು ಜನರಲ್ಲಿ ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry