ಬುಧವಾರ, ಅಕ್ಟೋಬರ್ 23, 2019
23 °C

ಪಾಶ್ಚಾತ್ಯ ದೇಶಗಳಲ್ಲೂ ಯೋಗ ಜನಪ್ರಿಯ

Published:
Updated:

`ಕಳೆದ ವರ್ಷ ನಾನು ಅಮೆರಿಕದ ನ್ಯೂಯಾರ್ಕ್‌ನಿಂದ ಫ್ರಾನ್ಸ್‌ನ ಪ್ಯಾರಿಸ್‌ಗೆ ವಾಸಸ್ಥಳ ಬದಲಾಯಿಸಿದೆ. ಅಲ್ಲಿ ಹೋದ ಮೇಲೆ ಮಾಡಿದ ಮೊದಲ ಕೆಲಸ ಯೋಗ ತರಬೇತಿ ಕೇಂದ್ರ ಎಲ್ಲಿದೆ ಎಂದು ಹುಡುಕಿದ್ದು. ಆ ನಗರ, ಉದ್ಯೋಗ, ಭಾಷೆ, ಆಹಾರ, ದೂರವಾಣಿ ಸಂಖ್ಯೆ, ಕರೆನ್ಸಿ ಇತ್ಯಾದಿ ಎಲ್ಲವೂ ಸಾಕಷ್ಟು ಬದಲಾಗಿದ್ದು ನನ್ನ ಗಮನಕ್ಕೆ ಬಂತು. ಅದಕ್ಕೆ ಅನುಗುಣವಾಗಿ ನನ್ನ ಬದುಕಿನ ವಿವಿಧ ಅಂಶಗಳಲ್ಲೂ ಮಾರ್ಪಾಡು ಮಾಡಿಕೊಂಡೆ. ಅದು ಖುಷಿ, ರೋಮಾಂಚನ ಕೊಡುತ್ತದೆ ಎಂಬುದೇನೋ ನಿಜ. ಆದರೆ ಅದರ ಜತೆಗೆ ಸಾಕಷ್ಟು ಉಪದ್ರವವನ್ನೂ ಎದುರಿಸ ಬೇಕಾಗುತ್ತದೆ.ಇದೆಲ್ಲದರ ನಡುವೆಯೂ ನನ್ನ ಯೋಗಾಭ್ಯಾಸ ಮುಂದುವರಿಸಲು ಸೂಕ್ತ ತರಬೇತಿ ಕೇಂದ್ರಕ್ಕಾಗಿ ಹುಡುಕಾಟ ನಡೆಸಿದ ನನಗೆ ಅಂಥ ಸಮಸ್ಯೆ ಆಗಲಿಲ್ಲ. ಅದೊಂದು ವಿಚಾರದಲ್ಲಿ ಮಾತ್ರ ನನಗೆ ನ್ಯೂಯಾರ್ಕ್‌ನಲ್ಲಿ ಇದ್ದಂತೆಯೇ ಅನಿಸಿತು ಎಂದರೆ ಉತ್ಪ್ರೇಕ್ಷೆಯಲ್ಲ. ಆದರೆ ಯೋಗಾಭ್ಯಾಸ ಮಾಡುವುದು ಎಲ್ಲಿ ಎಂಬ ಗೊಂದಲ ಉಂಟಾಯಿತು. ಏಕೆಂದರೆ ಅಮೆರಿಕದಲ್ಲಿ ಇದ್ದಾಗ ನಾನು ನಿರಂತರ ಯೋಗಾಭ್ಯಾಸ ಮಾಡುತ್ತಿದ್ದೆ. ಇಲ್ಲಿ ಹೇಗೋ ಏನೋ ಎಂಬ ಅಳುಕಿತ್ತು.ನಾನು ಮೊದಲಿದ್ದ ನ್ಯೂಯಾರ್ಕ್ ನಗರವಂತೂ ಯೋಗದ ಕೇಂದ್ರ ಎಂದೇ ಹೇಳಬೇಕು. ಲಾಸ್ ಏಂಜೆಲ್ಸ್ ಕೂಡ ಹೀಗೇ ಇದೆ. ನ್ಯೂಯಾರ್ಕ್‌ನ ಹೃದಯ ಭಾಗವಾದ ಮ್ಯಾನಹಟನ್‌ನಲ್ಲಿ ಜನಪ್ರಿಯ ಕಾಫಿ ಮಳಿಗೆಗಳ ಸರಣಿ `ಸ್ಟಾರ್‌ಬಕ್~ಗಿಂತ ಹೆಚ್ಚು ಯೋಗ ಕೇಂದ್ರಗಳಿವೆ. ಇನ್ನೂ ಹೇಳಬೇಕೆಂದರೆ ಅಲ್ಲಿ ರಸ್ತೆಯಲ್ಲಿ ಅಡ್ಡಾಡುವ ಪ್ರತಿ ಮೂವರ ಪೈಕಿ ಒಬ್ಬನ ಕೈಯಲ್ಲಿ ಯೋಗಾಭ್ಯಾಸಿಗಳು ಪದ್ಮಾಸನ ಹಾಕಿ ಕುಳಿತುಕೊಳ್ಳುವ ಚಾಪೆಯನ್ನು ನೋಡಬಹುದು. ಸ್ಟುಡಿಯೊ, ಜಿಮ್, ಕಚೇರಿ, ಶಾಲೆ, ಹವೆ ಚೆನ್ನಾಗಿದ್ದರೆ ಉದ್ಯಾನಗಳಲ್ಲಿ ಯೋಗಾಭ್ಯಾಸ ಮಾಡುವವರನ್ನು ದಿನದ ಯಾವುದೇ ಹೊತ್ತಲ್ಲಾದರೂ ಕಾಣಬಹುದು.ಭಾರತದ ಕೊಡುಗೆ

ಐದು ಸಾವಿರ ವರ್ಷಗಳ ಇತಿಹಾಸವುಳ್ಳ ಯೋಗ ಭಾರತದಿಂದ ಅಮೆರಿಕ, ಫ್ರಾನ್ಸ್‌ಗೆ ದೊಡ್ಡ ಪ್ರಮಾಣದಲ್ಲಿ ಕಾಲಿಟ್ಟದ್ದು 60ರ ದಶಕದಲ್ಲಿ. ಆದರೆ ಈಗ ಅಮೆರಿಕ ದಲ್ಲಂತೂ ಅದು ಯುವಕ- ಯುವತಿಯರಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಮೋಡಿ ಮಾಡಿಬಿಟ್ಟಿದೆ. ದೇಹ, ಮನಸ್ಸಿಗೆ ನೆಮ್ಮದಿ ಕೊಡುವ, ಮಾನಸಿಕ ಒತ್ತಡ ಕಡಿಮೆ ಮಾಡುವ ಯೋಗದ ಆಸನ ಅದರಲ್ಲೂ ಶವಾಸನ ಇಲ್ಲಂತೂ ತುಂಬ ಜನಪ್ರಿಯ.ಇತ್ತೀಚಿನ ವರ್ಷಗಳ್ಲ್ಲಲಿ `ಯೋಗದ ಮಹಿಮೆ~ ಅಮೆರಿಕವನ್ನು ದಾಟಿ ವಿಶ್ವದ ಇತರ ದೇಶಗಳಿಗೆ ಅದರಲ್ಲೂ ವಿಶೇಷವಾಗಿ ಯುರೋಪ್ ಮತ್ತು ಏಷ್ಯದ ನಗರಗಳಿಗೆ ಹಬ್ಬಿದೆ. ಅಮೆರಿಕನ್ ಯೋಗ ಗುರುಗಳಿಗಂತೂ ಬಿಡುವಿಲ್ಲ. ವಿವಿಧ ದೇಶಗಳಿಗೆ ಹೋಗಿ ಯೋಗ ಕೇಂದ್ರ ತೆರೆಯುವುದು, ಕಲಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರಿಗೂ ಹೊಂದುವಂಥ್ದ್ದದನ್ನು ಒಳಗೊಂಡಿದೆ ಎನ್ನುವುದೇ ಯೋಗದ ವಿಶೇಷ. ಪದ್ಮಾಸನ ಹಾಕಿ ಧ್ಯಾನ ಮಾಡುವವರಿಗೆ ಮಂತ್ರ, ಪ್ರಾರ್ಥನೆಗಳಿದ್ದರೆ, ಬೆವರು ಸುರಿಸಲು ಬಯಸುವವರಿಗೆ ಬೇರೆ ಬೇರೆ ಆಸನಗಳಿವೆ. ದಣಿದವರು, ಗಾಯಾಳುಗಳು `ಪುನಶ್ಚೇತನ ಯೋಗ~, ಕಸರತ್ತು ಇಷ್ಟಪಡುವವರು `ಅಕ್ರೋ ಯೋಗ~ದ ಮೊರೆ ಹೋಗಬಹುದು.ಲೇಖಕ ಅಡಾಂ ಗೋಪ್ನಿಕ್ ಪ್ರಕಾರ ಪ್ಯಾರಿಸ್ ಮಂದಿಗೆ ದೈಹಿಕ ವ್ಯಾಯಾಮಕ್ಕಿಂತ ತಿಂದುಣ್ಣುವುದರಲ್ಲೇ ಹೆಚ್ಚು ಆಸಕ್ತಿಯಂತೆ. ಅದಕ್ಕೆ ಸಮರ್ಥನೆ ಎಂಬಂತೆ ಆರಂಭದ ದಿನಗಳಲ್ಲಿ ಪ್ಯಾರಿಸ್‌ನಲ್ಲಿ ಯೋಗ ಕೇಂದ್ರ ಪತ್ತೆ ಮಾಡಲು ನಾನು ತಿಣುಕಾಡಬೇಕಾಗಿತ್ತು. ಕೊನೆಗೂ ಇಂಟರ್‌ನೆಟ್‌ನಲ್ಲಿ `ರಸ~ ಎಂಬ ಕೇಂದ್ರ ಹುಡುಕಿ ಅಲ್ಲಿ ಹೋದೆ. ಅದು ನೋಡಲು ಸಾಕಷ್ಟು ಭವ್ಯವಾಗಿತ್ತು. ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಯಲ್ಲಿ ಹೇಳಿಕೊಡುತ್ತಿದ್ದರು.ಸೊಗಸಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ರಾಜೀವ್ ಎಂಬುವವರ ತರಗತಿಗೆ ಸೇರಿಕೊಂಡೆ.

ಇದೆಲ್ಲ ನಡೆದು ಸುಮಾರು ಒಂದು ವರ್ಷ ಕಳೆದಿದೆ. ಡಜನ್‌ಗೂ ಹೆಚ್ಚು ಯೋಗ ಗುರುಗಳ ತರಗತಿಗೆ ಹಾಜರಾಗಿದ್ದೇನೆ. ನನಗೆ ಕಲಿಸಿದವರಲ್ಲಿ ಅಮೆರಿಕನ್ನರು ಮಾತ್ರವಲ್ಲ ಫ್ರೆಂಚ್, ಡಚ್, ಲೆಬನಾನ್, ವೆನಿಜುಲಾ, ದಕ್ಷಿಣ ಆಫ್ರಿಕ, ಇಟಲಿಯ ಗುರುಗಳೆಲ್ಲ ಇದ್ದರು. ಯುರೋಪ್‌ನ ಯೋಗ ಗುರುಗಳು ಸದಾ ಸುತ್ತಾಟದಲ್ಲೇ ಇರುತ್ತಾರೆ. ಅಷ್ಟೊಂದು ಬೇಡಿಕೆ ಅವರಿಗೆ. ನಾನು ಇಲ್ಲಿದ್ದ ಅವಧಿಯಲ್ಲಿ ಯೋಗ ತರಗತಿ, ವಿದ್ಯಾರ್ಥಿಗಳ ಸಂಖ್ಯೆ ಭಾರೀ ವೃದ್ಧಿಸಿತ್ತು.ಪ್ಯಾರಿಸ್‌ನಲ್ಲಿ ಯೋಗಕ್ಕೆ ಬೇಡಿಕೆ ಹೆಚ್ಚಲು ಬಾಯಿ ಮಾತಿನ ಪ್ರಚಾರ, ಕರಪತ್ರಗಳು ಕಾರಣ. `ರಸ~ ಕೇಂದ್ರದಲ್ಲಿ ನನಗೆ ಕಲಿಸಿದ ಮಾರ್ಕ್ ಹೋಲ್ಮನ್ ಅವರು ಅಮೆರಿಕನ್ ಚರ್ಚ್‌ನಲ್ಲಿ ಪಾಠ ಹೇಳುವವರು. ಇನ್ನೊಂದು ಯೋಗ ಕೇಂದ್ರದಲ್ಲಿ ನಾನು ಕಲಿತದ್ದು `ಬಿ ಯೋಗ~ವನ್ನು. ಪ್ರವೇಶ ದ್ವಾರದಲ್ಲಿ ಗಂಟೆ, ಪ್ರಾರ್ಥನಾ ಧ್ವಜ ಈ ಕೇಂದ್ರದ ವಿಶೇಷ.ಈಗ ಈ ನಗರದಲ್ಲಿ ಅನೇಕ ಯೋಗ ಕೇಂದ್ರಗಳಿವೆ. ಯೋಗ ಕಾರ್ಯಕ್ರಮಗಳು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿವೆ. ಅ. 2ರಂದು ಐಫೆಲ್ ಗೋಪುರದಲ್ಲಿ ನಡೆದ `ಲಾ ವೈಟ್~ ಯೋಗ ಶಿಬಿರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಇದನ್ನು ನಡೆಸಿಕೊಟ್ಟ ಎಲೆನಾ ಬ್ರೋವರ್ ಅವರನ್ನು ಫ್ರೆಂಚ್ ಪತ್ರಿಕೆಯೊಂದು `ನ್ಯೂಯಾರ್ಕ್ ಯೋಗದ ಮಹಾ ಯೋಗಿನಿ~ ಎಂದೇ ಹೆಸರಿಸಿತ್ತು. ಈಕೆ ಗ್ರೀನ್‌ವಿಚ್ ಪಟ್ಟಣದ ವಿರಾ ಯೋಗ ಕೇಂದ್ರದ ಸಂಸ್ಥಾಪಕಿಯೂ ಹೌದು.ನನಗೆ ಬಹಳ ಖುಷಿ ಕೊಟ್ಟದ್ದು ಕರೋಲ್ ಎಂಬಾಕೆ ನಡೆಸಿಕೊಟ್ಟ ಯೋಗ ತರಗತಿ. ಈಕೆ ಫ್ರೆಂಚ್ ಭಾಷೆಯಲ್ಲಿ `ಜೀವಮುಕ್ತಿ~ ಯೋಗ ಹೇಳಿಕೊಟ್ಟರು ಅದನ್ನು ನಾನು ಕಲಿತದ್ದು ನ್ಯೂಯಾರ್ಕ್‌ನಲ್ಲಿ. ನಾನು ಕಂಡುಕೊಂಡಂತೆ ಫ್ರಾನ್ಸ್‌ನಲ್ಲಿನ ಯೋಗ ಅಮೆರಿಕದಿಂದ ಪ್ರಭಾವಿತವಾದದ್ದು. ನಾನು ಪದೇಪದೇ ಹೋಗುತ್ತಿದ್ದ ತರಗತಿಗಳ ಯೋಗ ಗುರುಗಳಾದ ನ್ಯೂಯಾರ್ಕ್‌ನ ಜಾಕಿ ಪ್ರೆಟೆ, ಪ್ಯಾರಿಸ್‌ನ ಹೋಲ್ಮನ್ ಇಬ್ಬರೂ `ಅನುಸಾರ~ ಯೋಗ ಪರಿಣಿತರು. ಈ ಪದ್ಧತಿಯನ್ನು 1977ರಲ್ಲಿ ಪ್ರಾರಂಭಿಸಿದವರು ಅಮೆರಿಕದ ಯೋಗ ಗುರು ಜಾನ್ ಫ್ರೆಂಡ್. ಇವರ ಶಿಷ್ಯರು ವಿಶ್ವದೆಲ್ಲೆಡೆ ಯೋಗವನ್ನು ಜನಪ್ರಿಯಗೊಳಿಸಲು ಪಣ ತೊಟ್ಟವರು.ಜಾಕಿ ಅವರು 5-6 ವರ್ಷದಿಂದ ಜಪಾನ್‌ನ ಒಸಾಕಾ, ಟೋಕಿಯೊ, ಕ್ಯೋಟೊ, ನಗೋಯಾ, ಯೋಕೊಹಾಮಾಗಳಿಗೆ ಹೋಗಿ ಅನೇಕ ಯೋಗ ಶಿಕ್ಷಕರನ್ನು ತಯಾರು ಮಾಡಿದ್ದಾರೆ. ಜಪಾನಿಯರ ಇಂಗ್ಲಿಷ್ ಅಷ್ಟಕ್ಕಷ್ಟೆ. ಅಲ್ಲಿ ಆಕೆಗೆ ಭಾಷಾಂತರಕಾರರ ಸಹಾಯ ಪಡೆದು ಕಲಿಸಲು ಸಾಕಷ್ಟು ಕಷ್ಟವೂ ಆಯಿತಂತೆ. ಆದರೆ ಗುರುವನ್ನು ಗೌರವಿಸುವ ಜಪಾನಿ ಸಂಸ್ಕೃತಿ ಅವರಿಗೆ ಇಷ್ಟವಾಯಿತು.ನಾನು ಪ್ಯಾರಿಸ್‌ಗೆ ಕಾಲಿಟ್ಟಾಗ, ಇನ್ನೇನಿದ್ದರೂ ಫ್ರೆಂಚ್ ಭಾಷೆ, ಬದುಕಿನಲ್ಲೇ ಮುಳುಗುವುದೇ ನನ್ನ ಪಾಲಿನ `ಭಾಗ್ಯ~ ಎಂದು ಭಾವಿಸಿದ್ದೆ. ಆದರೆ ಪುಣ್ಯಕ್ಕೆ ಹಾಗಾಗಲಿಲ್ಲ. ಅಲ್ಲಿ ನನಗೆ ಹೊಸ ಸಂಸ್ಕೃತಿಯ ದರ್ಶನವಾಯಿತು. ವಲಸೆ ಬಂದವರನ್ನು ಸ್ವಾಗತಿಸುವ ಅವರ ಪರಿಯ ಪರಿಚಯವಾಯಿತು. ಅಮೆರಿಕದಲ್ಲಿ ಕೆಲ ಕಾಲ ಕಳೆದ ಫ್ರೆಂಚ್ ಅಧ್ಯಾಪಕರು, ವಿದ್ಯಾರ್ಥಿಗಳು, ಸಿನಿಮಾ ನಿರ್ದೇಶಕರು, ನಟರು, ಅಂತರ‌್ರಾಷ್ಟ್ರೀಯ ವ್ಯಾಪಾರ ವಹಿವಾಟುದಾರರು, ಆಸಕ್ತ ಜನ ಸಾಮಾನ್ಯರೆಲ್ಲ ಪ್ಯಾರಿಸ್‌ನ ಅಮೆರಿಕನ್ ಚರ್ಚ್‌ನಲ್ಲಿ `ಗೆರಿಲ್ಲಾ ಯೋಗಿ ತರಗತಿ~ಗೆ ಹಾಜರಾಗುತ್ತಿದ್ದರು. ಭವ್ಯ, ಸುಂದರ, ದೀಪಾಲಂಕೃತ ಸಭಾಂಗಣದಲ್ಲಿ ನಾವು ನಮ್ಮ ಯೋಗ ಚಾಪೆಗಳನ್ನು ವಿನಿಮಯ ಮಾಡಿಕೊಂಡು ಕಲಿಯುತ್ತಿದ್ದೆವು. ಅದು ಕ್ರಿಸ್ಮಸ್ ಕಾಲ. ಹೀಗಾಗಿ ಅಲ್ಲೆಲ್ಲ ಮಕ್ಕಳು ನಿರ್ಮಿಸಿದ ಕ್ರಿಸ್ಮಸ್ ಗಿಡಗಳ ನಡುವೆ ನಮ್ಮ ಯೋಗಾಭ್ಯಾಸ ನಡೆಯುತ್ತಿತ್ತು. ಆ ಮಕ್ಕಳು ಅಭ್ಯಾಸ ಮಾಡುತ್ತಿದ್ದ ಕ್ರಿಸ್ಮಸ್ ಗೀತೆಗಳ ಧ್ವನಿಯೊಂದಿಗೆ ನಮ್ಮ ಯೋಗದ `ಓಂ~ ಮಂತ್ರ ಬೆರೆತುಕೊಂಡು ವಿಶಿಷ್ಟ ವಾತಾವರಣವನ್ನು ಸೃಷ್ಟಿಸುತ್ತಿತ್ತು.ಕೇಂದ್ರಗಳಲ್ಲಿ ಮಾತ್ರವಲ್ಲದೆ ಮನೆಯಲ್ಲೂ ನಾನು ಯೋಗಾಭ್ಯಾಸ ಮಾಡುತ್ತಿರುತ್ತೇನೆ. ಅಲ್ಲದೆ ಪ್ರತಿ ಶನಿವಾರ ಬೆಳಿಗ್ಗೆ ಸ್ನೇಹಿತರೊಡನೆ ಕಳೆಯಬೇಕಾದ ನನ್ನ ಎರಡು ತಾಸು ಅಮೂಲ್ಯ ಸಮಯವನ್ನು ಕೂಡ ಯೋಗ ಕಲಿಕೆಗೆ ಮೀಸಲಿಟ್ಟಿದ್ದೇನೆ. ಅಲ್ಲಿ ಫ್ರಾನ್ಸ್- ಕೆನಡಾದ ಕಟ್ಟಡ ನಿರ್ಮಾಣಕಾರ ಸೆಬಾಸ್ಟಿಯನ್, ಆಸ್ಟ್ರೇಲಿಯದ ಜಲಕ್ರೀಡಾ ಮಾಜಿ ಆಟಗಾರ ಹ್ಯಾರಿಯಟ್, ವಿಶ್ವದೆಲ್ಲೆಡೆ ಸುತ್ತಾಡಿದ ಅನುಭವಸ್ಥ ನಟ ಜೋಯೆಲ್, ಫ್ರೆಂಚ್ ಭಾಷಾ ಅಧ್ಯಾಪಕಿ ಸೋಫಿ, ದಕ್ಷಿಣ ಆಫ್ರಿಕದ ಶೆರಾನ್ ಹೀಗೆ ವಿವಿಧ ದೇಶ, ಹಿನ್ನೆಲೆಯವರೆಲ್ಲ ಸೇರುತ್ತೇವೆ.`ನಾವೆಲ್ಲ ಒಂದು ಎಂಬ ಭಾವನೆಯನ್ನು ಯೋಗಾಭ್ಯಾಸ ಉಂಟು ಮಾಡುತ್ತದೆ. ಪರಿಚಯ ವೃದ್ಧಿಸಬೇಕಾದರೆ ಬಾರ್‌ಗಳಲ್ಲಿ ಸಮಯ ಕಳೆಯುವುದನ್ನು ಬಿಟ್ಟು ಯೋಗ ತರಗತಿ ಸೇರಿಕೊಳ್ಳಿ. ಸಮಾನ ವಿಚಾರಧಾರೆಯ ಪರಿಚಿತ ಮುಖಗಳು ನೀವೊಬ್ಬ ಅಪರಿಚಿತ ಎಂಬ ಭಾವನೆ ದೂರ ಮಾಡುತ್ತವೆ~ ಎಂದು ಹೇಳುವ ಯೋಗ ಶಿಕ್ಷಕಿ ಪ್ರೆಟೆ ಮಾತು ಅರ್ಥಪೂರ್ಣ. 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)