ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಬೆಂಗಳೂರಿನ ಅನಾವರಣ

7

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಬೆಂಗಳೂರಿನ ಅನಾವರಣ

Published:
Updated:

ಧಾರವಾಡ: `ಬೇಕ್ಡ್ ಬೀನ್ಸ್ ಆನ್ ಟೋಸ್ಟ್ ಎನ್ನುವದು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಸಹಜವಾದ ಒಂದು ಕ್ರಿಯೆ. ಅದನ್ನು ಬೆಂಗಳೂರಿನ ಇಂದಿನ ನಗರ (ಕಾರ್ನಾಡರ ಭಾಷೆಯಲ್ಲಿ ನಾಗರ) ಜೀವನ ಬಿಂಬಿಸುವ ಪ್ರಯತ್ನವೇ ಬೆಂದಕಾಳು ಆನ್‌ಟೋಸ್ಟ್. ಸಹಜವಾಗಿಯೇ ಸ್ತ್ರೀ ಪ್ರೇಮಿ ಗಿರೀಶ ಕಾರ್ನಾಡ ಈ ನಾಟಕದಲ್ಲಿ ಸ್ತ್ರೀಯರ ಪಾತ್ರಗಳಿಗೆ ಹೆಚ್ಚಿನ ಅವಕಾಶ ಹಾಗೂ ಒತ್ತು ನೀಡಿದ್ದಾರೆ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ನುಡಿದರು.ನಗರದ ರಂಗಾಯಣ ಆವರಣದಲ್ಲಿ ಬುಧವಾರ ಹಿರಿಯ ನಾಟಕಕಾರ ಗಿರೀಶ ಕಾರ್ನಾಡರ ಹೊಸ ನಾಟಕ `ಬೆಂದ ಕಾಳು ಆನ್ ಟೋಸ್ಟ್' ನಾಟಕದ ಕುರಿತು ಆಯೋಜಿಸಿದ ಕೇಳು ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.`ಬಾನುಲಿ ನಾಟಕಕ್ಕಿಂತ ಭಿನ್ನವಾದ ಕೇಳು ನಾಟಕ ಪ್ರಯೋಗ ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಚಲಿತವಿದೆ. ನಾಟಕವೊಂದು ರಂಗಪ್ರಯೋಗ ಆಗುವ ಮುನ್ನ ಕೇಳುಗರ ಮುಂದೆ ಹಲವಾರು ವೇದಿಕೆಗಳಲ್ಲಿ ಅದರ ವಾಚನ ನಡೆಯುತ್ತದೆ. ಅಂತಹ ಪರಂಪರೆ ರಾಜ್ಯದ ಕರಾವಳಿಯ ಯಕ್ಷಗಾನ ಮಂಡಳಿಯಲ್ಲಿ ಮಳೆಗಾಲದಲ್ಲಿ ನಡೆಯುತ್ತದೆ. ಆ ಪರಂಪರೆಯನ್ನು ಧಾರ ವಾಡದ ರಂಗಾಯಣ ಪ್ರಾರಂಭಿಸುತ್ತಿರುವುದು ಸ್ವಾಗತಾರ್ಹ' ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಸುಭಾಸ ನರೇಂದ್ರ, `ಇನ್ನು ಮೇಲೆ ಪ್ರತಿ ತಿಂಗಳು ಕೇಳು ನಾಟಕ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ವೃತ್ತಿ ನಾಟಕದ ಶ್ರೋತೃಗಳ ಮನೆಬಾಗಿಲಿಗೆ ಇದೇ 16, 18, 20 ಮತ್ತು 22ರಂದು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಲಾಗುವುದು' ಎಂದು ತಿಳಿಸಿದರು. ಸಮಾರಂಭದಲ್ಲಿ ಹಿರಿಯ ಕವಿ ಡಾ.ಚನ್ನವೀರ ಕಣವಿ, ಆರ್ಯ ಆಚಾರ್ಯ ಸೇರಿದಂತೆ ರಂಗಾಸಕ್ತರು ಪಾಲ್ಗೊಂಡಿದ್ದರು.ಡಾ.ಶಶಿಧರ ನರೇಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಾಯಣದ ಆಡಳಿತಾಧಿಕಾರಿ ಕೆ.ಎಚ್.ಚೆನ್ನೂರ ವಂದಿಸಿದರು. ಅಶೋಕ ಜೋಶಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry