ಪಾಶ್ಚಿಮಾತ್ಯ ರಾಜಕೀಯ ಅನುಕರಿಸುವುದಿಲ್ಲ
ಸಿಪಿಸಿ 18ನೇ ಅಧಿವೇಶನದಲ್ಲಿ ಚೀನಾ ಅಧ್ಯಕ್ಷ ಜಿಂಟಾವೊ ಸ್ಪಷ್ಟನೆ
ಬೀಜಿಂಗ್ (ಐಎಎನ್ಎಸ್): `ಚೀನಾ ದೇಶವು ಯಾವುದೇ ಕಾರಣಕ್ಕೂ ಪಾಶ್ಚಿಮಾತ್ಯ ರಾಜಕೀಯ ವ್ಯವಸ್ಥೆಯನ್ನು ಅನುಕರಿಸುವುದಿಲ್ಲ~ ಎಂದು ನಿರ್ಗಮಿತ ಅಧ್ಯಕ್ಷ ಹು ಜಿಂಟಾವೊ ಸ್ಪಷ್ಟಪಡಿಸಿದ್ದಾರೆ.
ದಶಕಗಳಿಗೊಮ್ಮೆ ನಾಯಕತ್ವ ಬದಲಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿ ಆರಂಭವಾದ ಕಮ್ಯುನಿಸ್ಟ್ ಪಾರ್ಟಿ (ಸಿಪಿಸಿ)18ನೇ ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡಿ, `ಪಕ್ಷದ ಎಲ್ಲ ಸದಸ್ಯರು ಮತ್ತು ನಾಗರಿಕರು ತಾಯ್ನಾಡಿನ ಗುಣಲಕ್ಷಣ ಒಳಗೊಂಡ ಸಮಾಜವಾದದ ಮಾರ್ಗದಲ್ಲಿ ಮುನ್ನಡೆಯಬೇಕು~ ಎಂದರು.
ಸೇನೆ ಆಧುನೀಕರಣ: `ಜಗತ್ತಿನಲ್ಲಿಯೇ ಅತಿದೊಡ್ಡ ಸೇನಾಪಡೆ ಎಂಬ ಹೆಗ್ಗಳಿಕೆ ಇರುವ ಬಲಿಷ್ಠ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ)ಯ ಆಧುನೀಕರಣ ಕಾರ್ಯವನ್ನು ತ್ವರಿತಗೊಳಿಸಲಾಗುವುದು, ಜಲಗಡಿಯ ಅಧಿಪತ್ಯ ಸ್ಥಾಪಿಸಲಾಗುವುದು~ ಎಂದೂ ತಿಳಿಸಿದರು.
`ಚೀನಾ ಕಮ್ಯುನಿಸ್ಟ್ ಪಕ್ಷದ ಮುಖಂಡ ಮಾವೊ ಜೆಡಾಂಗ್ ಅವರ ಸೇನೆ ತಂತ್ರಗಾರಿಕೆಗೆ ಸಂಬಂಧಿಸಿದ ನೀತಿ ಅನ್ವಯ, ರಾಷ್ಟ್ರೀಯ ಭದ್ರತೆ ಮತ್ತು ಸೇನಾ ಪಡೆಗಳನ್ನು ಆಧುನಿಕ ಪರಿಸ್ಥಿತಿಗೆ ತಕ್ಕಂತೆ ಸನ್ನದ್ಧಗೊಳಿಸಬೇಕು~ ಎಂದು ಶೀಘ್ರದಲ್ಲೇ ಆಡಳಿತಾರೂಢ ಸಿಪಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದಲೂ ನಿರ್ಗಮಿಸಲಿರುವ ಜಿಂಟಾವೊ ಸೂಚಿಸಿದರು.
ಟೋಕಿಯೊ ವರದಿ: ಚೀನಾ ದೇಶವು `ಶಾಂತಿಯುತವಾಗಿ ಕಡಲ ಶಕ್ತಿ~ಯನ್ನು ಬಳಸಿಕೊಳ್ಳಬೇಕು ಎಂದು ಜಪಾನ್ ವಿದೇಶಾಂಗ ಸಚಿವಾಲಯದ ವಕ್ತಾರೆ ನಯೊಕೊ ಸೈಕೈ ಹೇಳಿದ್ದಾರೆ.
ಹು ಜಿಂಟಾವೊ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, `ಜಲಗಡಿಗೆ ಸಂಬಂಧಿಸಿದ ಕಾನೂನು ಹಾಗೂ ಸುವ್ಯವಸ್ಥೆಯ ಜತೆಗೆ ಉಭಯ ದೇಶಗಳಲ್ಲಿ ಶಾಂತಿ, ಸ್ಥಿರತೆ ಕಾಪಾಡುವುದು ಇಬ್ಬರ ಹೊಣೆಗಾರಿಕೆಯಾಗಿದೆ~ ಎಂದು ಹೇಳಿದ್ದಾರೆ.
ಭ್ರಷ್ಟಾಚಾರ ನಿಗ್ರಹಕ್ಕೆ ಕರೆ
`ಆಂತರಿಕ ಭ್ರಷ್ಟಾಚಾರ ನಿಗ್ರಹಿಸದಿದ್ದರೆ 63 ವರ್ಷ ಇತಿಹಾಸದ ಪಕ್ಷವು ಅಧಃಪತನಕ್ಕೆ ಹೋಗುತ್ತದೆ~ ಎಂದು ಜಿಂಟಾವೊ ಎಚ್ಚರಿಕೆ ನೀಡಿದ್ದಾರೆ.
10 ವರ್ಷಗಳ ಜಿಂಟಾವೊ ನಾಯಕತ್ವದಲ್ಲಿ ಚೀನಾ ದೇಶವು ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಆದರೆ ಪಕ್ಷಕ್ಕೆ ಭ್ರಷ್ಟಾಚಾರದ ಪಿಡುಗು ಅಂಟಿಕೊಂಡಿದೆ. `ಎಷ್ಟೇ ಉನ್ನತ ಹುದ್ದೆಯಲ್ಲಿರಲಿ, ಪಕ್ಷದ ಶಿಸ್ತು ಹಾಗೂ ದೇಶದ ಕಾನೂನು ಉಲ್ಲಂಘಿಸಿದವರು ಘೋರ ಪರಿಣಾಮ ಎದುರಿಸಬೇಕಾಗುತ್ತದೆ~ ಎಂದೂ ಅವರು ಕಟುವಾಗಿ ನುಡಿದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.