ಮಂಗಳವಾರ, ನವೆಂಬರ್ 12, 2019
25 °C

ಪಾಸ್‌ಪೋರ್ಟ್ ಅರ್ಜಿ ಸಲ್ಲಿಕೆ ಇನ್ನಷ್ಟು ಸಲೀಸು

Published:
Updated:

ಬೆಂಗಳೂರು: ರಾಜ್ಯದ ಇ-ಆಡಳಿತ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಪಾಸ್‌ಪೋರ್ಟ್ ಅರ್ಜಿ ಭರ್ತಿ ಮಾಡುವ ಸೌಲಭ್ಯ ವಾರದಲ್ಲಿ ಜಾರಿಗೆ ಬರಲಿದೆ. ಬೆಂಗಳೂರು ಒನ್ ಸೇರಿದಂತೆ ಸರ್ಕಾರದ ಎಲ್ಲ ಕಿಯೋಸ್ಕ್‌ಗಳಲ್ಲಿ ಈ ಸೌಕರ್ಯ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (ಆರ್‌ಪಿಒ) ನೂತನ ಪಾಸ್‌ಪೋರ್ಟ್ ಅಧಿಕಾರಿ ಮದನ್ ಕುಮಾರ್ ರೆಡ್ಡಿ ಇತ್ತೀಚೆಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.`ಆನ್‌ಲೈನ್ ಅರ್ಜಿ ತುಂಬುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ ಜತೆ ಚರ್ಚೆ ನಡೆಸಲಾಗಿದ್ದು, ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರದ ಜತೆ ಅಧಿಕೃತವಾಗಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಬಳಿಕ ಇ-ಆಡಳಿತ ಕೇಂದ್ರಗಳಲ್ಲಿ ಈ ಸೌಲಭ್ಯ ಜಾರಿಗೆ ಬರಲಿದೆ' ಎಂದರು.`ತತ್ಕಾಲ ಸೇವೆ ಪಡೆಯುವವರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, 15 ವರ್ಷದೊಳಗಿನ ಮಕ್ಕಳು, ಅಂಗವಿಕಲರು, ಸರ್ಕಾರಿ ನೌಕರರು, ಹೊಸ ಕೈಪಿಡಿ ಪಡೆಯುವವರು ಮತ್ತು ಪೊಲೀಸ್ ವಿಚಾರಣಾ ಪ್ರಮಾಣ ಪತ್ರದ ಪ್ರತಿ ಪಡೆಯುವವರು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂದರು.`ಏಜೆಂಟರ ಹಾವಳಿ ಮಿತಿಮೀರಿದ ಆರೋಪಗಳು ವ್ಯಾಪಕವಾಗಿವೆ. ಸಾವಿರಾರು ರೂಪಾಯಿ ಶುಲ್ಕವನ್ನು ಅವರು ಭರಿಸುತ್ತಾರೆ ಎಂಬುದಾಗಿಯೂ ದೂರಲಾಗಿದೆ. ವಾಸ್ತವವಾಗಿ ಈಗ ಮಧ್ಯವರ್ತಿಗಳ ವ್ಯವಸ್ಥೆ ಪಾಸ್‌ಪೋರ್ಟ್ ಕೇಂದ್ರಗಳಲ್ಲಿ ಇಲ್ಲ. ಸಾರ್ವಜನಿಕರು ವಿನಾಕಾರಣ ಅಧಿಕ ಮೊತ್ತ ಪಾವತಿಸದೆ ನೇರವಾಗಿ ಪಾಸ್‌ಪೋರ್ಟ್ ಪಡೆಯಬೇಕು' ಎಂದು ತಿಳಿಸಿದರು.`ಆನ್‌ಲೈನ್‌ನಲ್ಲಿ ಭರ್ತಿ ಮಾಡಿದ ಅರ್ಜಿಗೆ ಸಂಬಂಧಿಸಿದಂತೆ ಉಲ್ಲೇಖ ಸಂಖ್ಯೆ ತಂದು ನೇರವಾಗಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ಇ-ಆಡಳಿತ ಕೇಂದ್ರಗಳಲ್ಲಿ ಅರ್ಜಿ ಭರ್ತಿ ಶುಲ್ಕ ರೂ 25ಕ್ಕೆ ನಿಗದಿಮಾಡಲು ಉದ್ದೇಶಿಸಲಾಗಿದೆ' ಎಂದು ಮಾಹಿತಿ ನೀಡಿದರು.`ಸೇವಾ ಕೇಂದ್ರಗಳಲ್ಲಿ ಬಂದ ನಾಗರಿಕರು ಏನಾದರೂ ಸಂಶಯ ಹೊಂದಿದ್ದರೆ ಅಲ್ಲಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಗೊಂದಲ ನಿವಾರಣೆಗೂ ಅವಕಾಶ ಕಲ್ಪಿಸಲಾಗುವುದು. ಪ್ರತಿನಿತ್ಯ 1,500 ಅರ್ಜಿಗಳ ವಿಲೇವಾರಿ ಮಾಡಲಾಗುತ್ತಿದೆ. ತತ್ಕಾಲ ಅರ್ಜಿಗಳು ಬಂದಾಗ ಎರಡನೇ ದಿನದಲ್ಲಿ ಪಾಸ್‌ಪೋರ್ಟ್ ನೀಡಲಾಗುತ್ತಿದೆ' ಎಂದರು.`ಬೆಂಗಳೂರು ಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರದ ವ್ಯಾಪ್ತಿಯಲ್ಲಿ 27 ಪೊಲೀಸ್ ಪರಿಶೀಲನೆಯ ನಕಲಿ ಪ್ರಮಾಣಪತ್ರ ಒದಗಿಸಿ ಪಾಸ್‌ಪೋರ್ಟ್ ಪಡೆದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಎಲ್ಲ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ವಿವರ ಬಹಿರಂಗಗೊಳ್ಳಲಿದೆ; ಎಂದರು. ಸಹಾಯಕ ಪಾಸ್‌ಪೋರ್ಟ್ ಅಧಿಕಾರಿ ವಿ. ಶೇಖರ್ ಗೋಷ್ಠಿಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)