ಭಾನುವಾರ, ಮೇ 16, 2021
22 °C
ಚಿಕ್ಕಮಗಳೂರು: ವ್ಯಾಟ್ ಕಾರ್ಯಾಗಾರದಲ್ಲಿ ವ್ಯಾಪಾರಸ್ಥರಿಗೆ ಮಾಹಿತಿ

`ಪಾಸ್‌ವರ್ಡ್ ಗೌಪ್ಯತೆ ಕಾಪಾಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಪಾಸ್‌ವರ್ಡ್ ಗೌಪ್ಯತೆ ಕಾಪಾಡಿ'

ಚಿಕ್ಕಮಗಳೂರು: ಈಗಿನ ದಿನಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿ ಆನ್‌ಲೈನ್ ಮೂಲಕ ನಡೆಯುತ್ತಿದೆ. ವ್ಯಾಪಾರಸ್ಥರು ಪಾಸ್‌ವರ್ಡ್ ರಹಸ್ಯವಾಗಿ ಕಾಯ್ದುಕೊಳ್ಳಬೇಕು ಎಂದು ನಿವೃತ್ತ ವಾಣಿಜ್ಯ ತೆರಿಗೆ ಉಪ ಆಯುಕ್ತ ಡಿ.ಪಾರ್ಶ್ವನಾಥ ಸಲಹೆ ನೀಡಿದರು.ನಗರದಲ್ಲಿ ಭಾನುವಾರ ವರ್ತಕರ ಸಂಘ ಏರ್ಪಡಿಸಿದ್ದ ಕಾರ್ಮಿಕ ಕಾಯ್ದೆ, ಆಹಾರ ಪರವಾನಗಿ ಮತ್ತು ವ್ಯಾಟ್ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ವ್ಯಾಟ್ ಪದ್ಧತಿ ಅತ್ಯಂತ ಸರಳವಾಗಿದೆ. ವರ್ತಕರು ಭಾವಿಸಿರುವಂತೆ ಕಷ್ಟವಾಗಿಲ್ಲ. ಪ್ರತಿಯೊಬ್ಬ ವರ್ತಕರು ವ್ಯಾಟ್ ಬಗ್ಗೆ ಸರಿಯಾದ ಮಾಹಿತಿ ತಿಳಿದಿರಬೇಕು. ವ್ಯಾಪಾರ ವಹಿವಾಟು ಕಾನೂನುಬದ್ಧವಾಗಿ ನಡೆಸಬೇಕು. ಗ್ರಾಹಕರಿಗೆ ಗುಣಮಟ್ಟದ ಪದಾರ್ಥ ಪೂರೈಸಬೇಕು ಎಂದರು.ಆಹಾರ ಸುರಕ್ಷತಾ ಅಧಿಕಾರಿ ಚೆಲುವರಾಜ್ ಮಾತನಾಡಿ, ಅಧಿಕಾರಿಗಳು, ವರ್ತಕರು ಹಾಗೂ ನಾಗರಿಕರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಕಾನೂನು ಬಾಹಿರ ವ್ಯಾಪಾರ ವಹಿವಾಟು ಯಾರೂ ಕೂಡ ನಡೆಸಬಾರದು ಎಂದು ಹೇಳಿದರು.ಪ್ರತಿ ವರ್ಷವೂ ವಾಣಿಜ್ಯ ಪರವಾನಗಿ ನವೀಕರಣಗೊಳಿಸಬೇಕು. ವರ್ತಕರು ಆಹಾರದ ಗುಣಮಟ್ಟ ಕಾಯ್ದುಕೊಂಡಾಗ ಮಾತ್ರ ನಾಗರಿಕರ ಆರೋಗ್ಯ ಉತ್ತಮವಾಗಿರುತ್ತದೆ. ಗ್ರಾಹಕರು ಸಹ ಯಾವುದೇ ಅಂಗಡಿಯಲ್ಲಿ ಪದಾರ್ಥ ಖರೀದಿಸುವಾಗ ಐಎಸ್‌ಐ ಗುರುತು ಮತ್ತು ಬ್ಯಾಚ್ ಸಂಖ್ಯೆ, ತಯಾರಾದ ಮತ್ತು ಅವಧಿಪೂರ್ಣಗೊಳ್ಳುವ ದಿನಾಂಕ ಪರಿಶೀಲಿಸಬೇಕು. ಜತೆಗೆ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಸಹಾಯಕ ಕಾರ್ಮಿಕ ಆಯುಕ್ತೆ ಎ.ಜೆ.ಶ್ರೀವಳ್ಳಿ ಮಾತನಾಡಿ, ವ್ಯಾಪಾರಸ್ಥರು ಒಬ್ಬರಿಗೆ ಕೆಲಸ ನೀಡಿದರೆ ಅವರ ಕುಟುಂಬಕ್ಕೆ ರಕ್ಷಣೆ ನೀಡಿದಂತಾಗುತ್ತದೆ. ಹಾಗೆಂದು ಬಾಲಕಾರ್ಮಿಕರನ್ನು ನೇಮಿಸಿಕೊಳ್ಳಬಾರದು. ಸರ್ಕಾರ ಇಂದು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ವರ್ತಕರು ಕಾನೂನು ಪ್ರಕಾರ ನಡೆದುಕೊಂಡರೆ ಯಾವುದೇ ಅಧಿಕಾರಿಗಳಿಗೆ ಲಂಚ ನೀಡುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದರು.ಹಮಾಲಿಗಳ ಜೀವನ ಭದ್ರತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೀವ ವಿಮೆ ಪಾವತಿಸಲು ಹೊಸದಾಗಿ ಪ್ರೋತ್ಸಾಹ ನೀಡುತ್ತಿವೆ. ಸರ್ಕಾರ ನೂರು ರೂಪಾಯಿ ನೀಡಿದರೆ, ಹಮಾಲಿಗಳು ಅದಕ್ಕೆ ತಾವು ನೂರು ರೂಪಾಯಿ ಸೇರಿಸಿ ವಿಮೆ ಪಾವತಿಸುವ ವ್ಯವಸ್ಥೆ ಜಾರಿಗೆ ಬಂದಿದೆ ಎಂದು ತಿಳಿಸಿದರು.ವರ್ತಕರ ಸಂಘದ ಅಧ್ಯಕ್ಷ ಜೆ.ಎ.ದಿನೇಶ್ ಗುಪ್ತ ಮಾತನಾಡಿ, ಸಂಘ ಸಂಸ್ಥೆಗಳ ಏಳಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ವರ್ತಕರು ಸಂಘಕ್ಕೆ ಏನನ್ನು ನೀಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ಸಂಘ ನಮಗೇನು ಮಾಡಿದೆ ಎಂದು ಪ್ರಶ್ನಿಸಬಾರದು. ಸಂಘಸಂಸ್ಥೆಗಳು ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸುತ್ತವೆ. ಸಂಘದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಯಂತಿ ಕಾಫಿ ವರ್ಕ್ಸ್‌ನ ಮಾಲೀಕ ಶಂಕರಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ವಾಣಿಜ್ಯ ಇಲಾಖೆ ಸಹಾಯಕ ಆಯುಕ್ತ ಆರ್.ಎ.ವಾಸಿಂ, ಜನರಲ್ ಮರ್ಚೆಂಟ್‌ನ ಮಾಣಿಕ್ ಚಂದ್, ಬಾಬು ಲಾಲ್, ಚಂದ್ರಶೇಖರ್, ಶಿವಪ್ರಕಾಶ್, ರಾಜೇಂದ್ರ ಸಕ್ಲೇಚ ಇನ್ನಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.